ಸ್ಪೋರ್ಟ್ಸ್ ಮೇಲ್ ವರದಿ
ಯುವಕರು ಕ್ರೀಡಾ ಸಾಧನೆಯ ಜತೆಯಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಅವರು ಮಾರುತಿ ಸ್ಪೋರ್ಟ್ಸ್ ಕ್ಲಬ್ ಮಿತ್ರಪಟ್ಣ ಮುಕ್ಕ ಇವರ ಆಶ್ರಯದಲ್ಲಿ ಸುಭಾಶ್ ಸಾಲ್ಯಾನ್ ಅವರ ಸ್ಮರಣಾರ್ಥ ಪಡುಪಣಂಬೂರು ಬಾಶಿಮಾರ್ ಗದ್ದೆಯಲ್ಲಿ ನಡೆದ ಸೀಮಿತ್ ಓವರ್‌ಗಳ ಓವರ್ ಆರ್ಮ್ ಕ್ರಿಕೆಟ್ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಗ್ರಾಮೀಣ ಯುವಕರಲ್ಲಿ ಪ್ರಕೃತಿದತ್ತವಾದ ಶಕ್ತಿ, ಸಾಮರ್ಥ್ಯ ಇರುತ್ತದೆ. ಅವರಿಗೆ ಇದರ ಜತೆಯಲ್ಲಿ ಉತ್ತಮ ಕ್ರೀಡಾ ಶಿಕ್ಷಣ ನೀಡಿದರೆ ಅವರನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸಬಹುದು. ಈ ಮೂಲಕ ಅವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇದು ಪ್ರಾಥಮಿಕ ಹಂತದಲ್ಲೇ ಆಗಬೇಕು ಎಂದು ಗೌತಮ್ ಶೆಟ್ಟಿ ಹೇಳಿದರು.
ಮುಕ್ಕ ಮಾರುತಿ ಸ್ಪೋರ್ಟ್ಸ್ ಕ್ಲಬ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಕೋಸ್ಟಲ್ ಮುಕ್ಕ ದ್ವಿತೀಯ ಸ್ಥಾನದೊಂದಿಗೆ ಟ್ರೋಫಿ ಹಾಗೂ ನಗದು ಬಹುಮಾನ ತನ್ನದಾಗಿಸಿಕೊಂಡಿತು. ಮಾರುತಿ ಮುಕ್ಕ ತಂಡದ ದಿನೇಶ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಉತ್ತಮ ಬೌಲರ್ ಗೌರವಕ್ಕೆ ಸಚಿನ್ ಪಾತ್ರರಾದರು, ಸರಣಿಶ್ರೇಷ್ಠ ಪ್ರಶಸ್ತಿಗೆ ಯಶವಂತ್ ಪಾತ್ರರಾದರು. ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಕೋಸ್ಟಲ್ ಮುಕ್ಕ ತಂಡದ ತೌಸಫ್ ಗಳಿಸಿದರು.
ಸುರತ್ಕಲ್‌ನ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮೂಲ್ಕಿ ಸೀಮೆ ಅರಮನೆ ಗೌತಮ್ ಜೈನ್, ಉದ್ಯಮಿ ನಾಗಭೂಷಣ ರೆಡ್ಡಿ, ಹೊಟೇಲ್ ಉದ್ಯಮಿ ಶರತ್ ಮುಕ್ಕ, ಪುರುಷೋತ್ತಮ ದೇವಾಡಿಗ, ರಮೇಶ್ ಪೂಜಾರಿ ಚೇಳ್ಯಾರು, ರೋಹಿತ್ ಸಾಲ್ಯಾನ್ ಸಸಿಹಿತ್ಲು, ಎಂಜಿನಿಯರ್ ಪ್ರಕಾಶ್ ನಿಸರ್ಗ, ಮಿತ್ರಪಟ್ಣ ಯುವಕ ಮಂಡಲದ ಅಧ್ಯಕ್ಷ ಅರುಣ್ ಕುಮಾರ್, ವಿಜಯ ಪುತ್ರನ್, ಪುರುಷೋತ್ತಮ ಸುವರ್ಣ,ಶೋಭೆನ್ದ್ರ ಸಸಿಹಿತ್ಲು ಹಾಗೂ ಹರೀಶ್ ದೊಡ್ಡಕೊಪ್ಪಲ ವೇದಿಕೆಯಲ್ಲಿದ್ದರು.
ಕ್ಲಬ್‌ನ ಅಧ್ಯಕ್ಷ ಯಜ್ಞೇಶ್ ಕರ್ಕೇರ ಸ್ವಾಗತಿಸಿದರು. ವಿನಯ್ ಉದ್ಯಾವರ ನಿರೂಪಿಸಿದರು. ಕಿಶೋರ್ ಕರ್ಕೇರ ವಂದಿಸಿದರು.