ಒಂದೇ ಮನೆಯಿಂದ ನಾಲ್ವರು ಕ್ರಿಕೆಟಿಗರು ದೇಶದ ವಿವಿಧ ತಂಡಗಳಲ್ಲಿ ರಣಜಿ ಆಡಿದ್ದಾರೆಂದರೆ ಅದು ಎಷ್ಟೊಂದು ಹೆಮ್ಮೆಯ ಸಂಗತಿ. ಅದರಲ್ಲೂ ಕನ್ನಡಿಗರು ಈ ಸಾಧನೆ ಮಾಡಿದ್ದಾರೆಂದರೆ ನಾವೆಲ್ಲರೂ ಖುಷಿ ಪಡುವ ವಿಷಯ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಬಿ.ಸಿ. ಆಳ್ವಾ ಅವರ ಜನ್ಮಶತಮಾನೋತ್ಸವದ ವರ್ಷವಿದು. 1923, ಸೆಪ್ಟೆಂಬರ್ 23 ರಂದು ಜನಿಸಿದ ಬಿ.ಸಿ. ಆಳ್ವಾ ಅವರು ಭಾರತದ ಪರ ಆಡಿದವರು. ಮತ್ತು ಅವರ ಸಹೋದರರು ರಣಜಿಯಲ್ಲಿ ಮಿಂಚಿದವರು. ಒಂದೇ ಮನೆಯಂಗಣದಲ್ಲಿ ಒಂದಾಗಿ ಆಡಿದ ನಾಲ್ವರು ಸಹೋದರರನ್ನು ಕನ್ನಡ ನಾಡಿನ ಕ್ರೀಡಾ ಪ್ರೇಮಿಗಳು ಮರೆಯಲು ಅಸಾಧ್ಯ. Always remembering all Four Alva’s Brothers of Indian Cricket.
ಕಾರ್ಕಳದ ನಿಟ್ಟೆ ಕ್ಯಾಂಪಸ್‌ನಲ್ಲಿರುವ ಬಿ.ಸಿ. ಆಳ್ವಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನೋಡಿದಾಗ ಆ ನಾಲ್ವರೂ ಸಹೋದರರನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳಬೇಕೆನಿಸಿತು. ಬೆಳ್ಳಿಪ್ಪಾಡಿ ಚಂದ್ರಹಾಸ ಆಳ್ವಾ (ಬಿ,ಸಿ. ಆಳ್ವಾ ಎಂದೇ ಖ್ಯಾತಿ), ಶ್ರೀಧರ್ ಆಳ್ವಾ, ಯಶವಂತ್ ಆಳ್ವಾ ಮತ್ತು ಹೇಮಚಂದ್ರ ಆಳ್ವಾ. ಈ ನಾಲ್ವರು ಸಹೋದರರೇ ಕರಾವಳಿಯಲ್ಲಿ ಕ್ರಿಕೆಟ್‌ಗೆ ಮುನ್ನುಡಿ ಬರೆದವರು. ಇವರು ಪುತ್ತೂರಿನ ಪ್ರತಿಷ್ಠಿತ ಬೆಳ್ಳಿಪ್ಪಾಡಿ ಕುಟುಂಬಕ್ಕೆ ಸೇರಿದವರು.
ಚಿಕ್ಕಂದಿನಲ್ಲಿ ತಂದೆ ಮಂಗಳೂರಿನ ಕೊಡಿಯಾಲ ಗುತ್ತುವಿನ ರಾಮಯ್ಯ ಆಳ್ವಾ ಅವರ ಮನೆಯಲ್ಲೇ ಇರುತ್ತಿದ್ದ ಈ ಸಹೋದರರು ನಂತರ ದೇಶದ ವಿವಿಧ ಭಾಗಗಳಲ್ಲಿ ಬದುಕನ್ನು ಕಟ್ಟಿಕೊಂಡವರು. ತಾಯಿ ಚೆನ್ನಮ್ಮ ಹೆಗ್ಗಡ್ತಿ. ಈ ಸಹೋದರರಿಗೆ ಇಬ್ಬರು ಅಕ್ಕಂದರಿರು, ಬೆಳ್ಳಿಪ್ಪಾಡಿ ಕಲ್ಯಾಣಿ ಶೆಟ್ಟಿ ಹಾಗೂ ಮೋಹಿನಿ ರೈ. ಅಂದಿನ ಕಾಲದಲ್ಲಿ ಕೊಡಿಯಾಲ ಗುತ್ತು ಪ್ರತಿಷ್ಠಿತ ಮನೆತನವಾಗಿತ್ತು. ಮನೆಯ ಚಾವಡಿ ಪ್ರವೇಶಿಸುತ್ತಿದ್ದಂತೆ ಬೃಹತ್ ಮೊಗಸಾಲೆ ಆಕರ್ಷಣೀಯವಾಗಿತ್ತು. ಈ ಮೊಗಸಾಲೆಯಲ್ಲೇ ನಾಲ್ವರು ಆಳ್ವಾ ಸಹೋದರರು ಚಿಕ್ಕಂದಿನಲ್ಲಿ ಕ್ರಿಕೆಟ್ ಆಡುತ್ತಿದ್ದರು. ರಜಾ ದಿನಗಳಲ್ಲಿ ಇಲ್ಲಿ ಕ್ರಿಕೆಟ್ ಹಬ್ಬ. ಶ್ರೀಧರ್ ಆಳ್ವಾ ಹೊಡೆದ ಚೆಂಡು ಮನೆಯ ಮಹಡಿಯನ್ನು ದಾಟಿ ಹೊರಗೆ ಹೋಗುತ್ತಿತ್ತು. ಚೆಂಡು ಹುಡುಕಿ ತರುವುದೇ ದೊಡ್ಡ ಸಾಹಸವಾಗಿತ್ತು. ತಂದೆ ರಾಮಯ್ಯ ಆಳ್ವಾ ಅವರಿಗೆ ಕ್ರಿಕೆಟ್‌ನಲ್ಲಿ ಬಹಳ ಆಸಕ್ತಿ. ನಾಲ್ವರಲ್ಲಿ ಬಿ.ಸಿ. ಆಳ್ವಾ ಅವರನ್ನು ಉತ್ತಮ ಕ್ರಿಕೆಟಿಗನನ್ನಾಗಿ ಮಾಡಬೇಕೆಂಬ ಹಂಬಲ ಅವರಿಗೆ ಬಹಳವಾಗಿತ್ತು. ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದರೆ ಮಗನ ಆಟವನ್ನು ನೋಡಲು ರಾಮಯ್ಯ ಅವರು ಹಾಜರಿರುತ್ತಿದ್ದರು. ಆಗ ಮಂಗಳೂರಿನಲ್ಲಿ ಜನಪ್ರಿಯವಾಗಿದ್ದ ಪೆಟ್‌ಲ್ಯಾಂಡ್ ಪೆಟ್ ಸ್ಪೋರ್ಟ್ಸ್ ಅಸೋಸಿಯೇಷನ್ (PPSA) ನಲ್ಲಿ ಈ ನಾಲ್ವರು ಸಹೋದರರು ಪ್ರಮುಖ ಆಟಗಾರರಾಗಿದ್ದರು. ಉತ್ತಮ ಆಟ ಪ್ರದರ್ಶಿಸಿ ಲೀಗ್ ಪಂದ್ಯಗಳನ್ನು ಗೆಲ್ಲುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು.
ಬಿ.ಸಿ, ಆಳ್ವಾ ಅವರು ದಕ್ಷಿಣ ವಲಯದ ಪರ ಆಡುತ್ತ, ಮದ್ರಾಸ್ ಮತ್ತು ಮೈಸೂರು ರಾಜ್ಯಗಳ ಪರ ಆಡುತ್ತಿದ್ದರು. ರಣಜಿ ಪಂದ್ಯಗಳಲ್ಲಿ ಮಿಂಚಿದವರು. ಮೈಸೂರು ರಣಜಿ ತಂಡದ ನಾಯಕರಾಗಿಯೂ, ಮದ್ರಾಸ್ ಪ್ರೆಸಿಡೆನ್ಸಿ ಪರವೂ ಆಡಿದ್ದರು. ಕಾಮನ್ವೆಲ್ತ್ ತಂಡ ಭಾರತಕ್ಕೆ ಬಂದಾಗ ಬಿ.ಸಿ. ಆಳ್ವಾ ಎರಡು ಟೆಸ್ಟ್ ಪಂದ್ಯಗಳನ್ನಾಡಿದ್ದರು. 1944-45 ರಿಂದ 1954-55 ರ ವರೆಗೆ ಮದ್ರಾಸ್ ಪರ ರಣಜಿ ಪಂದ್ಯವನ್ನಾಡಿದ್ದ ಬಿ.ಸಿ. ಆಳ್ವಾ, 1957-58 ಮತ್ತು 1958-59ರ ಋತುವಿನಲ್ಲಿ ಮೈಸೂರು ರಾಜ್ಯದ ಪರ ರಣಜಿ ಪಂದ್ಯಗಳನ್ನಾಡಿದ್ದರು. 1951-52ರಲ್ಲಿ ಭಾರತ ತಂಡದ ಪರ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳನ್ನೂ ಆಡಿದ್ದರು. ದಕ್ಷಿಣ ಕನ್ನಡದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ಬಿ.ಸಿ. ಆಳ್ವಾ ಅವರಿಗೆ ಸಲ್ಲುತ್ತದೆ. ಉತ್ತಮ ಆಲ್ರೌಂಡರ್ ಆಗಿದ್ದ ಬಿ.ಸಿ.ಆಳ್ವಾ 40 ರಣಜಿ ಪಂದ್ಯಗಳನ್ನಾಡಿದ್ದರು. 1488 ರನ್ ಹಾಗೂ 74 ವಿಕೆಟ್ ಗಳಿಸಿರುತ್ತಾರೆ. 141 ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಒಟ್ಟು 3 ಶತಕ ಹಾಗೂ 6 ಅರ್ಧ ಶತಕ ಅವರ ದಾಖಲೆಯಲ್ಲಿದೆ. 111 ರನ್‌ಗೆ 6 ವಿಕೆಟ್ ಗಳಿಸಿದ್ದು ಬೌಲಿಂಗ್‌ನಲ್ಲಿ ಅವರ ಉತ್ತಮ ಸಾಧನೆಯಾಗಿತ್ತು. 4 ಬಾರಿ 5 ವಿಕೆಟ್ ಗಳಿಕೆಯ ಸಾಧನೆ ಮಾಡಿರುತ್ತಾರೆ. ಉತ್ತಮ ಫೀಲ್ಡರ್ ಕೂಡ ಆಗಿದ್ದ ಬಿ.ಸಿ. ಆಳ್ವಾ ಅವರು 22 ಕ್ಯಾಚ್ ಕಬಳಿಸಿದ್ದಾರೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಬಿ.ಸಿ. ಆಳ್ವಾ ಅವರು ಹಲವು ವರ್ಷಗಳ ಕಾಲ ಕರ್ನಾಟಕ ವಿದ್ಯುತ್ ಶಕ್ತಿ ನಿಗಮದಲ್ಲಿ ಮುಖ್ಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದರು. ಆಗ ಕರ್ನಾಟಕದಲ್ಲಿ ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದರು. ಬಾಕ್ರಾ ನಂಗಲ್ ಅಣೆಕಟ್ಟು ನಿರ್ಮಾಣ ಮಾಡುವಾಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತಮಗೆ ಉತ್ತಮವಾಗಿ ಕಾರ್ಯನಿರ್ವಹಿಸುವ, ಪ್ರಾಮಾಣಿಕ ಎಂಜಿನಿಯರ್ ಒಬ್ಬರನ್ನು ಕಳುಹಿಸಿಕೊಡಿ ಎಂದು ದೇವರಾಜು ಅರಸು ಅವರನ್ನು ಕೇಳಿಕೊಂಡಿದ್ದರು. ಆಗ ಅರಸು ಅವರು ಆಯ್ಕೆ ಮಾಡಿದ್ದು ಬಿ.ಸಿ. ಆಳ್ವಾ ಅವರನ್ನು ಕಳುಹಿಸಿದರು. ಬಾಕ್ರಾ ನಂಗಲ್ ಅಣೆಕಟ್ಟು ಯೋಜನೆಯ ನಿರ್ವಹಣೆ ಜವಾಬ್ದಾರಿ ಹೊತ್ತಿರುವ Bhakra Beas Management Board (BBMB)ನ ಚೇರ್ಮನ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಭಾರತದ ಪ್ರಸಿದ್ಧ ಬಾಕ್ರಾ ನಂಗಾಲ್ ಅಣೆಕಟ್ಟು ನಿರ್ಮಿಸುವಲ್ಲಿ ಅವರ ಸೇವೆ ಮಹತ್ತರವಾಗಿತ್ತು.1982 ನವೆಂಬರ್ 6ರಂದು ಬಿ,ಸಿ. ಆಳ್ವಾ ನಮ್ಮನ್ನಗಲಿದರು. ಕಾರ್ಕಳದ ನಿಟ್ಟೆ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಬಿ,ಸಿ ಆಳ್ವಾ ಅವರ ಹೆಸರಿನಲ್ಲಿ ಕ್ರಿಕೆಟ್ ಅಂಗಣವನ್ನು ನಿರ್ಮಿಸಲಾಗಿದ್ದು ಉತ್ತಮ ಆಧುನಿಕ ಸೌಲಭ್ಯಗಳಿಂದ ಕೂಡಿದೆ.
ಶ್ರೀಧರ ಆಳ್ವಾ: ಬಿ.ಸಿ. ಆಳ್ವಾ ಅವರು ಎರಡು ರಾಜ್ಯಗಳ ಪರ ರಣಜಿ ಆಡಿದ್ದರೆ, ಅವರ ಸಹೋದರ ಶ್ರೀಧರ್ ಆಳ್ವಾ ಕೂಡ ಎರಡು ರಾಜ್ಯಗಳ ಪರ ರಣಜಿ ಆಡಿರುತ್ತಾರೆ. ಮೊದಲು ಮದ್ರಾಸ್ ರಾಜ್ಯದ ಪರ ಆಡಿ ಬಳಿಕ ಬೊಕಾರೋ ಉಕ್ಕಿನ ನಿಗಮದಲ್ಲಿ ಕೆಲಸ ಮಾಡಬೇಕಾದ ಕಾರಣ ಒರಿಸ್ಸಾ ಪರವೂ ರಣಜಿ ಆಡಿದ್ದರು. ಪೂರ್ವ ವಲಯ ಪರವೂ ಆಡಿದ್ದರು. ಒಡಿಶಾ ತಂಡದ ನಾಯಕನಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು. 21 ಪ್ರಥಮದರ್ಜೆ ಆಡಿರುವ ಶ್ರೀಧರ್ ಆಳ್ವಾ 961 ರನ್ ಗಳಿಸಿದ್ದರು. ಅದರಲ್ಲಿ 2 ಶತಕ ಹಾಗೂ 5 ಅರ್ಧ ಶತಕ ಸೇರಿತ್ತು. ಶ್ರೀದರ್ ಕೂಡ ಉತ್ತಮ ಆಲ್ರೌಂಡರ್ ಒಟ್ಟು 33 ವಿಕೆಟ್ ಗಳಿಸಿದ್ದರು. ಇನ್ನಿಂಗ್ಸ್ ಒಂದರಲ್ಲೇ 74 ರನ್‌ಗೆ 5 ವಿಕೆಟ್ ಹಾಗೂ ಪಂದ್ಯವೊಂದರಲ್ಲೇ 90 ರನ್‌ಗೆ 5 ವಿಕೆಟ್ ಗಳಿಸಿದ್ದು ಅವರ ಉತ್ತಮ ಬೌಲಿಂಗ್ ಸಾಧನೆ. ಎರಡು ಬಾರಿ ಅವರು ಐದು ವಿಕೆಟ್ ಗಳಿಕೆಯ ಯಶಸ್ಸು ಕಂಡಿದ್ದರು. 1991 ನವೆಂಬರ್ 5 ರಂದು ಬಿ, ಶ್ರೀಧರ್ ಆಳ್ವಾ ನಮ್ಮನ್ನಗಲಿದರು.
ಯಶವಂಥ ಆಳ್ವಾ:
ಬಿ.ಸಿ ಆಳ್ವಾ ಹಾಗೂ ಶ್ರೀಧರ ಆಳ್ವಾ ಮಧ್ಯಮ ವೇಗಿಗಳಾಗಿದ್ದರೆ ಬೆಳ್ಳಿಪ್ಪಾಡಿ ಯಶವಂಥ್ ಆಳ್ವಾ ಆಫ್ ಬ್ರೇಕ್ ಸ್ಪಿನ್ನರ್. ಋತುವಿನೊಂದರಲ್ಲೇ ಅತಿ ಹೆಚ್ಚು ವಿಕೆಟ್ ಗಳಿಕೆಯ ಸಾಧನೆ ಮಾಡಿದ್ದಾರೆ. 1958/59, 1961-62ರ ಋತುವಿನಲ್ಲಿ ಮೈಸೂರು ರಣಜಿ ತಂಡದ ಪರ ಆಡಿದ್ದಾರೆ. ಮುಂಬೈ ಪರವೂ ರಣಜಿ ಆಡಿದ ಹಿರಿಮೆ ಯಶವಂಥ ಅವರದ್ದು. ಮಂಗಳೂರಿನಲ್ಲಿ ನಡೆದ ಎರಡೂ ರಣಜಿ ಪಂದ್ಯಗಳಲ್ಲಿ ಬಿ,ಸಿ. ಆಳ್ವಾ ಮತ್ತು ಬೆಳ್ಳಿಪ್ಪಾಡಿ ಯಶವಂಥ್ ಆಳ್ವಾ ಆಡಿದ್ದಾರೆಂಬುದು ವಿಶೇಷ. ಒಂದು ಪಂದ್ಯದಲ್ಲಿ ಬಿ.ಸಿ. ಆಳ್ವಾ ನಾಯಕರಾಗಿದ್ದರು. ಬೌಲಿಂಗ್‌ನಲ್ಲಿ 57 ವಿಕೆಟ್ ಗಳಿಕೆಯ ಸಾಧನೆ ಯಶವಂಥ್ ಅವರದ್ದು ಆಡಿರುವ 14 ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಗಳಿಸಿದ್ದು 122 ರನ್. ಬೌಲಿಂಗ್‌ನಲ್ಲಿ 37 ರನ್‌ಗೆ 7 ವಿಕೆಟ್ ಗಳಿಸಿದ್ದು ಉತ್ತಮ ಸಾಧನೆ. 3 ಬಾರಿ 5 ವಿಕೆಟ್ ಗಳಿಕೆಯ ಸಾಧನೆ ಮತ್ತು ಪಂದ್ಯವೊಂದರಲ್ಲೇ 10 ವಿಕೆಟ್ ಗಳಿಸಿರುವುದು ಯಶವಂಥ್ ಅವರ ಹೆಸರಿನಲ್ಲಿ ದಾಖಲಾಗಿದೆ. ಮೈಸೂರು ರಾಜ್ಯ ಮತ್ತು ಕರ್ನಾಟಕ ರಾಜ್ಯ ಎರಡೂ ತಂಡಗಳಿಗೂ ಆಡಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ವಿಜೇತ ಸಾಧಕ. 1984ರಲ್ಲಿ ಯಶವಂಥ್ ನಮ್ಮನ್ನಗಲಿದರು.
ಬೆಳ್ಳಿಪ್ಪಾಡಿ ಹೇಮಚಂದ್ರ ಆಳ್ವಾ:
ರಾಷ್ಟ್ರ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ವಲಯ ಶಾಲಾ ತಂಡವನ್ನು ನಾಯಕನಾಗಿ ಮುನ್ನಡೆಸಿದ ಹೇಮಚಂದ್ರ ಆಳ್ವಾ, ಕೇರಳ ಪರ ರಣಜಿ ಪಂದ್ಯವನ್ನಾಡಿರುತ್ತಾರೆ. ಉಳಿದ ಸಹೋದರರಂತೆ ವೃತ್ತಿಪರ ಕ್ರಿಕೆಟ್‌ನಲ್ಲಿ ಮುಂದುವರಿಯದೆ ಕೃಷಿಯಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡರು.
ಹಿರಿಯರ ಹೆಸರನ್ನು ಜೀವಂತವಾಗಿರಿಸಿದ ವಿಜಯ್ ಆಳ್ವಾ:
ಬೆಳ್ಳಿಪ್ಪಾಡಿ ಶ್ರೀಧರ ಆಳ್ವಾ ಅವರ ಕಿರಿಯ ಮಗ ವಿಜಯ ಆಳ್ವಾ. ಅತ್ಯಂತ ಸರಳ, ಸಜ್ಜನಿಕೆಯ ಉಪನ್ಯಾಸಕ. ಉತ್ತಮ ಸ್ಪಿನ್ ಬೌಲರ್. ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ನಾಯಕ. ಕರ್ನಾಟಕ ಕ್ರಿಕೆಟ್ ವಲಯದಲ್ಲಿ ಎಲ್ಲರೂ ಗೌರವಿಸುವ ವ್ಯಕ್ತಿತ್ವ. ಈ ನಾಲ್ವರು ಹಿರಿಯ ಬೆಳ್ಳಿಪ್ಪಾಡಿ ಆಳ್ವಾ ಸಹೋದರರ ಹೆಸರನ್ನು ಮತ್ತಷ್ಟು ಜೀವಂತವಾಗಿರಿಸಿದ್ದು ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ. [Bellipady Alva’s Cricket Academy]. ಕರಾವಳಿಯಲ್ಲಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ, ಉತ್ತಮ ರೀತಿಯಲ್ಲಿ ತರಬೇತಿ ನೀಡುತ್ತಿರುವ ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯು BACA ಎಂದೇ ಜನಪ್ರಿಯಗೊಂಡಿದೆ. ವಿಜಯ ಆಳ್ವಾ ಅವರ ಪತ್ನಿ ಅನಿತಾ ಆಳ್ವಾ ಅವರು ಈ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರು. ಗ್ರಾಮೀಣ ಪ್ರದೇಶದ ಯುವ ಕ್ರಿಕೆಟಿಗರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 2018ರಲ್ಲಿ ಹುಟ್ಟಿಕೊಂಡ ಈ ಅಕಾಡೆಮಿ ತನ್ನ ಉದ್ದೇಶ ಹಾಗೂ ಗುರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ. ಹಂಗಾರಕಟ್ಟೆಯ ಚೇತನ ಪ್ರೌಢಶಾಲಾ ಅಂಗಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕಾಡೆಮಿಯಲ್ಲಿ ನೂರಾರು ಬಾಲಕ, ಬಾಲಕಿಯರು ತರಬೇತಿ ಪಡೆಯುತ್ತಿದ್ದಾರೆ. ಕಾಂಕ್ರೀಟ್ ಪಿಚ್‌ನಿಂದ ಕೂಡಿದ ನೆಟ್. ಆಸ್ಟ್ರೋ ಟರ್ಫ್ ಪಿಚ್ ಹಾಗೂ ಎಲೆಕ್ಟ್ರಿಕಲ್ ಬೌಲಿಂಗ್ ಮೆಷಿನ್ ಮೂಲಕ ಅಕಾಡೆಮಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಅಕಾಡೆಮಿಯಲ್ಲಿ ತರಬೇತಿ ಪಡೆದ ಅನೇಕ ಕ್ರಿಕೆಟಿಗರು ವಿಶ್ವವಿದ್ಯಾನಿಲಯ, ವಲಯ ಮಟ್ಟ ಹಾಗೂ ರಾಜ್ಯಮಟ್ಟದ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ಈ ಅಕಾಡೆಮಿಯ ಇನ್ನೊಂದು ವಿಶೇಷವೆಂದರೆ ವರ್ಷದಲ್ಲಿ ಹಲವು ಬಾರಿ ಮಾಜಿ ಹಾಗೂ ಹಾಲಿ ಕ್ರಿಕೆಟಿಗರನ್ನು ಅಕಾಡೆಮಿಗೆ ಕರೆಸಿ ಮಕ್ಕಳಲ್ಲಿ ಹೊಸ ಉತ್ಸಾಹವನ್ನು ತುಂಬುವುದು.
ವಿಜಯ ಆಳ್ವಾ ಅವರ ಸಹೋದರ ಅಜಯ್ ಆಳ್ವಾ ಕೂಡ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರುತ್ತಾರೆ. ಸದ್ಯ ಐವರಿಕೋಸ್ಟಾದಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿ.ಸಿ. ಆಳ್ವಾ ಅವರ ಮಗ ಅಜಿತ್ ಸಿ. ಆಳ್ವಾ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಮಂಗಳೂರಿನ ಲಮಿನಾ ಸಸ್ಪೆನ್ಷನ್ ಪ್ರೈವೇಟ್ ಲಿ. ಇದರ ಜನರಲ್ ಮ್ಯಾನೇಜರ್ ಆಗಿದ್ದು, ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಉತ್ತಮ ಕ್ರಿಕೆಟಿಗರಾಗಿದ್ದ ಅಜಿತ್ ಸಿ. ಆಳ್ವಾ 22ರ ವಯೋಮಿತಿಯ ಕರ್ನಾಟಕ ರಾಜ್ಯ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಒಂದು ಋತುವಿನಲ್ಲಿ ಕರ್ನಾಟಕ ರಣಜಿ ತಂಡದಲ್ಲಿ ಸ್ಥಾನ ಪಡೆದಿರುತ್ತಾರೆ. ಕೆಲವು ವರ್ಷಗಳ ಕಾಲ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (ಬಿಯುಸಿಸಿ) ಪರ ಆಡಿರುವ ಅಜಿತ್ ಆಳ್ವಾ, ಸೀನಿಯರ್ ಡಿವಿಜನ್ ಕ್ರಿಕೆಟ್‌ನಲ್ಲಿ ಮಿಂಚಿರುತ್ತಾರೆ. ಕ್ರಿಕೆಟ್ ಜೊತೆಯಲ್ಲಿ ಬ್ಯಾಡ್ಮಿಂಟನ್‌ಲ್ಲೂ ಮಿಂಚಿರುವ ಅಜಿತ್ ಆಳ್ವಾ ಅವರು ಸಿಡ್ನಿ ಫ್ರಾಂಕ್ ಅವರೊಂದಿಗೆ ಡಬಲ್ಸ್ ಆಡಿದ್ದರು. ಬಿ.ಸಿ. ಆಳ್ವಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಶಕುಂತಲಾ ಆಳ್ವಾ ಹಾಗೂ ಆರತಿ ಆಳ್ವಾ. ಶಕುಂತಲಾ ಆಳ್ವಾ ಅವರು ವಿಜಯ ಬ್ಯಾಂಕ್‌ನಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿಯಾಗಿದ್ದು, ಆರತಿ ಆಳ್ವಾ ಪತಿಯ ಆಸ್ಪತ್ರೆಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ.
ಹೇಮಚಂದ್ರ ಆಳ್ವಾ ಅವರ ಮಕ್ಕಳಲ್ಲಿ ಹಿರಿಯರಾದ ರಾಮ್‌ಪ್ರಸಾದ್ ಆಳ್ವಾ ನಿಟ್ಟೆಯಲ್ಲಿ ಎಂಜಿನಿಯರಿಂಗ್ ಪದವಿ ಗಳಿಸಿದ್ದು, ಕಿರಿಯ ಮಗ ಕೃಷ್ಣಪ್ರಸಾದ್ ಆಳ್ವಾ ಬಿಬಿಎಂ ಪದವೀಧರ. ಇಬ್ಬರೂ ಕಾಲೇಜು ಮಟ್ಟದಲ್ಲಿ ಕ್ರಿಕೆಟ್ ಆಟಗಾರರು.
ಹೀಗೆ ಬೆಳ್ಳಿಪ್ಪಾಡಿ ಕುಟುಂಬದ ಕ್ರಿಕೆಟ್ ಬಂಧ ನಿರಂತರವಾಗಿ ಸಾಗಿದೆ. ತಮ್ಮ ತಂದೆ ಹಾಕಿ ಕೊಟ್ಟ ಹಾದಿಯಲ್ಲಿಯೇ ಅವರ ಮಕ್ಕಳು ವೃತ್ತಿ ಬದುಕಿನ ಜೊತೆಯಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕ್ರೀಡೆಯನ್ನು ಸಾಕುತ್ತಿದ್ದಾರೆ. ಬಿ.ಸಿ ಆಳ್ವಾ ಅವರ ಜನ್ಮಶತಮಾನೋತ್ಸವವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಕ್ರಿಕೆಟ್ ಕುಟುಂಬವೊಂದರ ನೆನಪು ಮಾಡಿಕೊಳ್ಳುವುದು ಕ್ರೀಡಾಭಿಮಾನಿಗಳಾದ ನಮ್ಮೆಲ್ಲರ ಕರ್ತವ್ಯ. ಇದು ನಾವು ಅವರಿಗೆ ನೀಡುವ ಗೌರವ.
ಮಾಹಿತಿ: ಬೆಳ್ಳಿಪ್ಪಾಡಿ ಸಿದ್ಯಾಳ ಮನೆ [Bellipady Sidyala House] ಮತ್ತು ಬೆಳ್ಳಿಪ್ಪಾಡಿ ರಾಮಮೋಹನ್ ರೈ [Bellipady Rammohan Rai, Bangalore]