Sportsmail ವರದಿ
ಬಿಎಸಿಎ ಮತ್ತು ಕೆಆರ್‌ಎಸ್ ಕ್ರಿಕೆಟ್ ಅಕಾಡೆಮಿ ತಂಡ ನಿಟ್ಟೆ ಬಿ.ಸಿ. ಆಳ್ವಾ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡು ರಾಯಲ್ ಇಂಡಿಯನ್ಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 10 ರನ್ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ.
ಸ್ಪಿನ್ ಬೌಲರ್‌ಗಳಿಗೆ ಅನುಕೂಲವಾದ ಪಿಚ್‌ನಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಉದಯ್ ಕುಮಾರ್ ನಾಯಕತ್ವದ ಬಿಎಸಿಎ ಮತ್ತು ಕೆಆರ್‌ಎಸ್ ತಂಡ ಉದಯ್ ಕುಮಾರ್ (17) ಮತ್ತು ರಾಜೇಶ್ವರ್ (12) ಅವರ ಬ್ಯಾಟಿಂಗ್ ನೆರವಿನಿಂದ 27.1 ಓವರ್‌ಗಳಲ್ಲಿ 108 ರನ್ ಗಳಿಸಿತು. 38 ಅತಿರಿಕ್ತ ರನ್ ನೀಡಿದ್ದೇ ರಾಯಲ್ ಇಂಡಿಯನ್ಸ್ ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ಪ್ರವಾಸಿ ತಂಡದ ಪರ ಭರಣೀಧರನ್ 14 ರನ್‌ಗೆ 3 ವಿಕೆಟ್ ಗಳಿಸಿದರೆ ಡಾ, ಶಿವಕುಮಾರ್ 16 ರನ್ ಗೆ 3 ವಿಕೆಟ್ ಗಳಿಸಿ ಬಿಎಸಿಎ ಮತ್ತು ಕೆಆರ್‌ಎಸ್ ರನ್ ಗಳಿಕೆಗೆ ಕಡಿವಾಣ ಹಾಕಿದರು.
ಮುಂಬೈಯ ಹಿರಿಯ ಆಟಗಾರ ಪ್ರದೀಪ್ ಗೋಡ್ಬೊಲೆ ಅವರ ನಾಯಕತ್ದದ ತಂಡ ಪಂದ್ಯ ಗೆಲ್ಲಲು ಉತ್ತಮ ಅವಕಾಶ ಹೊಂದಿತ್ತು. ಆದರೆ ಬಿಎಸಿಎಯ ಪ್ರಧಾನ ಕೋಚ್ ವಿಜಯ್ ಆಳ್ವಾ ಮತ್ತು ಕೆಆರ್‌ಎಸ್‌ನ ಪ್ರಧಾನ ಕೋಚ್ ಉದಯ್ ಕುಮಾರ್ ಅವರ ಸ್ಪಿನ್ ದಾಳಿಗೆ ಸಿಲುಕಿ ಕೇವಲ 98 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಉದಯ್ ಮತ್ತು ವಿಜಯ್ ತಲಾ 3 ವಿಕೆಟ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ರಾಯಲ್ ಇಂಡಿಯನ್ಸ್ ಪರ ಮನ್‌ದೀಪ್ ಸಿಂಗ್ (11) ಮತ್ತು ಮನೀಶ್ (40) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಜಯದ ಕಡೆಗೆ ಕೊಂಡೊಯ್ಯುತ್ತಿದ್ದರು, ಆದರೆ ಕೊನೆಯ ಕ್ಷಣದಲ್ಲಿ ಶ್ರೀಧರ್ ಉಲ್ಲಾಳ್ ಅವರ ಮಿಂಚಿನ ಕ್ಷೇತ್ರರಕ್ಷಣೆಯಿಂದಾಗಿ ರಾಯಲ್ ಇಂಡಿಯನ್ಸ್ ಸೋಲಿಗೆ ಶರಣಾಯಿತು. ಕುಂದಾಪುರದ ಹಿರಿಯ ಆಟಗಾರ ಮನೋಜ್ ನಾಯರ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಗಮನಸೆಳೆದರು.
ವೈಯಕ್ತಿಕ ಪ್ರಶಸ್ತಿ:
ರಾಯಲ್ ಇಂಡಿಯನ್ಸ್ ತಂಡ ದಿನದಾಟದಲ್ಲಿ ಸೋಲನ್ನು ಅನುಭವಿಸಿದರೂ ಭರಣೀಧರನ್ 16ರನ್‌ಗೆ 3 ವಿಕೆಟ್ ಗಳಿಸಿ ಉತ್ತಮ ಬೌಲರ್ ಪ್ರಶಸ್ತಿ ಗಳಿಸಿದರು. 40 ರನ್ ಸಿಡಿಸಿದ ಡಾ. ಮನೀಶ್ ಉತ್ತಮ ಬ್ಯಾಟ್ಸ್‌ಮನ್ ಗೌರವಕ್ಕೆ ಪಾತ್ರರಾದರು.
ವಿಜೇತ ಬಿಎಸಿಎ ಮತ್ತು ಕೆಆರ್‌ಎಸ್ ತಂಡದ ಪರ ವಿಜಯ್ ಆಳ್ವಾ ಉತ್ತಮ ಬೌಲರ್ ಮತ್ತು ಉದಯ್ ಕುಮಾರ್ ಉತ್ತಮ ಬ್ಯಾಟ್ಸ್‌ಮನ್ ಗೌರವಕ್ಕೆ ಪಾತ್ರರಾದರು. ರನೌಟ್ ಮಾಡಿ ಪಂದ್ಯಕ್ಕೆ ತಿರುವು ನೀಡಿದ ಶ್ರೀಧರ್ ಉಳ್ಳಾಲ್ ಉತ್ತಮ ಫೀಲ್ಡರ್ ಪ್ರಶಸ್ತಿ ಪಡೆದರು.
ಕೆಎಂಸಿ ಮಣಿಪಾಲದ ದೈಹಿಕ ಶಿಕ್ಷಣ ನಿರ್ದೇಶಕ ದೀಪಕ್ ಬೈರಿ ಅವರು ಬಹುಮಾನ ವಿತರಿಸಿದರು.