Saturday, October 12, 2024

ಆಗಸ್ಟ್ 16 ರಿಂದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಹಬ್ಬ

ಸ್ಪೋರ್ಟ್ಸ್ ಮೇಲ್ ವರದಿ 

ಬಹಳ ದಿನಗಳಿಂದ ಕ್ರಿಕೆಟ್ ಅಭಿಮಾನಿಗಳು ನಿರೀಕ್ಷೆಯಲ್ಲಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಎಂಟನೇ ಆವೃತ್ತಿಯು ಆಗಸ್ಟ್ 16 ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ ಎಂದು ಶುಕ್ರವಾರ ಪ್ರಕಟಿಸಲಾಯಿತು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯ ಕಾರ್ಯದರ್ಶಿ ಸುಧಾಕರ್ ರಾವ್, ಸಹಾಯಕ ಕಾರ್ಯದರ್ಶಿ ಸಂತೋಶ್ ಮೆನನ್ ಹಾಗೂ ಕೆಎಸ್‌ಸಿಎ ಅಧಿಕೃತ ವಕ್ತಾರ ವಿನಯ್ ಮೃತ್ಯುಂಜಯ ಅವರು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಸೆಪ್ಟಂಬರ್ 1ರಂದು ಮೈಸೂರಿನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಮೊದಲ ಐದು ದಿನಗಳ ಪಂದ್ಯದ ಆತಿಥ್ಯವನ್ನು ಬೆಂಗಳೂರು ವಹಿಸಲಿದ್ದು, ನಂತರ ಆಗಸ್ಟ್ 22ರಿಂದ ಟೂರ್ನಿ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಟೂರ್ನಿಯ ಕೊನೆಯ ಹಂತದ ಪಂದ್ಯಗಳು ಆಗಸ್ಟ್ 27ರಿಂದ ಮೈಸೂರಿನಲ್ಲಿ ನಡೆಯಲಿದೆ. ತಂಡಗಳು ಹುಬ್ಬಳ್ಳಿ ಹಾಗೂ ಮೈಸೂರಿಗೆ ಪ್ರಯಾಣಿಸುವುದರಿಂದ ಆಗಸ್ಟ್ 21 ಹಾಗೂ 26ನ್ನು ವಿಶ್ರಾಂತಿ ದಿನವೆಂದು ಪ್ರಕಟಿಸಲಾಗಿದೆ.
‘ಈ ವರ್ಷದಿಂದ ಎಲಿಮಿನೇಟರ್ ಹಾಗೂ ಕ್ವಾಲಿಯರ್ ಹಂತಗಳನ್ನು ಹೊಸತಾಗಿ ಅಳವಡಿಸಲಾಗಿದ್ದು, ಇದರಿಂದಾಗಿ 25 ಪಂದ್ಯಗಳನ್ನೊಳಗೊಂಡ ಈ ಟೂರ್ನಿಯಲ್ಲಿ ಹೆಚ್ಚು ಕುತೂಹಲಗಳನ್ನು ನಿರೀಕ್ಷಿಸಬಹುದಾಗಿದೆ,‘ ಎಂದು ಸಹಾಯಕ ಕಾರ್ಯದರ್ಶಿ ಸಂತೋಷ್ ಮೆನನ್ ಹೇಳಿದರು.
ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರ ವೆಂಕಟೇಶ್ ಪ್ರಸಾದ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕೆಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ಏಳು ತಂಡಗಳ ಮಾಲೀಕರು ಹಾಗೂ ಕೆಪಿಎಲ್‌ನ ರಾಯಭಾರಿ ನಟಿ ರಾಗಣಿ ದ್ವಿವೇದಿ ಈ ಸಂದರ್ಭದಲ್ಲಿ ಹಾಜರಿದ್ದರು.
ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದ ಕಾರಣ ಕಾರ್ಯಕ್ರಮವನ್ನು ಎರಡು ದಿನಗಳ ಅವಧಿಗೆ ಮುಂದೂಡಲಾಗಿತ್ತು. ಆಟಗಾರರನ್ನು  ಕಾಯ್ದಿರಿಸಿಕೊಳ್ಳುವ ಪ್ರಕ್ರಿಯೆ, ನಿಗದಿತ ಸಮಯದಲ್ಲಿ ನಡೆಯಲಿದ್ದು, ಜುಲೈ 23ರಂದು ಸಂಜೆ ೫ರ ಒಳಗಾಗಿ ಆಟಗಾರರು ತಮ್ಮ ಆಯ್ಕೆಯನ್ನು ಮಾಡಿಕೊಳ್ಳಬಹುದು. ಕಳೆದ ವರ್ಷ ಫ್ರಾಂಚೈಸಿಗಳು ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿತ್ತು, ಆದರೆ ಈ ಬಾರಿ ಕೇವಲ ಇಬ್ಬರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು. ಆಟಗಾರರ ಲಭ್ಯತೆ ಹಾಗೂ ಫಿಟ್ನೆಸ್ ಇವುಗಳನ್ನು ಗಮನದಲ್ಲಿರಿಸಿಕೊಂಡು ಈ ಬದಲಾವಣೆ ಮಾಡಲಾಗಿದೆ. ಎ ಗುಂಪಿನಿಂದ ಪ್ರತಿಯೊಂದು ತಂಡವೂ ಶ್ರೇಷ್ಠ ದರ್ಜೆಯ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಗುಂಪಿನಲ್ಲಿ 35 ಮಂದಿ ಆಟಗಾರರಿರುತ್ತಾರೆ. ಅವಿನಾಶ್ ಡಿ (ಬೆಳಗಾವಿ), ನಿಹಾಲ್ ಉಳ್ಳಾಲ್ ಮತ್ತು ಪ್ರಥ್ವಿರಾಜ್ ಶೆಖಾವತ್ (ಇಬ್ಬರೂ ಶಿವಮೊಗ್ಗ ತಂಡದವರು) ಇವರನ್ನು ಬಿ ಗುಂಪಿನಿಂದ ಉಳಿಸಿಕೊಳ್ಳಲಾಗಿದೆ. ಒಟ್ಟು 202 ಆಟಗಾರರಿರುತ್ತಾರೆ. ಜುಲೈ 27ರಂದು ಆಟಗಾರರ ಅಂತಿಮ ಹರಾಜು ನಡೆಯಲಿದೆ.
ಹುಬ್ಬಳ್ಳಿ ಟೈಗರ್ಸ್ ತಂಡ ಭಾರತ  ತಂಡದ ಆಟಗಾರ ವಿನಯ್ ಕುಮಾರ್ ಅವರನ್ನು ನಿರೀಕ್ಷೆಯಂತೆ ಉಳಿಸಿಕೊಂಡಿದ್ದು, ಮನೀಶ್ ಪಾಂಡೆ ಆಗಸ್ಟ್ 14ಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬಿಡುವು ಪಡೆಯುವುದರಿಂದ ಅವರು ಹರಾಜಿನಲ್ಲಿ ಲಭ್ಯವಿರುತ್ತಾರೆ. ಎರಡು ಅಥವಾ ಮೂರು  ಫ್ರಾಂಚೈಸಿಗಳು ಪಾಂಡೆ ಅವರನ್ನು ಸೆಳೆದುಕೊಳ್ಳಲು ಹೋರಾಟ ನಡೆಸುವುದು ಸ್ಪಷ್ಟ. ಆರಂಭಿಕ ಆಟಗಾರ ಮನೀಶ್ ಪಾಂಡೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವುದರಿಂದ ಹುಬ್ಬಳ್ಳಿ ಟೈಗರ್ಸ್ ತಂಡ ಅವರನ್ನು ನಿರೀಕ್ಷೆಯಂತೆ ಬಿಡುಗಡೆಗೊಳಿಸಿದೆ. ಕಳೆದ ಋತುವಿನಲ್ಲಿ ಅತಿ ಹೆಚ್ಚು ಮೊತ್ತ ಅಂದರೆ 8.3 ಲಕ್ಷ ರೂ.ಗಳ ಖರೀದಿಯಾಗಿದ್ದ ಅಭಿಮನ್ಯು ಮಿಥುನ್ ಅವರನ್ನು ಶಿವಮೊಗ್ಗ ಲಯನ್ಸ್ ಬಿಡುಗಡೆಗೊಳಿಸಿದ್ದು, ಅವರು ಈ ಬಾರಿಯೂ ಉತ್ತಮ ಮೊತ್ತ ಗಳಿಸುವ ಸಾಧ್ಯತೆ ಇದೆ.
ಕೆ. ಗೌತಮ್, ಶ್ರೇಯಸ್ ಗೋಪಾಲ್ ಹಾಗೂ ಕರುಣ್ ನಾಯರ್ ಉತ್ತಮ ಮೊತ್ತಕ್ಕೆ ವಿವಿಧ ತಂಡಗಳನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗೌತಮ್, ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದು, ಆದರೆ ಅವರಲ್ಲಿರುವ ಸಾಮರ್ಥ್ಯ ಇಲ್ಲಿ ಉತ್ತಮ ಬೆಲೆಯನ್ನು ತಂದುಕೊಡಬಲ್ಲದು.
ಐಪಿಎಲ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ ಶ್ರೇಯಸ್ ಗೋಪಾಲ್ 20 ವಿಕೆಟ್ ಗಳಿಸಿದ್ದು, ಬ್ಯಾಟಿಂಗ್‌ನಲ್ಲೂ ಮಿಂಚು ಸಾಮರ್ಥ್ಯಹೊಂದಿರುವ ಆಲ್ರೌಂಡರ್ ಕೂಡ ಆದ್ದರಿಂದ  ಫ್ರಾಂಚೈಸಿಗಳು ಅವರನ್ನು ಉತ್ತಮ ಬೆಲೆಗೆ ಖರೀದಿಸುವ ಸಾಧ್ಯತೆ ಇದೆ. ಸದ್ಯ ನಡೆಯುತ್ತಿರುವ ಡಾ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಶ್ರೇಯಸ್ ಬ್ಯಾಟಿಂಗ್‌ನಲ್ಲಿ ಮಿಂಚಿರುವುದು ಗಮನಾರ್ಹ. ಐಪಿಎಲ್‌ನಲ್ಲಿ ಉತ್ತಮ ಅವಕಾಶ ಪಡೆಯದಿದ್ದರೂ, ಕರುಣ್ ನಾಯರ್ ದೇಶೀಯ ಕ್ರಿಕೆಟ್‌ನಲ್ಲಿ ಭರವಸೆಯ ಆಟಗಾರ ಹಾಗೂ ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿರುವ ಯುವ ಕ್ರಿಕೆಟಿಗ.
ಪ್ರತಿಯೊಂದು ತಂಡವೂ ಕನಿಷ್ಠ 15 ಹಾಗೂ ಗರಿಷ್ಠ 18 ಆಟಗಾರನ್ನು ಹೊಂದಬಹುದು. ತಾವಿರುವ ಪ್ರದೇಶದಿಂದ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಇಬ್ಬರು ಹೆಚ್ಚುವರಿ ಸ್ಥಳೀಯ  ಆಟಗಾರರನ್ನು ಸೇರಿಸಿಕೊಳ್ಳಬೇಕು. ಇದಕ್ಕಾಗಿ 20,000 ರೂ. ವಿನಿಯೋಗಿಸಬಹುದು. ಪ್ರತಿಯೊಂದು  ಫ್ರಾಂಚೈಸಿ  ಆಟಗಾರರ ಹರಾಜಿಗೆ ಬಳಸಬಹುದಾದ ಮೊತ್ತ 30 ಲಕ್ಷ ರೂ. ಇದರಲ್ಲಿ ಉಳಿಸಿಕೊಂಡಿರುವ ಆಟಗಾರರ ಮೊತ್ತವೂ ಸೇರಿರುತ್ತದೆ. ಈ ಬಾರಿ ಹೊಸದಾಗಿ ಜಾರಿಗೆ ತಂದಿರುವ ರೈಟ್ ಟು ಮ್ಯಾಚ್ ಆಯ್ಕೆಯಲ್ಲಿ ತಂಡವು ಹರಾಜಿನ ನಂತರ ಒಬ್ಬ ಆಟಗಾರನನ್ನು ಸೇರಿಸಿಕೊಳ್ಳಬಹುದು. ಆದರೆ ಆ ಆಟಗಾರ ಕಳೆದ ಬಾರಿ ಆ ತಂಡದಲ್ಲಿ ಆಡಿರಬೇಕು.
ಕರ್ನಾಟಕ ಪ್ರೀಮಿಯರ್ ಲೀಗ್ ಈ ಬಾರಿ ಪೆಟಿಎಂ ಹಾಗೂ ಇನ್‌ಸೈಡರ್ ಜತೆ ಟಿಕೆಟಿಂಗ್ ಪಾಲುದಾರರನ್ನಾಗಿ ಸೇರಿಸಿಕೊಂಡಿದೆ. ಸ್ಟಾರ್ ಸ್ಪೋರ್ಟ್ಸ್ ಪ್ರಸಾರ ಹಾಗೂ ಸೈಕಲ್ ಪ್ಯೂರ್ ಅಗರಬತ್ತೀಸ್ ಅಸೋಸಿಯೇಟ್ ಪಾರ್ಟ್ನರ್ ಆಗಿರುತ್ತಾರೆ. ಕಾವೇರಿ ನದಿ ಹೋರಾಟಗಾರ ಇಶಾ ಫೌಂಡೇಶನ್ ಸ್ಥಾಪಕ ಸದ್ಗುರು ಅವರೊಂದಿಗೆ ಕೆಪಿಎಲ್ ಕೈ ಜೋಡಿಸಿದ್ದು,  ಕಾವೇರಿ ಕರೆಯುತ್ತಿದೆ, ಅಭಿಯಾನದಲ್ಲಿ ತೊಡಗಿಸಿಕೊಂಡಿದೆ.

Related Articles