Wednesday, July 24, 2024

ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಕ್ರಿಕೆಟ್ ಅಂಗಣವೇ ಇಲ್ಲ!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಎರಡು ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಟಾರ್ಪೆಡೋಸ್ ಟಿ10 ಬ್ಯಾಶ್ ರಾಷ್ಟ್ರೀಯ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಸಮಾರೋಪ ಸಮಾರಂ‘ದಲ್ಲಿ ಜಿಲ್ಲಾಧಿಕಾರಿ ಸೆಂತಿಲ್ ಕುಮಾರ್ ಅವರ ಮುಂದೆ ದಕ್ಷಿಣ ಕನ್ನಡ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಸಮನ್ವಯಕಾರ ಮನೋಹರ್ ಅಮೀನ್ ಹಾಗೂ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಜಿಲ್ಲೆಯಲ್ಲಿ ತಮ್ಮದೇ ಆದ ಕ್ರಿಕೆಟ್ ಅಂಗಣ ಇಲ್ಲವೆಂಬ ನೋವನ್ನು ತೋಡಿಕೊಂಡರು.

ವಾಣಿಜ್ಯ ಚಟುವಟಿಕೆಗಳಿಗೆ ಮಂಗಳೂರು ದೇಶದಲ್ಲೇ 12 ಹಾಗೂ ರಾಜ್ಯದಲ್ಲೇ 2ನೇ ಉತ್ತಮ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆಯಲ್ಲೂ ಸೇರಿದೆ. ಆದರೆ ಇಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತಮವಾದ ಸುಸಜ್ಜಿತ ಕ್ರೀಡಾಂಗಣವೇ
ಇಲ್ಲದಂತಾಗಿದೆ.
ಮಂಗಳೂರಿನಲ್ಲಿ ಕ್ರಿಕೆಟ್ ಅಂಗಣವನ್ನು ನಿರ್ಮಿಸುವ ಸಲುವಾಗಿ ಕಳೆದ 25 ವರ್ಷಗಳಿಂದ ಭೂಮಿ ಹುಡುಕುವ ಕೆಲಸ ನಡೆಯುತ್ತಿದೆ. ಆದರೆ ಯಾವುದೂ ಅಂತಿಮ ರೂಪು ಪಡೆಯುತ್ತಿಲ್ಲ. ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೂ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ. ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ಪ್ರಮುಖ ಪಂದ್ಯಗಳು ಮಾತ್ರವಲ್ಲದೆ ರಣಜಿ ಹಾಗೂ ಬಿಸಿಸಿಐನ ಇತರ ಪಂದ್ಯಗಳೂ ನಡೆಯುತ್ತಿವೆ. ಎಲ್ಲ ರೀತಿಯ ಸೌಲಭ್ಯಗಳು ಇದ್ದು, ಉತ್ತಮ ಕ್ರಿಕೆಟಿಗರನ್ನು ದೇಶಕ್ಕೆ ನೀಡಿರುವ ದಕ್ಷಿಣ ಕನ್ನಡದಲ್ಲಿ ಒಂದು ಸುಸಜ್ಜಿತ ಕ್ರಿಕೆಟ್ ಅಂಗಣ ಇಲ್ಲವೆಂಬುದು ನಾಚಿಕೆ ತರುವಂಥ ವಿಚಾರ.
ಇಲ್ಲಿಂದ ಗೆದ್ದು ಹೋಗಿ ವಿವಿಧ ಮಂತ್ರಿ ಪದವಿಯನ್ನು ಅಲಂಕರಿಸಿದ ಅನೇಕ ರಾಜಕೀಯ ಮುಖಂಡರಿದ್ದಾರೆ. ಈಗಲೂ ಸಚಿವ ಸ್ಥಾನದಲ್ಲಿ ಇರುವವರಿದ್ದಾರೆ. ಆದರೆ ಕ್ರಿಕೆಟ್ ಅಂಗಣಕ್ಕೆ ಸ್ಥಳವೊಂದನ್ನು ನಿಗದಿಪಡಿಸುವ ಕೆಲಸ ಮಾತ್ರ ಇನ್ನೂ ಆಗಿಲ್ಲ. ಅಭಯಚಂದ್ರ ಜೈನ್ ಕ್ರೀಡಾ ಸಚಿವರಾಗಿದ್ದಾಗಲೂ ಈ ಬಗ್ಗೆ ಧ್ವನಿ ಎದ್ದಿತ್ತು. ಆದರೆ ಅವರು ಕೂಡ ಕ್ರಿಕೆಟ್ ಅಂಗಣದ ಬಗ್ಗೆ ಆಸಕ್ತಿ ತೋರಲಿಲ್ಲ.
ಉತ್ತಮ ಮೂಲಭೂತ ಸೌಲಭ್ಯ 
ಮಂಗಳೂರು ದೇಶದ ಪ್ರಮುಖ ವಾಣಿಜ್ಯ ನಗರಗಳಲ್ಲಿ ಒಂದು. ಇಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೆ, ಬಂದರು ಹಾಗೂ ರಾಷ್ಟ್ರೀಯ ಹೆದ್ದಾರಿ, ಉತ್ತಮ ಗುಣಮಟ್ಟದ ಹೊಟೇಲುಗಳು ಇದ್ದರೂ ಇಲ್ಲಿಯ ಆಡಳಿತ ವ್ಯವಸ್ಥೆಗೆ ಕ್ರಿಕೆಟ್ ಅಂಗಣಕ್ಕಾಗಿ ಸ್ಥಳವೊಂದನ್ನು ಗುರುತಿಸಲು ಇನ್ನೂ ಆಗಿಲ್ಲ. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಸ್ಥಳಾವಕಾಶ ಇದೆ. ಅಲ್ಲಿ ಕ್ರಿಕೆಟ್ ಸ್ಟೇಡಿಯಂ ಸ್ಥಾಪಿಸಲು ಅಗತ್ಯ ಇರುವ 50 ಎಕರೆ ಭೂಮಿಯನ್ನು ಸರಕಾರ ನೀಡಿದರೆ ಸಮಸ್ಯೆಗೆ ಪರಿಹಾರ ಸಿಗುವುದು ಖಚಿತ.
ಬಾಡಿಗೆ ಅಂಗಣದಲ್ಲಿ ಪಂದ್ಯಗಳು!
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ವಲಯ ಮಟ್ಟದ ಪಂದ್ಯಗಳುಮಂಗಳೂರಿನಲ್ಲಿ ನಡೆಸಬೇಕಾದರೆ ಯಾವುದೋ ಕಾಲೇಜು ಕ್ರೀಡಾಂಗಣಗಳನ್ನು ಬಾಡಿಗೆಗೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎನ್‌ಎಂಪಿಟಿ ಅಥ್ಲೆಟಿಕ್ಸ್ ಅಂಗಣದಲ್ಲಿ ಪಂದ್ಯಗಳನ್ನು ನಡೆಸಬೇಕಾಗುತ್ತದೆ. ಇಲ್ಲಿ ಟರ್ಫ್  ಅಂಗಣ ಇಲ್ಲವಾಗಿದೆ. ಆದರೂ ಇಲ್ಲಿನ ಪ್ರತಿಭಾವಂತ ಕ್ರಿಕೆಟಿಗರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದು ಗಮನಾರ್ಹ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಆಲೂರುಗಳಲ್ಲಿ ಕ್ರಿಕೆಟ್ ಅಂಗಣವನ್ನು ಹೊಂದಿದೆ. ಮಂಗಳೂರಿನಲ್ಲೂ ಸ್ಥಾಪಿಸುವ ಹಂಬಲವಿದೆ. ಆದರೆ ಅದಕ್ಕೆ ಸೂಕ್ತವಾದ ‘ಭೂಮಿಯನ್ನು ಜಿಲ್ಲಾಡಳಿತ ನೀಡಬೇಕಾಗುತ್ತದೆ. ಕರ್ನಾಟಕ ಸರಕಾರ ‘ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಅಂತಾರಾಷ್ಟ್ರೀಯ ಅಕಾಡೆಮಿಯನ್ನು ನಡೆಸಲು ಬಿಡದಿಯಲ್ಲಿ ಭೂಮಿಯನ್ನು ನೀಡಿದೆ. ಅದು ಉಚಿತವಾಗಿ ಅಲ್ಲದಿದ್ದರೂ ಕ್ರಿಕೆಟ್‌ಗಾಗಿ ಎಂಬ ಸದುದ್ದೇಶದಿಂದ ನೀಡಿದೆ. ಜನಪ್ರತಿನಿಧಿಗಳು, ಜಿಲ್ಲಾಡಳಿತ  ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕ್ರಿಕೆಟ್ ಸಂಸ್ಥೆ ಒಂದಾಗಿ ಯೋಜನೆ ರೂಪಿಸಿ, ಸ್ಥಳವನ್ನು ನಿಗದಿಪಡಿಸಿದರೆ ಮಂಗಳೂರು ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಅಂಗಣವನ್ನು ಹೊಂದುವುದರಲ್ಲಿ ಸಂಶಯವಿಲ್ಲ.
ಕ್ರಿಕೆಟ್ ಅಂಗಣವಾದರೆ ಏನು ಲಾ?
ಕ್ರಿಕೆಟ್ ಇಂದು ಬರೇ ಕ್ರೀಡೆಯಾಗಿ ಉಳಿದಿಲ್ಲ, ಅದೊಂದು ಉದ್ಯಮವಾಗಿ ರೂಪುಗೊಂಡಿದೆ. ಒಂದು ಪಂದ್ಯವನ್ನು ಆಯೋಜಿಸಿದರೆ ಕೋಟ್ಯಂತರ ರೂಪಾಯಿ ಆಯೋಜಿಸಿದ ಕ್ರಿಕೆಟ್ ಸಂಸ್ಥೆಗೆ ಹರಿದು ಬರುತ್ತದೆ. ಇಲ್ಲಿ ಒಂದಿಷ್ಟು ಯುವಕರಿಗೆ ಉದ್ಯೋಗವಾಗುತ್ತದೆ. ಪ್ರವಾಸೋದ್ಯಮ, ಹೊಟೇಲ್ ಹಾಗೂ ಸಾರಿಗೆಯಿಂದ ಜಿಲ್ಲೆಗೆ ಆದಾಯ ಹರಿದುಬರುತ್ತದೆ. ಕ್ರಿಕೆಟ್‌ನಲ್ಲಿ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಅನೇಕ ಯುವಕರಿಗೆ ವೃತ್ತಿಪರ ತರಬೇತಿ ಸಿಗುವುದರಿಂದ ಅವರು ಆತ್ಮವಿಶ್ವಾಸದ ಹೆಜ್ಜೆಯನ್ನಿಡಲು ಸಾಧ್ಯವಾಗುತ್ತದೆ.
ಸದ್ಯದಲ್ಲೇ ಸ್ಥಳ ಪರಿಶೀಲನೆ
ಟಾರ್ಪೆಡೋಸ್ ಟಿ10 ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಸಮಾರೋಪ ಸಮಾರಂ‘ದಲ್ಲಿ ಪಾಲ್ಗೊಂಡು ಮಾತನಾಡಿದ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೆಂತಿಲ್ ಕುಮಾರ್, ಮಂಗಳೂರಿನಲ್ಲಿ ಕ್ರೀಡಾಂಗಣವೇ ಇಲ್ಲ. ನೆಹರು ಮೈದಾನ ಇದ್ದರೂ ಅದು ಕ್ರೀಡೆಗೆ ಸೂಕ್ತವಾಗಿಲ್ಲ. ಮೊದಲು ಸಿಆರ್‌ಜಡ್‌ನ ಸಮಸ್ಯೆ ಇದ್ದಿತ್ತು. ಈಗ ಕೇಂದ್ರ ಸರಕಾರ ತನ್ನ ನಿಯಮವನ್ನು ಸಡಿಲಗೊಳಿಸಿರುವುದರಿಂದ ಉತ್ತಮವಾದ ಸ್ಥಳವನ್ನು ಪರಿಶೀಲಿಸಿ ಅಂತಿಮಗೊಳಿಸಲಾಗುವುದು. ಈ ನಿಟ್ಟಿನಲ್ಲಿ ನಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳ ನೆರವನ್ನು ಪಡೆಯಲಾಗುವುದು ಎಂದಿದ್ದಾರೆ.
ಸರಕಾರ ಭೂಮಿ ನೀಡಿದರೆ ನಾಳೆಯಿಂದಲೇ ಕೆಲಸ ಆರಂಭಿಸಲಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಸಮನ್ವಯಕಾರ ಮನೋಹರ್ ಅಮೀನ್ ಹೇಳಿದ್ದಾರೆ. ಆದ್ದರಿಂದ ಇಲ್ಲಿಯ ಜಿಲ್ಲಾಧಿಕಾರಿ ಸೆಂತಿಲ್ ಕುಮಾರ್ ಅವರು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕಾದ ಅಗತ್ಯವಿದೆ.
ಮಂಗಳೂರು ದೇಶದ ಪ್ರಸಿದ್ಧ ವಾಣಿಜ್ಯ ನಗರ, ಇಲ್ಲಿ ಕ್ರಿಕೆಟ್ ಸೇರಿದಂತೆ ಎಲ್ಲ ಕ್ರೀಡೆಗಳಿಗೂ ಅನುಕೂಲವಾಗುವ ಒಂದು ಅಂತಾರಾಷ್ಟ್ರೀಯ ಕ್ರೀಡಾಂಗಣದ ಅಗತ್ಯ ಇದೆ. ಕ್ರಿಕೆಟ್ ಟೂರ್ನಿಗಳನ್ನು ನಡೆಸಲು ನಾವು ಖಾಸಗಿ ಶಾಲೆಗಳ ಮೊರೆ ಹೋಗಬೇಕಾಗಿದೆ. ಉತ್ತಮ ಸ್ಥಳವನ್ನು ಆಯ್ಕೆ ಮಾಡಿ ಕೂಡಲೇ ಮಂಗಳೂರಿಗೆ ಅಗತ್ಯ ಇರುವ ಕ್ರೀಡಾಂಗಣ ನಿರ್ಮಿಸಬೇಕಾಗಿರುವುದು ಸದ್ಯ ಇಲ್ಲಿಯ ಜನಪ್ರತಿನಿಧಿಗಳು  ಹಾಗೂ ಜಿಲ್ಲಾಡಳಿತದ ಜವಾಬ್ದಾರಿ ಎಂದು ಟಾರ್ಪೆಡೋಸ್  ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ  ಗೌತಮ್ ಶೆಟ್ಟಿ ಹೇಳಿದ್ದಾರೆ.

Related Articles