ಸೋಮಶೇಖರ್ ಪಡುಕರೆ, ಬೆಂಗಳೂರು
ರಾಜಕಾರಣಿಗಳ ಕೈಗೆ ಸಿಲುಕಿ ಕ್ರೀಡಾ ಸಂಸ್ಥೆಗಳು ನಲುಗಿ ಹೋಗಿವೆ. ದೆಹಲಿಯಲ್ಲಿ ಒಲಿಂಪಿಯನ್ ವಿನೇಶ್ ಫೊಗತ್‌ಗೆ ನ್ಯಾಯ ಒದಗಿಸುವಂತೆ ದೇಶದ 31 ಅಂತಾರಾಷ್ಟ್ರೀಯ ಕುಸ್ತಿಪಟುಗಳ ಜೊತೆ ಸೇರಿ ಮುಷ್ಕರ ನಿರತರಾಗಿದ್ದಾರೆ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬರೇ ಮೋದಿ ಭಜನೆ ಮಾಡಿಕೊಂಡು ಅಲ್ಲಿಲ್ಲಿ ಅಲೆಯುತ್ತಿದ್ದಾರೆ. ಗುರುವಾರ ರಾತ್ರಿ ಹತ್ತು ಗಂಟೆಯವರೆಗೂ ಅವರು ಈ ಗಂಭೀರ ಸಮಸ್ಯೆಯ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಭಾರತೀಯ ಕುಸ್ತಿ ಸಂಸ್ಥೆಯ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ 2011ರಿಂದ ಭಾರತೀಯ ಕುಸ್ತಿ ಸಂಸ್ಥೆಯ ಅಧ್ಯಕ್ಷ ಸ್ಥಾನದಲ್ಲಿದ್ದು, ಆತನ ಮೇಲೆ ಹಲವಾರು ಕೇಸುಗಳು ದಾಖಲಾಗಿರುವುದು ಚುನಾವಣೆ ವೇಳೆ ಬೆಳಕಿಗೆ ಬಂದಿತ್ತು. ಆದರೆ ಜನ ಮತ ಹಾಕಿ ಗೆಲ್ಲಿಸಿದ್ದಾರೆ. ತನ್ನ ಅಧಿಕಾರದ ಮದದಿಂದ ಬ್ರಿಜ್ ಕುಸ್ತಿಪಟುಗಳ ಸಾಧನೆಗೆ ಹೆಚ್ಚು ಒತ್ತು ಕೊಡುವ ಬದಲು ತನ್ನ ಚಪಲಕ್ಕೆ ಹೆಚ್ಚು ಒತ್ತು ನೀಡಿದ. ಉಡಾಫೆಯಿಂದ ವರ್ತಿಸಿದ, ಕುಸ್ತಿಪಟುಗಳಿಗೆ ಬೆದರಿಕೆ ಹಾಕಿದ. ಆರಂಭದಿಂದಲೂ ಡಾನ್ ರೀತಿಯಲ್ಲಿ ವರ್ತಿಸುತ್ತಿದ್ದ ಬ್ರಿಜ್ ಬಿಜೆಪಿ ಆಡಳಿತದಲ್ಲಿ ತಾನು ಏನು ಮಾಡಿದರೂ ನಡೆಯುತ್ತದೆ ಎಂಬಂತೆ ವರ್ತಿಸಿದ. ಈಗ ಜನವರಿ 22ಕ್ಕೆ ರಾಜೀನಾಮೆ ನೀಡುತ್ತಾನೆಂಬ ಸುದ್ದಿ ಇದೆ, ಒಂದು ವೇಳೆ ಕುಸ್ತಿ ಸಂಸ್ಥೆಗೆ ರಾಜೀನಾಮೆ ನೀಡಿದರೆ ಸಂಸದ ಸ್ಥಾನಕ್ಕೂ ನೀಡಬೇಕಾಗುತ್ತದೆಯೋ ಕಾದು ನೋಡಬೇಕು.
ಒಲಿಂಪಿಯನ್ ವಿನೇಶ್ ಫೋಗತ್, ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸೇರಿದಂತೆ ದೇಶದ ಪ್ರಮುಖ ಕುಸ್ತಿಪಟುಗಳು ಮುಷ್ಕರದಲ್ಲಿ ನಿರತರಾಗಿದ್ದಾರೆ. ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ವಿನೇಶ್ ಫೋಗತ್ ಖಂಡಿಸಿರುವುದಕ್ಕೆ ಆಕೆಗೆ ವಿವಿಧ ರೀತಿಯಲ್ಲಿ ಬ್ರಿಜ್ ಕಿರುಕುಳ ನೀಡಿರುತ್ತಾನೆ. ಆತನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಬಗ್ಗೆಯೂ ಯೋಚಿಸಿದ್ದರು. ಆದರೆ ಆತ್ಮಹತ್ಯೆ ಮಾಡಿಕೊಂಡರೆ ನ್ಯಾಯ ಸಿಗುವುದಿಲ್ಲ ಎಂದು ಹೋರಾಟಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ ನ್ಯಾಯ ಒದಗಿಸುವಂತೆ ವಿನಂತಿಸಿಕೊಂಡಿದ್ದಾರೆ. ಯಾಕೋ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಹತ್ತು ವರ್ಷಗಳಲ್ಲಿ 45 ಪ್ರಕರಣ:
ಭಾರತದಲ್ಲಿರುವ ಕ್ರೀಡಾ ಸಂಸ್ಥೆಗಳು ಮತ್ತು ಅಲ್ಲಿ ಕಾರ್ಯನಿರ್ವಹಿಸುತ್ತಿರುವವರು ಎಷ್ಟು ಕಾಮುಕರಾಗಿದ್ದಾರೆಂದರೆ ಕಳೆದ 10 ವರ್ಷಗಳಲ್ಲಿ 45 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಕೆಲವು ಕೋಚ್‌ಗಳ ವಿರುದ್ಧವಾದರೆ ಇನ್ನು ಕೆಲವು ಅಧಿಕಾರಿಗಳು, ಸಂಸ್ಥೆಯ ಪದಾಧಿಕಾರಿಗಳ ವಿರುದ್ಧವಾಗಿರುತ್ತದೆ.
ಫುಟ್ಬಾಲ್, ಕ್ರಿಕೆಟ್, ಜಿಮ್ನಾಸ್ಟಿಕ್, ಬಾಕ್ಸಿಂಗ್, ಅಥ್ಲೆಟಿಕ್ಸ್ ಮೊದಲಾದ ಕ್ರೀಡೆಗಳಲ್ಲಿ ಪದಕ ಸಿಕ್ಕಿದಕ್ಕಿಂತ ಲೈಂಗಿಕ ಕಿರುಕುಳದ ಪ್ರಕರಣಗಳೇ ಹೆಚ್ಚಿವೆ. ಅನೇಕ ಮಹಿಳಾ ಕ್ರೀಡಾಪಟುಗಳು ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಮರ್ಯಾದೆ ಉಳಿಸಿಕೊಳ್ಳಲು ಹೆಸರನ್ನು, ಪ್ರಕರಣವನ್ನು ಬಹಿರಂಗಪಡಿಸದೆ ಬಯಲಿಗೆ ಬಾರದ ಪ್ರಕರಣಗಳು ಅಗಣಿತ.
ಮೊದಲು ರಾಜಕೀಯ ಪುಡಾರಿಗಳನ್ನು ಹೊರದಬ್ಬಿ:
ಅಧಿಕಾರದ ಪ್ರಭಾವದಿಂದಾಗಿ ಎಷ್ಟೋ ಪ್ರಕರಣಗಳು ಮುಚ್ಚಿ ಹೋಗಿವೆ. ಕೆಲವು ದಾಖಲೆಗಳಿಲ್ಲದೆ ಖುಲಾಸೆಯಾಗಿವೆ. ತಲೆ ಮತ್ತು ಮೀಸೆಗೆ ಬಣ್ಣ ಹಚ್ಚಿಕೊಂಡು, ದಶಕಗಳಿಂದ ಕ್ರೀಡಾ ಸಂಸ್ಥೆಗಳಲ್ಲಿ ಅಧಿಕಾರದಲ್ಲಿರುವ ರಾಜಕಾರಣಿಗಳನ್ನು ಮೊದಲು ಕ್ರೀಡಾ ಸಂಸ್ಥೆಗಳಿಂದ ಹೊರದಬ್ಬಬೇಕು. ಮಹಿಳಾ ತಂಡದಲ್ಲಿ ಮಹಿಳಾ ಕೋಚ್‌ಗಳಿಗೆ ಮೊದಲ ಆದ್ಯತೆ ನೀಡಬೇಕು. ತಂಡಗಳು ವಿದೇಶ ಪ್ರವಾಸ ಕೈಗೊಂಡಾಗ ಈ ಪದಾಧಿಕಾರಿಗಳು, ಸಚಿವರು ಅವರ ಚೇಲಾಗಳು ಕ್ರೀಡಾಕೂಟದ ಹೆಸರಿನಲ್ಲಿ ಪ್ರಯಾಣ ಮಾಡುವುದನ್ನು ನಿಲ್ಲಿಸಬೇಕು.
ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ವೆಬ್‌ಸೈಟ್ ನೋಡಿದರೆ ಅಲ್ಲಿ ಸಚಿವರು, ಶಾಸಕರು, ಸಂಸರು ಹೀಗೆ ರಾಜಕೀಯ ವ್ಯಕ್ತಿಗಳೇ ಪ್ರಮುಖ ಹುದ್ದೆಗಳಲ್ಲಿ ತುಂಬಿಕೊಂಡಿರುವುದು ಸ್ಪಷ್ಟವಾಗುತ್ತದೆ. ಇವರನ್ನೆಲ್ಲ ಮೊದಲು ಹೊರಕ್ಕೆ ಹಾಕಬೇಕು. ಅಲ್ಲಿ ಕ್ರೀಡಾಪಟುಗಳಿಗೇ ಅವಕಾಶ ನೀಡಬೇಕು. ಎರಡು ವರ್ಷ ಅಧಿಕಾರದ ಅವಧಿ ಮುಗಿದ ನಂತರ ಬೇರೆಯವರಿಗೆ ಅವಕಾಶ ನೀಡಬೇಕು. ನಡೆಯಲಾಗದವರು ಕ್ರೀಡಾ ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿರುವ ಬದಲು ಮಾಜಿ ಕ್ರೀಡಾಪಟುಗಳಿಗೆ ನೀಡುವುದು ಸೂಕ್ತ.
ಕ್ರೀಡಾಪಟುಗಳು ಸಂಘಟಿತರಾಗಬೇಕು:
ವಿನೇಶ್ ಫೋಗತ್ ತನ್ನ ಗೆಳೆಯ ಗೆಳತಿಯರನ್ನು ಕೂಡಿಕೊಂಡು ಧೈರ್ಯ ಮಾಡಿ ಹೋರಾಟಕ್ಕೆ ಮುಂದಾದರು. ಇದರಿಂದ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು ಶಕ್ತಿ ಬಂದಂತಾಗಿದೆ. ತಮಗಾದ ಅನ್ಯಾಯವನ್ನು ಸಹಿಸಿಕೊಂಡು ಸುಮ್ಮನಾದರೆ ಅದು ಇನ್ನೊಬ್ಬರಲ್ಲಿ ಮುಂದುವರಿಯುತ್ತದೆ. ಕೆಲವೊಂದು ಕ್ರೀಡಾಪಟುಗಳು ತಮಗಾಗುವ ಲಾಭದಿಂದ ವಂಚಿತರಾಗುತ್ತೇವೆ ಎಂದು ಅರಿತು ಇನ್ನೊಬ್ಬರ ಸಂಕಷ್ಟಕ್ಕೆ ಸ್ಪಂದಿಸುವುದಿಲ್ಲ. ಬಹಿರಂಗದ ಮಾತು ಒತ್ತಟ್ಟಿಗಿರಲಿ ವಾಟ್ಸಪ್ ಗ್ರೂಪುಗಳಲ್ಲಿ ಯಾರಾದರೂ ನೋವು ತೋಡಿಕೊಂಡರೆ ಅದಕ್ಕೂ ಸ್ಪಂದಿಸುವುದಿಲ್ಲ. ತಮಗೆ ಸಿಗುವ ಪ್ರಶಸ್ತಿ, ನಗದು ಬಹುಮಾನ, ತಂಡದಲ್ಲಿ ಸ್ಥಾನಕ್ಕೆ ಅಡ್ಡಿಯಾಗುತ್ತದೆ ಎಂಬುದು ಕೆಲವು ಕ್ರೀಡಾಪಟುಗಳ ಲೆಕ್ಕಾಚಾರ.
ಸರಕಾರ ಕೂಡ ಪ್ರಶಸ್ತಿ ನೀಡುವಾಗ ಕ್ರೀಡಾಪಟುಗಳ ಸಾಧನೆಯನ್ನು ಗಮನಿಸಬೇಕೇ ಹೊರತು ಯಾವುದೋ ರಾಜಕೀಯ ವ್ಯಕ್ತಿಗಳ ಶಿಫಾರಸು, ಅವರ ಹಸ್ತಕ್ಷೇಪ ಇವುಗಳಿಗೆ ಆಸ್ಪದ ಕೊಡಬಾರದು. “ನಿನಗೆ ಪ್ರಶಸ್ತಿ ಬರುವ ಹಾಗೆ ಮಾಡುತ್ತೇನೆ, ನಾನೇ ಕಮಿಟಿಯಲ್ಲಿ ಇರುವುದು” ಎಂದು ಮಹಿಳಾ ಕ್ರೀಡಾ ಸಾಧಕಿಯರನ್ನು ಬಳಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಕ್ರೀಡಾ ಇಲಾಖೆಯು ಪ್ರತಿಯೊಬ್ಬ ಕ್ರೀಡಾಪಟುವಿನ ಸಾಧನೆಗಳನ್ನು ಪ್ರತಿ ಕ್ರೀಡಾಕೂಟದ ಬಳಿಕ ದಾಖಲೀಕರಿಸುವ ಕೆಲಸ ಮಾಡಬೇಕು. ಕ್ರೀಡಾ ಸಂಸ್ಥೆಗಳು ಶಿಫಾರಸು ಮಾಡಿದಾಗ ತಮ್ಮಲ್ಲಿರುವ ದಾಖಲೆಗಳೊಂದಿಗೆ ತುಲನೆ ಮಾಡಬೇಕು. ಆಗ ನೈಜ ಸಾಧಕನಿಗೆ ಪ್ರಶಸ್ತಿ ನೀಡಲು ಸಾಧ್ಯವಾಗುತ್ತದೆ. ಈ ಮೂಲಕ ಆಮಿಷಗಳಿಗೆ ಕ್ರೀಡಾಪಟುಗಳು ಬಲಿಯಾಗುವುದನ್ನು ತಡೆಗಟ್ಟಬಹುದು.
ಇಷ್ಟಕ್ಕೂ ನಿಮಗೆ ಅರ್ಥವಾಗಿಲ್ಲ ಎಂದರೆ ಮೂರು ಸಲ ಗೋವಿಂದಾ, ಗೋವಿಂದಾ ಗೋವಿಂದಾ ಎಂದು ದೇವರ ಮೇಲೆ ಭಾರ ಹಾಕಿ ಹಾಯಾಗಿರಿ…