Saturday, October 12, 2024

ಐಎನ್‌ಬಿಎಲ್‌: ಲುಧಿಯಾನ, ಹೈದರಾಬಾದ್‌ ಚಾಂಪಿಯನ್ಸ್‌

ಬೆಂಗಳೂರು: ಬಾಸ್ಕೆಟ್‌ಬಾಲ್‌ ಫೆಡರೇಷನ್‌ ಆಫ್‌ ಇಂಡಿಯಾ ಆಯೋಜಿಸಿದ್ದ ಇಂಡಿಯನ್‌ ಬಾಸ್ಕೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪುರುಷರ ಮತ್ತು ಮಹಿಳೆಯರ ಚಾಂಪಿಯನ್‌ ಪಟ್ಟವನ್ನು ಅನುಕ್ರಮವಾಗಿ ಲುಧಿಯಾನ ಮತ್ತು ಹೈದರಾಬಾದ್‌ ಗೆದ್ದುಕೊಂಡಿವೆ.

ಭಾನುವಾರ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪುರುಷರ ಫೈನಲ್‌ ಪಂದ್ಯದಲ್ಲಿ ಲುಧಿಯಾನ 17-10 ಅಂತರದಲ್ಲಿ ಮುಂಬೈ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು. ವನಿತೆಯರ ಫೈನಲ್‌ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ 21-18 ಅಂತರದಲ್ಲಿ ಜಯ ಗಳಿಸಿದ ಹೈದರಾಬಾದ್‌ ಮೊದಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಚಂಡೀಗಢ ತಂಡವು ಜೈಪುರ ವಿರುದ್ಧ ಜಯ ಗಳಿಸಿ ಪುರುಷರ ವಿಭಾಗದಲ್ಲಿ ಮೂರನೇ ಸ್ಥಾನ ಗಳಿಸಿತು. ಭಾವ್‌ನಗರವನ್ನು ಮಣಿಸಿದ ಕೊಚ್ಚಿ ತಂಡವು ವನಿತೆಯರ ವಿಭಾಗದ ಮೂರನೇ ಸ್ಥಾನ ಗಳಿಸಿತು.

18ವರ್ಷ ವಯೋಮಿತಿಯ ಪುರುಷರ ಫೈನಲ್‌ ಪಂದ್ಯದಲ್ಲಿ ಚಂಡೀಗಢವನ್ನು 21-10 ಅಂತರದಲ್ಲಿ ಜಯ ಗಳಿಸಿದ ಜೈಪುರ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. ವನಿತೆಯರ ವಿಭಾಗದಲ್ಲಿ 14-9 ಅಂತರದಲ್ಲಿ ಭಿಲಾಯ್‌ ವಿರುದ್ಧ ಜಯ ಗಳಿಸಿದ ಇಂದೋರ್‌ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಪುರುಷರ ವಿಭಾಗದಲ್ಲಿ ಚೆನ್ನೈ ವಿರುದ್ಧ ಜಯ ಗಳಿಸಿದ ಇಂದೋರ್‌ ಮೂರನೇ ಸ್ಥಾನ ಗಳಿಸಿತು. ಲುಧಿಯಾನವನ್ನು ಮಣಿಸಿದ ಚಂಡೀಗಢ ವನಿತೆಯರ ವಿಭಾಗದ ಮೂರನೇ ಸ್ಥಾನ ಗೆದ್ದುಕೊಂಡಿತು.

Related Articles