ತಂದೆ ,ಮಕ್ಕಳ ಶ್ರಮದಲ್ಲಿ ಅರಳಿದ ಅಂತಾರಾಷ್ಟ್ರೀಯ ಕ್ರೀಡಾ ಅಕಾಡೆಮಿ

0
324
ಸ್ಪೋರ್ಟ್ಸ್ ಮೇಲ್ ವರದಿ 

ತಂದೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ಯುರೇಟರ್, ಮಗ ರಾಜ್ಯ ಕಂಡ ಅತ್ಯುತ್ತಮ ಕ್ರಿಕೆಟ್ ಆಟಗಾರ, ಇನ್ನೊಬ್ಬ ಮಗ ಸಾಫ್ಟ್ವೇರ್ ಎಂಜಿನಿಯರ್. ಮೂವರಲ್ಲೂ ವಿಶೇಷವಾಗಿ ಇರುವ ಅಂಶವೆಂದರೆ ಕ್ರೀಡೆಗೆ ಪ್ರೋತ್ಸಾಹ ನೀಡುವುದು. ಅದರ ಪರಿಣಾಮವಾಗಿಯೇ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಎಂಟು ಕೋರ್ಟ್‌ಗಳನ್ನೊಳಗೊಂಡ ಬ್ಯಾಡ್ಮಿಂಟನ್ ಅಕಾಡೆಮಿಯೊಂದು ಹುಟ್ಟಿಕೊಳ್ಳಲು ಸಾಧ್ಯಯಿತು.

ನಾವು ಹೇಳಹೊರಟಿದ್ದು, ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪಿಚ್‌ಗಳನ್ನು ನಿರ್ಮಿಸಿ, ಬಿಸಿಸಿಐನಿಂದ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಮೂರು ಬಾರಿ ಪ್ರಶಸ್ತಿ ಸಿಗುವಂತೆ ಮಾಡಿದ ಕ್ಯುರೇಟರ್ ನಾರಾಯಣ ರಾಜು ಹಾಗೂ ಅವರ ಮಕ್ಕಳಾದ ಸುನಿಲ್ ರಾಜು ಹಾಗೂ ಸುಪ್ರೀತ್ ಅವರ ಕ್ರೀಡಾ ಸ್ಫೂರ್ತಿಯ ಬಗ್ಗೆ. ತಂದೆ ಮಕ್ಕಳು ಸೇರಿಕೊಂಡು ದಿ ಮೆಜಿಸ್ಟೈನ್  ಸ್ಪೋರ್ಟ್ಸ್ ಎಂಬ ಅಂತಾರಾಷ್ಟ್ರೀಯ ಅಕಾಡೆಮಿಯನ್ನು ಸ್ಥಾಪಿಸಿದ್ದು, ಭಾನುವಾರ ಬೆಂಗಳೂರಿನಲ್ಲಿ  ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಜಾವಗಲ್ ಶ್ರೀನಾಥ್ ಅವರು ಚಾಲನೆ ನೀಡಿದರು.
ಬೆಂಗಳೂರು ಕ್ರೀಡಾ ರಾಜಧಾನಿಯಾಗಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿದೆ. ಯಾವುದೇ ಕ್ರೀಡೆಯನ್ನು ಗಮನಿಸಿದರೂ ಅಲ್ಲಿ ಕನ್ನಡಿಗರ ಕೊಡುಗೆ ಅಪಾರ. ಕನ್ನಡಿಗರ ಪಾತ್ರವಿಲ್ಲದ ಕ್ರೀಡೆ ವಿರಳ. ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ  ಬೆಂಗಳೂರು ಹಲವಾರು ಸಾಧಕರ ತವರೂರು. ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಳ್ಳಲು ಅಂತಾರಾಷ್ಟ್ರೀಯ ಆಟಗಾರರು ಇಲ್ಲಿಗೆ ಬಂದು ತರಬೇತಿ ಪಡೆಯುತ್ತಿರುವುದು ಹೊಸತೇನಲ್ಲ. ಇದನ್ನು ಗಮನಿಸಿದ ಸುನಿಲ್ ರಾಜು ಅವರು ಬೆಂಗಳೂರಿನ ಕ್ರೀಡಾ ಕಿರೀಟಕ್ಕೆ ಮತ್ತೊಂದು ಗರಿಯನ್ನು ತೊಡಿಸಿದ್ದಾರೆ. ಅದೇ ದಿ ಮೆಜಿಸ್ಟೈನ್  ಸ್ಪೋರ್ಟ್ಸ್ (ಟಿಎಂಎಸ್).
ಕ್ರಿಕೆಟ್ ಆಟವನ್ನೇ ತನ್ನ ಬದುಕಾಗಿಸಿಕೊಂಡು, ಕಳೆದ ಹದಿನೆಂಟು ವರ್ಷಗಳಿಂದ ಎನ್‌ಆರ್‌ಎ ಕ್ರಿಕೆಟ್ ಅಂಗಣದಲ್ಲಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತ, ಉತ್ತಮ ಕ್ಯುರೇಟರ್ ಎನಿಸಿಕೊಂಡಿರುವುದು ಮಾತ್ರವಲ್ಲದೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ವಿವಿಧ  ಜವಾಬ್ದಾರಿಗಳನ್ನು ನಿಭಾಯಿಸಿದ  ನಾರಾಯಣ್ ರಾಜು ಅವರಿಂದ ಕ್ರೀಡೆಗೊಂದು ಉತ್ತಮ ಅಕಾಡೆಮಿ, ಉತ್ತಮ ಕ್ರೀಡಾಪಟುಗಳನ್ನು ನಿರೀಕ್ಷಿಸುವುದು ಸಹಜ. ಈ ಕಾರಣಕ್ಕಾಗಿಯೇ ಅವರು ಅಕಾಡೆಮಿ ಸ್ಥಾಪನೆಗೆ ಮುಂದಾದರು. ‘ಉತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡು  ಅಂತಾರಾಷ್ಟ್ರೀಯ ಗುಣಮಟ್ಟದ ಅಕಾಡೆಮಿ ಬೆಂಗಳೂರಿಗೆ ಅಗತ್ಯವಿದೆ ಎಂದು ನಿರ್ಧರಿಸಿದೆ. ಉತ್ತಮ ಕೋಚ್ ಹಾಗೂ ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಅಕಾಡೆಮಿಯನ್ನು ಸ್ಥಾಪಿಸಿ ಕ್ರೀಡಾಪಟುಗಳಿಗೆ ಕೈಗೆಟಕುವ ದರದಲ್ಲಿ ತರಬೇತಿ ನೀಡುವುದು ನಮ್ಮ ಉದ್ದೇಶಶವಾಗಿತ್ತು, ಅದನ್ನೇ ಗಮನದಲ್ಲಿರಿಸಿಕೊಂಡು ದಿ ಮೆಜೆಸ್ಟೈನ್ ಸ್ಪೋರ್ಟ್ಸ್ ಸ್ಥಾಪಿಸಿದೆವು, ‘ ಎಂದು ನಾರಾಯಣ್ ರಾಜು ಅವರು ಸ್ಪೋರ್ಟ್ಸ್ ಮೇಲ್‌ಗೆ ತಿಳಿಸಿದ್ದಾರೆ.
ಪ್ರತಿಭಾವಂತ ಹಾಗೂ ಅರ್ಹ ಆಟಗಾರರಿಗೆ ಟಿಎಂಎಸ್ ಸಂಪೂರ್ಣ ವಿದ್ಯಾರ್ಥಿವೇತನ ನೀಡಲಿದೆ.  ಉತ್ತಮ ರೀತಿಯ ತರಬೇತಿ, ವಸತಿ ಹಾಗೂ ಶಿಕ್ಷಣ ಇವೆಲ್ಲವೂ ವಿದ್ಯಾರ್ಥಿವೇತನದಲ್ಲಿ ಸೇರಿರುತ್ತದೆ.  ಹೊಸದಾಗಿ ಆರಂಭಗೊಂಡಿರುವ ಅಕಾಡೆಮಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಐದು ಸರಕಾರಿ ಶಾಲೆಗಳನ್ನು ಪ್ರತಿಭಾನ್ವೇಷಣೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಆ ನಂತರ ಬೆಂಗಳೂರಿನ ಇತರ ಭಾಗಗಳಲ್ಲಿ ಪ್ರತಿಭಾನ್ವೇಷಣೆ ಪ್ರಕ್ರಿಯೆ ನಡೆಯಲಿದೆ.
ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಟಿಎಂಎಸ್  ಬ್ಯಾಡ್ಮಿಂಟನ್‌ನ ಪ್ರಧಾನ ತರಬೇತಿ ಕೇಂದ್ರವಾಗಿದೆ. ಪ್ರಮುಖ ಬ್ಯಾಡ್ಮಿಂಟನ್ ಕೋಚಿಂಗ್ ಅಕಾಡೆಮಿ ಬ್ಯಾಡಿಜೋನ್ ಜತೆ ಟಿಎಂಎಸ್ ಒಪ್ಪಂದ ಮಾಡಿಕೊಂಡಿದೆ. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಬ್ರಾಂಡ್ ಲೀ ನಿಂಗ್ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ.  ಅಕಾಡೆಮಿಯಲ್ಲಿ  ಭಾರತ ಉತ್ತಮ ಆಟಗಾರ ಮೋಹಿತ್ ಕಾಮತ್ ಅವರು ಪ್ರಧಾನ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೋಹಿತ್ ಕಾಮತ್ ಭಾರತದ ಅಗ್ರ 10 ಉತ್ತಮ ತರಬೇತಿದಾರರಲ್ಲಿ ಒಬ್ಬರು.  ಒಲಿಂಪಿಕ್ಸ್ ಗೋಲ್ಡ್ ಕ್ವೆಸ್ಟ್‌ನ (ಒಜಿಕ್ಯೂ) ತರಬೇತುದಾರರಿಗೆ ಶಿಕ್ಷಣ ಯೋಜನೆಯಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ ಟಿಎಂಎಸ್‌ನಲ್ಲಿ ಲೀ ನಿಂಗ್‌ನ ಅಂತಾರಾಷ್ಟ್ರೀಯ ತರಬೇತುದಾರರ ತಂಡವೊಂದು ಸೇರ್ಪಡೆಯಾಗಲಿದೆ.
‘ದೇಶದ ವಿವಿಧ  ಭಾಗಗಳಿಂದ ಬಂದ ಸುಮಾರು 18ಕ್ಕೂ ಹೆಚ್ಚು ಯುವ ಆಟಗಾರರು ಅಕಾಡೆಮಿಯಲ್ಲಿ ಈಗಾಗಲೇ ತರಬೇತಿ ಪಡೆಯುತ್ತಿದ್ದಾರೆ. ನಾನು ಕಂಡಿರುವ ಅಕಾಡೆಮಿಗಳಲ್ಲಿ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಅಕಾಡೆಮಿ ಇದಾಗಿದೆ. ಕೋರ್ಟ್‌ನ ಒಳಗಡೆ ಹಾಗೂ ಹೊರಗಡೆ ಎಲ್ಲ ವಿಭಾಗದಲ್ಲೂ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡುವುದು ನಮ್ಮ ಗುರಿ,‘ ಎಂದು ಕಾಮತ್ ಹೇಳಿದ್ದಾರೆ.
ಲೀ ನಿಂಗ್ ಇತ್ತೀಚಿಗೆ ಭಾರತದ ಪ್ರಮುಖ ಆಟಗಾರರಾದ ಶ್ರೀಕಾಂತ್ ಕಿಡಂಬ ಹಾಗೂ ಪಿ.ವಿ. ಸಿಂಧೂ  ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದು ಭಾರತದಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಮಾಡಿಕೊಂಡ ಒಪ್ಪಂದ. ಟಿಎಂಎಸ್ ಅಕಾಡೆಮಿಯಲ್ಲೂ ಪ್ರತಿಭಾನ್ವೇಷಣೆ ಲೀ ನಿಂಗ್  ಮೂಲಕ ನಡೆಯಲಿದೆ. ಟಿಎಂಎಸ್ ಅಕಾಡೆಮಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ಹಾಗೂ ಆಧುನಿಕ ತಂತ್ರಜ್ಞಾನವನ್ನು ಆಟಗಾರರಿಗೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಭಾರತದಲ್ಲಿ ಲೀ ನಿಂಗ್‌ನ ಪ್ರಮುಖ ಪಾಲುದಾರ ಸನ್‌ಲೈಟ್ ಸ್ಪೋರ್ಟ್ಸ್‌ನ ನಿರ್ದೇಶಕ ಮಹೇಂದ್ರ ಕಪೂರ್ ಹೇಳಿದ್ದಾರೆ.
ಟಿಎಂಎಸ್ ಉತ್ತಮ ಗುಣಮಟ್ಟ
ಟಿಎಂಎಸ್ ಬೆಂಗಳೂರಿನಲ್ಲೇ ಉತ್ತಮ ಗುಣಮಟ್ಟದ ಅಕಾಡೆಮಿಯಾಗಿ ರೂಪುಗೊಳ್ಳುವುದು ಸ್ಪಷ್ಟ. ಅಂತಾರಾಷ್ಟ್ರೀಯ ಗುಣಮಟ್ಟದ ಕೋರ್ಟ್ ಹಾಗೂ ಬೆಳಕಿನ ವ್ಯವಸ್ಥೆಯಿಂದ ಕೂಡಿದ ಅಕಾಡೆಮಿ ಬಗ್ಗೆ ಎಲ್ಲ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ. ರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನು ಆಯೋಜಿಸಲು ಈ ಅಕಾಡೆಮಿಗೆ ಮಾನ್ಯತೆ ಸಿಕ್ಕಿದೆ. ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆಯಿಂದ ಮಾನ್ಯತೆ ಪಡೆದ ಎಂಟು ಕೋರ್ಟ್‌ಗಳಿವೆ. ಮರದ ಹಾಸು ಹಾಗೂ ರಬ್ಬರ್, ಲೀ ನಿಂಗ್ ಸಿಂಥಟಿಕ್ ಮ್ಯಾಟ್‌ನಿಂದ ಹೊಂದಿದ ಕೋರ್ಟ್. ಉತ್ತಮ ಗಾಳಿಯ ವ್ಯವಸ್ಥೆ, ಒಲಿಂಪಿಕ್ಸ್ ಎಲ್‌ಇಡಿ  ಲೈಟ್ಸ್ ಯುವ ಆಟಗಾರರಿಗೆ ಕಲಿಯಲು ಹಮ್ಮಸ್ಸು ನೀಡುವುದು ಸ್ಪಷ್ಟ.
70,000 ಚದರ ಅಡಿ ವಿಸ್ತೀರ್ಣ!
ಟಿಎಂಎಸ್ ಬೆಂಗಳೂರಿನಲ್ಲೇ ಉತ್ತಮ ಹಾಗೂ ದೊಡ್ಡದು ಎನ್ನಬಹುದಾದ 70,000 ಚದರ ಅಡಿ ವಿಸ್ತೀರ್ಣದಲ್ಲಿದ್ದು, ಅಕಾಡೆಮಿಯ ಒಳಗಡೆಯೇ ವಿದ್ಯಾರ್ಥಿಗಳು ಎಲ್ಲ ರೀತಿಯ ಸೌಲಭ್ಯ  ಪಡೆಯಬಹುದಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್, ಟೆಂಪರೇಚರ್ ನಿಯಂತ್ರಣದಿಂದ ಕೂಡಿದ ಈಜುಕೊಳ,  ಸ್ಪಾ, ಉತ್ತಮ ಗುಣಮಟ್ಟದ ಆಹಾರ, ಅಕಾಡೆಮಿಯ ಒಳಗಡೆಯೇ ಸಿಗುವ ಆಹಾರ, ಫಿಸಿಯೋಥೆರಪಿಸ್ಟ್ ಹಾಗೂ ಆಹಾರತಜ್ಞರಿಂದ ಕೂಡಿರುವ ಅಕಾಡೆಮಿ, ಪ್ರತಿಯೊಬ್ಬ ಕ್ರೀಡಾಕೂಟುವಿನ ಆಹಾರ ಹಾಗೂ ಫಿಟ್ನೆಸ್ ಬಗ್ಗೆ ತಜ್ಞರು ಪ್ರತಿ ದಿನ ಗಮನಹರಿಸಲಿದ್ದಾರೆ. ಅಕಾಡೆಮಿಯಲ್ಲಿ ವಸತಿ ಸೌಲಭ್ಯವಿರುತ್ತದೆ. ಆಧುನಿಕ ತಂತ್ರಜ್ಞಾನದ ಪ್ರತಿಯೊಂದು ಅಂಶಗಳನ್ನು ಹೊಂದಿರುವ ಟಿಎಂಎಸ್ ನಿಜವಾಗಿಯೂ ಕ್ರೀಡಾಪಟುಗಳ ಪಾಲಿಗೊಂದು ಹೊಸ ಸ್ಫೂರ್ತಿ.
ತಂದೆಯ ಹೆಜ್ಜೆಯಲ್ಲಿ ಮಕ್ಕಳು
ನಾರಾಯಣ್ ರಾಜು ಕ್ರಿಕೆಟ್ ಮೂಲಕ ತಮ್ಮ ಹೆಸನ್ನು ಹಸಿರಾಗಿಸಿಕೊಂಡವರು. ಬಿಸಿಸಿಐಗೆ ದಕ್ಷಿಣ  ಭಾರತದ ಪ್ರಧಾನ ಕ್ಯುರೇಟರ್. ಅದೇ ರೀತಿ ಮಗ ಸುನಿಲ್ ರಾಜು ಕೂಡ ರಾಜ್ಯ ಕಂಡ ಉತ್ತಮ ಆಲ್ರೌಂಡರ್. ಅವರು ಆಡಿದ ಕೆಪಿಎಲ್ ತಂಡ  ಮೂರು ಬಾರಿ ಪ್ರಶಸ್ತಿ ಗೆದ್ದಿತ್ತು,  ಅಂಡರ್ 16 ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಾಗ ಸುನಿಲ್ ರಾಜು ತಂಡದಲ್ಲಿದ್ದರು. ರಾಜ್ಯ ರಣಜಿ ತಂಡದಲ್ಲೂ ಸುನಿಲ್ ಮಿಂಚಿದ್ದರು. ಸುನಿಲ್ ಅವರಂತೆ ಸಹೋದರ ಸುಪ್ರೀತ್ ಕೂಡ ತಂದೆಯ ಶ್ರಮಕ್ಕೆ ಹೆಗಲುಕೊಟ್ಟವರು. ಬಹುರಾಷ್ಟ್ರೀಯ ಕಂಪೆನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಸುಪ್ರೀತ್ ಉದ್ಯೋಗವನ್ನು ತೊರೆದು ಈಗ ಅಕಾಡೆಮಿಯಲ್ಲಿ ಕ್ರೀಡೆಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎನ್‌ಆರ್‌ಐ ಅಂಗಣದ ನಿರ್ವಹಣೆ ನೋಡಿಕೊಳ್ಳುತ್ತಿದ್ದ ಸುಪ್ರೀತ್ ತಂದೆಗೆ ಉತ್ತಮ ರೀತಿಯಲ್ಲಿ ನೆರವಾಗುತ್ತಿದ್ದಾರೆ.