ಮಂಗಳೂರು: ಮೂರನೇ ಆವೃತ್ತಿಯ ಇಂಡಿಯನ್ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಸರ್ಫರ್‌ಗಳು ಮೇಲುಗೈ ಸಾಧಿಸಿದ್ದಾರೆ.
PC: Surfing Federation of India
ಮಂಗಳೂರು ಸಮೀಪದ ಪಣಂಬೂರು ಸಮುದ್ರ ಕಿನಾರೆಯಲ್ಲಿ ಭಾರತೀಯ ಸರ್ಫಿಂಗ್ ಫೆಡರೇಷನ್ ಆಯೋಜಿಸಿರುವ ಮೂರು ದಿನಗಳ ಚಾಂಪಿಯನ್‌ಷಿಪ್‌ನ ವನಿತೆಯರ ವಿಭಾಗದಲ್ಲಿ ಕರ್ನಾಟಕದ ಇಶಿತಾ ಮಾಳವಿಯಾ (6.17) ಮತ್ತು ಸಿಂಚನಾ ಗೌಡ (7.30) ಫೈನಲ್ ತಲುಪಿದ್ದಾರೆ.
ಗೋವಾದ ಸುಗರ್ ಬನಾರ್ಸೆ 11.27 ಅಂಕಗಳೊಂದಿಗೆ ವನಿತೆಯರ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರಿ ಎಲ್ಲರನ್ನು ನಿಬ್ಬೆರಗುಗೊಳಿಸಿದ್ದಾರೆ. ತಮಿಳುನಾಡಿನ ಸೃಷ್ಠಿ ಸೆಲ್ವಂ (10.37) ಫೈನಲ್ ತಲುಪಿದವರ ಪಟ್ಟಿಯಲ್ಲಿ ಸೇರಿದ್ದಾರೆ. ಫೈನಲ್ ಸ್ಪರ್ಧೆಗಳು ಭಾನುವಾರ ನಡೆಯಲಿವೆ.
“ಫೈನಲ್ ತಲುಪಿರುವುದಕ್ಕೆ ಖುಷಿ ಇದೆ, ಆದರೆ ಈ ಬಾರಿ ಅಪಾರ ಅನುಭವ ಹೊಂದಿರುವ ಹಾಗೂ ಹಾಲಿ ಚಾಂಪಿಯನ್ನರಾದ ಸೃಷ್ಠಿ ಸೆಲ್ವಂ ವಿರುದ್ಧ ಸ್ಪರ್ಧಿಸುತ್ತಿರುವೆ. ಆದ್ದರಿಂದ ಫೈನಲ್ ಅತ್ಯಂತ ಕಠಿಣವೆನಿಸಲಿದೆ. ನಾಳೆಯ ಫೈನಲ್‌ನಲ್ಲಿ ಉತ್ತಮ ಪೈಪೋಟಿ ನೀಡಲಿದ್ದೇನೆ. ಈ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿರುವುದಕ್ಕೆ ಭಾರತೀಯ ಸರ್ಫಿಂಗ್ ಫಡೆರೇಷನ್‌ಗೆ ಧನ್ಯವಾದಗಳು. ಇದರಿಂದಾಗಿ ನಾವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಿದ್ಧತೆ ಮಾಡಿಕೊಂಡಂತಾಗುತ್ತದೆ,” ಎಂದು ಸುಗರ್ ಹೇಳಿದ್ದಾರೆ.
ಪುರುಷರ ವಿಭಾಗದಲ್ಲಿ ತಮಿಳುನಾಡಿನ ಕಿಶೋರ್ ಕುಮಾರ್ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 15.50 ಅಂಕಗಳನ್ನು ಗಳಿಸಿರುವ ಕಿಶೋರ್ ಕುಮಾರ್ 16ವರ್ಷ ವಯೋಮಿತಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ತಾಯೆನ್ ಅರುಣ್ (11.10), ನವೀನ್ ಕುಮಾರ್,(10.17) ಮತ್ತು ಜೀವನ್ ಎಸ್. (6.46) ಫೈನಲ್ ತಲುಪಿರುವ ಇತರ ಸ್ಪರ್ಧಿಗಳು.