Friday, October 4, 2024

ಹಾಕಿ ಏಷ್ಯಾಕಪ್‌: ಜಪಾನ್‌ಗೆ ಸೋಲುಣಿಸಿದ ಭಾರತ

ಜಕಾರ್ತ: ಹಾಕಿ ಏಷ್ಯಾ ಕಪ್‌ ಸೂಪರ್‌ 4 ಮೊದಲ ಪಂದ್ಯದಲ್ಲಿ ಜಪಾನಿಗೆ 2-1 ಗೋಲುಗಳ ಅಂತರದಲ್ಲಿ ಸೋಲುಣಿಸಿದ ಭಾರತ ಟೂರ್ನಿಯ ಆರಂಭದಲ್ಲಿ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಂಡಿದೆ.

ಹಾಲಿ ಚಾಂಪಿಯನ್‌ ಭಾರತ ಲೀಗ್‌ ಹಂತದ ಪಂದ್ಯದಲ್ಲಿ ಜಪಾನ್‌ ವಿರುದ್ಧ 2-5 ಗೋಲುಗಳ ಅಂತರದಲ್ಲಿ ಸೋಲನುಭವಿಸಿತ್ತು, ಆದರೆ ಶನಿವಾರದ ಪಂದ್ಯದಲ್ಲಿ ಮಂಜೀತ್‌ ಸಿಂಗ್‌ (8ನೇ ನಿಮಿಷ) ಮತ್ತು ಪವನ್‌ ರಾಜ್‌ಭರ್‌ (35ನೇ ನಿಮಿಷ) ಅವರು ಗಳಿಸಿದ ಗೋಲಿನಿಂದ ಅದ್ಭುತ ಜಯ ಗಳಿಸಿತು.

18ನೇ ನಿಮಿಷದಲ್ಲಿ ಜಪಾನ್‌ ಪರ ತಕುಮಾ ನಿವಾ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಎಡ ಭಾಗದಲ್ಲಿ ರಾಜ್‌ಭರ್‌ ಪವನ್‌ ನೀಡಿದ ಪಾಸ್‌ ಮೂಲಕ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಮಂಜಿತ್‌ ಒಂಟಿಯಾಗಿ ಮುನ್ನೆಡಿಸಿ ತಂಡಕ್ಕೆ ಮೊದಲ ಫೀಲ್ಡ್‌ ಗೋಲ್‌ ಗಳಿಸಿದರು. ಇದರೊಂದಿಗೆ ಆರಂಭದಲ್ಲೇ ಮುನ್ನಡೆದ ಭಾರತ ಆತ್ಮವಿಶ್ವಾಸದೊಂದಿಗೆ ಹೆಜ್ಜೆ ಇಟ್ಟಿತು.

13ನೇ ನಿಮಿಷದಲ್ಲಿ ಮಣಿಂದರ್‌ ಸಿಂಗ್‌ಗೆ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಗಳಿಸುವ ಅವಕಾಶ ಇದ್ದಿತ್ತು, ಆದರೆ ಜಪಾನಿನ ಡಿಫೆನ್ಸ್‌ ವಿಭಾಗ ಅದಕ್ಕೆ ಅವಕಾಶ ನೀಡಲಿಲ್ಲ,  ಮೊದಲ ಕ್ವಾರ್ಟರ್‌ನಲ್ಲಿ ಭಾರತ ಮೇಲುಗೈ ಸಾಧಿಸಿತ್ತು, ಆದರೆ ಎರಡನೇ ಕ್ವಾರ್ಟರ್‌ ಆರಂಭದಲ್ಲೇ ಜಪಾನ್‌ ಆಕ್ರಮಣಕಾರಿ ಆಟ ಆರಂಭಿಸಿತು. ಪರಿಣಾಮ 18ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಸಿಕ್ಕಿತು. ತಕುಮಾ ನಿವಾ ಉತ್ತಮ ರೀತಿಯಲ್ಲಿ ಗೋಲು ಗಳಿಸಿದರು. ಪಂದ್ಯ 1-1ರಲ್ಲಿ ಸಮಬಲಗೊಂಡಿತು.

ದ್ವಿತಿಯಾರ್ಧದ 35ನೇ ನಿಮಿಷದಲ್ಲಿ ಪವನ್‌ ರಾಜ್‌ಭರ್‌ ಗಳಿಸಿದ ಫೀಲ್ಡ್‌ ಗೋಲ್‌ ಭಾರತಕ್ಕೆ ಮುನ್ನಡೆ ತಂದುಕೊಟ್ಟಿತು. ಈ ನಡುವೆ ಜಪಾನ್‌ಗೆ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕರೂ ಭಾರತದ ಡಿಫೆನ್ಸ್‌ ವಿಭಾಗ ಉತ್ತಮ ರೀತಿಯಲ್ಲಿ ತಡೆಯಿತು. ಭಾನುವಾರ ನಡೆಯುವ ಎರಡನೇ ಸೂಪರ್‌ 4 ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾ ವಿರುದ್ಧ ಸೆಣಸಲಿದೆ.

ದಿನದ ಇನ್ನೊಂದು ಸೂಪರ್‌ 4 ಪಂದ್ಯದಲ್ಲಿ ದಕ್ಷಿಣ ಕೊರಿಯಾ ಹಾಗೂ ಮಲೇಷ್ಯಾ 2-2 ಗೋಲುಗಳಿಂದ ಸಮಬಲ ಸಾಧಿಸಿದವು. ಭಾರತ, ಮಲೇಷ್ಯಾ, ದಕ್ಷಿಣ ಕೊರಿಯಾ ಹಾಗೂ ಜಪಾನ್‌ ತಂಡಗಳು ಸೂಪರ್‌ 4 ಹಂತ ತಲುಪಿದ್ದು, ಅಗ್ರ ಸ್ಥಾನ ಪಡೆದ ಎರಡು ತಂಡಗಳು ಫೈನಲ್‌ ಪ್ರವೇಶಿಸಲಿವೆ.

Related Articles