Wednesday, July 24, 2024

ವಿದರ್ಭಕ್ಕೆ ದಿನದ ಗೌರವ ಮೊತ್ತ

ನಾಗ್ಪುರ:

ಅಭಿಮನ್ಯು ಮಿಥುನ್(3) ಮಾರಕ ದಾಳಿ ಹಾಗೂ ಜೆ.ಸುಚಿತ್(3) ಸ್ಪಿನ್ ಮೋಡಿ ಹೊರತಾಗಿಯೂ ಕನ್ನಡಿಗ ಗಣೇಶ್ ಸತೀಶ್(57) ಅವರ ಅತ್ಯಮೂಲ್ಯ ಅರ್ಧ ಶತಕದ ನೆರವಿನಿಂದ ವಿದರ್ಭ ತಂಡ ರಣಜಿ ಟ್ರೋಫಿ ಎಲೈಟ್ ಗುಂಪು(ಎ) ಎರಡನೇ ಸುತ್ತಿನ ಪಂದ್ಯದ ಪ್ರಥಮ ಇನಿಂಗ್ಸ್ ಮೊದಲ ದಿನದಾಟದ ಮುಕ್ತಾಯಕ್ಕೆ ಗೌರವ ಮೊತ್ತ ಪೇರಿಸಿದೆ.

ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹಾಲಿ ಚಾಂಪಿಯನ್ ತಂಡ 31 ರನ್ ಇರುವಾಗ ಫೈಜ್ ಫಜಲ್(22) ಹಾಗೂ ಸಂಜಯ್ ರಾಮಸ್ವಾಮಿ(9) ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಪಂದ್ಯದ ಆರಂಭದಲ್ಲೇ ಅಭಿಮನ್ಯು ಮಿಥುನ್ ವಿದರ್ಭಕ್ಕೆ ಶಾಕ್ ನೀಡಿದರು. ಬಳಿಕ, ಜತೆಯಾದ ವಾಸಿಂ ಜಾಫರ್ ಹಾಗೂ ಕನ್ನಡಿಗ ಗಣೇಶ್ ಸತೀಶ್ ಸೇರಿ ಮೂರನೇ ವಿಕೆಟ್ ಗೆ 85 ರನ್ ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. 41 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಜಾಫರ್, ಬಿನ್ನಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ, ಅಕ್ಷಯ್ ವಾಡ್ಕರ್ ಜತೆ ಸೇರಿ ಇನಿಂಗ್ಸ್ ಕಟ್ಟಿದ ಗಣೇಶ್ ಸತೀಶ್ ತಾಳ್ಮೆಯ ಬ್ಯಾಟಿಂಗ್ ಮಾಡಿದರು. ಆಡಿದ 141 ಎಸೆತಗಳಿಗೆ ಏಳು ಬೌಂಡರಿ ಸಹಿತ 57 ರನ್ ಗಳಿಸಿದರು. ನಂತರ, ಜೆ.ಸುಚಿತ್ ಗೆ ವಿಕೆಟ್ ಒಪ್ಪಿಸಿದರು. ನಂತರ, ಅಕ್ಷಯ್ ವಾಡ್ಕರ್ 31 ಗಳಿಸಿ ಔಟ್ ಆದರು. ಅಪೂರ್ವ 12, ಆದಿತ್ಯ ಸರ್ವಾತೆ 14 ರನ್ ಗಳಿಸಿ ಹೊರನಡೆದರು. ಒಟ್ಟಾರೆ, ವಿದರ್ಭ 87 ಓವರ್ ಗಳ ಮುಕ್ತಾಯಕ್ಕೆ ಎಂಟು ವಿಕೆಟ್ ಕಳೆದುಕೊಂಡು 245 ರನ್ ಗಳಿಸಿದೆ. ಕ್ರೀಸ್ ನಲ್ಲಿ ಶ್ರೀಕಾಂತ್ ವಾಘ್(37*) ಹಾಗೂ ಲಲಿತ್ ಯಾದವ್ ಇದ್ದಾರೆ.
ಕರ್ನಾಟಕ ಪರ ಉತ್ತಮ ಬೌಲಿಂಗ್ ಮಾಡಿದ ಜೆ.ಸುಚಿತ್ ಹಾಗೂ ಅಭಿಮನ್ಯು ಮಿಥುನ್ ತಲಾ ಮೂರು ವಿಕೆಟ್ ಕಬಳಿಸಿದರು.

Related Articles