Friday, February 23, 2024

ಕರ್ನಾಟಕದ ಕ್ರಿಕೆಟ್‌ಗೆ ಹೊಸ ಚೈತನ್ಯ, ಮೈಸೂರಿನ ಚೇತನ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು

ಅಣ್ಣ ಆಡುವುದ ನೋಡಿ ಕ್ರಿಕೆಟ್‌ ಕಲಿಯಲು ಸೇರಿದ, ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲಿ ಬಾಲ್‌ ಬಾಯ್‌ ಆಗಿ ಕಾರ್ಯನಿರ್ವಹಿಸಿದ, ಕ್ರಿಕೆಟನ್ನೇ ಉಸಿರಾಗಿಸಿಕೊಂಡ, ಲೀಗ್‌ ಪಂದ್ಯಗಳಲ್ಲಿ ಶತಕ ಸಿಡಿಸಿದ, ಈ ಬಾರಿಯ ಮಹಾರಾಜ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ, ಅಬ್ಬರದ ಹೊಡೆತಗಳ ಮೂಲಕ ಟಿ20 ಕ್ರಿಕೆಟ್‌ಗೆ ದಿಟ್ಟ ಹೆಜ್ಜೆ ಇಟ್ಟ, ಲೀಗ್ ಪಂದ್ಯಗಳಲ್ಲಿ ಶತಕಗಳೊಂದಿಗೆ ರನ್‌ ಮಳೆಗರೆದ ಮೈಸೂರಿನ ಲಿಂಗದೇವರ ಕೊಪ್ಪಲಿನ ಎಲ್‌. ಆರ್‌. ಚೇತನ್‌ ಕರ್ನಾಟಕ ರಾಜ್ಯ ಕ್ರಿಕೆಟ್‌ನ ಹೊಸ ಚೈತನ್ಯ.

ಎರಡು ದಿನಗಳ ಹಿಂದೆ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಲೀಗ್‌ ಪಂದ್ಯಗಳಲ್ಲಿ ಒಟ್ಟು 5-6 ಶತಕ ಸೇರಿ 503 ರನ್‌ ಗಳಿಸಿದ ಚೇತನ್‌ ಇತ್ತೀಚಿಗೆ ಮುಕ್ತಾಯಗೊಂಡ ಕೆಎಸ್‌ಸಿಎ ಮಹಾರಾಜ ಟ್ರೋಫಿಯಲ್ಲಿ 11 ಪಂದ್ಯಗಳನ್ನಾಡಿ, 3  ಅರ್ಧ ಶತಕ ಹಾಗೂ ಒಂದು ಶತಕದ ನೆರವಿನಿಂದ 447 ರನ್‌ ಗಳಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಚೇತನ್‌ ಪಾತ್ರರಾಗಿದ್ದಾರೆ. ಫೈನಲ್‌ ಪಂದ್ಯದಲ್ಲಿ ಸ್ಫೋಟಕ 91 ರನ್‌ ಗಳಿಸಿದ ಚೇತನ್‌ ಟೂರ್ನಿಯಲ್ಲಿ 26 ಸಿಕ್ಸರ್‌ ಹಾಗೂ 40 ಬೌಂಡರಿ ಸಿಡಿಸಿ ಟೂರ್ನಿಯ ನಂಬಿಕೆಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಚೇತನ್‌ ಅವರ ಈ ಸ್ಥಿರ ಸಾಧನೆ ಕರ್ನಾಟಕ ಕ್ರಿಕೆಟ್‌ಗೆ ಹೊಸ ಪ್ರತಿಭೆಯೊಂದು ಪ್ರವೇಶಿಸುವಂತೆ ಮಾಡಿದೆ.

ಹಿಂದಿನ ಕೆಪಿಎಲ್‌ ಪಂದ್ಯಗಳಲ್ಲಿ ಬಾಲ್‌ಬಾಯ್‌ ಆಗಿದ್ದ ಚೇತನ್‌ಗೆ ಒಬ್ಬ ಉತ್ತಮ ಬ್ಯಾಟ್ಸಸ್‌ಮನ್‌ ಬೆಳೆಯಲು ಮೂಲ ಕಾರಣ ಮೈಸೂರಿನ ಕ್ರಿಕೆಟ್‌ ಗುರು ಗದಾಧರ್‌. ಚಿಕ್ಕಂದಿನಲ್ಲೇ ಚೇತನ್‌ನಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಆತನಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದರು. ಪ್ರತಿಫಲಾಪೇಕ್ಷೆ ಇಲ್ಲದೆ ತರಬೇತಿ ನೀಡುವ ಈ ಗುರುವಿನಲ್ಲಿ ಪಳಗಿದ ಚೇತನ್‌ ಅವರ ಪ್ರತಿಯೊಂದು ಹೊಡೆತದಲ್ಲೂ ಒಬ್ಬ ಅನುಭವಿ ಕ್ರಿಕೆಟಿಗನನ್ನು ಕಾಣಬಹುದು.

22 ವರ್ಷ ವಯಸ್ಸಿನ ಚೇತನ್‌ ಅವರನ್ನು ಚಿಕ್ಕ ವಯಸ್ಸಿನಲ್ಲೇ ಗುರುತಿಸಿ ತಮ್ಮ ಫ್ಯೂಚರ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಗದಾಧರ್‌ ಅವರು ತರಬೇತಿ ನೀಡಲಾರಂಭಿಸಿದರು. ಈಗಲೂ ಚೇತನ್‌ ತಮ್ಮ ಗುರುವಿನ ಸಲಹೆಯಂತೆ ಬ್ಯಾಟಿಂಗ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

“ಸೋದರ ಸಂಬಂಧಿ ಕೋಮಲ್‌ ನಿತ್ಯವೂ ಫ್ಯೂಚರ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿಗಾಗಿ ಹೋಗುತ್ತಿದ್ದ, ನಾನು ಸುಮ್ಮನೇ ಅವರೊಂದಿಗೆ ಹೋಗುತ್ತಿದ್ದೆ, ಹೀಗೆ ಆಸಕ್ತಿ ಬೆಳೆಯಲಾರಂಭಿಸಿತು. ಒಂದು ದಿನ ಅಕಾಡೆಮಿ ಸೇರುವ ಆಶಯ ವ್ಯಕ್ತಪಡಿಸಿದೆ, ಗದಾಧರ ಸರ್‌ ಅದಕ್ಕೆ ಅನುಮತಿ ನೀಡಿದರು. ನಮ್ಮಣ್ಣ ಮಲ್ಲಿಕಾರ್ಜುನ ಆರಂಭದಲ್ಲಿ ಉತ್ತಮವಾಗಿ ಕ್ರಿಕೆಟ್‌ ಆಡುತ್ತಿದ್ದರು, ಆದರೆ  ಬೆನ್ನು ನೋವಿನ ಕಾರಣ ಹೆಚ್ಚು ಸಮಯ ಕ್ರಿಕೆಟ್‌ನಲ್ಲಿ ಮುಂದುವರಿಯಲಿಲ್ಲ, ನರ್ಸಿಂಗ್‌ ಶಿಕ್ಷಣ ಪಡೆಯುತ್ತಿದ್ದಾರೆ,” ಎಂದು ಚೇತನ್‌ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು.

ಕರ್ನಾಟಕ ಪ್ರೀಮಿಯರ್‌ ಲೀಗ್‌ನ ಪ್ರತಿಷ್ಠಿತ ತಂಡ ಹಾಗೂ ಮೈಸೂರಿನಲ್ಲಿ ಕ್ರಿಕೆಟ್‌ಗೆ ಉತ್ತಮ ಪ್ರೋತ್ಸಾಹ ನೀಡುತ್ತಿರುವ ಮೈಸೂರು ವಾರಿಯರ್ಸ್‌ ಸ್ಥಳೀಯ ಆಟಗಾರರಿಗೆ ನೀಡುವ ಅವಕಾಶದಲ್ಲಿ ಚೇತನ್‌ ಅವರನ್ನು ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಆಡುವ ಅವಕಾಶ ಸಿಗದಿದ್ದರೂ ಇತರರು ಆಡುವುದನ್ನು ನೋಡಿ ಕಲಿತ ಚೇತನ್‌ ಈ ಬಾರಿ ಮಹಾರಾಜ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಮೈಸೂರಿನಿಂದ ರಾಜ್ಯ ಕ್ರಿಕೆಟ್‌ಗೆ ಒಬ್ಬ ಉತ್ತಮ ಆಟಗಾರ ಬರಲಿದ್ದಾನೆ ಎಂಬ ಸಂದೇಶವನ್ನು ಸಾರಿದರು.

ಬೆನ್ನು ತಟ್ಟಿದ ಮಯಾಂಕ್‌ ಅಗರ್ವಾಲ್‌: ಈ ಬಾರಿಯ ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡದ ನಾಯಕ, ಆರಂಭಿಕ ಆಟಗಾರ ಮಯಾಂಕ್‌ ಅಗರ್ವಾಲ್‌ ಅವರು ಚೇತನ್‌ ಅವರ ಬ್ಯಾಟಿಂಗ್‌ ವೈಭವನ್ನು ಗುಣಗಾನ ಮಾಡಿದ್ದಾರೆ. ನಿನಗೆ ಉತ್ತಮ ಭವಿಷ್ಯವಿದೆ ಎಂದು ಆತ್ಮವಿಶ್ವಾಸದ ಮಾತನ್ನಾಡಿದ್ದಾರೆ. “ಟೂರ್ನಿಗೂ ಮುನ್ನ ಅಭ್ಯಾಸ ಪಂದ್ಯವೊಂದು ನಡೆದಿತ್ತು. ಅದರಲ್ಲಿ ನಾನು ಉತ್ತಮವಾಗಿ ಆಡಿದೆ. ಆಗಲೇ ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಮಯಾಂಕ್‌ ಅಗರ್ವಾಲ್‌, ಯಾವುದೇ ಒತ್ತಡಕ್ಕೆ ಸಿಲುಕದೆ, ಮೈ ಮರೆಯದೆ ನಿನ್ನ ನೈಜ ಆಟವನ್ನು ಆಡು ಎಂದು ಸಲಹೆ ನೀಡಿದರು. ಅವರ ಈ ಮಾತು ನನ್ನಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು. ಉತ್ತಮ ಬ್ಯಾಟಿಂಗ್‌ ಮಾಡಲು ನೆರವಾಯಿತು,” ಎಂದು ಚೇತನ್‌ ನಾಯಕನನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಮಯಾಂಕ್‌ ಅಗರ್ವಾಲ್‌ ಉತ್ತಮ ನಾಯಕ: “ಮಯಾಂಕ್‌ ಆಗರ್ವಾಲ್‌ ಭಾರತ ತಂಡದಲ್ಲಿ, ರಣಜಿಯಲ್ಲಿ ಹಾಗೂ ಐಪಿಎಲ್‌ನಲ್ಲಿ ಆಡುವುದನ್ನು ನೋಡಿದ್ದೇನೆ. ಅಂಗಣದಲ್ಲಿ ಅವರು ತೋರುವ ಕ್ರೀಡಾಸ್ಫೂರ್ತಿ ಇತರರಿಗೆ ಮಾದರಿ. ಅವರ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದು, ನನ್ನ ಅದೃಷ್ಟ,” ಎಂದರು.

ಹೆತ್ತವರ ಪ್ರೋತ್ಸಾಹ: ಚೇತನ್‌ ಅವರ ತಂದೆ ಎಚ್‌.ಡಿ. ರೇವಣ್ಣ ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗಿ. ತಾಯಿ ಸರಸ್ವತಿ ಶಿಕ್ಷಕಿ. ಇವರಿಬ್ಬರೂ ಮಗನ ಕ್ರಿಕೆಟ್‌ ಬದುಕಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. “ಟೂರ್ನಿ ಮುಗಿಸಿ ಬಂದಾಗಲೆಲ್ಲ ಅವರಲ್ಲಿ ಪಂದ್ಯ ಗೆದ್ದ ಕ್ಷಣದಲ್ಲಿದ್ದ ಸಂಭ್ರಮ ಹಾಗೆಯೇ ಇರುತ್ತಿತ್ತು. ಜಯದಲ್ಲಿ ಮುನ್ನಡೆ, ಸೋಲಿನಿಂದ ಪಾಠ ಕಲಿ ಎಂದು ಸಲಹೆ ನೀಡುತ್ತಾರೆ. ಅವಕಾಶ ಸಿಕ್ಕಾಗಲೆಲ್ಲ ನನ್ನ ಬ್ಯಾಟಿಂಗ್‌ ನೋಡಿ ಖುಷಿ ಪಡುತ್ತಿದ್ದರು,” ಎಂದು ಚೇತನ್‌ ಹೆತ್ತವರ ಪ್ರೋತ್ಸಾಹವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಚೇತನ್‌ ದೇವರ ಕೊಡುಗೆ!: ಎಲ್‌.ಆರ್‌. ಚೇತನ್‌ ಬಗ್ಗೆ ಗುರು ಗದಾಧರ್‌ ಅವರಿಗೆ ಎಲ್ಲಿಲ್ಲದ ಕಾಳಜಿ. ಆತ ಅಂಗಣಕ್ಕೆ ಬರುವುದು ಸ್ವಲ್ಪ ತಡವಾಯಿತೆಂದರೆ ನೇರವಾಗಿ ಮನೆಗೆ ಹೋಗಿ ಅಂಗಣಕ್ಕೆ ಕರೆತರುವರು. ಚಿಕ್ಕಂದಿನಿಂದ ತರಬೇತಿ ನೀಡುತ್ತಿದ್ದ ಗದಾಧರ್‌ ಅವರು ಶಿಷ್ಯನ ಬಗ್ಗೆ ಅತ್ಯಂತ ಖುಷಿಯಿಂದ ಆಡಿದ ಮಾತು ನಿಜವಾಗಿಯೂ ಕ್ರೀಡಾಪಟುಗಳಿಗೆ ಸ್ಫೂರ್ತಿ ತರುವಂಥದ್ದು, “ಚಿಕ್ಕ ಹುಡುಗನಿರುವಾಗಿನಿಂದ ಚೇತನ್‌ಗೆ ತರಬೇತಿ ನೀಡುತ್ತಿದ್ದೇನೆ. ಆತನ ಹೊಡೆತಗಳ ಬಗ್ಗೆ ನನಗೆ ಅಪಾರ ನಂಬಿಕೆ. ಅದರಲ್ಲಿ ಯಾವುದೇ ತಪ್ಪು ಇರುತ್ತಿರಲಿಲ್ಲ. ಸಿಕ್ಸ್‌ ಹೊಡೆಯಬೇಕೆಂದು ನಿರ್ಧರಿಸಿದರೆ ಹೊಡೆದೇ ಬಿಡುತ್ತಿದ್ದ. ಅಷ್ಟು ಆತ್ಮವಿಶ್ವಾಸ. ಆತ ದೇವರ ಕೊಡುಗೆ ಎಂದು ನಾನು ನಂಬಿರುವೆ, ಭಾರತ ತಂಡದಲ್ಲಿ ಆತ ಆಡುವುದನ್ನು ನಾನು ಕಾಣಬೇಕು, ಆ ದಿನ ಬೇಗ ಬರಲಿ ಎಂದು ಹಾರೈಸುವೆ,” ಎಂದು ಫ್ಯೂಚರ್ಸ್‌ ಕ್ರಿಕೆಟ್‌ ಅಕಾಡೆಮಿಯ ಕೋಚ್‌ ಗದಾಧರ್‌ ಹೇಳಿದರು.

ಧೋನಿ ಮಾಡೆಲ್‌: ಭಾರತ ಕ್ರಿಕೆಟ್‌ ತಂಡದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಚೇತನ್‌ ಪಾಲಿನ ರೋಲ್‌ ಮಾಡೆಲ್‌, ಅದಕ್ಕೆ ಚೇತನ್‌ ನೀಡುವ ಕಾರಣವೂ ಉತ್ತಮವಾದುದು. “ಹಿತ ಮಿತ ಮೃದು ವಚನ, ಬ್ಯಾಟಿಂಗ್‌ನಲ್ಲೇ ಉತ್ತರ. ನಿಖರತೆ, ಸರಳತೆ. ಎಲ್ಲರನ್ನೂ ಆಪ್ತವಾಗಿ ಕಾಣುವ ಧೋನಿ ನನ್ನ ಪಾಲಿನ ಆದರ್ಶ,” ಎನ್ನುತ್ತಾರೆ ಚೇತನ್‌.

ರಣಜಿ ಆಡುವಾಸೆ: ಭಾರತ ಕ್ರಿಕೆಟ್‌ ತಂಡವನ್ನು ಸೇರಬೇಕಾದರೆ ರಣಜಿಯಲ್ಲಿ ಉತ್ತಮ ಪ್ರದರ್ಶನ ತೋರಬೇಕೆಂಬುದು ಚೇತನ್‌ಗೆ ಚೆನ್ನಾಗಿ ಗೊತ್ತಿದೆ. ಲೀಗ್‌ ಮತ್ತು ಮಹಾರಾಜ ಟ್ರೋಫಿಯಲ್ಲಿ ಗಳಿಸಿದ ರನ್‌ ರಣಜಿ ತಂಡಕ್ಕೆ ದಾರಿ ಮಾಡಿಕೊಡಬಹುದು ಎಂಬುದು ಯುವ ಆಟಗಾರನ ನಂಬಿಕೆ. “ಅವಕಾಶ ಸಿಕ್ಕಲ್ಲೆಲ್ಲ ರನ್‌ ಗಳಿಸಿದ್ದೇನೆ ಎಂಬ ತೃಪ್ತಿ ಇದೆ. ರಣಜಿ ಸಂಭಾವ್ಯರ ಪಟ್ಟಿಯಲ್ಲಿ ಅವಕಾಶ ಸಿಕ್ಕರೂ ಖುಷಿ. ಹಿರಿಯರ ಆಟ ನೋಡಿ ಮತ್ತಷ್ಟು ಕಲಿಯುವೆ. ಅವಕಾಶಕ್ಕಾಗಿ ಕಾದು ನೋಡುವೆ,” ಎಂದು ಹೇಳಿದ ಚೇತನ್‌ ಅವರ ಮಾತಿನಲ್ಲಿ ಗುರಿ ಸ್ಪಷ್ಟವಾಗಿತ್ತು.

Related Articles