Thursday, December 12, 2024

ದಾಖಲೆ ಬರೆದ ಬೆಂಗಳೂರು ಬ್ಲಾಸ್ಟರ್ಸ್

ಸ್ಪೋರ್ಟ್ಸ್ ಮೇಲ್ ವರದಿ

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನ ಮೊದಲ ಪಂದ್ಯದಲ್ಲೇ ಬೆಂಗಳೂರ ಬ್ಲಾಸ್ಟರ್ಸ್ ತಂಡ ದಾಖಲೆಯೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡ ಋತುವಿನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ 228 ರನ್‌ಗಳ ಬೃಹತ್ ಮೊತ್ತ ಗಳಿಸಿದೆ. ಇದು ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ತಂಡವೊಂದು ಗಳಿಸಿದ ಎರಡನೇ ಗರಿಷ್ಠ ಮೊತ್ತವಾಗಿದೆ.

2014ರಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ ರಾಕ್‌ಸ್ಟಾರ್ಸ್ ವಿರುದ್ಧದ ಪಂದ್ಯದಲ್ಲಿ  245 ರನ್ ಗಳಿಸಿ ದಾಖಲೆ ಬರೆದಿತ್ತು. ಇದು ಕೆಪಿಎಲ್‌ನಲ್ಲಿ ತಂಡವೊಂದು ಇದುವರೆಗೂ ಗಳಿಸಿದ ಗರಿಷ್ಠ ಮೊತ್ತವಾಗಿದೆ.
ಮನೆಯಂಗಣದಲ್ಲಿ ಮಿಂಚಿದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ರಾಬಿಲ್ ಉತ್ತಪ್ಪ (81) 38 ಎಸೆತಗಳಲ್ಲಿ  8 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 81ರನ್ ಗಳಿಸಿ ತಂಡದ  ಬೃಹತ್ ಮೊತ್ತಕ್ಕೆ ಉತ್ತಮ ಅಡಿಪಾಯ ಹಾಕಿದರು. ಎಂ. ವಿಶ್ವನಾಥನ್ (46) ಕೂಡ ಮಿಂಚಿನ ಆಟ ಪ್ರದರ್ಶಿಸಿದರು. ಪವನ್ ದೇಶಪಾಂಡೆ (46) 2 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಬೃಹತ್ ಮೊತ್ತಕ್ಕೆ ನೆರವಾದರು. ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಬೆಳಗಾವಿ ಪ್ಯಾಂಥರ್ಸ್‌ಗೆ ಸವಾಲಿನ ಮೊತ್ತ ನೀಡಿತು. ಸ್ಟುವರ್ಟ್ ಬಿನ್ನಿ ಪ್ಯಾಂಥರ್ಸ್ ಪರ 37 ರನ್‌ಗೆ 3 ವಿಕೆಟ್ ಗಳಿಸಿದರು.

ಬಿಸಿಬಿಸಿ ಕ್ರಿಕೆಟ್‌ಗೆ ತಂಪಿನ ಆರಂಭ 

ಚಂದನ್ ಶೆಟ್ಟಿ ಅವರ ರಾಪ್ ಹಾಡು ಜತೆಯಲ್ಲಿ  ಕರ್ನಾಟಕದ ಸಂಸ್ಕೃತಿಯನ್ನು ಅನಾವರಣಗೊಳಿಸುವ ಇತರ ಸಮೂಹ ನೃತ್ಯಗಳು ಪ್ರಸಕ್ತ ಕೆಪಿಎಲ್ ಆರಂಭೋತ್ಸವಕ್ಕೆ ಸಾಕ್ಷಿಯಾಯಿತು. ಆದರೆ ಬಿಸಿಬಿಸಿ ಆಗಿರಲಿಲ್ಲ. ಏಕೆಂದರೆ ನಿತಂರವಾಗಿ ಸುರಿಯುತ್ತಿರುವ ಮಳೆ ಉದ್ಘಾಟನಾ ಸಮಾರಂಭಕ್ಕೆ ಅಡ್ಡಿಯನ್ನುಂಟು ಮಾಡಿತ್ತು.

Related Articles