Friday, April 26, 2024

80,000 ಟನ್ ಹಳೆ ಮೊಬೈಲ್ ನಲ್ಲಿ ಅರಳಿದ ಟೊಕಿಯೋ ಒಲಿಂಪಿಕ್ಸ್ ಮೆಡಲ್!

ಸ್ಪೋರ್ಟ್ಸ್ ಮೇಲ್ ವರದಿ

ಒಲಿಂಪಿಕ್ಸ್‌ನಲ್ಲಿ ನೀಡುವ ಚಿನ್ನದ ಪದಕದಲ್ಲಿ ಚಿನ್ನ ಇರುವುದಿಲ್ಲ, ಅದು ಬರೇ ಲೇಪನ ಎಂಬುದು ಎಲ್ಲರಿಗೂ ಗೊತ್ತು. ಪರಿಸರಕ್ಕೆ ಹಾನಿಯಾಗುವ ವಸ್ತುಗಳನ್ನು ಪುನರ್ ಬಳಕೆ ಮಾಡುವಲ್ಲಿ ಜಪಾನ್ ಈ ಜಗತ್ತಿಗೇ ಮಾದರಿ. 2020ರ ಒಲಿಂಪಿಕ್ಸ್ ಆತಿಥ್ಯವನ್ನು ಜಪಾನ್ ವಹಿಸಲಿದೆ. ಆದರೆ ಅಲ್ಲಿ ಗೆದ್ದವರಿಗೆ ನೀಡುವ ಪದಕವನ್ನು ಹೇಗೆ ನಿರ್ಮಿಸಿದ್ದಾರೆ ಎಂದು ತಿಳಿದಾಗ ಅಚ್ಚರಿಯಾಗುತ್ತದೆ.

80,000 ಟನ್ ಹಾಳಾದ ಮೊಬೈಲ್ ಹಾಗೂ ಸಣ್ಣ ಎಲೆಕ್ಟ್ರಾನಿಕ್ಸ್ ವೇಸ್ಟ್‌ಗಳನ್ನು ಉಪಯೋಗಿಸಿ ಪದಕಗಳನ್ನು ತಯಾರಿಸಲಾಗಿದೆ. ಟೊಕಿಯೋ ಒಲಿಂಪಿಕ್ಸ್‌ಗೆ ಇನ್ನು ಬರೋಬ್ಬರಿ ಒಂದು ವರ್ಷ ಬಾಕಿ ಇದೆ. ಪದಕ ಸಿದ್ಧಪಡಿಸುವಲ್ಲಿ ಇಡೀ ಜಪಾನಿನ ನಾಗರಿಕರು ಸ್ಪಂದಿಸಿದ್ದಾರೆ. ನಮ್ಮಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಮಾಡಿ ಹಣ ಹೊಡೆಯೋದು ಹೇಗೆ ಎಂದು ಜಗತ್ತಿಗೆ ತೋರಿಸಿಕೊಟ್ಟಾಯಿತು. ಆದರೆ ಜಪಾನ್ ಪರಿಸರವನ್ನು ಉಳಿಸುವುದು ಹೇಗೆ, ಜತೆಯಲ್ಲಿ ಆರ್ಥಿಕ ಪ್ರಗತಿ ಕಾಣುವುದು ಹೇಗೆ ಎಂಬುದನ್ನು ಜಗತ್ತಿ ತೋರಿಸಿಕೊಟ್ಟಿದೆ. ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ಗಾಗಿ ಸುಮಾರು 5,000 ಪದಕಗಳ ಅಗತ್ಯವಿರುತ್ತದೆ. ಈಗಾಗಲೇ ಆ ಪದಕಗಳನ್ನು ಜಪಾನ್ ಸಿದ್ಧಗೊಳಿಸಿಕೊಂಡಿದೆ. ಜನರೇ ನೀಡಿದ ಹಳೆ ಮೊಬೈಲ್ ಹಾಗೂ ಉಪಯೋಗಕ್ಕೆ ಬಾರದ ಚಿಕ್ಕ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ. ಸಂಗ್ರಹವಾಗಿರುವ ವೇಸ್ಟ್ ಸುಮಾರು 80,000 ಟನ್!.
ಎರಡು ವರ್ಷಗಳ ಅವಧಿಯಲ್ಲಿ ಸುಮಾರು 60 ಲಕ್ಷ ಮೊಬೈಲ್‌ಗಳನ್ನು ಬಳಸಲಾಗಿದೆ. ಬುಧವಾರ ಅಂದರೆ ಜುಲೈ ೨೪ರಂದು ಈ ಪದಕಗಳನ್ನು ಟೊಕಿಯೋದಲ್ಲಿ ಒಲಿಂಪಿಕ್ಸ್ ಸಂಘಟಕರು ಬಿಡುಗಡೆ ಮಾಡಿದ್ದಾರೆ. 71667594.5 ಕೆಜಿ ಯಷ್ಟ ಎಲೆಕ್ಟ್ರಾನಿಕ್ಸ್ ವೇಸ್ಟ್‌ನಲ್ಲಿ  32.205 ಕೆಜಿ ಚಿನ್ನ, 3,492.661 ಕೆಜಿ ಬೆಳ್ಳಿ ಹಾಗೂ  2,199.923 ಕೆಜಿ ಯಷ್ಟು ಕಂಚು ದೊರಕಿದೆ. ಈ ಪದಕಗಳನ್ನು ಜಪಾನಿನ ವಿನ್ಯಾಸಕಾರ ಜುನಿಚಿ ಕವಾನಿಶಿ ವಿನ್ಯಾಸಗೊಳಿಸಿದ್ದಾರೆ. ಜಗತ್ತಿನ ವಿವಿಧ ರಾಷ್ಟ್ರಗಳಿಂದ ಸುಮಾರು 400 ವಿನ್ಯಾಸಗಾರರು ಅರ್ಜಿ ಸಲ್ಲಿಸಿರುತ್ತಾರೆ.

Related Articles