Thursday, October 10, 2024

ಬಡಾಕೆರೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಡ್ಮಿಂಟನ್‌ ತರಬೇತಿ

ಕುಂದಾಪುರ: ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದೊಂದಿಗೆ ಹುಟ್ಟಿಕೊಂಡ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ ಇಂದು ಕುಂದಾಪುರ ತಾಲೂಕಿನಲ್ಲೇ ಉತ್ತಮ ಅಕಾಡೆಮಿಯಾಗಿ ಬೆಳೆಯುತ್ತಿದೆ. ಈ ಶುಭ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರಾದ ಅಜಿತ್‌ ಕೋಸ್ಟಾ ಅವರು ತಾನು ಕಲಿತ ಕಡಾಕೆರೆ ಸರಕಾರಿ ಪ್ರಾಥಮಿಕ ಶಾಲೆಯ ಸುಮಾರು 40 ಮಕ್ಕಳಿಗೆ ಉಚಿತ ಬ್ಯಾಡ್ಮಿಂಟನ್‌ ತರಬೇತಿ ನೀಡಲು ನಿರ್ಧರಿಸಿದ್ದಾರೆ. Costa Badminton Center opt Government Primary School Badakere Kundapura for free Badminton Coaching.

ಈ ಹಿನ್ನೆಲೆಯಲ್ಲಿ ಕುಂದಾಪುರ ವಲಯ ಬಡಾಕೆರೆ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸೀತರಾಮ ಶೆಟ್ಟಿ ಅವರೊಂದಿಗೆ ಮಾತುಕತೆ ನಡೆಸಿ ಸಂಪೂರ್ಣ ಮಾಹಿತಿ ಒದಗಿಸಲಾಯಿತು. ನಾಲ್ಕು ತಿಂಗಳ ಕಾಲ ನಡೆಯುವ ಈ ತರಬೇತಿ ಶಿಬಿರದಲ್ಲಿ ಸೆಪ್ಟೆಂಬರ್‌ ಕೊನೆಯ ಎರಡು ಭಾನುವಾರ ಮತ್ತು ಅಕ್ಟೋಬರ್‌ ಮೊದಲ ಎರಡು ಭಾನುವಾರ ಆಯ್ಕೆ ಟ್ರಯಲ್ಸ್‌ ನಡೆಯಲಿದೆ. ಇಲ್ಲಿ ಊತ್ತಮ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ನಾಲ್ಕು ತಿಂಗಳ ಕಾಲ ತರಬೇತಿ ನೀಡಲಾಗುವುದು, ಇಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉತ್ತಮ ತರಬೇತುದಾರರಲ್ಲಿ ತರಬೇತಿ ನೀಡಲಾಗುವುದು. ಇವರಿಗೆ ಉಚಿತ ಟಿ ಶರ್ಟ್‌, ಬ್ಯಾಟ್‌ ಮತ್ತು ಬ್ಯಾಡ್ಮಿಂಟನ್‌ ಶೂಗಳನ್ನು ಉಚಿತವಾಗಿ ನೀಡಲಾಗುವುದು. ಈ ಆಟಗಾರರನ್ನು ವಲಯ, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಟೂರ್ನಿಗಳಿಗೆ ಕಳುಹಿಸಿಕೊಡಲಾಗುವುದು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಯರಾದ ಸೀತಾರಾಮ ಶೆಟ್ಟಿ ಅವರು, “ಅಜಿತ್‌ ನಮ್ಮ ಶಾಲೆಯ ಹೆಮ್ಮೆಯ ಹಳೆ ವಿದ್ಯಾರ್ಥಿ. ದೂರದ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರೂ ಇಲ್ಲಿರುವ ಮಕ್ಕಳ ಬಗ್ಗೆ ಅವರು ತೋರಿಸಿರುವ ಕಾಳಜಿ ಗಮನಾರ್ಹ. ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ ಆರಂಭಗೊಂಡು ಕೆಲವು ತಿಂಗಳು ಕಳೆಯುವಷ್ಟರಲ್ಲಿಯೇ ಅವರಿಗೆ ತಾನು ಕಲಿತ ಶಾಲೆಗೆ ಏನಾದರೂ ಮಾಡಬೇಕೆಂಬ ಆಶಯ ವ್ಯಕ್ತವಾಗಿರುವುದು ಖುಷಿಯ ಸಂಗತಿ. ಗ್ರಾಮೀಣ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಇಲ್ಲಿ ಮಕ್ಕಳು ಉತ್ತಮ ರೀತಿಯಲ್ಲಿ ಕಲಿತು ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸಿದರೆ ಅದೇ ಸ್ಮರಣೀಯ. ಸುಮಾರು 40 ಮಕ್ಕಳನ್ನು ಆಯ್ಕೆ ಮಾಡಿಕೊಟ್ಟಿದ್ದೇವೆ. ಅದರಲ್ಲಿ ಉತ್ತಮ ರೀತಿಯಲ್ಲಿ ಆಟಕ್ಕೆ ಹೊಂದಿಕೊಳ್ಳುವ 20 ಮಕ್ಕಳಿಗೆ ಉಚಿತ ಆಹಾರ, ಟಿ ಶರ್ಟ್‌, ಬ್ಯಾಟ್‌ ಮತ್ತು ಶೂ ನೀಡಿ ಅವರನ್ನು ಸಜ್ಜುಗೊಳಿಸುವ ಜವಾಬ್ದಾರಿ ಹೊತ್ತಿರುವ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ಗೆ ಯಶಸ್ಸು ಸಿಗಲಿ.  ತಾನು ಕಲಿತ ಶಾಲೆಯನ್ನು ಮರೆಯದೆ ಇಲ್ಲಿಯ ಮಕ್ಕಳ ಬಗ್ಗೆ ಅವರು ತೋರಿದ ಕಾಳಜಿಗೆ ನಾವು ಯಾವಾಗಲೂ ಚಿರಋಣಿ,” ಎಂದಿದ್ದಾರೆ.‌

ಕುಂದಾಪುರದ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು: ಅಜಿತ್‌ ಡಿ ಕೋಸ್ಟಾ ಅವರಿಗೆ ಚಿಕ್ಕಂದಿನಲ್ಲಿ ಆಡಲು ಯಾವುದೇ ಸೌಲಭ್ಯ ಇರಲಿಲ್ಲ. ಆಡುವ ಹಂಬಲವಿದ್ದರೂ ಹಳ್ಳಿಯ ಶಾಲೆಯಾದ ಕಾರಣ ಉತ್ತಮ ಸೌಲಭ್ಯದ ಕೊರತೆ ಇದ್ದಿತ್ತು. ಯಾವ ಸೌಲಭ್ಯವಿದೆಯೋ ಅದೇ ಆಟವನ್ನಾಡುವುದು ಅನಿವಾರ್ಯವಾಗಿತ್ತು. ಉದ್ಯೋಗ ಅರಸಿ ಕೊಲ್ಲಿ ರಾಷ್ಟ್ರಕ್ಕೆ ಹೋದ ಬಳಿಕ ಊರಿನಲ್ಲಿ ಒಂದು ಬ್ಯಾಡ್ಮಿಂಟನ್‌ ಅಕಾಡೆಮಿ ಸ್ಥಾಪಿಸಬೇಕು. ಅಲ್ಲಿ ನಮ್ಮೂರ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಬೇಕೆಂದು ಕನಸು ಕಂಡಿದ್ದರು. ಈಗ ಅವರ ಕನಸು ನನಸಾಗಿದೆ. ಕುಂದಾಪುರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದಿಂದ ಕೂಡಿದ ಅಕಾಡೆಮಿ ಎದ್ದು ನಿಂತಿದೆ. “ನಾವು ಅನುಭವಿಸಿದ ಕಷ್ಟವನ್ನು ನಮ್ಮೂರ ಈಗಿನ ಮಕ್ಕಳು ಅನುಸರಿಸಬಾರದು. ಅದರಲ್ಲೂ ನಾನು ಕಲಿತ ಶಾಲೆಗೆ ಏನಾದೂ ಕೊಡುಗೆ ನೀಡಬೇಕೆಂಬ ಹಂಬಲವಿದ್ದಿತ್ತು. ಉತ್ತಮ ಕ್ರೀಡಾಪಟುಗಳನ್ನು ಹುಟ್ಟುಹಾಕುವ ಉದ್ದೇಶ ನನ್ನದಾಗಿದೆ. ಈ ಹಿನ್ನೆಲೆಯಲ್ಲಿ ನಾನು ಕಲಿತ ಶಾಲೆಯ ಮಕ್ಕಳಿಗೆ ಉಚಿತ ತರಬೇತಿ ನೀಡಿ, ನಮ್ಮ ಕುಂದಾಪುರ ಮಕ್ಕಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ದಿನ ಬರಬೇಕೆಂಬುದು ಗುರಿ. ಆ ನಿಟ್ಟಿನಲ್ಲಿ ಬಡಾಕೆರೆ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವೆ, ಅದಕ್ಕೆ ಸೂಕ್ತ ತರಬೇತುದಾರರನ್ನೂ ನಿಯೋಜಿಸಲಾಗಿದೆ,” ಎಂದು ಅಜಿತ್‌ ಡಿಕೋಸ್ಟಾ ಅವರು ಹೇಳಿದ್ದಾರೆ.

ಅಕಾಡೆಮಿಗೆ ನೂತನ ಕೋಚ್‌: ಇದೇ ಸಂದರ್ಭದಲ್ಲಿ ಅಕಾಡೆಮಿಗೆ ನೂತನ ಕೋಚ್‌ ಆಗಿ ಕೊಡಗಿನ ಸೋಮಣ್ಣ ನಂಜಪ್ಪ ಅವರು ಕಾರ್ಯನಿರ್ವಹಿಸಲಿದ್ದಾರೆ. ಮಡಿಕೇರಿಯ ಸೋಮವಾರ ಪೇಟೆಯ ಇಗ್ಗೊಡ್ಲಿನ ಮಾದಾಪುರದವರಾದ ಸೋಮಣ್ಣ ಅವರು ರಾಷ್ಟ್ರಮಟ್ಟದ ಹಾಕಿ ಆಟಗಾರರಾಗಿ ಈಗ ಬ್ಯಾಡ್ಮಿಂಟನ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಇಲ್ಲಿರುವ ಮಕ್ಕಳಿಗೆ ಉತ್ತಮ ತರಬೇತಿ ನೀಡಿ ಅವರನ್ನು ಒಂದು ಹಂತಕ್ಕೆ ಕೊಂಡೊಯ್ಯುವ ಉದ್ದೇಶ ಇದೆ. ಚಿಕ್ಕಮಕ್ಕಳನ್ನು ಉತ್ತಮ ರೀತಿಯಲ್ಲಿ ಪಳಗಿಸಿದರೆ ಅವರು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ ಉತ್ತಮ ಯೋಜನೆಗೆ ಮುಂದಾಗಿದೆ. ಇದರಲ್ಲಿ ಭಾಗಿಯಾಗಿ ಕಾರ್ಯನಿರ್ವಹಿಸಲು ಹೆಮ್ಮೆ ಅನಿಸುತ್ತಿದೆ,” ಎಂದು ಸೋಮಣ್ಣ ಹೇಳಿದ್ದಾರೆ. ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನ ಆಡಳಿತಾಧಿಕಾರಿ ನಿಧೇಶ್‌ ಆಚಾರ್ ಹಾಗೂ ಸೆಂಟರ್‌ನ ಸಲಹೆಗಾರ ಸೋಮಶೇಖರ್‌ ಪಡುಕರೆ ಹಾಜರಿದ್ದರು.

Related Articles