Saturday, October 12, 2024

ಅಂಜು ಬಾಬಿ ಜಾರ್ಜ್‌ ಅಸೂಯೆ ಪಡಬೇಡಿ ಹೆಮ್ಮೆ ಪಡಿ

ಭಾರತದ ಶ್ರೇಷ್ಠ ಲಾಂಗ್‌ಜಂಪರ್‌ ಅಂಜು ಬಾಬಿ ಜಾರ್ಜ್‌ ತಾನು ಸ್ಪರ್ಧಿಸಿದ ಕಾಲಘಟ್ಟ ಚೆನ್ನಾಗಿರಲಿಲ್ಲ, ಈಗ ಸ್ಪರ್ಧೆ ಮಾಡಬೇಕಿತ್ತು, ಈಗಿನ ಕ್ರೀಡಾ ಪೀಳಿಗೆಯನ್ನು ಕಂಡಾಗ ಅಸೂಯೆ ಆಗುತ್ತಿದೆ ಎಂದು ಹೇಳಿದ್ದಾರೆ. Anju Bobby George don’t be envy but be proud.

ಅಂಜು ಬಾಬಿ ಜಾರ್ಜ್‌ ಭಾರತಕ್ಕೆ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದುಕೊಟ್ಟ ಮೊದಲ ಅಥ್ಲೀಟ್‌. ಅದಕ್ಕೆ ಸರಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡಿದೆ. ಅರ್ಜುನ, ಖೇಲ್‌ ರತ್ನ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಯಲ್ಲಿ ಕಸ್ಟಮ್ಸ್‌ನಲ್ಲಿ ಅಧಿಕಾರಿಯ ಹುದ್ದೆಯನ್ನೂ ನೀಡಿದೆ. ಇನ್ನೇನು ಬೇಕಿತ್ತು? ಅಸೂಯೆ ಕ್ರೀಡಾಪಟುವಿಗೆ ಒಳ್ಳೆಯದಲ್ಲ. ಅದು ಯಾವುದೇ ಕಾಲಘಟ್ಟವಾಗಿರಲಿ. 1983ರಲ್ಲಿ ಭಾರತ ತಂಡ ವಿಶ್ವಕಪ್‌‌ ಗೆದ್ದಾಗ ಅಂದಿನ ಪಂದ್ಯಶುಲ್ಕ 1500 ರೂ. ಈಗ ಏಕದಿನ ಪಂದ್ಯದ ಪಂದ್ಯಶುಲ್ಕ 15 ಲಕ್ಷ ರೂ. ಅದಕ್ಕೆ ಕಪಿಲ್‌ ದೇವ್‌, ಕಿರ್ಮಾನಿ, ಸುನಿಲ್‌ ಗವಾಸ್ಕರ್‌ ಅವರೆಲ್ಲ ಅಸೂಯೆ ಪಟ್ಟರೆ ಹೇಗೆ? ಜಿ.ಆರ್.‌ ವಿಶ್ವನಾಥ್‌ ಅವರಿಗೆ ಒಂದು ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಪ್ಯಾಕೆಟ್‌ ಒಡೆದು ನೋಡಿದರೆ ಅಯೋಡಿಕ್ಸ್‌ ಡಬ್ಬ ಇದ್ದಿತ್ತು. ಹಾಗಂತ ಅವರು ಈಗಿನ ವ್ಯವಸ್ಥೆಯ ಬಗ್ಗೆ ಅಸೂಯೆ ವ್ಯಕ್ತಪಡಿಸಿಲ್ಲ. ಹಿಂದಿನ ರಾಜಕೀಯ ವ್ಯವಸ್ಥೆಯನ್ನು ತೆಗಳಿ, ಇಂದಿನ ರಾಜಕೀಯ ವ್ಯವಸ್ಥೆಯನ್ನು ಹೊಗಳಿಲ್ಲ.

ಪ್ರತಿಯೊಂದು ಕಾಲಘಟ್ಟದಲ್ಲೂ ಸಾಧನೆ, ಹಣ ಇವುಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಲೇ ಇರುತ್ತವೆ. ಹಿಂದೆ ಅದೆಷ್ಟೋ ಕ್ರೀಡಾ ಸಾಧಕರ ಸಾಧನೆಗೆ ಕೆಲಸವೇ ಸಿಗಲಿಲ್ಲ. ಆವಾಗ ಸಿಗುತ್ತಿದ್ದ ಹಣದ ಮೌಲ್ಯಕ್ಕೆ ಅಂದಿನ ಕಾಲಘಟ್ಟದಲ್ಲಿ ಉತ್ತಮ ಬೆಲೆ ಇದ್ದಿತ್ತು. “ನೀರಜ್‌ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವುದಕ್ಕೆ ಹುದ್ದೆಯಲ್ಲಿ ಭಡ್ತಿ ಸಿಕ್ಕಿತು, ನನಗೆ ಸಿಗಲಿಲ್ಲ,” ಎಂದು ಅಂಜು ಅಸೂಯೆಯಿಂದ ಹೇಳಿದ್ದಾರೆ. “ನಾನು ಸ್ಪರ್ಧಿಸಿದ ಕಾಲಘಟ್ಟ ತಪ್ಪಾಗಿತ್ತು,” ಎಂದಿದ್ದಾರೆ. ಇದಕ್ಕೆ ಯಾರು ಹೊಣೆ? ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ. ನಿಜ. ಈಗ ದೇಶದ ಆರ್ಥಿಕ ಸ್ಥಿತಿ ಸುಧಾರಿಸಿದೆ, ಅಷ್ಟೇ ಹಣವನ್ನೂ ಕ್ರೀಡೆಗೆ ವ್ಯಯಮಾಡುತ್ತಿದ್ದಾರೆ. ಉತ್ತಮ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಇದು ಸ್ವಾಗತಾರ್ಹ. ಆದರೆ 46 ವರ್ಷಗಳ ಹಿಂದಿನ ಬದುಕನ್ನು ಈಗಿನ ಬದುಕಿಗೆ ಹೋಲಿಕೆ ಮಾಡಿಕೊಂಡು ನನಗೆ ಅಸೂಯೆಯಾಗುತ್ತಿದೆ ಅಂದರೆ ಇದು ಯಾವ ಸಂದೇಶವನ್ನು ನೀಡುತ್ತದೆ ಎಂಬುದು ಮುಖ್ಯ.

ಅಂಜು ಬಾಬಿ ಜಾರ್ಜ್‌ ಮಾತನಾಡಬೇಕಾಗಿರುವುದು ಈಗ ಸಿಗುತ್ತಿರುವ ಸೌಲಭ್ಯಗಳ ಬಗ್ಗೆಯಲ್ಲ. ದೇಶದಲ್ಲಿ ಕುಸ್ತಿಪಟುಗಳು ಅನುಭವಿಸುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಬೇಕಿತ್ತು. ರಾಜಕೀಯ ಪಕ್ಷಗಳನನ್ನು ಓಲೈಸುವ ಕೆಲಸವನ್ನು ಕ್ರೀಡಾಪಟುಗಳು ಮಾಡಬಾರದು. 1977ರಲ್ಲಿ ಜನಿಸಿದ ಅಂಜು ಬಾಬಿ ಜಾರ್ಜ್‌ಗೆ ಅಂದಿನ ಸರಕಾರ ನೀಡಬೇಕಾದ ಎಲ್ಲ ಗೌರವವನ್ನೂ ನೀಡಿದೆ. ಈಗಿನ ಸರಕಾರವೂ ನೀಡುತ್ತಿದೆ. 2023ರಲ್ಲಿ ನಿಂತು 2003ರ ಬಗ್ಗೆ ಯೋಚಿಸಿ ನಾನು ತಪ್ಪಾದ ಕಾಲಘಟ್ಟದಲ್ಲಿ ಸಾಧನೆ ಮಾಡಿದ್ದೇನೆಂದರೆ ಅದು ಹಾಸ್ಯಾಸ್ಪದವೇ ಸರಿ. ಕೇಂದ್ರ ಮಾಜಿ ಕ್ರೀಡಾ ಸಚಿವ ಕಿರಣ್‌ ರಿಜಿಜು ಬೆಂಗಳೂರಿನಲ್ಲಿ ಅಕಾಡೆಮಿ ಸ್ಥಾಪಿಸಲು 5ಕೋಟಿ ರೂ. ನೆರವು ನೀಡಿದ್ದಾರೆ. ಅಲ್ಲದೆ ಹಲವಾರು ಕ್ರೀಡಾ ಸಂಸ್ಥೆಗಳಲ್ಲಿ, ಸಮಿತಿಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ದೇಶದಲ್ಲಿ ಯಾವುದೇ ಪ್ರಮುಖ ಕ್ರೀಡಾಕೂಟ ನಡೆದರೂ ಅಂಜು ಬಾಬಿ ಜಾರ್ಜ್‌ ಅವರನ್ನು ಆಹ್ವಾನಿಸಲಾಗುತ್ತದೆ. ಇಷ್ಟೆಲ್ಲ ಫಲಗಳನ್ನು ಅನುಭವಿಸಿ “ನಾನು ತಪ್ಪಾದ ಕಾಲಘಟ್ಟದಲ್ಲಿ ಸಾಧನೆ ಮಾಡಿರುವೆ,” ಅಂದರೆ ಏನರ್ಥ? ಅಸೂಹೆ ಬದಲು ಹೆಮ್ಮೆ ಪಡಬೇಕು.

Related Articles