ಭಾರತ ವನಿತೆಯರಿಗೆ ಹ್ಯಾಟ್ರಿಕ್ ಜಯ

0
188
ಗಯಾನ:

ಮಿಥಾಲಿ ರಾಜ್(51) ಅವರ ಅರ್ಧ ಶತಕ ಹಾಗೂ ರಾಧಾ ಯಾದವ್(3) ಅವರ ಮಾರಕ ದಾಳಿ ಮತ್ತು ದೀಪ್ತಿ ಶರ್ಮಾ(2) ಅವರ ಸ್ಪಿನ್ ಮೋಡಿಯ ನೆರವಿನಿಂದ ಭಾರತ ವನಿತೆಯರು ಮಹಿಳಾ ಟಿ-20 ವಿಶ್ವಕಪ್‍ನ ಗುಂಪು(ಬಿ) 13ನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 52 ರನ್ ಗಳಿಂದ ಜಯ ಸಾಧಿಸಿತು. ಇದರೊಂದಿಗೆ ಭಾರತ ಪ್ರಸಕ್ತ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿತು.

ಇಲ್ಲಿನ ಪ್ರೊವಿಡೆನ್ಸ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‍ಗಳಿಗೆ ಆರು ವಿಕೆಟ್ ಕಳೆದುಕೊಂಡು 145 ರನ್ ದಾಖಲಿಸಿತು.
ಭಾರತ ಪರ ಉತ್ತಮ ಬ್ಯಾಟಿಂಗ್ ಮಾಡಿದ್ದ ಮಿಥಾಲಿ ರಾಜ್ ಕಳೆದ ಪಂದ್ಯದಂತೆ ಈ ಕಾದಾಟದಲ್ಲೂ ಅಮೋಘ ಬ್ಯಾಟಿಂಗ್ ಮಾಡಿದರು. ಆಡಿದ 56 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಯೊಂದಿಗೆ 51 ರನ್ ಗಳಿಸಿದರು. ಆ ಮೂಲಕ ಚುಟುಕು ಮಾದರಿಯಲ್ಲಿ 2283 ರನ್ ಪೂರೈಸಿದರು. ಇದರೊಂದಿಗೆ ಭಾರತ ಪರ ಟಿ-20 ಮಾದರಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಸೃಷ್ಠಿ ಮಾಡಿದರು. ರೋಹಿತ್(2207) ಹಾಗೂ ವಿರಾಟ್ ಕೊಹ್ಲಿ(2102) ಅವರನ್ನು ಹಿಂದಿಕ್ಕಿದರು. ಇವರ ಜತೆ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಸ್ಮøತಿ ಮಂಧಾನ 33 ರನ್  ಗಳಿಸುವ ಮೂಲಕ ತಂಡದ ಮೊತ್ತದ ಏರಿಕೆಗೆ ನೆರವಾದರು. ಇನ್ನುಳಿದಂತೆ ರೊಡ್ರಿಗಸ್ 18 ಹಾಗೂ ದೀಪ್ತಿ ಶರ್ಮಾ 11 ರನ್ ಗಳಿಸಿದರು.
146 ರನ್ ಗುರಿ ಬೆನ್ನತ್ತಿದ ಐರ್ಲೆಂಡ್ ನಿಗದಿತ 20 ಓವರ್ ಗಳಿಗೆ ಎಂಟು ವಿಕೆಟ್ ಕಳೆದುಕೊಂಡು 93 ರನ್ ಗಳಿಗೆ ಶಕ್ತವಾಯಿತು. ಇದರೊಂದಿಗೆ ಭಾರತದ ವಿರುದ್ಧ 52 ರನ್ ಗಳಿಂದ ಸೋಲು ಒಪ್ಪಿಕೊಂಡಿತು. ಐರ್ಲೆಂಡ್ ಪರ ಇಸೊಬೆಲ್ ಜೋಸೆ(33) ಹಾಗೂ ಕ್ಲಾರೆ ಶಿಲ್ಲಿಂಗ್ಟನ್ ಬಿಟ್ಟರೆ ಇನ್ನುಳಿದ ಬ್ಯಾಟ್ಸ್ ವುಮೆನ್ ಗಳು ವಿಫಲರಾದರು. ಸತತ ಮೂರನೇ ಸೋಲಿನಿಂದಾಗಿ ಐರ್ಲೆಂಡ್ ತಂಡದ ಸೆಮಿಫೈನಲ್ ಕನಸು ಭಗ್ನವಾಯಿತು. ಭಾರತ ಪರ ಉತ್ತಮ ಬೌಲಿಂಗ್ ಮಾಡಿದ ರಾಧಾ ಯಾದವ್ ಮೂರು ವಿಕೆಟ್ ಪಡೆದರೆ, ದೀಪ್ತಿ ಶರ್ಮಾ ಎರಡು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ಭಾರತದ ಸೆಮಿಫೈನಲ್ ಹಾದಿ ಇನ್ನಷ್ಟು ಸುಲಭವಾಯಿತು.