ಬೆಳ್ಳಿಪ್ಪಾಡಿ ಆಳ್ವಾಸ್ ವಾರ್ಷಿಕ ಕ್ರಿಕೆಟ್ ಶಿಬಿರ ಆರಂಭ

0
352
ಸ್ಪೋರ್ಟ್ಸ್ ಮೇಲ್ ವರದಿ

ಕರಾವಳಿಯ ಉತ್ತಮ ಕ್ರಿಕೆಟ್ ತರಬೇತಿ ಕೇಂದ್ರಗಳಲ್ಲಿ ಒಂದಾಗಿರುವ ಬೆಳ್ಳಿಪ್ಪಾಡಿ  ಆಳ್ವಾಸ್ ಕ್ರಿಕೆಟ್ ಅಕಾಡೆಮಿಯ ವಾರ್ಷಿಕ ಕ್ರಿಕೆಟ್ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಮಾಬುಕಳದಲ್ಲಿರುವ ಬಿ.ಡಿ. ಶೆಟ್ಟಿ ಕಾಲೇಜ್ ಆಫ್  ಕಾಮರ್ಸ್‌ನ ಪ್ರಾಂಶುಪಾಲ ಜಿ. ಬಾಲಕೃಷ್ಣ ಶೆಟ್ಟಿ ಶಿಬಿರಕ್ಕೆ ಚಾಲನೆ ನೀಡಿದರು. ಚೇತನ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಗಣೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಕ್ರೀಡಾಪಟುಗಳಿಗೆ ಶುಭ  ಹಾರೈಸಿದರು. ‘ಲೆದರ್ ಬಾಲ್ ಕ್ರಿಕೆಟ್‌ನಲ್ಲಿ ನಮ್ಮ ಸುತ್ತಮುತ್ತಲಿನ ಮಕ್ಕಳಿಗೆ ತರಬೇತಿ ಪಡೆಯಲು ಅಕಾಡೆಮಿಯೊಂದು ನಮ್ಮ ಶಾಲಾ ಕ್ಯಾಂಪಸ್‌ನಲ್ಲಿ ಆರಂ‘ಗೊಂಡಿರುವುದು ನಮ್ಮೆಲ್ಲರ ಹೆಮ್ಮೆ. ಕ್ರೀಡೆ ಕೇವಲ ಸಾಧನೆ ಮಾಡಲು ಮಾತ್ರವಲ್ಲ, ಬದುಕಿನಲ್ಲಿ ಶಿಸ್ತನ್ನು ರೂಪಿಸಿಕೊಳ್ಳಲು ಕೂಡ ನೆರವಾಗುತ್ತದೆ, ಕ್ರಿಕೆಟ್ ಕುಟುಂಬದಿಂದ ಬಂದ ವಿಜಯ ಆಳ್ವಾ ಅವರು ನಿಮ್ಮೆಲ್ಲರ ಕ್ರಿಕೆಟ್ ಬದುಕಿಗೆ ಮುನ್ನುಡಿ ಬರೆದು, ಮುಂದಿನ ದಿನಗಳಲ್ಲಿ ಈ ವಿಭಾಗದಿಂದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಈ ಅಕಾಡೆಮಿಯ ಆಟಗಾರರೊಬ್ಬರು ಆಯ್ಕೆಯಾದರೆ ಅದೇ ಖುಷಿಯ ಸಂಗತಿ,‘ ಎಂದರು.
ಚೇತನಾ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಹರ್ಷವರ್ಧನ್  ಶೆಟ್ಟಿ ಮಾತನಾಡಿ, ‘ಹಿಂದೆಲ್ಲ ಬೇಸಿಗೆ ರಜೆ ಸಿಕ್ಕಾಗ ಮಕ್ಕಳು ಗದ್ದೆಯಲ್ಲೋ ಅಥವಾ ಶಾಲಾ ಅಂಗಣದಲ್ಲೋ ತಮಗೆ ಇಷ್ಟು ಬಂದ ಆಟ ಆಡುತ್ತಿದ್ದರು. ಆದರೆ ಈಗ ವೃತ್ತಿಪರತೆಯಿಂದ ಕೂಡಿದ ತರಬೇತಿ ಕೇಂದ್ರಗಳು ಆರಂಭಗೊಂಡಿವೆ. ನಮ್ಮ ಶಾಲಾ ಕ್ಯಾಂಪಸ್‌ನಲ್ಲಿ ಉತ್ತಮ ತರಬೇತುದಾರರಾದ ವಿಜಯ್ ಆಳ್ವಾ ಅವರಿಂದ ಆರಂಭ ಗೊಂಡಿರುವ ಈ ಶಿಬಿರ ಭವಿಷ್ಯದ ಆಟಗಾರರನ್ನು ರೂಪಿಸಲಿ, ಇಲ್ಲಿಯ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ,‘ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ಗ್ರಾಮೀಣ ಪ್ರದೇಶದಲ್ಲಿ ಲೆದರ್‌ಬಾಲ್ ಕ್ರಿಕೆಟ್ ಆಟವನ್ನು ಜನಪ್ರಿಯಗೊಳಿಸುವ ದೃಷ್ಟಿಯಿಂದ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಕಿಶೋರ್ ಕಮಾರ್ ಸಿ.ಕೆ. ಅವರು ಕೆಲವೊಂದು ಗ್ರಾಮೀಣ ಪ್ರದೇಶದ ಶಾಲೆಗಳನ್ನು ಆಯ್ಕೆ ಮಾಡಿರುತ್ತಾರೆ. ಅವುಗಳಲ್ಲಿ ಚೇತನ ಪ್ರೌಢ ಶಾಲೆಯೂ ಒಂದು.
ಪದ್ಮಶ್ರೀ ಸಯ್ಯದ ಕಿರ್ಮಾನಿ ಆಗಮನ
ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಗೆ ಭಾನುವಾರ ಮಾಜಿ ಕ್ರಿಕೆಟಿಗ, 1983ರ ವಿಶ್ವಕಪ್ ಕಪ್ ಚಾಂಪಿಯನ್ ತಂಡದ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಅವರು ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಯುವ ಕ್ರಿಕೆಟಿಗರೊಂದಿಗೆ ತಮ್ಮ ಕ್ರೀಡಾ ಬದುಕಿನ ಅಮೂಲ್ಯ ಕ್ಷಣಗಳನ್ನು ಹಂಚಿಕೊಳ್ಳಲಿದ್ದಾರೆ.