ಒಂದು ಕ್ರೀಡಾ ಸಂಸ್ಥೆ ಎರಡು ಪ್ರತ್ಯೇಕ ಚುನಾವಣೆ!

0
517

ಸ್ಪೋರ್ಟ್ಸ್ ಮೇಲ್ ವರದಿ:

ಸಾಧನೆಗಿಂತ ಪ್ರತಿಷ್ಠೆಯೇ ಪ್ರಮುಖವಾದರೆ ಏನಾಗುತ್ತದೆ ಎಂಬುದಕ್ಕೆ ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ (ಬಿಯುಡಿಎಎ)ಯಲ್ಲಿ ನಡೆಯುತ್ತಿರುವ ಘಟನೆಯೇ ಉತ್ತಮ ಉದಾಹರಣೆಯಾಗಿದೆ.. 

ಬಿಯುಡಿಎಎ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಸದಸ್ಯತ್ವ ಹೊಂದಿದೆ. ಇದರಲ್ಲಿ ಅಂತಾರಾಷ್ಟ್ರೀಯ ಮಾಜಿ ಅಥ್ಲೀಟ್‌ಗಳಾದ ಅಶ್ವಿನಿ ನಾಚಪ್ಪ, ಡಿ. ಇಶಾನ್, ರೀತ್ ಅಬ್ರಾಹಂ, ಬಾಬು ಶೆಟ್ಟಿ ಸೇರಿದಂತೆ ಹಲವಾರು ಪ್ರಮುಖರು ಪದಾಧಿಕಾರಿಗಳಾಗಿರುತ್ತಾರೆ. ಬೆಂಗಳೂರಿನ ಹಲವಾರು ಪ್ರತಿಷ್ಠಿತ ಅಥ್ಲೆಟಿಕ್ಸ್ ಕ್ಲಬ್‌ಗಳು  ಇದರ ಸದಸ್ಯತ್ವ ಹೊಂದಿವೆ.
ಆದರೆ  ಇತ್ತೀಚಿನ ದಿನಗಳಲ್ಲಿ ಅಶ್ವಿನಿ ನಾಚಪ್ಪ ಹಾಗೂ ಬಾಬು ಶೆಟ್ಟಿ ನಡುವೆ ಭಿನ್ನಾಭಿಪ್ರಾಯ ಹುಟ್ಟಿ ಸಂಸ್ಥೆ ಎರಡು ಭಾಗವಾಗಿ ಒಡೆದಿದೆ. ಜುಲೈ 15ರಂದು ನಡೆದ ಚುನಾವಣೆಯಲ್ಲಿ ಬಾಬು ಶೆಟ್ಟಿ ಅಧಿಕೃತವಾಗಿ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೆ ಇದೇ ವೇಳೆ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇದು ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಸೂಚನೆ ಮೇರೆಗೆ ನಡೆದಿದೆ.
ಸಿಡಿದೆದ್ದ ಅಶ್ವಿನಿ ಬಣ
ಆದರೆ  ಈ ಚುನಾವಣೆಯನ್ನು ದಿಕ್ಕರಿಸಿದ ಅಶ್ವಿನಿ ನಾಚಪ್ಪ ಬಣ, ಪ್ರತ್ಯೇಕವಾದ ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯನ್ನು ಸ್ಥಾಪಿಸಿ ಆಗಸ್ಟ್ 5ರಂದು ಚುನಾವಣೆ ನಡೆಸಿದರು. ಅಶ್ವಿನಿ ನಾಚಪ್ಪ ಅಧ್ಯಕ್ಷರಾದರೆ ರೀತ್ ಅಬ್ರಾಹಂ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಏನು ಹೇಳುತ್ತಿದೆ?
ಈ ಹಗ್ಗ ಜಗ್ಗಾಟದ ಕುರಿತು ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ರಾಜವೇಲು ಅವರನ್ನು ಸಂಪರ್ಕಿಸಿದಾಗ ‘ಬಾಬು ಶೆಟ್ಟಿ ಕಾರ್ಯದರ್ಶಿಯಾಗಿರುವ ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಕೆಎಎನಿಂದ ಮಾನ್ಯತೆ ಪಡೆದಿದೆ. ಬಹಳ ಸಮಯದಿಂದ ಚುನಾವಣೆ ನಡೆಸದ ಕಾರಣ ಅವರಿಗೆ ಚುನಾವಣೆ ನಡೆಸಲು ಸೂಚಿಸಲಾಗಿತ್ತು. ನಿಯಮಗಳ ಅನುಸಾರ ಅವರು ಚುನಾವಣೆ ಮಾಡಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿರುತ್ತಾರೆ. ಆದರೆ ಅಶ್ವಿನಿ ನಾಚಪ್ಪ ಅವರ ತಂಡದಲ್ಲಿರುವ ಅಥ್ಲೆಟಿಕ್ಸ್ ಸಂಸ್ಥೆಗಳು ಇತ್ತೀಚಿಗೆ ಹುಟ್ಟಿಕೊಂಡವುಗಳು. ನಾವು ಬಾಬು ಶೆಟ್ಟಿ ಅವರು ನಡೆಸಿರುವ ಚುನಾವಣೆಗೆ ಮಾನ್ಯತೆ ನೀಡಲಿದ್ದೇವೆ. ‘ ಎಂದರು.
ವಿವಿಧ  ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುಗಳು ಈಗ ಅಧಿಕಾರಕ್ಕಾಗಿ ಅಥವಾ ಪ್ರತಿಷ್ಠೆಗಾಗಿ ಹಗ್ಗ ಜಗ್ಗಾಟ ನಡೆಸಿದರೆ ಅದು ಯುವ ಅಥ್ಲೀಟ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಂಸ್ಥೆಯ ಕ್ರೀಡಾಪಟುಗಳು ಆ ಸಂಸ್ಥೆಯವರು ನಡೆಸುವ ಆಯ್ಕೆ ಟ್ರಯಲ್ಸ್‌ನಲ್ಲಿ  ಪಾಲ್ಗೊಳ್ಳುವಂತಿಲ್ಲ. ಆ ಕ್ರೀಡಾಪಟುಗಳು ಅಭ್ಯಾಸ ನಡೆಸುವ ಕ್ಲಬ್ ನಮಗೆ ಬೆಂಬಲ ಸೂಚಿಸಿಲ್ಲ, ಆದ್ದರಿಂದ ಅವರನ್ನು ಆಯ್ಕೆ ಮಾಡಿಕೊಳ್ಳುವಾಗ ನೋಡಿಕೊಳ್ಳಿ…. ಎಂದು ಎರಡು ಕ್ರೀಡಾ ಸಂಸ್ಥೆಗಳಲ್ಲಿ ಗೊಂದಲ ಹುಟ್ಟಿಕೊಳ್ಳುವುದು ಸಹಜ. ಇದರಿಂದಾಗಿ ಕ್ರೀಡಾಪಟುಗಳಿಗೆ ತೊಂದರೆಯಾಗುತ್ತದೆಯೇ ಹೊರತು ಸಂಸ್ಥೆಗಳಲ್ಲಿ ಕುಳಿತವರಿಗಲ್ಲ.