Sunday, September 8, 2024

ಕಷ್ಟಗಳ ಮೆಟ್ಟಿನಿಂತ ಬಾಡಿಬಿಲ್ಡರ್ ಮೊಹಮ್ಮದ್ ರಮೀಜ್

ಸೋಮಶೇಖರ್ ಪಡುಕರೆ ಬೆಂಗಳೂರು

ತಾಯಿಯ ಆರೈಕೆ, ಮನೆಯ ಜವಾಬ್ದಾರಿ ಜತೆಯಲ್ಲಿ ಶಿಕ್ಷಣ ಹಾಗೂ ಕ್ರೀಡೆ ಇವುಗಳನ್ನು ಸರಿದೂಗಿಸಲು ಹೆಣಗಾಡುತ್ತಿದ್ದ ಆ ಯುವಕ ಕೊನೆಗೆ ಗುಡ್‌ಬೈ ಹೇಳಿದ್ದು ಶಿಕ್ಷಣಕ್ಕೆ. ಹಾಗೆ ಮಾಡಿದ ಕಾರಣಕ್ಕೆ ಇಂದು ಮಂಗಳೂರಿನಲ್ಲಿ ಒಬ್ಬ ಅಂತಾರಾಷ್ಟ್ರೀಯ ಬಾಡಿಬಿಲ್ಡರ್ ಹುಟ್ಟಿಕೊಳ್ಳಲು ಸಾಧ್ಯವಾಯಿತು.

ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಲು ವಿಫಲರಾದರೂ ಪವರ್‌ಲಿಫ್ಟಿಂಗ್ ಹಾಗೂ ಬಾಡಿಬಿಲ್ಡಿಂಗ್‌ನಲ್ಲಿ ಮಿಂಚಿದ ಮಂಗಳೂರಿನ ಮೊಹಮ್ಮದ್ ರಮೀಜ್ ಮಿಸ್ಟರ್ ಇಂಡಿಯಾ ಫಿಸಿಕ್ ಹಾಗೂ ಮಿಸ್ಟರ್ ಕರ್ನಾಟಕ ಫಿಸಿಕ್ ಪ್ರಶಸ್ತಿಗಳನ್ನು ಗೆದ್ದು ಈಗ ವಿಶ್ವಮಟ್ಟದ ಪ್ರಶಸ್ತಿಗೆ ಗುರಿ ಇಟ್ಟಿದ್ದಾರೆ.
ಇತ್ತೀಚಿಗೆ ಕೌಲಾಲಂಪುರದಲ್ಲಿ ನಡೆದ ಮಿಸ್ಟರ್ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ನಾಲ್ಕನೇ ಸ್ಥಾನ ಪಡೆದ ರಮೀಜ್, 2018ರ ಮಿಸ್ಟರ್ ಫಿಸಿಕ್‌ನಲ್ಲಿ ಅಗ್ರ ಸ್ಥಾನಿಯಾಗಿದ್ದಾರೆ. ಅಲ್ಲದೆ ಕಳೆದ ವರ್ಷ ನಡೆದ ಮಿಸ್ಟರ್ ಕರ್ನಾಟಕ ಮಿಸ್ಟರ್ ಫಿಸಿಕ್‌ನಲ್ಲೂ ಪ್ರಥಮ ಸ್ಥಾನ ಗೆದ್ದಿದ್ದಾರೆ. ಈಗ ಡಿಸೆಂಬರ್ 15 ಮತ್ತು 16ರಂದು ಸಿಂಗಾಪುರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಬಾಡಿಬಿಲ್ಡಿಂಗ್ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು
ಪ್ರತಿನಿಧಿಸುತ್ತಿದ್ದಾರೆ.

ಪವರ್‌ಲಿಫ್ಟಿಂಗ್ ಹಾಗೂ ಬಾಡಿಬಿಲ್ಡಿಂಗ್

23 ವರ್ಷದ ರಮೀಜ್ ಮೊದಲು ಪವರ್‌ಲಿಫ್ಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕೂಳೂರಿನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿರುವ ಈ  ಕ್ರೀಡಾ ಸಾಧಕನಿಗೆ ತಾಯಿ ಮಮ್ತಾಜ್ ಅವರೇ ಸರ್ವಸ್ವ. ತಾಯಿ ಆರೋಗ್ಯ ನೋಡಿಕೊಳ್ಳುವುದಕ್ಕಾಗಿ ಜಿಮ್‌ಗಳಲ್ಲಿ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಅದರೊಂದಿಗೆ ಬಾಡಿಬಿಲ್ಡಿಂಗ್‌ನಲ್ಲೂ ತಮ್ಮನ್ನು ತೊಡಗಿಸಿಕೊಂಡರು. ದೇಶದ ನೈಸರ್ಗಿಕ ಬಾಡಿಬಿಲ್ಡರ್‌ಗಳಲ್ಲಿ ರಮೀಜ್ ಕೂಡ ಒಬ್ಬರು. ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಇರುವ ಮೈ ಜಿಮ್ ಹಾಗೂ ಕಾರ್‌ಸ್ಟ್ರೀಟ್‌ನಲ್ಲಿರುವ ಬಾಲಾಂಜನೆಯ ವ್ಯಾಯಾಮ ಶಾಲೆಯಲ್ಲಿ ರಮೀಜ್ ತರಬೇತಿ ಪಡೆಯುತ್ತಿದ್ದಾರೆ.
‘ನಾನು ತಾಯಿಯೊಂದಿಗೆ ಇದ್ದೇನೆ, ನಮ್ಮದು ಬಡ ಕುಟುಂಬ. ಬಾಡಿಗೆ ಮನೆಯಲ್ಲಿ ಇರುವುದು. ಕಳೆದ ಬಾರಿ ಚಾಂಪಿಯನ್‌ಷಿಪ್‌ಗೆ ಹೋಗುವಾಗ ಗೆಳೆಯರು ಸಹಾಯ ಮಾಡಿದರು. ಈ ಬಾರಿ ಮುಂಬಯಿಯ ಶ್ರೀ ವಿಠಲ ಫೌಂಡರೇಷನ್‌ನ ರಾಕೇಶ್ ಶೆಟ್ಟಿ ಅವರು ನೆರವು ನೀಡಿದ್ದಾರೆ. ನನ್ನಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿರುವ ನೀಲೇಶ್ ಡೇವಿಡ್ ಹಾಗೂ ಸೊಹೈಲ್ ಕಂದಕ್ ಕೂಡ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದಾರೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿದೆ.
ಅನಾರೋಗ್ಯದಲ್ಲಿರುವ ತಾಯಿಯನ್ನು ಬಿಟ್ಟು ಬೇರೆ ಕಡೆಗೆ ಉದ್ಯೋಗಕ್ಕೆ ಹೋಗಲು ಸಾಧ್ಯವಿಲ್ಲ.  ಈ ಕಾರಣಕ್ಕಾಗಿ ಕ್ರೀಡೆಯನ್ನೇ ಉಸಿರಾಗಿಸಿಕೊಂಡು ಮಂಗಳೂರಿನಲ್ಲೇ ಇದ್ದೇನೆ,‘ ಎಂದು ಹೇಳುವ ರಮೀಜ್ ಅವರಲ್ಲಿ ಒಬ್ಬ ನಿಜವಾದ ಕ್ರೀಡಾಪಟುವಿನ ಲಕ್ಷಣ ಸ್ಪಷ್ಟವಾಗುತ್ತದೆ.
ಇನ್ನು ಕೆಲವು ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡು ಅನುಭವ ಪಡೆದ ನಂತರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ದೇಶಕ್ಕಾಗಿ ಪದಕ ಗೆಲ್ಲುವ ಗುರಿ ರಮೀಜ್ ಅವರದ್ದು. ಇಂಥ ನೈಸರ್ಗಿಕ ಬಾಡಿಬಿಲ್ಡರ್‌ಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ನೆರವು ನೀಡಬೇಕಾದ ಅಗತ್ಯವಿದೆ.

Related Articles