Thursday, December 12, 2024

ನಿಯತಿ: ಓದಿನಲ್ಲಿ ಟಾಪ್, ಆಟದಲ್ಲೂ ಶ್ರೇಷ್ಠ!

ಸ್ಪೋರ್ಟ್ಸ್ ಮೇಲ್ ವರದಿ

ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಅಗ್ರ ಸ್ಥಾನ ಪಡೆದ ವಿದ್ಯಾರ್ಥಿಗಳು ಸಹಜ ಸಂಭ್ರಮದಲ್ಲಿದ್ದಾರೆ. ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಕೆಲವು ವಿದ್ಯಾರ್ಥಿಗಳು ಉತ್ತಮ ಸ್ಥಾನ ಪಡೆಯುವುದಕ್ಕಾಗಿ ತಮ್ಮ ಅವಧಿಯನ್ನು ಸಂಪೂರ್ಣವಾಗಿ ಓದುವುದಕ್ಕೇ ಮುಡುಪಾಗಿಟ್ಟಿರುತ್ತಾರೆ.

ಆದರೆ ಇನ್ನು ಕೆಲವರು ಓದಿನ ಜತೆಯಲ್ಲಿ ಕ್ರೀಡೆಯಲ್ಲೂ ಸಾಧನೆ ಮಾಡಿ ಅಲ್ಲಿಯೂ ಯಶಸ್ಸು ಕಂಡಿದ್ದಾರೆ. ಅಂಥ ಅಪೂರ್ವ ಸಾಧನೆ ಮಾಡಿದವರ ಪಟ್ಟಿಗೆ ಸೇರುತ್ತಾರೆ. ರಾಜ್ಯದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ್ತಿ ಬೆಂಗಳೂರಿನ ವಿದ್ಯಾವರ್ಧಕ ಸಂಘ, ಸರ್ದಾರ್ ಪಟೇಲ್ ಹೈಸ್ಕೂಲ್‌ನ ವಿದ್ಯಾರ್ಥಿನಿ, ರಾಜ್ಯದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ನಿಯತಿ ಪ್ರಭು .
625ರಲ್ಲಿ 619 ಅಂಕ ಗಳಿಸಿ 99.04 ಸರಾಸರಿ ಅಂಕ ಗಳಿಸಿರುವ ನಿಯತಿ, ರಾಜ್ಯದಲ್ಲಿ ಏಳನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ನಿಯತಿ , ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್  ಇಂಡಿಯಾದ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡದ ನಾಯಕಿಯಾಗಿರುತ್ತಾರೆ. ರಾಜ್ಯಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದಿರುವ ನಿಯತಿ , ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲೂ ಎತ್ತಿದ ಕೈ. ಕ್ರೀಡೆಯಲ್ಲಿ ಕೇವಲ ಬ್ಯಾಡ್ಮಿಂಟನ್‌ಗೆ ಮಾತ್ರ ತನ್ನನ್ನು ಸೀಮಿತವಾಗಿರಿಸಿಕೊಳ್ಳದ ಯುವ ಆಟಗಾರ್ತಿ ಚೆಸ್‌ನಲ್ಲೂ ರಾಜ್ಯಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುತ್ತಾರೆ.
ಕಾಲು ನೋವಿನಿಂದ ಬಳಲುತ್ತಿದ್ದ ನಿಯತಿ  ಕೆಲ ಕಾಲ ಕ್ರೀಡೆಯಿಂದ ಹೊರಗುಳಿಯಬೇಕಾಯಿತು. ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ ಹಲವು ಚಾಂಪಿಯನ್‌ಷಿಪ್‌ನಿಂದ ವಂಚಿತರಾದರು. ಫಲಿತಾಂಶ ಪ್ರಕಟಕೊಂಡ ನಂತರ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ, ನಿಯತಿ  ಪ್ರಭು, ‘ಈ ಯಶಸ್ಸಿನಲ್ಲಿ ಹೆತ್ತವರು, ದೈಹಿಕ ಶಿಕ್ಷಕರು ಹಾಗೂ ಶಾಲಾ ಶಿಕ್ಷಕರ ಪಾತ್ರ ಪ್ರಮುಖವಾಗಿದೆ, ಬ್ಯಾಡ್ಮಿಂಟನ್‌ನಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು, ಜತೆಯಲ್ಲಿ ಶಿಕ್ಷಣದಲ್ಲಿ ಉನ್ನತ ಸ್ಥಾನವನ್ನು ಕಾಪಾಡಿಕೊಳ್ಳುವ ಹಂಬಲವಿದೆ, ಅದಕ್ಕಾಗಿ ನಿರಂತರ ಶ್ರಮವಹಿಸುವೆ,‘ ಎಂದರು.
ಮೂಲತಃ ಉತ್ತರಕನ್ನಡ ಜಿಲ್ಲೆಯ ಅಂಕೋಲದವರಾದ ನಿಯತಿಗೆ ಓದು ಹಾಗೂ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡುತ್ತಿರುವುದು ಹೆತ್ತವರಾದ ನೀಲೇಶ್ ಪ್ರಭು ಹಾಗೂ ನಿಧಿ ಪ್ರಭು.

Related Articles