ಫುಟ್ಬಾಲ್: ಅರ್ಜೆಂಟೀನಾಕ್ಕೆ ಸೋಲುಣಿಸಿದ ಭಾರತ

0
209

ಹೊಸದಿಲ್ಲಿ
ಭಾರತದ ಫುಟ್ಬಾಲ್ ಇತಿಹಾಸದಲ್ಲೇ ಇಂದು ಅವಿಸ್ಮರಣೀಯ ದಿನ. ಸ್ಪೇನ್‌ನಲ್ಲಿ ನಡೆಯುತ್ತಿರುವ ಕಾಟಿಫ್ ಕಪ್ -2018ರ ಟೂರ್ನಿಯಲ್ಲಿ ಭಾರತ ತಂಡ ಆರು ಬಾರಿ ಅಂಡರ್ ೨೦ ವಿಶ್ವಕಪ್ ಗೆದ್ದಿರುವ ಅರ್ಜೆಂಟೀನಾ ತಂಡವನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದೆ. ಸೋಮವಾರ ನಡೆದ ಪಂದ್ಯದಲ್ಲಿ ಭಾರತ ತಂಡ 2-1 ಗೋಲುಗಳ ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿತು.

ಪ್ಲಾಯ್ಡ್ ಪಿಂಟೋ ಅವರ ತರಬೇತಿಯಲ್ಲಿ ಪಳಗಿರುವ ತಂಡ, ಇದಕ್ಕೂ ಮುನ್ನ ನಡೆದ ಮರ್ಸಿಯಾ ವಿರುದ್ಧದ ಪಂದ್ಯದಲ್ಲಿ 2-೦, ಮೌರಿತಾನಿಯಾ ವಿರುದ್ಧ 3-೦, ವೆನಿಜುವೆಲಾ ವಿರುದ್ಧದ ಪಂದ್ಯ ಗೋಲಿಲ್ಲದೆ ಡ್ರಾದಲ್ಲಿ ಕಂಡಿತ್ತು. ಆದರೆ ಕಾಟಿಫ್ (ಸಿಒಟಿಐಎಫ್) ಚಾಂಪಿಯನ್‌ಷಿಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಗೆದ್ದಿರುವುದು ಭಾರತದ ಫುಟ್ಬಾಲ್‌ಗೆ ಹೊಸ ಸ್ಫೂರ್ತಿ ಸಿಕ್ಕಂತಾಗಿದೆ.
ಭಾರತದ ಪರ ದೀಪಕ್ ತಾಂಗ್ರಿ (4ನೇ ನಿಮಿಷ) ಆರಂಭದಲ್ಲೇ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. 5೦ ನೇ ನಿಮಿಷದಲ್ಲಿ ಅನಿಕೇತ್ ಜಾದವ್ ರೆಡ್ ಕಾರ್ಡ್ ಪಡೆದು ಅಂಗಣದಿಂದ ಹೊರ ನಡೆದರು. ಈ ಸಂದರ್ಭದಲ್ಲಿ ಭಾರತದ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಅನ್ವರ್ ಅಲಿ (68ನೇ ನಿಮಮಿಷ) ಗಳಿಸಿದ ಗೋಲು ಭಾರತಕ್ಕೆ ಜಯ ತಂದುಕೊಟ್ಟಿತು. ೭೨ನೇ ನಿಮಿಷದಲ್ಲಿ ಅರ್ಜೆಂಟೀನಾ ಒಂದು ಗೋಲು ಗಳಿಸಿದರೂ ಭಾರತದ ಪಾಲಿನ ಐತಿಹಾಸಿಕ ಜಯವನ್ನು ಕಸಿದುಕೊಳ್ಳಲಾಗಲಿಲ್ಲ.
ಭಾರತದ ಅಂಡರ್ 20 ತಂಡ: ಪ್ರಭ್ ಸುಖಾನ್ ಗಿಲ್ (ಗೋಲ್ ಕೀಪರ್), ಆಶೀಶ್ ರಾಯ್, ಜಿತೇಂದ್ರ ಸಿಂಗ್, ಅನ್ವರ್ ಅಲಿ, ಸಾಹಿಲ್ ಪನ್ವರ್, ಬೋರಿಸ್ ಸಿಂಗ್ ತಂಗ್ಜಾಮ್, ಸುರೇಶ್ ಸಿಂಗ್ ವಾಂಗ್ಜಾಮ್, ದೀಪಕ್ ತಂಗ್ರಿ, ಅಮರ್‌ಜಿತ್ ಸಿಂಗ್ ಕಿಯಾಮ್ (ನಾಯಕ), ನಿನ್ತೋಯ್‌ನಂಬಾ ಮೀಟಿ, ಅನಿಕೇತ್ ಜಾದವ್.