Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಿದ್ಯಾರ್ಥಿಗಳ ದತ್ತುಪಡೆದು ಕ್ರೀಡೆ ಕಲಿಸುವ ಗುರು ಶಂಕರ್‌

ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ತಮ್ಮಾಪುರದ ಶಂಕರ ನಾಯಕ ಅವರು ತಮ್ಮ ತಾಲೂಕಿನಲ್ಲಿ ಕ್ರೀಡೆಗಾಗಿ ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಗಮನಿಸಿದಾಗ ಅಲ್ಲಿರುವ ಕ್ರೀಡಾಪಟುಗಳಿಗೆ ರಾಜ್ಯ ಸರಕಾರ ಅಥವಾ ಕಾರ್ಪೊರೇಟ್‌ ವಲಯ ಯಾವುದಾದರೂ ರೀತಿಯಲ್ಲಿ ನೆರವು ನೀಡುವುದು ಅಗತ್ಯವಿದೆ ಎಂದೆನಿಸುತ್ತದೆ. Can anyone help these athletes a pair of shoe?  

ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ ಶಂಕರ್‌ ನಾಯಕ್‌, ತನ್ನ ಊರಿನಲ್ಲಿರುವ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಕೀರ್ತೀ ತರಬೇಕೆಂದು ಹಂಬಲಿಸಿದವರು. ಅದಕ್ಕಾಗಿ ಬಿಪಿಎಡ್‌, ಎಂಪಿಎಡ್‌ ಹಾಗೂ ಎನ್‌ಐಎಸ್‌ ಪದವಿ ಗಳಿಸಿ ಅಥ್ಲೆಟಿಕ್ಸ್‌ ಮತ್ತು ಕಬಡ್ಡಿಯಲ್ಲಿ ಕೋಚ್‌ ಆಗಿ ತರಬೇತಿ ಪಡೆದು ಸುಮಾರು 80ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಇವರಲ್ಲಿ ತರಬೇತಿ ಪಡೆದ ಹೆಚ್ಚಿನ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಪದಕ ಗಳಿಸಿರುತ್ತಾರೆ.

2016ರಿಂದ ಅಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಅಥ್ಲೆಟಿಕ್ಸ್‌ ಮತ್ತು ಕಬಡ್ಡಿಯಲ್ಲಿ ತರಬೇತಿ ನೀಡುತ್ತಿರುವ ಶಂಕರ್‌ ನಾಯಕ್‌ ಯಾರೂದರೂ ನಮ್ಮ ಕ್ರೀಡಾಪಟುಗಳಿಗೆ ಶೂ ಒದಗಿಸಿದರೆ ಬಹಳ ಉಪಕಾರವಾಗುತ್ತಿತ್ತು ಎಂದು ವಿನಂತಿಸಿಕೊಂಡಿದ್ದಾರೆ.

“ಮೊದಲು ಇಲ್ಲಿನ ವಸತಿ ಶಾಲೆಯಲ್ಲಿ ಗುತ್ತಿಗೆ ಆದಾರದ ಮೇಲೆ ಕ್ರೀಡಾ ತರಬೇತಿ ನೀಡುತ್ತಿದ್ದೆ. ಆಗ ಇಲ್ಲಿ ದೈಹಿಕ ಶಿಕ್ಷಕರು ಇರಲಿಲ್ಲ. ಮಕ್ಕಳು ಕ್ರೀಡೆಯಿಂದ ವಂಚಿತವಾಗಬಾರದು ಎಂದು ಈ ಕೆಲಸ ಮಾಡುತ್ತಿದ್ದೆ. ಈಗ ದೈಹಿಕ ಶಿಕ್ಷಕರು ಬಂದಿದ್ದಾರೆ. ಇಲ್ಲಿಯ ಪ್ರಾಂಶುಪಾಲರು ಆದರೂ ನಿಮ್ಮ ತರಬೇತಿಯನ್ನು ಮುಂದುವರಿಸಿ ಮಕ್ಕಳಿಗೆ ನೆರವಾಗುತ್ತದೆ ಎಂದಿದ್ದಾರೆ, ಇಲ್ಲಿ ತರಬೇತಿ ಪಡೆದ 15 ಅಥ್ಲೀಟ್‌ಗಳು ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಿಸಿರುತ್ತಾರೆ. ಇಬ್ಬರು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕಬಡ್ಡಿ ತಂಡವು ಜಿಲ್ಲಾ ಮಟ್ಟದಲ್ಲಿ ಯಶಸ್ಸು ಕಂಡಿದೆ. ಬೆಳಿಗ್ಗೆ ಅಥ್ಲೆಟಿಕ್ಸ್‌ ಹಾಗೂ ಸಂಜೆ ಕಬಡ್ಡಿ ತರಬೇತಿ ನೀಡಲಾಗುತ್ತದೆ,” ಎಂದು ತಿಳಿಸಿದರು.

ಶೂ ಇಲ್ಲದೆ ತರಬೇತಿ & ಸ್ಪರ್ಧೆ: ಇಂದಿನ ಆಧುನಿಕ ಕ್ರೀಡಾ ಜಗತ್ತಿನಲ್ಲಿ ಯಾವುದೇ ಹಂತದಲ್ಲೂ ಸ್ಪರ್ಧಿಸಬೇಕಾದರೆ ಉತ್ತಮ ರೀತಿಯಲ್ಲಿ ತರಬೇತಿ ಪಡೆಯಬೇಕಾಗುತ್ತದೆ. ಕೇವಲ ತರಬೇತಿ ಸಿಕ್ಕರೆ ಸಾಲದು ಕಾಲಿಗೆ ಶೂ ಇಲ್ಲಿದೆ ಸಿಂಥಟಿಕ್‌ ಟ್ರ್ಯಾಕ್‌ ಅಥವಾ ಇತರ ಅಂಗಣಗಳಲ್ಲಿ ಓಡಬೇಕೆಂದರೆ ಕಷ್ಟ. ಶಂಕರ್‌ ನಾಯಕ್‌ ಅವರಲ್ಲಿ ತರಬೇತಿ ಪಡೆಯುತ್ತಿರುವುದು ಬಡ ಮಕ್ಕಳು. ಅವರಿಗೆ ಶೂ ಖರೀದಿಲು ಹಣವಿಲ್ಲ. ಶಂಕರ್‌ ನಾಯಕ ಅವರು ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. “ನಮ್ಮ ಮಕ್ಕಳಿಗೆ ಶೂ ಅಗತ್ಯವಿದೆ. ಅಥ್ಲೆಟಿಕ್ಸ್‌ ಹಾಗೂ ಕಬಡ್ಡಿಗೆ ಶೂ ಅಗತ್ಯವಿದೆ. ಯಾರಾದರೂ ಕೊಡುಗೈ ದಾನಿಗಳು ನಮ್ಮ ಕ್ರೀಡಾಪಟುಗಳಿಗೆ ನೆರವಾದರೆ ಅವರು ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಬಹುದು,” ಎನ್ನುತ್ತಾರೆ ಶಂಕರ್‌ ನಾಯಕ. ಕೇವಲ ಬೆಂಗಳೂರಿಗೆ ಸೀಮಿತವಾಗಿರುವ ರಾಜ್ಯದ ಕ್ರೀಡಾ ಸೌಲಭ್ಯ ಗ್ರಾಮೀಣ ಪ್ರದೇಶಗಳಿಗೂ ಒದಗುವಂತಾಗಲಿ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಪೊರೇಟ್‌ ವಲಯಗಳು ಇಂಥ ಮಕ್ಕಳಿಗೆ ನೆರವು ನೀಡುವಂತಾಗಲಿ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.