ಬೆಂಗಳೂರು: ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಷನ್ ಆಶ್ರಯದಲ್ಲಿ ನಡೆಯುತ್ತಿರುವ ಬಿಎಫ್‌ಐ-ಇಂಡಿಯನ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್ (ಐಎನ್‌ಬಿಎಲ್) ಮೊದಲ ಋತುವಿನ ರಾಷ್ಟ್ರೀಯ ಫೈನಲ್ಸ್‌ನಲ್ಲಿ 18ವರ್ಷ ವಯೋಮಿತಿಯ ವನಿತೆಯರ ವಿಭಾಗದಲ್ಲಿ ಬೆಂಗಳೂರು ಸೌತ್ ತಂಡವು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಗುವಾಹಟಿ ವಿರುದ್ಧ ಜಯ ಗಳಿಸಿ ಕ್ವಾರ್ಟರ್ ಫೈನಲ್ ತಲುಪಿದೆ.
ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಬೆಂಗಳೂರು ತಂಡವು ಗುಹಾವಟಿ ವಿರುದ್ಧ 17-9 ಅಂತರದಲ್ಲಿ ಜಯ ಗಳಿಸಿತು. ಇದಕ್ಕೂ ಮೊದಲು ನಡೆದ ಲೀಗ್ ಹಂತದ ಪಂದ್ಯದಲ್ಲಿ ಬೆಂಗಳೂರು ಸೌತ್ ತಂಡ ಮುಂಬೈ ವಿರುದ್ಧ 17-12 ಅಂತರದಲ್ಲಿ ಜಯ ಗಳಿಸಿತ್ತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡ ಇಂದೋರ್ ವಿರುದ್ಧ ಸೆಣಸಲಿದೆ.
ಭಾನುವಾರ ನಡೆಯುವ ಇತರ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಚೆನ್ನೈ ಎಗ್ಮೋರ್ ತಂಡವು ಚಂಡೀಗಢ ವಿರುದ್ಧ, ಭಿಲಾಯಿ ತಂಡವು ಜೈಪುರ ವಿರುದ್ಧ, ಲುಧಿಯಾನ ತಂಡವು ಲಖನೌ ವಿರುದ್ಧ ಸೆಣಸಲಿವೆ.
ಪುರುಷರ ವಿಭಾಗದಲ್ಲಿ ಜೈಪುರ ತಂಡವು ಭಿಲಾಯಿ ವಿರುದ್ಧ, ಲಖನೌ ತಂಡವು, ಚೆನ್ನೈ ವಿರುದ್ಧ, ಭಾವನಗರ ತಂಡವು ಇಂದೋರ್ ವಿರುದ್ಧ, ಚಂಢೀಗಢ ತಂಡವು ಲುಧಿಯಾನ ವಿರುದ್ಧ ಸೆಮಿಫೈನಲ್ ಸ್ಥಾನಕ್ಕಾಗಿ ಸೆಣಸಲಿವೆ.