Thursday, September 12, 2024

ಈಜು: ಲಿಖಿತ್‌ಗೆ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ

ಕರ್ನಾಟಕ ರಾಜ್ಯ ಈಜು ಸಂಸ್ಥೆ ಆಯೋಜಿಸಿರುವ ರಾಜ್ಯ ಮಟ್ಟದ ಹಿರಿಯರ ಈಜು ಚಾಂಪಿಯನ್‌ಷಿಪ್‌ನಲ್ಲಿ ಬಸವನಗುಡಿ ಅಕ್ವೆಟಿಕ್ ಕೇಂದ್ರದ ಲಿಖಿತ್ ಎಸ್‌ಪಿ ಪುರುಷರ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.

ಎರಡು ರಾಜ್ಯ ದಾಖಲೆಗಳನ್ನು ಬರೆದಿರುವ ಲಿಖಿತ್ ೧೩೧ ಅಂಕಗಳನ್ನು ಗಳಿಸಿ ಅಗ್ರ ಸ್ಥಾನಿಯಾದರು. ಮಹಿಳಾ ವಿಭಾಗದಲ್ಲಿ ಬಸವನಗುಡಿ ಅಕ್ವೆಟಿಕ್ ಕೇಂದ್ರದ ಖುಷಿ ದಿನೇಶ್ ೩೫ ಅಂಕಗಳನ್ನು ಗಳಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು.
ಪುರುಷರ ಡೈವಿಂಗ್ ವಿಭಾಗದಲ್ಲಿ ೧೪ ಅಂಕಗಳನ್ನು ಗಳಿಸಿದ ಡ್ಯಾಸೆಲ್ ಕ್ಲಬ್‌ನ ಆದಿತ್ಯ ದಿನೇಶ್ ರಾವ್ ಅಗ್ರ ಸ್ಥಾನ ಗಳಿಸಿದರು. ಮಹಿಳಾ ವಿಭಾಗದಲ್ಲಿ ಅದಿತಿ ದಿನೇಶ್ ರಾವ್ ೧೪ ಅಂಕ ಗಳಿಸಿ ಚಾಂಪಿಯನ್ ಆದರು.
ವಾಟರ್‌ಪೋಲೋ ಚಾಂಪಿಯನ್‌ಷಿಪ್‌ನಲ್ಲಿ ಎಎಸ್‌ಸಿ ಯ ಪುರುಷರ ತಂಡ ಹಾಗೂ ಮಹಿಳಾ ವಿಭಾಗದಲ್ಲಿ ಬಸವನಗುಡಿ ಅಕ್ವೆಟಿಕ್ ಕೇಂದ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡವು. ಬಸವನಗುಡಿ ಹಾಗೂ ಎನ್‌ಎಸಿ ಕೇಂದ್ರದ ತಂಡ ರನ್ನರ್ ಅಪ್‌ಗೆ ತೃಪ್ತಿಪಟ್ಟವು.  ಮೂರನೇ ಸ್ಥಾನ ಪುರಷರ ವಿಭಾಗದಲ್ಲಿ ಎನ್‌ಎಸಿ ಗೆದ್ದುಕೊಂಡಿತು.
೪೬೩ ಅಂಕಗಳನ್ನು ಗಳಿಸಿದ ಬಸವನಗುಡಿ ಅಕ್ವೆಟಿಕ್ ಕೇಂದ್ರ ಸಮಗ್ರ ಚಾಂಪಿಯನ್‌ಪಟ್ಟ ಗೆದ್ದುಕೊಂಡರೆ, ೨೭೫ ಅಂಕ ಗಳಿಸಿದ ಬಿಎಸ್‌ಆರ್‌ಸಿ ತಂಡ ರನ್ನರ್ ಅಪ್ ಸ್ಥಾನ ಗೆದ್ದುಕೊಂಡಿತು.

Related Articles