Thursday, September 12, 2024

FIM MiniGP ಸರಣಿಯಲ್ಲಿ ಮಿಂಚಿದ ಪುಟ್ಟ ಬಾಲಕಿ ಬೆಂಗಳೂರಿನ ನಿಥಿಲಾ ದಾಸ್‌!

ಸೋಮಶೇಖರ್‌ ಪಡುಕರೆ, ಬೆಂಗಳೂರು:

ನಗರದ ಮೆಕೋ ಕಾರ್ಟೋಪಿಯಾ ಸರ್ಕಿಟ್‌ನಲ್ಲಿ ನಡೆದ ಎಫ್‌ಐಎಂ ಮಿನಿಜಿಪಿ (FIM MiniGP World Series India 2022) ವಿಶ್ವ ಸರಣಿ ಭಾರತ 2022ರ ಮೊದಲ ರೇಸ್‌ನಲ್ಲಿ ಬಾಲಕಿರಯ ವಿಭಾಗದಲ್ಲಿ ಬೆಂಗಳೂರಿನ 12ರ ಹರೆಯದ ಬಾಲಕಿ ನಿಥಿಲಾ ದಾಸ್‌ ಎರಡೂ ಸುತ್ತುಗಳಲ್ಲಿ ಅಗ್ರ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾರೆ.

1.11:532 ಸೆಕೆಂಡುಗಳಲ್ಲಿ ಮೊದಲ ಲ್ಯಾಪ್‌ ಗುರಿ ತಲುಪಿದ ನಿಥಿಲಾ ಈ ಸಾಧನೆ ಮಾಡಿದ ಬಾಲಕಿಯರ ವಿಭಾಗದ ಏಕೈಕ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಟ್ಟು 17.44:179 ಸೆಕೆಂಡುಗಳಲ್ಲಿ ಗುರಿ ತಲುಪಿ ಸಮಗ್ರವಾಗಿ ಐದನೇ ಸ್ಥಾನ ಪಡೆದರೂ ಬಾಲಕಿಯರ ವಿಭಾಗದಲ್ಲಿ ಅಗ್ರ ಸ್ಥಾನ ಗಳಿಸಿ ಕರ್ನಾಟಕಕ್ಕೆ ಕೀರ್ತಿ ತಂದರು.

ಎರಡನೇ ರೇಸ್‌ನಲ್ಲಿ 16.42:872 ಸೆಕೆಂಟಡುಗಳಲ್ಲಿ ಗುರಿ ತಲುಪಿ ಆರನೇ ಸ್ಥಾನ ಗಳಿಸಿದರು. 1.11:639 ನಿಥಿಲಾ ಅವರ ವೇಗದ ಲ್ಯಾಪ್‌ ಆಗಿತ್ತು. ಎರಡೂ ರೇಸ್‌ಗಳನ್ನು ಪೂರ್ಣಗೊಳಿಸಿ ಬಾಲಕಿಯರ ವಿಭಾಗದಲ್ಲಿ ಅಗ್ರ ಸ್ಥಾನ ಗಳಿಸಿದರು.

ಭಾರತದ ಮೋಟಾರ್‌ ಸ್ಪೋರ್ಟ್ಸ್‌ ಮಾಜಿ ಚಾಂಪಿಯನ್‌ ಅಭಿಷೇಕ್‌ ವಾಸುದೇವ್‌  ಅವರಲ್ಲಿ ತರಬೇತಿ ಪಡೆಯುತ್ತಿರುವ ನಿಥಿಲಾ 12 ವರ್ಷದ ಮಿಥಿಲಾ ಇದಕ್ಕೂ ಮುನ್ನ ಎಂಟಿಬಿ ಸೈಕ್ಲಿಂಗ್‌ನಲ್ಲಿ ಚಾಂಪಿಯನ್‌ ಪಟ್ಟ ಗೆದ್ದಿರುತ್ತಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಈಗ ಬೈಕ್‌ ರೇಸ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಈ ವರ್ಷ ಮೊದಲ ಬಾರಿಗೆ ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಭಾರತದ ರಾಷ್ಟ್ರೀಯ ಮಾಜಿ ಚಾಂಪಿಯನ್‌ ಅಭಿಷೇಕ್‌ ವಾಸುದೇವ್‌ ಅವರಲ್ಲಿ ತರಬೇತಿ ಪಡೆಯುತ್ತಿದ್ದು, ಆಫ್‌ಡೋರ್‌ ರೇಸಿಂಗ್‌ಗಾಗಿ ಸಿ.ಎಸ್.‌ ಸಂತೋಷ್‌ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.

ತಮ್ಮನೂ ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ: ನಿಥಿಲಾ ಅವರ ಸಹೋದರ 9 ವರ್ಷದ ನಂದನ್‌ ದಾಸ್‌ ಕೂಡ ಮೊದಲು ಎಂಟಿಬಿ ಸೈಕ್ಲಿಂಗ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚಿ ಈಗ ಮೋಟಾರ್‌ ಸ್ಪೋರ್ಟ್ಸ್‌ಗೆ ಪದಾರ್ಪಣೆ ಮಾಡುತ್ತಿದ್ದಾನೆ. ಇಬ್ಬರೂ ಯಶವಂತಪುರದ 21K ಶಾಲೆಯಲ್ಲಿ ಅನುಕ್ರಮವಾಗಿ 7 ಮತ್ತು 4ನೇ ತರಗತಿಗಳಲ್ಲಿ ಓದುತ್ತಿದ್ದಾರೆ.

ಈ ಇಬ್ಬರೂ ರೇಸರ್‌ಗಳಿಗೆ ರಾಷ್ಟ್ರೀಯ ಎಂಟಿಬಿ ಸೈಕ್ಲಿಸ್ಟ್‌ ಮತ್ತು ಒಲಿಂಪಿಕ್‌ ಸರ್ಟಿಫೈಡ್‌ ಫಿಟ್ನೆಸ್‌ ಕೋಚ್‌ ಆಗಿ ಜೊಯ್ಸ್ನಾ ನಾರ್ಜರಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೈಕ್ಲಿಂಗ್‌ನಲ್ಲಿ ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್‌ ಮತ್ತು ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕಿರಣ್‌ ಕುಮಾರ್‌ ರಾಜು ತರಬೇತಿ ನೀಡುತ್ತಿದ್ದಾರೆ. ISBKಯಲ್ಲಿ ಟ್ರೈನರ್‌ ಆಗಿರುವ ಮಾಜಿ ರಾಷ್ಟ್ರೀಯ ಚಾಂಪಿಯನ್‌ ಅಭಿಷೇಕ್‌ ವಾಸುದೇವ್‌ ಮೋಟಾರ್‌ ಸೈಕ್ಲಿಂಗ್‌ ಕೋಚ್‌ ಆಗಿದ್ದಾರೆ. ಟ್ರೈಬಲ್‌ ಅಡ್ವೆಂಚರ್‌ ಕೆಫೆಯಲ್ಲಿ ಟ್ರೈನರ್‌ ಆಗಿರುವ ಮಾಜಿ ರಾಷ್ಟ್ರೀಯ ಚಾಂಪಿಯನ್‌ ದೇವ್‌ ವೆಂಕಟೇಶ್‌ ಕೂಡ ಮೋಟಾರ್‌ ಸೈಕ್ಲಿಂಗ್‌ನಲ್ಲಿ ತರಬೇತಿ ನೀಡುತ್ತಿದ್ದಾರೆ.

ಮಗಳ ಸಾಧನೆ ಖುಷಿಕೊಟ್ಟಿದೆ: ನಿಖಿಲ್‌: ಕೊನೆಯ ಕ್ಷಣದಲ್ಲಿ ವೈಲ್ಡ್‌ ಕಾರ್ಡ್‌ ಮೂಲಕ ಪ್ರವೇಶ ಪಡೆದು, ಅಗ್ರ ಸ್ಥಾನ ಗಳಿಸಿರುವ ನಿಥಿಲಾ ದಾಸ್‌ ಸಾಧನೆಗೆ ತಂದೆ ನಿಖಿಲ್‌ ದಾಸ್‌ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಐಟಿ ಉದ್ಯಮಿಯಾಗಿರುವ ನಿಖಿಲ್‌ ದಾಸ್‌ ಕೂಡ ಹವ್ಯಾಸಿ ರೈಡರ್‌, ಮೂಲತಃ ಕೇರಳದ ತಿರುವನಂತಪುರದವರಾದ ನಿಖಿಲ್‌ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. “ಇಬ್ಬರೂ ಚಿಕ್ಕಂದಿನಿಂದಲೂ ಸಾಹಸ ಕ್ರೀಡೆಯಲ್ಲಿ ತೊಡಗಿಕೊಂಡವರು. ಮಗಳು ನಿಥಿಲಾ ಮತ್ತು ಮಗ ನಂದನ್‌ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಎಂಟಿಬಿ ಸೈಕ್ಲಿಂಗ್‌ನಲ್ಲಿ ಕರ್ನಾಟಕಕ್ಕೆ ಹಲವಾರು ಪದಕಗಳನ್ನು ಗೆದ್ದಿದ್ದಾರೆ.

ಇಬ್ಬರಲ್ಲೂ KTM 65 ಬೈಕ್‌ ಇದೆ, ಇದು ಸುಮಾರು 7 ಲಕ್ಷ ರೂ ಬೆಲೆಬಾಳುವಂಥ ರೇಸಿಂಗ್‌ ಬೈಕ್‌. ದುಬಾರಿ ಎನಿಸುತ್ತದೆ. ಆದರೆ ಮಕ್ಕಳ ಸುರಕ್ಷತೆಗೆ ಇದು ಅನಿವಾರ್ಯವಾಗಿದೆ. ಮಕ್ಕಳಲ್ಲಿ ಬದುಕಿನ ಕಠಿಣ ಸವಾಲುಗಳನ್ನು ಎದುರಿಸುವ ಗುಣ ಚಿಕ್ಕಂದಿನಲ್ಲಿಯೇ ಮೈಗೂಡಬೇಕು, ಈ ಕಾರಣಕ್ಕಾಗಿ ಸಾಹಕ ಕ್ರೀಡೆಗಳಲ್ಲಿ ಅವರನ್ನು ತೊಡಗಿಸಿದ್ದೇನೆ,” ಎನ್ನುತ್ತಾರೆ ನಿಖಿಲ್‌ ದಾಸ್‌.

ಕೇವಲ ಇಬ್ಬರಿಗೆ ಮಾತ್ರ ಫೈನಲ್‌ಗೆ ಅವಕಾಶ: FIM MiniGP ವಿಶ್ವ ಸರಣಿ ಸದ್ಯ ಭಾರತದ ಸುತ್ತು ನಡೆಯುತ್ತಿದ್ದು ಇಲ್ಲಿ ಆರು ಸುತ್ತಿನ ಸ್ಪರ್ಧೆ ಇರುತ್ತದೆ, ಇಲ್ಲಿ ಅಗ್ರ ಸ್ಥಾನ ಪಡೆಯುವ ಇಬ್ಬರು ಸ್ಪೇನ್‌ನಲ್ಲಿ ನಡೆಯಲಿರುವ ವಿಶ್ವ ಫೈನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ನಿಥಿಲಾ ಅವರು ಈಗ ಬಾಲಕರೊಂದಿಗೆ ಸ್ಪರ್ಧಿಸುತ್ತಿದ್ದಾರೆ. ಮುಂದಿನ ಸುತ್ತುಗಳಲ್ಲಿ ಅವರು ಈಗ ಅಗ್ರ ಸ್ಥಾನದಲ್ಲಿರುವವರನ್ನು ಹಿಂದಿಕ್ಕಿ ಮೊದಲ ಅಥವಾ ಎರಡನೇ ಸ್ಥಾನ ಗಳಿಸಿದೆ ಸ್ಪೇನ್‌ಗೆ ಪ್ರಯಾಣಿಸಬಹುದು. ಇಲ್ಲಿ ಬಾಲಕಿಯರಿಗೆ ಎಂದು ಪ್ರತ್ಯೇಕವಾದ ವಿಭಾಗ ಇಲ್ಲದ ಕಾರಣ ಈ ನಿಯಮ ಪಾಲಿಸುವುದು ಅನಿವಾರ್ಯವಾಗಿದೆ.

Related Articles