Tuesday, September 10, 2024

ದಾವೂದ್‌ ಸತ್ತರೆ ಕ್ರಿಕೆಟ್‌ ಬೆಟ್ಟಿಂಗ್‌, ಮ್ಯಾಚ್‌ ಫಿಕ್ಸಿಂಗ್‌ ನಿಲ್ಲಬಹುದೇ?

ಭಾರತದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ಎಂಬುದು ಕಾನೂನುಬಾಹಿರ, ಆದರೂ ಆನ್‌ಲೈನಲ್‌ಲ್ಲಿ ಬೆಟ್ಟಿಂಗ್‌ ಅವ್ಯವಹಾರ ನಡೆಯುತ್ತಲೇ ಇದೆ. ಕ್ರಿಕೆಟ್‌ನಲ್ಲಿ ಬೆಟ್ಟಿಂಗ್‌ ಪರಿಚಯಿಸಿದ್ದೇ D- Company ಅಂದರೆ ಭೂಗತ ದೊರೆ ದಾವೂದ್‌ ಇಬ್ರಾಹಿಂ. ಈಗ ದಾವೂದ್‌ ಇಬ್ರಾಹಿಂಗೆ ವಿಷದ ಆಹಾರ ನೀಡಿ ಆತ ಪಾಕಿಸ್ತಾನದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಸುದ್ದಿ ಹಬ್ಬಿದೆ. ಒಂದು ವೇಳೆ ದಾವೂದ್‌ ಇಬ್ರಾಹಿಂ ಸತ್ತರೆ ಕ್ರಿಕೆಟ್‌ ಬೆಟ್ಟಿಂಗ್‌ ಮತ್ತು ಫಿಕ್ಸಿಂಗ್‌ನಿಂದ ಮುಕ್ತಿ ಹೊಂದಲಿದೆಯೇ? ಖಂಡಿತಾ ಇಲ್ಲ. ಆತನ ಸಹೋದರ ಅನೀಸ್‌ ಇಬ್ರಾಹಿಂ ಈ ದಂಧೆಯನ್ನು ನಿರ್ವಹಿಸುತ್ತಿದ್ದಾನೆ. ಬೆಟ್ಟಿಂಗ್‌ ಮತ್ತು ಫಿಕ್ಸಿಂಗ್‌ ಈಗ ಕ್ರಿಕೆಟ್‌ ಜಗತ್ತನ್ನು ಆವರಿಸಿದೆ. ಬೆಟ್ಟಿಂಗ್‌ ಎಂಬ ಕ್ಯಾನ್ಸರ್‌ ಕ್ರಿಕೆಟ್‌ ಜಗತ್ತನ್ನು ಆವರಿಸಿರುವಾಗ ದಾವೂದ್‌ ಸತ್ತರೂ ಅದರಿಂದ ಯಾವುದೇ ಪ್ರಯೋಜನವಾಗಲಾರದು ಎಂಬಂತಿದೆ ಪರಿಸ್ಥಿತಿ. After Dawood Ibrahim death can we stop betting and match fixing in cricket?

ಈಗ ಕ್ರಿಕೆಟನ್ನು ಆನ್‌ಲೈನ್‌ ಹಾಗೂ ಆಫ್‌ ಲೈನ್‌ ಬೆಟ್ಟಿಂಗ್‌ ಆವರಿಸಿದೆ. 170 ಕೋಟಿಗೂ ಹೆಚ್ಚು ಜನರು ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದು ಮುಂದಿನ ವರ್ಷಗಳಲ್ಲಿ 250-300 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಜಗತ್ತಿನಲ್ಲೇ ಕೆನಡಾದಲ್ಲಿ ಅತಿ ಹೆಚ್ಚು ಮಂದಿ ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ. ಇಲ್ಲಿಯ ಪ್ರಮಾಣ 42.1%. ಪ್ರತಿಯೊಂದು ಏಕದಿನ ಪಂದ್ಯದಲ್ಲಿ ಕನಿಷ್ಠ 200 ದಶಲಕ್ಷ ಡಾಲರ್‌ ಬೆಟ್ಟಿಂಗ್‌ನಲ್ಲಿ ಅಳವಡಿಕೆಯಾಗುತ್ತಿದೆ. 9.9 ಲಕ್ಷ ಕೋಟಿ. ರೂ.ಗಳ ವ್ಯವಹಾರ ಬೆಟ್ಟಿಂಗ್‌ನಲ್ಲಿ ಒಂದು ವರ್ಷಕ್ಕೆ ನಡೆಯುತ್ತಿದೆ ಎಂಬುದು ವರದಿಗಳ ಮೂಲಕ ತಿಳಿದ ಸಂಗತಿ.

ದಾವೂದ್‌ ಇಬ್ರಾಹಿಂ ಮತ್ತು ಆತನ ಸಹಚರರು ಹೇಗೆ ಕ್ರಿಕೆಟ್‌ ಬೆಟ್ಟಿಂಗ್‌ ಜಗತ್ತನ್ನು ಆಳುತ್ತಿದ್ದಾರೆ ಎಂಬುದನ್ನು ಹತ್ತು ವರ್ಷಗಳ ಹಿಂದೆಯೇ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಕ್ರಿಕೆಟ್‌ ಜಗತ್ತಿಗೆ ಇದನ್ನು ನಿಯಂತ್ರಿಸಲು ಆಗಲೇ ಇಲ್ಲ. ಅಲ್ಲಿಲ್ಲಿ ಒಂದಿಷ್ಟು ಪ್ರಮುಖರನ್ನು ಬಂಧಿಸಲಾಯಿತೇ ವಿನಃ ಈ ಬೆಟ್ಟಿಂಗ್‌ ಭೂತವನ್ನು ನಿಯಂತ್ರಿಸಲಾಗಲಿಲ್ಲ.  ಕಾರಣ ಇವರೆಲ್ಲ ಕಾರ್ಯನಿರ್ಹವಿಸುವುದು ಪಾಕಿಸ್ತಾನದಿಂದ.

ದಾವೂದ್‌ ಇಬ್ರಾಹಿಂದ ಬೆಟ್ಟಿಂಗ್‌ ಮತ್ತು ಮ್ಯಾಚ್‌ ಫಿಕ್ಸಿಂಗ್‌‌ ದಂಧೆಯನ್ನು ಸಂಪೂರ್ಣವಾಗಿ ನೋಡಿಕೊಳ್ಳುವುದು ಆತನ ಸಹೋದರ ಎಂದು ಹೇಳಲಾಗುತ್ತಿರುವ ಅನೀಸ್‌ ಇಬ್ರಾಹಿಂ. ಈತನ ಬೆಂಬಲಕ್ಕೆ ನಿಂತು ಕೆಲಸ ಮಾಡುತ್ತಿದ್ದವರು ಸುನಿಲ್‌ ಅಭಿಚಂದಾನಿ ಹಾಗೂ ಸುರೇಶ್‌ ನಾಗ್ರಿ. ಇವರಿಗೆಲ್ಲ ಬೇರೆ ಬೇರೆ ಹೆಸರುಗಳು. ಸುನಿಲ್‌ ಅಭಿಚಂದಾನಿಗೆ ಸುನಿಲ್‌ ದುಬೈ ಎಂದೂ, ನಾಗ್ರಿಗೆ ಜೂನಿಯರ್‌ ಕೋಲ್ಕೊತಾ ಎಂದೂ ಹೆಸರಿತ್ತು. ಅನೀಸ್‌ಗೆ ಇನ್ನಿಬ್ಬರು ಸಹಾಯಕರು ಡಾ. ಚೋಟಾನಿ ಹಾಗೂ ರಮೇಶ್‌ ವ್ಯಾಸ್‌. ವ್ಯಾಸ್‌ ಐಪಿಎಲ್‌ ಋತುವಿನಲ್ಲಿ 92 ಫೋನ್‌ ಲೈನ್‌ಗಳ ನಿರ್ವಹಣೆ ಮಾಡುತ್ತಿದ್ದಾನಂತೆ. ಇದು ಐಪಿಎಲ್‌ ಬೆಟ್ಟಿಂಗ್‌ಗಾಗಿಯೇ ವಿಶೇಷ ವ್ಯವಸ್ಥೆ. ಇದರಲ್ಲಿ 30 ಲೈನ್‌ಗಳು ಪಾಕಿಸ್ತಾನದ ಕಾರ್ಯನಿರ್ವಹಣೆಗಾಗಿಯೇ ಮೀಸಲಾಗಿತ್ತು.

2013ರಲ್ಲಿ ಭಾರತದ ಪೊಲೀಸರು ಈ ರಮೇಶ್‌ ವ್ಯಾಸನನ್ನು ಬಂಧಿಸಿದಾಗ ಈ ಎಲ್ಲ ಮಾಹಿತಿ ಹೊರಬಿತ್ತು. ಇದೇ ವೇಳೆ ಭಾರತದ ಕ್ರಿಕೆಟಿಗರೂ ಬಂಧಿಸಲ್ಪಟ್ಟರು. ಐಪಿಎಲ್‌ನಲ್ಲಿ ಮ್ಯಾಚ್‌ಫಿಕ್ಸಿಂಗ್‌ ಹೇಗೆ ನಡೆಯುತ್ತಿದೆ ಎಂಬುದು ಇದರಿಂದ ಬಯಲಾಯಿತು. ಕಾರು ಮತ್ತು ದುಬಾರಿ ಗಿಫ್ಟ್‌, ಹಣ ಮತ್ತು ಹೆಣ್ಣು ಮಕ್ಕಳಿಗಾಗಿ ಈ ಕ್ರಿಕೆಟಿಗರು ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ತೊಡಿಗಿಸಿಕೊಳ್ಳುತ್ತಿದ್ದರು ಎಂಬ ವಿಷಯ 2013ರಲ್ಲಿ ಬುಕ್ಕಿಗಳನ್ನು ಬಂದಿಸಿ ಶಿಕ್ಷಿಸಿದಾಗ ಬೆಳಕಿಗೆ ಬಂತು. ಇವೆಲ್ಲವನ್ನೂ ದಾವೂದ್‌ ಇಬ್ರಾಹಿಂ ಪಾಕಿಸ್ತಾನದಲ್ಲೇ ಕುಳಿತು ನಿಯಂತ್ರಿಸುತ್ತಿದ್ದ ಎಂಬುದೂ ಸ್ಪಷ್ಟವಾಯಿತು.

ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಸಿಕ್ಕಬಿದ್ದ ಭಾರತದ ಕ್ರಿಕೆಟಿಗ ಅಜಿತ್‌ ಚಾಂಡಿಲಾನನ್ನು ಸಂಪರ್ಕಿಸಿದ್ದು ಮುಂಬೈ ಮೂಲದ ಬುಕ್ಕಿ ಚಂದೇಶ್‌ ಪಟೇಲ್‌. ಗುರ್ಗಾಂವ್‌ನ ಹೊಟೇಲೊಂದರಲ್ಲಿ ಡೀಲ್‌ ನಡೆಯಿತು. ಶ್ರೀಶಾಂತ್‌ ಮತ್ತು ಅಮಿತ್‌ ಕೂಡ ಈ ಗ್ಯಾಂಗಿನಲ್ಲಿದ್ದರು. ಇದರ ಪರಿಣಾಮ ಏನಾಯಿತೆಂಬುದು ಎಲ್ಲರಿಗೂ ತಿಳಿದ ಸಂಗತಿ.

ಆದರೆ ಈಗಲೂ ದಾವೂದ್‌ ಇಬ್ರಾಹಿಂ ಮತ್ತು ಆತನ ಸಹಚರರು ಇತರ ಸಮಾಜ ವಿರೋಧಿ ಚಟುವಟಿಕೆಗಳ ಜೊತೆಯಲ್ಲಿ ಕ್ರಿಕೆಟ್‌ ಬಟ್ಟಿಂಗ್‌ ದಂಧೆಯನ್ನು ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದಾರೆಂದು ವರದಿಗಳು ಹೇಳುತ್ತಿವೆ. ಏಕೆಂದರೆ ಕ್ರಿಕೆಟ್‌ ಬೆಟ್ಟಿಂಗ್‌ ಈಗ ಜಾಗತಿಕ ಮಟ್ಟದಲ್ಲಿ 5,83,766 ಕೋಟಿ ರೂ. ವ್ಯವಹಾರವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.

Related Articles