Thursday, October 10, 2024

ದಿವ್ಯಾ ಕ್ರಿಕೆಟ್‌ಗೆ ಬೆಳಕಾದ ರೋಶನ್‌ ಬಚ್ಚನ್

ಸೋಮಶೇಖರ್‌ ಪಡುಕರೆ, Sportsmail

ಉತ್ತಮ ಪ್ರದರ್ಶನ ತೋರುತ್ತಿದ್ದರೂ ಕರ್ನಾಟಕ ತಂಡಕ್ಕೆ ಆಯ್ಕೆಗೊಳ್ಳದ ಕಾರಣ ಈ ಕ್ರಿಕೆಟ್‌ನಿಂದಲೇ ದೂರ ಸರಿಯಬೇಕೆಂದು ಯೋಚಿಸಿದ್ದ ಕರ್ನಾಟಕದ ಹಿರಿಯ ಆಟಗಾರ್ತಿಗೆ ಮನೋಬಲ ತುಂಬಿ, ಆಕೆ ಮತ್ತೆ ಅಂಗಣಕ್ಕೆ ಬಂದು ಶತಕ ಸಿಡಿಸಿ ಕರ್ನಾಟಕ ತಂಡ ಹಿರಿಯ ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫೈನಲ್‌ ತಲಪುವಲ್ಲಿ ಪ್ರಮುಖ ಪಾತ್ರವಹಿಸಿದರು. ನೂರಾರು ಅಥ್ಲೀಟ್‌ಗಳ ಬದುಕು ಬೆಳಗಿಸಿದ ರೋಶನ್‌ ಬಚ್ಚನ್‌ ಅವರನ್ನು ದಿವ್ಯಾ ಗ್ನಾನಾನಂದ ಅವರು ಸ್ಮರಿಸಿರುವುದು ಗಮನಾರ್ಹ.

ದಿವ್ಯಾ ಅವರು ಬೆಂಗಳೂರಿನ ಹೆರಾನ್ಸ್‌ ಕ್ರಿಕೆಟ್‌ ಕ್ಲಬ್ ಪರ ಆಡುತ್ತಿರುವ ಉತ್ತಮ ಆಲ್ರೌಂಡರ್.‌ ಮಾಜಿ ಕ್ರಿಕೆಟಿಗ “ಲೊಡ್ಡೆ ಚಿಕ್ಕ” ಖ್ಯಾತಿಯ ಗ್ನಾನಾನಂದ ಅವರ ಮಗಳು. ಬೆಂಗಳೂರಿನ ಜೈನ್‌ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ. ಕರ್ನಾಟಕ ತಂಡವನ್ನು ಒಮ್ಮೆ ಮುನ್ನಡೆಸಿದ ಉತ್ತಮ ಆಲ್ರೌಂಡರ್.‌

ಕಳೆದ ವಾರ ಮುಕ್ತಾಯಗೊಂಡ ಬಿಸಿಸಿಐ ರಾಷ್ಟ್ರೀಯ ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡ ರೈಲ್ವೇಸ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ ಸೋತು ರನ್ನರ್‌ಅಪ್‌ಗೆ ತೃಪ್ತಿಪಟ್ಟುಕೊಂಡಿತು. ದಿವ್ಯಾ ಅವರು ಒಟ್ಟು 350 ರನ್‌ ಗಳಿಸಿ ಟೂರ್ನಿಯಲ್ಲೇ ಅತಿ ಹೆಚ್ಚು ರನ್‌ ಗಳಿಸಿದ ಟಾಪ್‌ ಐವರು ಆಟಗಾರ್ತಿಯರಲ್ಲಿ ಒಬ್ಬರೆನಿಸಿದರು. ಆಡಿದ ಐದು ಪಂದ್ಯಗಳಲ್ಲೇ ಒಂದು ಅಜೇಯ ಶತಕ (128*, 23 ಬೌಂಡರಿ 1 ಸಿಕ್ಸರ್)‌ ಎರಡು ಅರ್ಧ ಶತಕ ಸೇರಿರುವುದು ಗಮನಾರ್ಹ.

ಇಂಥ ಸಾಧನೆ ಮಾಡಿದ ರಾಜ್ಯದ ಪ್ರತಿಭಾವಂತ ಆಟಗಾರ್ತಿಯೊಂದಿಗೆ ಮಾತಿಗೆ ಇಳಿದಾಗ ಅವರು ಸಾಗಿ ಬಂದ ಹಾದಿ ಅಷ್ಟು ಸುಲಭವಾಗಿರಲಿಲ್ಲ ಎಂಬುದು ಸ್ಪಷ್ಟವಾಯಿತು. ಅವಕಾಶದಿಂದ ವಂಚಿತರಾಗುತ್ತಿದ್ದ ದಿವ್ಯಾ ಅವರು ಒಂದು ದಿನ ಇದ್ದಕ್ಕಿದ್ದಂತೆ ಹತಾಷೆಗೊಳಗಾದರು. ಆಗ ಗ್ನಾನಾನಂದ ಅವರು ಮೊರೆ ಹೋದದ್ದು ರಾಜ್ಯದ ಉತ್ತಮ ಫಿಟ್ನೆಸ್‌ ಕೋಚ್‌ ರೋಶನ್‌ ಬಚ್ಚನ್‌ ಅವರನ್ನು.

“ನನಗೆ ನೋವಾಗಿರುವ ವಿಷಯ ನಮ್ಮ ತಂದೆಯ ಗಮನಕ್ಕೆ ಬಂತು. ಅವರು ಕೂಡ ನನ್ನಲ್ಲಿ ಸಾಕಷ್ಟು ನಂಬಿಕೆಯನ್ನು ಇಟ್ಟವರು. ಉತ್ತಮ ಪ್ರದರ್ಶನ ತೋರಿದರೂ ಅವಕಾಶ ಸಿಗುತ್ತಿರಲಿಲ್ಲ. ನನ್ನ ಸ್ಕೋರ್‌ಗಳನ್ನು ಗಮನಿಸಿದರೆ ನಾನು ಈಗಾಗಲೇ ಭಾರತ ತಂಡಕ್ಕೆ ಆಡಿ ಒಂದು ವರ್ಷ ಆಗಿರುತ್ತಿತ್ತು, ಆದರೆ ಹೀಗೇಗೆ ಆಗುತ್ತಿದೆ ಎಂಬ ನೋವು ಆವರಿಸಿತು. ಆಗ ತಂದೆ ರೋಶನ್‌ ಬಚ್ಚನ್‌ ಅವರಲ್ಲಿಗೆ ಕರೆದೊಯ್ದು ಇವಳ ಕ್ರಿಕೆಟ್‌ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಹೇಳಿದರು. ನಿರಂತರ ಅಭ್ಯಾಸ್‌, ಫಿಟ್ನೆಸ್‌ ಇವುಗಳ ವಿ಼ಯದಲ್ಲಿ ರೋಷನ್‌ ಸರ್‌ ನನಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡಿದರು. ನಿನ್ನ ಸಾಮರ್ಥ್ಯ ಕೇವಲ ಅರ್ಧ ಶತಕಕ್ಕೆ ಸೀಮಿತವಾದುದಲ್ಲ ಎಂದು ನನಗಾಗಿ ವಿಶೇಷ ಕಾಳಜಿ ವಹಿಸಿ ತರಬೇತಿ ನೀಡಿದರು. ಇದರಿಂದಾಗಿ ಪ್ರತಿಯೊಂದು ಪಂದ್ಯದಲ್ಲಿಯೂ ಮಿಂಚಿದೆ, ನನ್ನ ಪ್ರಯತ್ನ ತಂಡದ ಮುನ್ನಡೆಗೂ ಕಾರಣವಾಯಿತು. ರೋಶನ್‌ ಅವರ ತರಬೇತಿ ಸಿಗದೇ ಇರುತ್ತಿದ್ದರೆ ನಾನಿಂದು ಕ್ರಿಕೆಟ್‌ನಿಂದ ದೂರು ಉಳಿಯುತ್ತಿದ್ದೆ ಎಂದೆನಿಸುತ್ತಿದೆ. ಕ್ರಿಕೆಟ್‌ಗೆ ಉತ್ತಮ ಆಟದ ಜತೆಯಲ್ಲಿ ದೈಹಿಕ ಹಾಗೂ ಮಾನಸಿಕ ಫಿಟ್ನೆಸ್‌ ಮುಖ್ಯ. ರೋಶನ್‌ ಬಚ್ಚನ್‌ ನನ್ನ ಬದುಕಿಗೆ ಹೊಸ ಹಾದಿ ಕಲ್ಪಿಸಿದರು,” ಎಂದು ದಿವ್ಯಾ ತಮ್ಮ ಯಶಸ್ಸಿಗೆ ಕಾರಣರಾದ ರೋಶನ್‌ ಬಚ್ಚನ್‌ ಅವರನ್ನು ಸ್ಮರಿಸಿದ್ದಾರೆ.

ತಂದೆಯೇ ಸ್ಫೂರ್ತಿ:

 

23, 57, 48, 81, 54, 43*, 128*, 28, 12 ಇದು ದಿವ್ಯಾ ಅವರು ಇತ್ತೀಚಿನ ಪಂದ್ಯಗಳಲ್ಲಿ ತೋರಿದ ಸಾಧನೆ. ದಿವ್ಯಾ ಅವರ ತಂದೆ ಆರಂಭಿಕ ಆಟಗಾರ ಹಾಗೂ ಎಡಗೈ ಸ್ಪಿನ್ನರ್.‌ ಈ ಕಾರಣಕ್ಕಾಗಿ ಅವರನ್ನು ಕ್ರಿಕೆಟ್‌ ವಲಯದಲ್ಲಿ ಪ್ರೀತಿಯಿಂದ “ಲೊಡ್ಡೆ ಚಿಕ್ಕ” ಎಂದೇ ಕರೆಯುತ್ತಿದ್ದರು. ಹೆರಾನ್ಸ್‌ ಕ್ರಿಕೆಟ್‌ ಕ್ಲಬ್‌ ಪರ ಕ್ಲಬ್‌ ಹಂತದಲ್ಲಿ ಆಡಿರುವ ದಿವ್ಯಾ ನಂತರ ಜೈನ್‌ ಕಾಲೇಜಿನಲ್ಲಿ ಕಾಮರ್ಸ್‌ ಓದುವಾಗಲೂ ವಿವಿಧ ಹಂತದ ಪಂದ್ಯಗಳಲ್ಲಿ ಆಡಿದ್ದರು. ರಾಜ್ಯ ತಂಡದ ಪರ ಜೂನಿಯರ್‌ ಹಾಗೂ ಸೀನಿಯರ್‌ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರ್ತಿ. “ನನ್ನ ಕ್ರಿಕೆಟ್‌ ಬದುಕು ಆರಂಭಗೊಳ್ಳಲು ನಮ್ಮ ತಂದೆಯೇ ಕಾರಣ,” ಎನ್ನುತ್ತಾರೆ ದಿವ್ಯಾ.

ಸಂಕಷ್ಟದ ದಿನಗಳನ್ನು ಸ್ಮರಿಸಿಕೊಂಡ ದಿವ್ಯಾ, “ನನ್ನ ಕ್ರಿಕೆಟ್‌ ಬದುಕಿನ ಹಾದಿ ಅಷ್ಟು ಸುಲಭವಾಗಿರಲಿಲ್ಲ. ನಿರಂತರ ರನ್‌ ಗಳಿಸಿದರೂ ನನ್ನ ಆಯ್ಕೆ ಆಗುತ್ತಿರಲಿಲ್ಲ. ಚಾಲೆಂಜರ್ಸ್‌ ಟ್ರೋಫಿಯಲ್ಲಿ ಆಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕಳೆದ ಹತ್ತು ವರ್ಷಗಳಿಂದ ರಾಜ್ಯದ ಪರ ಆಡುತ್ತಿದ್ದೇನೆ, ಐದು ವರ್ಷಗಳಿಂದ ರನ್‌ ಗಳಿಸುತ್ತಲೇ ಇದ್ದೇನೆ. ಆದರೆ ನನ್ನನ್ನು ಕಡೆಗಣಿಸಲಾಗುತ್ತಿತ್ತು. ಒಂದು ವರ್ಷ ರಾಜ್ಯ ಹಿರಿಯರ ತಂಡಕ್ಕೆ ನಾಯಕಿಯೂ ಆಗಿದ್ದೆ. ಇಷ್ಟೆಲ್ಲ ಆಡಿದರೂ ತಂಡಕ್ಕೆ ಆಯ್ಕೆಯಾಗದಿರುವುದರಿಂದ ಮನೆಯಲ್ಲಿ ಮೌನಕ್ಕೆ ಶರಣಾಗಿದ್ದೆ, ಆಗ ಅಮ್ಮ ಕ್ರಿಕೆಟ್‌ನಿಂದ ದೂರ ಇರುವಂತೆ ಸಲಹೆ ನೀಡಿದ್ದರು, ಆದರೆ ಕ್ರೀಡೆ ನನ್ನ ಉಸಿರು, ಒಂದಲ್ಲ ಒಂದು ದಿನ ಮತ್ತೆ ಪುಟಿದೇಳುವ ಆತ್ಮವಿಶ್ವಾಸ ನನ್ನಲ್ಲಿತ್ತು, ಆ ದಿನ ಈಗ ಆರಂಭವಾಗಿದೆ,” ಎಂದು ದಿವ್ಯಾ ಹೇಳಿದರು.

ಮಹಿಳಾ ಕ್ರಿಕೆಟ್‌ಗೆ ಉತ್ತಮ ಪ್ರೋತ್ಸಾಹ:

ಮೊದಲು ಮಹಿಳಾ ಕ್ರಿಕೆಟ್‌ಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಏಕೆಂದರೆ ಕ್ರಿಕೆಟನ್ನು ಕಮರ್ಷಿಯಲ್‌ ದೃಷ್ಟಿಯಿಂದ ನೋಡಿದಾಗ ಲಾಭ ಮತ್ತು ನಷ್ಟಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಆದರೆ ಈಗ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮಹಿಳಾ ಕ್ರಿಕೆಟ್‌ಗೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ದಿವ್ಯಾ, “ಮಹಿಳಾ ಕ್ರಿಕೆಟ್‌ ಆಟಗಾರರಿಗೆ ಈಗ ಆರ್ಥಿಕವಾಗಿಯೂ ಉತ್ತಮ ಪ್ರೋತ್ಸಾಹ ಜಸಿಗುತ್ತಿದೆ. ಐಪಿಎಲ್‌ ಕೂಡ ಆಡಿಸುತ್ತಿದ್ದಾರೆ. ಬಿಗ್‌ ಬ್ಯಾಷ್‌ನಲ್ಲಿಯೂ ಅವಕಾಶ ಸಿಗುತ್ತಿದೆ. ಆದ್ದರಿಂದ ಮಹಿಳಾ ಕ್ರಿಕೆಟ್‌ಗೆ ಹಿಂದಿಗಿಂತ ಈಗ ಉತ್ತಮ ಅವಕಾಶ ಇದೆ,” ಎಂದರು.

Related Articles