Monday, April 15, 2024

160 ಪಂದ್ಯಗಳ ರಣಜಿ ಋತುಗಾನ

ಚನ್ನಗಿರಿ ಕೇಶವಮೂರ್ತಿ, ಬೆಂಗಳೂರು

ಭಾರತ ಕ್ರಿಕೆಟ್ ತಂಡವನ್ನು ಸೇರಿಕೊಳ್ಳುವ ಹಂಬಲ, ಅಲ್ಲಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಇಂಡಿಯನ್ ಪ್ರೀಮಿಯರ್ ಲೀಗ್ ಸೇರುವ ಆಸೆ, ತಾಳ್ಮೆಯ ಆಟವಾಡಿ ಸಾಕಷ್ಟು ಶತಕ ಗಳಿಸಿ ಆಯ್ಕೆ ಸಮಿತಿಯ ಕದ ತಟ್ಟಿ ಟೆಸ್ಟ್ ತಂಡ ಸೇರುವ ಗುರಿ, ಹೀಗೆ ಹಲವು ಕನಸುಗಳನ್ನು ಹೊತ್ತ ಸುಮಾರು 600ಕ್ಕೂ ಹೆಚ್ಚು ದೇಶೀಯ ಆಟಗಾರರು ಈ ಬಾರಿಯ ರಣಜಿಯಲ್ಲಿ ಮಿಂಚಲು ಸನ್ನದ್ಧರಾಗಿದ್ದಾರೆ.

ಭಾರತದ ದೇಶೀಯ ಕ್ರಿಕೆಟ್‌ನ ಕುತೂಹಲದ ಕದನ ರಣಜಿ ಟ್ರೋಫಿ ನವೆಂಬರ್ 1ರಿಂದ ದೇಶದ ವಿವಿಧ ಕ್ರೀಡಾಂಗಣಗಳಲ್ಲಿ ಆರಂಭಗೊಳ್ಳಲಿದೆ. ಮೊದಲ ಸುತ್ತಿನ ಪಂದ್ಯದಲ್ಲಿ 34 ತಂಡಗಳು 17 ಪಂದ್ಯಗಳನ್ನಾಡಲಿವೆ.
ಈ ಬಾರಿಯ ರಣಜಿ  ಮಾದರಿಯಲ್ಲಿ ಅಲ್ಪ ಪ್ರಮಾಣದ ಬದಲಾವಣೆ ಇದೆ. 2017-18ರಲ್ಲಿ 28 ತಂಡಗಳು ಮೂರು ಗುಂಪಿನಲ್ಲಿ ಆಡಿದ್ದವು. ಆದರೆ ಈ ಬಾರಿ 37 ತಂಡಗಳು ನಾಲ್ಕು ಗುಂಪು (ಎ.ಬಿ.ಸಿ.ಡಿ.)ಗಳಲ್ಲಿ ಆಡಲಿವೆ. ಹೊಸದಾಗಿ ಸೇರ್ಪಡೆಯಾಗಿರುವ 9 ತಂಡಗಳಲ್ಲಿ ಬಿಹಾರ್ ತಂಡ ಮಾತ್ರ ಪುನರ್‌ಪ್ರವೇಶ ಕಂಡಿದೆ.
ಹೊಸ ತಂಡಗಳು
ಬಿಹಾರ್ ಸೇರಿದಂತೆ ಒಟ್ಟು 9 ತಂಡಗಳು ಈ ಬಾರಿ ರಣಜಿಗೆ ಪದಾರ್ಪಣೆ ಮಾಡಿವೆ. ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪುದುಚೆರಿ, ಸಿಕ್ಕಿಂ ಹಾಗೂ  ಉತ್ತರಾಖಂಡ್ ಹಾಗೂ ಬಿಹಾರ. ಕಳೆದ ಋತುವಿನ ವರೆಗೂ ಒಟ್ಟು 89 ಪಂದ್ಯಗಳಿದ್ದವು, ಈ ಬಾರಿ ಒಟ್ಟು 160 ಪಂದ್ಯಗಳಿರುತ್ತವೆ. ಬಿಹಾರ ಸೇರಿದಂತೆ ಎಲ್ಲ 9 ತಂಡಗಳು ಡಿ ಗುಂಪಿನಲ್ಲಿ ಆಡಲಿವೆ. ಲೀಗ್ ಹಂತದಲ್ಲಿ ಅಗ್ರ ಸ್ಥಾನ ಪಡೆದ ತಂಡ ನಾಕೌಟ್ ಹಂತಕ್ಕೆ ತೇರ್ಗಡೆಯಾಗಲಿದೆ. ನಾಕೌಟ್ ಹಂತದಲ್ಲಿರುವ ಇತರ ಐದು ಸ್ಥಾನಗಳನ್ನು ಗ್ರೂಪ್ ಎ ಮತ್ತು ಬಿಯಲ್ಲಿ ಅಗ್ರ ಸ್ಥಾನ ಪಡೆಯುವ ಐದು ತಂಡಗಳು ಗಳಿಸಿವೆ. ಈ ಬಾರಿ 4 ಕ್ವಾರ್ಟರ್ ಫೈನಲ್, ಎರಡು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 2 ರಿಂದ ಆರಂಭಗೊಳ್ಳಲಿದೆ.
ಕರ್ನಾಟಕಕ್ಕೆ ವಿದರ್ಭ ಸವಾಲು
ರಣಜಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ಅಂಗಣಕ್ಕಿಳಿಯಲಿದೆ. ನವೆಂಬರ್ 12ರಂದು ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವಿದರ್ಭದ ವಿರುದ್ಧ ವಿನಯ್ ಕುಮಾರ್ ಪಡೆ ಸೆಣಸಲಿದೆ. ಎ ಗುಂಪಿನಲ್ಲಿ ಆಡಲಿರುವ ಕರ್ನಾಟಕ ತಂಡ ಬರೋಡ, ಚತ್ತೀಸ್‌ಗಢ, ಗುಜರಾತ್, ಮಹಾರಾಷ್ಟ್ರ, ಮುಂಬೈ, ರೈಲ್ವೇಸ್, ಸೌರಾಷ್ಟ್ರ ಹಾಗೂ ವಿದರ್ಭ ವಿರುದ್ಧ ಪಂದ್ಯಗಳನ್ನಾಡಲಿದೆ.
ರಣಜಿಯಲ್ಲಿ 4622 ಪಂದ್ಯಗಳು
ರಣಜಿ ಕ್ರಿಕೆಟ್ ಆರಂಭವಾದಾಗಿನಿಂದ ಇದುವರೆಗೂ 4622 ಪಂದ್ಯಗಳು ನಡೆದಿವೆ. ಅದರಲ್ಲಿ ಕರ್ನಾಟಕ 429 ಪಂದ್ಯಗಳನ್ನಾಡಿದೆ. (164 ಜಯ, 63 ಸೋಲು, 172 ಡ್ರಾ). ಮುಂಬೈ ರಣಜಿ ತಂಡ ಅತಿ ಹೆಚ್ಚು ಪಂದ್ಯಗಳನ್ನಾಡಿದೆ. (503). 500 ಪಂದ್ಯಗಳ ಗಡಿದಾಟಿದ ಏಕೈಕ ತಂಡವೆನಿಸಿದೆ. ಅತಿ ಹೆಚ್ಚು ಬಾರಿ ರಣಜಿ ಚಾಂಪಿಯನ್ ಪಟ್ಟ ಗೆದ್ದ ತಂಡವೂ ಮುಂಬೈ. ಇದುವರೆಗೂ 41 ಬಾರಿ ಚಾಂಪಿಯನ್ ಪಟ್ಟ ಗೆದ್ದಿದೆ. 8 ಬಾರಿ ಚಾಂಪಿಯನ್ ಪಟ್ಟ ಗೆದ್ದ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, 7 ಬಾರಿ ಚಾಂಪಿಯನ್ ಪಟ್ಟ ಗೆದ್ದ ಡೆಲ್ಲಿ ಮೂರನೇ ಸ್ಥಾನದಲ್ಲಿದೆ.
ವಿನಯ್ ಕುಮಾರ್‌ಗೆ ಶತಕ ಸಂಭ್ರಮ
ಕರ್ನಾಟಕ ರಣಜಿ ತಂಡದ ನಾಯಕ ಆರ್. ವಿನಯ್ ಕುಮಾರ್ 100ನೇ ಪಂದ್ಯವನ್ನಾಡಲಿದ್ದಾರೆ. ಕರ್ನಾಟಕಕ್ಕಾಗಿಯೇ ನೂರನೇ ಪಂದ್ಯವನ್ನಾಡಲಿರುವ ಮೂರನೇ ಆಟಗಾರ. ಸುನಿಲ್ ಜೋಶಿ (107) ಹಾಗೂ ಬ್ರಿಜೇಶ್ ಪಟೇಲ್ (104) ನೂರಕ್ಕೂ ಹೆಚ್ಚು ಪಂದ್ಯಗಳನ್ನಾಡಿದ ಇತರ ಆಟಗಾರರು. ನೂರಕ್ಕೂ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಸಯ್ಯದ್ ಕಿರ್ಮಾನಿ ಹಾಗೂ ರಾಬಿನ್ ಉತ್ತಪ್ಪ ಅವರೂ ಸೇರಿದ್ದಾರೆ. ಆದರೆ ಈ ಇಬ್ಬರೂ ಆಟಗಾರರು ಕೆಲವು ಪಂದ್ಯಗಳನ್ನು ಇತರ ತಂಡಗಳಿಗಾಗಿ ಆಡಿದ್ದಾರೆ. ಕಿರ್ಮಾನಿ 97 ಪಂದ್ಯಗಳನು ಮೈಸೂರು-ಕರ್ನಾಟಕದ ಪರ ಆಡಿದ್ದರೆ, 8 ಪಂದ್ಯಗಳನ್ನು ರೈಲ್ವೇಸ್ ಪರ ಆಡಿದ್ದಾರೆ. ಉತ್ತಪ್ಪ 98 ಪಂದ್ಯಗಳನ್ನು ಕರ್ನಾಟಕದ ಪರ ಆಡಿ, ನಂತರ 6 ಪಂದ್ಯಗಳನ್ನು ಸೌರಾಷ್ಟ್ರದ ಪರ ಆಡಿದ್ದಾರೆ. ಸಮಗ್ರವಾಗಿ 40 ಆಟಗಾರರು ರಣಜಿ ಟ್ರೋಫಿ ಇತಿಹಾಸದಲ್ಲಿ 100ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ದೇವೇಂದ್ರ ಬುಂದೇಲಾ ಕೇವಲ ಮಧ್ಯಪ್ರದೇಶ ತಂಡಕ್ಕಾಗಿ  145 ಪಂದ್ಯಗಳನ್ನಾಡಿ ವಿಶೇಷ ದಾಖಲೆ ಹೊಂದಿದ್ದಾರೆ.

Related Articles