Monday, April 15, 2024

ಗ್ರೌಂಡೇ ಇಲ್ಲದ ಶಾಲೆಗಳು!

ಸ್ಪೋರ್ಟ್ಸ್ ಮೇಲ್ ವಿಶ್ಲೇಷಣೆ: 

ಶಾಲೆಗಳಲ್ಲಿ ಇತರ ವಿಷಯಗಳ ಅವಧಿಯನ್ನು ಶೇ. ೫೦ರಷ್ಟು ಕಡಿತಗೊಳಿಸಿ ಅದನ್ನು ಕ್ರೀಡೆಗೆ ವಿನಿಯೋಗಿಸಲಾಗುವುದು. ಭಾರತೀಯ ಕ್ರೀಡಾ ಪ್ರಾಧಿಕಾರಗಳಲ್ಲಿರುವ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಅವರಿಗೆ ಸಂದಾಯವಾಗುತ್ತಿದ್ದ ಹಣವನ್ನು ಕ್ರೀಡಾಪಟುಗಳ ಒಳಿತಿಗಾಗಿ ಬಳಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ  ಸಿಂಗ್ ರಾಥೋಡ್ ಹೇಳಿದ್ದಾರೆ.

ಒಬ್ಬ ಕ್ರೀಡಾಪಟುವಾಗಿ ಅವರ ಈ ಯೋಚನೆ ಉತ್ತಮವಾಗಿದೆ. ಶಾಲೆ ಹಾಗೂ ದೈಹಿಕ ಶಿಕ್ಷಣ ಎಂದಾಗ ನನಗೆ ದೈಹಿಕ ಶಿಕ್ಷಕರು ವಿಜಿಲ್ ಊದಿದ್ದನ್ನು ಬಿಟ್ಟರೆ ಬೇರೇನೂ ನೆನಪಾಗದು. ಅವರ ಪೀರಿಯಡ್‌ಗಳನ್ನು ಇತರ ವಿಷಯಗಳ ಶಿಕ್ಷಕರು ಕಸಿದುಕೊಂಡಿದ್ದೇ ಹೆಚ್ಚು. ಈಗ ಕೇಂದ್ರ ಸಚಿವರು ಉತ್ತಮ ತೀರ್ಮಾನ ಕೈಗೊಳ್ಳಲು ಮುಂದಾಗಿದ್ದಾರೆ. ಆದರೆ ದೇಶದ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಆಡಲು ಕ್ರೀಡಾಂಗಣ ಇದೆಯಾ ಎಂದು ಸಚಿವರು ವರದಿ ತರಿಸಿಕೊಂಡು ಆ ನಂತರ ಇಂಥ ತೀರ್ಮಾನ ಕೈಗೊಳ್ಳುತ್ತಿದ್ದರೆ ಉತ್ತಮವಾಗಿರುತ್ತಿತ್ತು.
ಉದಾಹಣೆಗೆ ಕರ್ನಾಟಕವನ್ನೇ ತೆಗೆದುಕೊಂಡಾಗ ಅಂದಾಜು ೩೦೦೦೦ಕ್ಕೂ ಹೆಚ್ಚು ಶಾಲೆಗಳಲ್ಲಿ ಆಡಲು ಅಂಗಣವೇ ಇಲ್ಲ. ಕಳೆದ ವರ್ಷ ರಾಜ್ಯ ಸರಕಾರ ಪ್ರತಿಯೊಂದು ಶಾಲೆಯಲ್ಲೂ ಕ್ರೀಡಾಂಗಣ ಇರುವುದು ಕಡ್ಡಾಯ ಎಂಬ ನಿಯಮ ಜಾರಿಗೆ ತಂತು, ಹಾಗೆಯೇ ಗಾಳಿಗೆ ತೂರಿ ಹೋಯಿತು. ಕ್ರೀಡಾ ಶಿಕ್ಷಣ ಕಡ್ಡಾಯಗೊಳಿಸುವ ಸರಕಾರದ ಯೋಜನೆ ಈ ವರ್ಷದಿಂದ ಜಾರಿಗೆ ಬರಬೇಕಾಗಿತ್ತು. ಆದರೆ ಸಮ್ಮಿಶ್ರ ಸರಕಾರ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಕ್ರೀಡಾಂಗಣವೇ ಇಲ್ಲದಿರುವಾಗ ಕ್ರೀಡಾಪಟುಗಳನ್ನು ಹುಟ್ಟುಹಾಕುವುದಾದರೂ ಹೇಗೆ? ಮಕ್ಕಳು ಮೊಬೈಲ್ ಗೇಮ್ ಆಡಿಕೊಂಡು ನೆಮ್ಮದಿಯಾಗಿರುತ್ತಾರೆ.  ೧೦,೩೧೦ ಕಿರಿಯ ಪ್ರಾಥಮಿಕ ಶಾಲೆ, ೧೪,೮೪೮ ಹಿರಿಯ ಪ್ರಾಥಮಿಕ ಶಾಲೆ, ೩೯೭೯ ಹೈಸ್ಕೂಲ್ ಹಾಗೂ ೧೧೭ ಪ್ರೌಢ ಶಾಲೆಗಳಲ್ಲಿ ಕ್ರೀಡಾಂಗಣಗಳೇ ಇಲ್ಲದಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇದು ಕರ್ನಾಟಕದ ಸ್ಥಿತಿಯಾಗಿದೆ. ಈ ಕಾರಣಕ್ಕಾಗಿಯೇ ಕರ್ನಾಟಕದಲ್ಲಿ ಪದಕ ಗೆಲ್ಲುವವರ ಸಂಖ್ಯೆ ಕಡಿಮೆ ಇದೆ.
ತಮ್ಮ ಮಗು ಶೇ. ೯೦ರ ಮೇಲೆ ಅಂಕ ಗಳಿಸಬೇಕು. ಹೊರತು ಬಿಡುವಿನ ವೇಳೆಯಲ್ಲಿ ಆಟವಾಡಬೇಕು, ಬೌದ್ಧಿಕ ಸಾಮರ್ಥ್ಯದ ಜೊತೆಯಲ್ಲಿ ದೈಹಿಕ ಕ್ಷಮತೆಯೂ ಉತ್ತಮವಾಗಿರಬೇಕು, ಅದಕ್ಕಾಗಿ ತನ್ನ ಮಗು ಸೇರುತ್ತಿರುವ ಶಾಲೆಯಲ್ಲೊಂದರಲ್ಲಿ ಆಟದ ಅಂಗಣ ಇದೆಯೋ ಇಲ್ಲವೋ ಎಂಬುದರ ಬಗ್ಗೆ ನಮ್ಮ ಜನ ಯೋಚಿಸುವುದಿಲ್ಲ. ಶಾಲೆಯ ಸುತ್ತಲೂ ಮುಳ್ಳಿನ ಸರಿಗೆ ಇದ್ದರೆ ಉತ್ತಮ ಎನ್ನುವವರೇ ಹೆಚ್ಚಾಗಿದ್ದಾರೆ. ಮಕ್ಕಳ ಹಕ್ಕು ಕಾಯಿದೆ ಪ್ರಕಾರ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮವಾದ ಆಟದ ಮೈದಾನ ಕಲ್ಪಿಸಬೇಕಿದೆ. ಇಲ್ಲವಾದಲ್ಲಿ ಮಕ್ಕಳ ಹಕ್ಕು ಉಲ್ಲಂಘನೆಯಾದಂತೆ. ನಗರಗಳಲ್ಲಿರುವ ಪ್ರತಿಯೊಂದು ಶಾಲೆಯೂ ಆಟದ ಮೈದಾನ ಹೊಂದಿರಬೇಕೆಂದು
ನ್ಯಾಯಾಲಯವೂ ಆದೇಶ ನೀಡಿತ್ತು. ಆದರೆ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳ ಕೈಯಲ್ಲಿರುವುದರಿಂದ ಇದಕ್ಕೆ ಯಾರೂ ಸೋಪ್ಪು ಹಾಕಲಿಲ್ಲ. ೨೦೦೯ರಲ್ಲಿ ಶಿಕ್ಷಣದ ಹಕ್ಕು ಜಾರಿಗೆ ಬಂದಾಗ ಆಟದ ಅಂಗಣ ಪ್ರತಿಯೊಂದು ಶಾಲೆಯಲ್ಲಿರುವುದು ಕಡ್ಡಾಯ ಎಂದು ಆದೇಶಿಸಲಾಯಿತು. ಆದರೆ ೨೦೧೦-೧೧ರಲ್ಲಿ ಈ ನಿಯಮನ್ನೂ ಸಡಿಲಿಸಿ ಹತ್ತಿರ ಇರುವ ಜಾಗವನ್ನು ಕ್ರೀಡಾಂಗಣವಾಗಿ ಬಳಸಿಕೊಳ್ಳಬಹುದು ಎಂಬ ನಿಯವನ್ನು ಜಾರಿಗೆ ತರಲಾಯಿತು.
ದೈಹಿಕ ಶಿಕ್ಷಕರ ಜವಾಬ್ದಾರಿ ಹೆಚ್ಚಲಿ
ದೈಹಿಕ ಶಿಕ್ಷಕರನ್ನು ಉತ್ತಮ ರೀತಿಯಲ್ಲಿ ವಿನಿಯೋಗಿಸಿಕೊಳ್ಳದಿರುವುದೂ ಕ್ರೀಡಾಸಕ್ತಿ ನಶಿಸಿಹೋಗಲು ಮತ್ತೊಂದು ಕಾರಣ ಎನ್ನಬಹುದು. ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಗೆ ಬೆಲೆಯೇ ಇಲ್ಲ. ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲದವರಂತೆ. ಮಕ್ಕಳಲ್ಲೂ ದೈಹಿಕ ಶಿಕ್ಷಕರು ಅಂದರೆ ಸಲುಗೆ ಜಾಸ್ತಿ. ಇದರಿಂದಾಗಿ ಈ ಹುದ್ದೆಯ ಕಡೆಗೆ ಆಸಕ್ತಿ ತೋರುವವರ ಸಂಖ್ಯೆಯೂ ಕಡಿಮೆಯಾಗಿದೆ. ಖಾಸಗಿಯಾಗಿ ತರಬೇತಿ ನೀಡಿದರೆ ಉತ್ತಮ ರೀತಿಯಲ್ಲಿ ಸಂಪಾದನೆ ಮಾಡಬಹುದು ಎಂದರಿತ ಅನೇಕರು ಸರಕಾರಿ ದೈಹಿಕ ಶಿಕ್ಷಣ ಹುದ್ದೆಯ ಕಡೆಗೆ ಗಮನ ಹರಿಸುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದಾಗಿ ಕರ್ನಾಟಕದ ಅನೇಕ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಸಂಖ್ಯೆಯೂ ಕಡಿಮೆ ಇದೆ. ದೈಹಿಕ ಶಿಕ್ಷಕರ ಜವಾಬ್ದಾರಿ ಹೆಚ್ಚಿಸಿ, ಪ್ರತಿ ವರ್ಷವೂ ಕನಿಷ್ಠ ೫ ರಾಜ್ಯ ಅಥವಾ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಸಿದ್ಧಪಡಿಸಬೇಕು ಎಂಬ ನಿಯಮ ಜಾರಿಗೆ ತಂದರೆ, ಕ್ರೀಡೆಯನ್ನು ಕಡ್ಡಾಯಗೊಳಿಸಿದರೆ ಕೇಂದ್ರ ಕ್ರೀಡಾ ಸಚಿವರು ಕೈಗೊಂಡ ಯೋಜನೆ ಸಾರ್ಥಕವಾಗುತ್ತದೆ. ಇಲ್ಲವಾದಲ್ಲಿ ಇದು ಒಂದು ನಿಯಮವಾಗಿ ಮುಂದುವರಿಯುತ್ತದೆ.

Related Articles