Saturday, October 12, 2024

ಕರುಣ್‌ ನಾಯರ್‌ ಮತ್ತೆ ಭಾರತದ ಪರ ಆಡಬೇಕು

ಕ್ರಿಕೆಟ್‌ ಬದುಕಿನಲ್ಲಿ ಏರಿಳಿತಗಳು ಇದ್ದೇ ಇರುತ್ತದೆ. ಅಂದ ಮಾತ್ರಕ್ಕೆ ಒಬ್ಬ ಉತ್ತಮ ಆಟಗಾರನನ್ನು ತಂಡದಿಂದ ಹೊರಗಿಡುವ ತೀರ್ಮಾನ ಉತ್ತಮವಾದುದಲ್ಲ. ಕರುಣ್‌ ನಾಯರ್‌ (Karun Nair) ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಭಾರತದ ಎರಡನೇ ಆಟಗಾರ ಇಂದು ತನಗೆ ಕ್ರಿಕೆಟ್‌ ಬದುಕನ್ನು ನೀಡಿದ ಕರ್ನಾಟಕ ತಂಡದಿಂದಲೂ ಹೊರಗುಳಿದು ಈಗ ವಿದರ್ಭದ ಪರ ಆಡುತ್ತಿದ್ದಾರೆ. ಆದರೆ ಈಗ ಪ್ರತಿಯೊಂದು ಪಂದ್ಯದಲ್ಲಿಯೂ ಮಿಂಚುತ್ತಿದ್ದಾರೆ. ಈ ಕಲಾತ್ಮಕ ಆಟಗಾರನಿಗೆ ಈಗ ಭಾರತ ತಂಡವನ್ನು ಸೇರಲು ಉತ್ತಮ ಅವಕಾಶವಿದೆ. ಆಯ್ಕೆ ಸಮಿತಿಯವರು ಈ ಯುವ ಆಟಗಾರನ ಆಟವನ್ನು ಗಮನಿಸುತ್ತಿದ್ದರೆ ನಿಜವಾಗಿಯೂ ಕರುಣ್‌ ನಾಯರ್‌ ಭಾರತ ತಂಡವನ್ನು ಸೇರುವುದು ಖಚಿತ.

Karun Nair will play for India on virtue of his good batting.

ಕೇರಳದಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಬದುಕುಳಿದ ಕರುಣ್‌ ನಾಯರ್‌ ಅಲ್ಲಿಂದ ಬದುಕಿನಲ್ಲಿ ತಿರುವು ಕಂಡಿತು ಎಂದೇ ಹೇಳಬಹುದು. ಹೊಸ ಧೈರ್ಯ ಅವರಲ್ಲಿ ಮನೆ ಮಾಡಿತು. ಬ್ಯಾಟಿಂಗ್‌ನಲ್ಲಿ ಯಶಸ್ಸಿನ ಹೆಜ್ಜೆ ಇಟ್ಟರು.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವೈಫಲ್ಯಗೊಂಡಿದ್ದೇ ಕರುಣ್‌ ನಾಯರ್‌ ಅವರನ್ನು ಕಡೆಗಣಿಸಲು ಪ್ರಮುಖ ಕಾರಣವಾಯಿತು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸುವಲ್ಲಿ ಅವರು ವಿಫಲಾದರು ನಿಜ. ಆದರೆ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿರುವಷ್ಟು ಕಳಪೆ ಆಟ ಆಡಿರಲಿಲ್ಲ. ರಣಜಿಯ ಜೊತೆಯಲ್ಲಿ ಎಲ್ಲ ಮಾದರಿಯಿಂದಲೂ ಅವರು ಕರ್ನಾಟಕ ರಾಜ್ಯ ಆಯ್ಕೆ ಸಮಿತಿ ಕೈ ಬಿಟ್ಟಿತು. ಇದರಿಂದಾಗಿ ವಿದರ್ಭದ ಹಾದಿ ಹಿಡಿಯುವುದು ಅನಿವಾರ್ಯವಾಯಿತು. ಕೇವಲ 31 ವರ್ಷದಲ್ಲೇ ತನ್ನ ಕ್ರಿಕೆಟ್‌ ಬದುಕನ್ನು ಕೊನೆಗಾಣಿಸಿಕೊಳ್ಳುವ ಮನಸ್ಸು ಅವರಲ್ಲಿರಲಿಲ್ಲ. ಐಪಿಎಲ್‌ನಲ್ಲೂ ನಾಲ್ಕು ತಂಡಗಳ ಪರ ಆಡಿದರೂ ಹೆಚ್ಚಾಗಿ ಬೆಂಚ್‌ನಲ್ಲೇ ಕಾಲ ಕಳೆಯುವಂತಾಯಿತು. ಈ ಸಂದರ್ಭದಲ್ಲಿ ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಂಡರು.

ಕರ್ನಾಟಕ ಪ್ರೀಮಿಯರ್‌ ಲೀಗ್‌ ಮಹಾರಾಜ ಟ್ರೋಫಿಯಲ್ಲಿ 500ಕ್ಕೂ ಹೆಚ್ಚು ರನ್‌ ಗಳಿಸಿ ಮತ್ತೆ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದರು. ವಿಜಯ ಹಜಾರೆ ಟ್ರೋಫಿಯಲ್ಲಿ ಹೈದರಾಬಾದ್‌ ವಿರುದ್ಧ ಶತಕ ಸಿಡಿಸಿ ಜಯದ ರೂವಾರಿ ಎನಿಸಿದರು. ಎರಡು ಅರ್ಧ ಶತಕ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿರು. ಬಂಗಾಳ ವಿರುದ್ಧ 212 ರನ್‌ ಚೇಸ್‌ ಮಾಡುವಾಗ ಅಜೇಯ 95 ರನ್‌ ಸಿಡಿಸಿದ್ದರು.  ಇದಕ್ಕೂ ಮುನ್ನ ನಾರ್ಥ್‌ಹ್ಯಾಂಪ್ಟನ್‌ಶೈರ್‌ ಪರ ಆಡುವಾಗ ಶತಕ ಹಾಗೂ ಅರ್ಧ ಶತಕ ಸಿಡಿಸಿ ಗಮನ ಸೆಳೆದಿದ್ದರು.

ಪ್ರತಿಯೊಬ್ಬರ ಬದುಕಿನಲ್ಲೂ ಒಂದು ತಿರುವು ಎಂಬುದಿರುತ್ತದೆ. ಕರುಣ್‌ ನಾಯರ್‌ ಈಗ ಕ್ರಿಕೆಟ್‌ ಬದುಕಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಅವರ ಬ್ಯಾಟಿಂಗ್‌ ಶೈಲಿ ಹಾಗೂ ಸ್ಟ್ರೋಕ್‌ಗಳಲ್ಲಿ ಆತ್ಮವಿಶ್ವಾಸವಿದೆ. ಹಿಂದಿನ ವೈಫಲ್ಯಗಳನ್ನೇ ಗಮದಲ್ಲಿಟ್ಟುಕೊಂಡು ಒಬ್ಬ ಸಾಧಕನನ್ನು ಮರೆಯಬಾರದು. ಆತ ಬದುಕಿನಲ್ಲಿ ಕಂಡುಕೊಂಡ ಬದಲಾವನೆ, ಇಟ್ಟ ದಿಟ್ಟ ಹೆಜ್ಜೆಗಳನ್ನು ಗಮನಿಸಬೇಕು. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ನಿಜಯಾಗಿಯೂ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವವರ ಕಡೆಗೆ ಗಮನ ಹರಿಸುತ್ತಿರುವುದು ನಿಜವಾದಲ್ಲಿ ಕರುಣ್‌ ನಾಯರ್‌ ಭಾರತ ತಂಡದ ಜೆರ್ಸಿಯನ್ನು ಮತ್ತೊಮ್ಮೆ ತೊಡುವುದು ಖಚಿತ. ಅವರ 31ನೇ ಹುಟ್ಟು ಹಬ್ಬದ ಶುಭ ಸಂದರ್ಭದಲ್ಲಿ ಕ್ರಿಕೆಟ್‌ ಅಭಿಮಾನಿಗಳ ಹಾರೈಕೆಯೂ ಅದೇ ಆಗಿದೆ.

Related Articles