ಈಗ ಕೇರಳ ಪರ ಆಡುತ್ತಿರುವ ಕರ್ನಾಟಕ ಕ್ರಿಕೆಟ್‌ನ ಉತ್ತಮ ಲೆಗ್ ಸ್ಪಿನ್ನರ್ ಮತ್ತು ಆಲ್ರೌಂಡರ್ ಶ್ರೇಯಸ್ ಗೋಪಾಲ್ ದೇಶೀಯ ಏಕದಿನ (List A) ಕ್ರಿಕೆಟ್‌ನಲ್ಲಿ 100 ವಿಕೆಟ್ ಗಳಿಕೆಯ ಸಾಧನೆ ಮಾಡಿದ್ದಾರೆ. Best allrounder Shreyas Gopal completed 100 wickets in List A matches.
ಮಹಾರಾಷ್ಟ್ರ ವಿರುದ್ಧದ ವಿಜಯ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೇರಳ ಪರ ಆಡುತ್ತಿರುವ ಶ್ರೇಯಸ್ 35 ರನ್ ಗೆ 4 ವಿಕೆಟ್ ಗಳಿಸುವ ಮೂಲಕ ಈ ಐತಿಹಾಸಿಕ ಮೈಲಿಗಲ್ಲು ತಲುಪಿದರು. ನಿಜವಾಗಿಯೂ ಶ್ರೇಯಸ್ ಕರ್ನಾಟಕದ ಪರ ಆಡುತ್ತಿದ್ದರೆ ಈ ಸಂಭ್ರಮಕ್ಕೆ ಮತ್ತಷ್ಟು ಖುಷಿ ಇರುತ್ತಿತ್ತು. ಆದರೆ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಶ್ರೇಯಸ್ ಅವರ ಸೇವೆ ಅಗತ್ಯವಿರಲಿಲ್ಲ. ಪ್ರತಿಭಾವಂತನನ್ನು ಬೇರೆ ರಾಜ್ಯದ ಪರ ಆಡಲು ಎನ್‌ಒಸಿ ನೀಡಿದರು. ನಿಜವಾದ ಸಾಧಕ ಎಲ್ಲಿ ಬೇಕಾದರೂ ಹೋಗಿ ಮಿಂಚುತ್ತಾನೆಂಬುದಕ್ಕೆ ಶ್ರೇಯಸ್ ಗೋಪಾಲ್ ಉತ್ತಮ ನಿದರ್ಶನ.
ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಕೇರಳ 4 ವಿಕೆಟ್‌ಗೆ 383 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮಹಾರಾಷ್ಟ್ರ ದಿಟ್ಟ ಆರಂಭವನ್ನೇ ಕಂಡಿತ್ತು. ಮೊದಲ ವಿಕೆಟ್ ಜೊತೆಯಾಟದಲ್ಲಿ 139 ರನ್ ಗಳಿಸಿತ್ತು. ಆದರೆ ಶ್ರೇಯಸ್ ಗೋಪಾಲ್ 50 ರನ್ ಗಳಿಸಿ ಆಡುತ್ತಿದ್ದ ಕೌಶಲ್ ಥಾಂಬೆಯನ್ನು ರನೌಟ್ ಮಾಡುವ ಮೂಲಕ ಉತ್ತಮ ಜೊತೆಯಾಟವನ್ನು ಮುರಿದರು. ಬಳಿಕ 78 ರನ್ ಗಳಿಸಿ ಆಡುತ್ತಿದ್ದ ಓಂ ಬೋಸ್ಲೆಯ ವಿಕೆಟ್ ಕಬಳಿಸಿದರು. ಬಳಿಕ ಮೂರು ವಿಕೆಟ್ ಗಳಿಸಿ 100 ವಿಕೆಟ್‌ಗಳ ಮೈಲಿಗಲ್ಲು ತಲುಪಿದರು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 218 ಮತ್ತು ಟಿ20ಯಲ್ಲಿ 107 ವಿಕೆಟ್ ಸೇರಿದಂತೆ ಶ್ರೇಯಸ್ ಒಟ್ಟು 425 ವಿಕೆಟ್ ಗಳಿಕೆಯ ಸಾಧನೆ ಮಾಡಿದರು. ಲಿಸ್ಟ್ ಎ ನಲ್ಲಿ ಎರಡು ಬಾರಿ 5 ವಿಕೆಟ್ ಕಬಳಿಸಿರುವ ಶ್ರೇಯಸ್, ಮೂರು ಬಾರಿ 4 ವಿಕೆಟ್ ಗಳಿಸಿದ್ದಾರೆ. ರಣಜಿಯಲ್ಲಿ 14 ಬಾರಿ 4 ವಿಕೆಟ್ ಸಾಧನೆ ಮತ್ತು 7 ಬಾರಿ 5 ವಿಕೆಟ್ ಗಳಿಕೆಯ ಸಾಧನೆ ಮಾಡಿದ್ದಾರೆ. ಟಿ20ಯಲ್ಲಿ ನಾಲ್ಕು ಬಾರಿ 4 ವಿಕೆಟ್ ಹಾಗೂ ಎರಡು ಬಾರಿ 5 ವಿಕೆಟ್ ಗಳಿಸಿದ್ದಾರೆ.
ಲಿಸ್ಟ್ ಎ ನಲ್ಲಿ 64 ನೇ ಪಂದ್ಯವಾಡಿ, 63ನೇ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ 100ನೇ ವಿಕೆಟ್ ಪೂರ್ಣಗೊಳಿಸಿದರು. 19ರನ್‌ಗೆ 5 ವಿಕೆಟ್ ಗಳಿಸಿದ್ದು ಪಂದ್ಯವೊಂದರಲ್ಲಿ ಅವರ ಉತ್ತಮ ಸಾಧನೆಯಾಗಿತ್ತು. ಈ ಬಾರಿ ಕರ್ನಾಟಕದಿಂದ ಯಾರೆಲ್ಲ ಆಟಗಾರರು ಬೇರೆ ರಾಜ್ಯಗಳ ಪರ ಆಡುತ್ತಿದ್ದಾರೋ ಅವರೇ ಕರ್ನಾಟಕದ ಸೋಲಿಗೆ ಕಾರಣರಾಗುವ ಸಾಧ್ಯತೆ ಹೆಚ್ಚಿದೆ. ಸೋಮವಾರ ನಡೆಯುವ ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಬಲಿಷ್ಠ ವಿದರ್ಭ ವಿರುದ್ಧ ಸೆಣಸಲಿದೆ. ಅಲ್ಲಿ ಕರುಣ್ ನಾಯರ್ ಉತ್ತಮ ಆಟ ಪ್ರದರ್ಶಿಸುವ ಸಾಧ್ಯತೆ ಇದೆ. ಇದುವರೆಗಿನ ಪಂದ್ಯದಗಳಲ್ಲಿ ಕರುಣ್ ನಾಯರ್ ಉತ್ತಮ ಪ್ರದರ್ಶನ ತೋರಿದ್ದಾರೆ.