ಬಿಎಸಿಎ-ಕೆಆರ್‌ಎಸ್, ಮಹಾರಾಜ ಬೆಂಗಳೂರು ತಂಡಗಳಿಗೆ ಜಯ
ಕಾರ್ಕಳ: 50 ವರ್ಷ ಮೀರಿದವರಿಗಾಗಿ ನಡೆಯುತ್ತಿರುವ ನಿಟ್ಟೆ ಕ್ರಿಕೆಟ್ ಟೂರ್ನಮೆಂಟ್‌ನ ಮೊದಲ ದಿನದಲ್ಲಿ ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ, ಬ್ರಹ್ಮಾವರ, ಕೆಆರ್‌ಎಸ್ ಅಕಾಡೆಮಿ ಕಡಪಾಡಿ ಹಾಗೂ ಬೆಂಗಳೂರು ಮಹಾರಾಜ ತಂಡಗಳು ಜಯ ಸಾಧಿಸಿ ಮುನ್ನಡೆದಿವೆ. NITTE cricket tournament: BACA KRS, Maharajas of Bengaluru won their first match.
ದಿನದ ಮೊದಲ ಪಂದ್ಯದಲ್ಲಿ ಚೆನ್ನೈನ ಚೋಳಾಸ್ ಟೈಗರ್ಸ್ ಹಾಗೂ ಬಿಎಸಿಎ ಕೆಆರ್‌ಎಸ್ ತಂಡಗಳು ಮುಖಾಮುಖಿಯಾದವು. ಟಾಸ್ ಗೆದ್ದ ಚೋಳಾಸ್ ಟೈಗರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಬಿಎಸಿಎ ಹಾಗೂ ಕೆಆರ್‌ಎಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು. ತಂಡದ ಪರ ಉದಯ್ ಕಟಪಾಡಿ ಅಜೇಯ 31 ರನ್ ಗಳಿಸಿದರು. ರಾಜು ಕರೂರ್ 30 ರನ್ ಗಳಿಸಿದರು. ಚೋಳಾಸ್ ಪರ ಡಾ. ಅರುಣ್ ಕುಮಾರ್ 9 ರನ್‌ಗೆ 2 ವಿಕೆಟ್ ಗಳಿಸಿದರೆ ,ಸತ್ಯಮೂರ್ತಿ 10 ರನ್‌ಗೆ 1 ವಿಕೆಟ್ ಗಳಿಸಿದರು.
ಚೋಳಾ ಟೈಗರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿ 10 ರನ್ ಅಂತರದಲ್ಲಿ ಸೋಲನುಭವಿಸಿತು. ತಂಡದ ಪರ ರಾಜು 23* ರನ್ ಗಳಿಸಿದರೆ, ವಸಂತ್ 22* ರನ್ ಗಳಿಸಿದರು. ಬಿಎಸಿಎ ಕೆಆರ್‌ಎಸ್ ಪರ ಪ್ರದೀಪ್ ಗೋಡ್ಬೊಲೆ 11 ರನ್‌ಗೆ 2 ವಿಕೆಟ್ ಹಾಗೂ ರಾಜು ಕರೂರ್ 10 ರನ್‌ಗೆ 1 ವಿಕೆಟ್ ಗಳಿಸಿದರು.
ಉತ್ತಮ ಬ್ಯಾಟ್ಸ್ಮನ್ ಗೌರವಕ್ಕೆ ಬಿಎಸಿಎ ಕೆಆರ್‌ಎಸ್‌ನ ಉದಯ್ ಕಟಪಾಡಿ ಹಾಗೂ ಚೋಳಾ ಟೈಗರ್ಸ್‌ನ ರಾಜ ಆಯ್ಕೆಯಾದರು. ಉತ್ತಮ ಬೌಲರ್ ಅಗಿ ಬಿಎಸಿಎ ಮತ್ತು ಕೆಆರ್‌ಎಸ್‌ನ ಪ್ರದೀಪ್ ಗೋಡ್ಬೊಲೆ ಹಾಗೂ ಚೋಳಾ ಟೈಗರ್ಸ್‌ನ ಡಾ, ಅರುಣ್ ಕುಮಾರ್ ಆಯ್ಕೆಯಾದರು. ಉತ್ತಮ ಫೀಲ್ಡರ್ ಆಗಿ ಬಿಎಸಿಎ ಕೆಆರ್‌ಎಸ್‌ನ ವಿಜಯ್ ಆಳ್ವಾ ಹಾಗೂ ಚೋಳಾ ಟೈಗರ್ಸ್‌ನ ವಸಂತ್ ಆಯ್ಕೆಯಾದರು. ದಿನದ ಎರಡನೇ ಪಂದ್ಯದಲ್ಲಿ ಮುಂಬೈ ಸೂಪರ್ ಸ್ಟಾರ್ಸ್ ವಿರುದ್ಧ ಬೆಂಗಳೂರು ಮಹಾರಾಜ ತಂಡ 31 ರನ್ ಅಂತರದಲ್ಲಿ ಜಯ ಗಳಿಸಿತು. ಟಾಸ್ ಗೆದ್ದ ಬೆಂಗಳೂರು ಮಹಾರಾಜಾ ತಂಡ ಬ್ಯಾಟಿಂಗ್ ಆಯ್ದುಕೊಂಡು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 142 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ ಸಮರ್ಥ್ ಹೆಗ್ಡೆ 37, ವಿಶ್ವಜಿತ್ ನಾಯಕ್ 34*, ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಉತ್ತಮ ಮೊತ್ತಕ್ಕೆ ನೆರವಾದರು. ಮುಂಬೈ ಸೂಪರ್ ಸ್ಟಾರ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿ 31 ರನ್ ಅಂತರದಲ್ಲಿ ಸೋಲು ಅನುಭವಿಸಿತು.
ತಂಡದ ಪರ ಮನೀಶ್ ಶರ್ಮಾ 25*, ಮನೀಶ್ ದೇಸಾಯಿ 24 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಬೆಂಗಳೂರು ಮಹಾರಾಜಾ ತಂಡದ ಪರ ಸಮರ್ಥ್ ಹೆಗ್ಡೆ 7 ರನ್‌ಗೆ 2 ವಿಕೆಟ್, ರಾಘವೇಂದ್ರ 9 ರನ್‌ಗೆ 1 ವಿಕೆಟ್ ಗಳಿಸಿದರು. ಪಂದ್ಯದಲ್ಲಿ ಉತ್ತಮ ಬ್ಯಾಟ್ಸ್ಮನ್ ಆಗಿ ಬೆಂಗಳೂರು ಮಹಾರಾಜ ತಂಡದ ವಿಶ್ವಜಿತ್ ನಾಯಕ್ ಹಾಗೂ ಮುಂಬೈ ಸೂಪರ್ ಸ್ಟಾರ್ ತಂಡದ ಮನೀಶ್ ಶರ್ಮಾ ಆಯ್ಕೆಯಾದರು. ಉತ್ತಮ ಬೌಲರ್ ಆಗಿ ಬೆಂಗಳೂರು ಮಹಾರಾಜ ತಂಡದ ಸಮರ್ಥ್ ಹೆಗ್ಡೆ ಹಾಗೂ ಮುಂಬೈ ಸೂಪರ್ ಸ್ಟಾರ್ ತಂಡದ ಗುರುದೀಪ್ ಸಿಂಗ್ ಆಯ್ಕೆಯಾದರು. ಉತ್ತಮ ಫೀಲ್ಡರ್ ಆಗಿ ಬೆಂಗಳೂರು ಮಹಾರಾಜ ತಂಡದ ಕೃಷ್ಣ ಸಿಂಗ್ ಹಾಗೂ ಮುಂಬೈ ಸೂಪರ್ ಸ್ಟಾರ್ ತಂಡದ ರಾಘವೇಂದ್ರ ಆಯ್ಕೆಯಾದರು.