Friday, February 23, 2024

ದೇಶದ ಟಾಪ್‌ ಅಥ್ಲೀಟ್‌ಗಳೂ ಖಾಸಗಿಯವರ ಪಾಲು?

ಹೊಸದಿಲ್ಲಿ: ದೇಶದ ಪ್ರತಿಯೊಂದು ಕಂಪೆನಿ ಹಾಗೂ ಭೂಮಿ ಖಾಸಗಿಯವರ ಪಾಲಾಗುತ್ತಿದೆ, ಇದು ಅಭಿವೃದ್ಧಿಗಾಗಿ ಕೈಗೊಳ್ಳುತ್ತಿರುವ ಕ್ರಮ. ಇದರ ಜೊತೆಯಲ್ಲಿ ದೇಶದ ಉನ್ನತ ಕ್ರೀಡಾಪಟುಗಳಿಗೆ ತರಬೇತಿ ನೀಡುವುದನ್ನೂ ಖಾಸಗಿಯವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಅಥ್ಲೆಟಿಕ್ಸ್‌ ಸಂಸ್ಥೆ ಕೈತೊಳೆದುಕೊಂಡಿದೆ. AFI to stop national camps after Paris Olympics, will leave door open for public and private.

ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ದೇಶದ ಅಗ್ರ ಕ್ರೀಡಾಪಟುಗಳಿಗೆ ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆ ಹಾಗೂ ಭಾರತೀಯ ಕ್ರೀಡಾಪ್ರಾಧಿಕಾರ ತರಬೇತಿ ನೀಡುವುದಿಲ್ಲ. ಬದಲಾಗಿ ಖಾಸಗಿಯವರಿಗೆ ಈ ಜವಾಬ್ದಾರಿಯನ್ನು ನೀಡಲಾಗುತ್ತದೆ ಎಂದು ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆ ಭಾನುವಾರ ಪ್ರಕಟಿಸಿತ್ತು.

“ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ನಾವು ಹಿರಿಯ ಅಥ್ಲೀಟ್‌ಗಳಿಗೆ ತರಬೇತಿ ನೀಡುವುದನ್ನು ನಿಲ್ಲಿಸಲಿದ್ದೇವೆ. ಈ ಬಗ್ಗೆ ಕ್ರೀಡಾ ಸಚಿವಾಲಯದೊಂದಿಗೆ ಮಾತುಕತೆ ನಡೆಸಿದ್ದೇವೆ. ನಮ್ಮ ಈ ಕ್ರಮಕ್ಕೆ ಕ್ರೀಡಾ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ,” ಎಂದು ಎಎಫ್‌ಐ ಅಧ್ಯಕ್ಷ ಆದಿಲ್‌ ಸುಮಾರಿವಾಲ ಹೇಳಿದ್ದಾರೆ.

ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿರುವ ನ್ಯಾಷನಲ್‌ ಸೆಂಟರ್‌ ಆಫ್‌ ಎಕ್ಸಲೆನ್ಸಿಯಲ್ಲಿ ಉತ್ತಮ ಸೌಲಭ್ಯವಿದೆ. ಅದೇ ರೀತಿ ರಿಲಾಯನ್ಸ್‌, ಜೆಎಸ್‌ಡಬ್ಲ್ಯು ಮತ್ತು ಟಾಟಾ ಅಕಾಡೆಮಿಗಳಲ್ಲೂ ಉತ್ತಮ ಸೌಲಭ್ಯವಿದೆ. ಅವರು ಅಪಾರ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ, ವಿದೇಶಿ ತರಬೇತುದಾರನ್ನೂ ನಿಯೋಜಿದ್ದಾರೆ. ಇದರಿಂದಾಗಿ ಅಲ್ಲಿಯೂ ಉತ್ತಮ ತರಬೇತಿ ಸಿಗುತ್ತದೆ.

“ಅವರು ತಮ್ಮಲ್ಲಿರುವ ಸೌಲಭ್ಯಗಳ ಮೂಲಕ ಅಥ್ಲೀಟ್‌ಗಳಿಗೆ ತರಬೇತಿ ನೀಡಬಹುದು. ಕೇವಲ ಖಾಸಗಿಯವರು ಮಾತ್ರವಲ್ಲ, ಆರ್ಮಿ ಸ್ಪೋರ್ಟ್ಸ್‌ ಇನ್‌ಸ್ಟಿಟ್ಯೂಟ್‌, ರೈಲ್ವೆ, ಏರ್‌ಫೋರ್ಸ್‌, ನೌಕಾಪಡೆ, ಒಎನ್‌ಜಿಸಿ ಸೇರಿದಂತೆ ಇತರ ಸಾರ್ವಜನಿಕ ವಲಯದ ಸಂಸ್ಥೆಗಳು ತರಬೇತಿ ನೀಡಬಹುದು. ರಾಜ್ಯ ಸರಕಾರಗಳೂ ತರಬೇತಿ ನೀಡಬಹುದು,” ಎಂದು ಹೇಳಿದ್ದಾರೆ.

“ಸಾಯ್‌ನಲ್ಲಿ ಈಗ 5-10 ಕೇಂದ್ರಗಳಿವೆ. ನಾವು ಅಗತ್ಯವಿದ್ದರೆ 200ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಬಹುದು. ತರಬೇತಿಗಾಗಿ ಅಥ್ಲೀಟ್‌ಗಳು ಕ್ಯಾಂಪ್‌ನಲ್ಲಿ ಇರಬೇಕಾಗಿಲ್ಲ. ಅವರು ಮನೆಯಲ್ಲಿದ್ದುಕೊಂಡೇ ತರಬೇತಿ ನಡೆಸಬಹುದು.” 2024ರ ಒಲಿಂಪಿಕ್ಸ್‌ಗೆ ನೀರಜ್‌‌ ಚೋಪ್ರಾ, ಮುರಳಿ ಶ್ರೀಶಂಕರ್‌ ಮತ್ತು ಅವಿನಾಶ್‌ ಸಬ್ಲೆ ಎಎಫ್‌ಐ ಮೂಲಕ ತರಬೇತಿ ಪಡೆಯುವುದಿಲ್ಲ. ಎಎಫ್‌ಐ ಅವರ ನಿರ್ವಹಣೆ ನೋಡಿಕೊಳ್ಳಲಿದೆ ಎಂದಿದ್ದಾರೆ.

ಈ ತೀರ್ಮಾನದಿಂದ ಕ್ರೀಡಾಪಟುಗಳಿಗೆ ಉತ್ತಮ ಪ್ರಯೋಜನವಾಗಲಿದೆ ಎಂದು ಅಂತಾರಾಷ್ಟ್ರೀಯ ಮಾಜಿ ಅಥ್ಲೀಟ್‌ ಅಂಜಬಾಬಿ ಜಾರ್ಜ್‌ ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಕ್ರೀಡಾಪಟುಗಳ ಶಿಕ್ಷಣಕ್ಕೂ ನೆರವಾಗುತ್ತದೆ. ತಿರುವನಂತಪುರದಲ್ಲಿರುವ ಕ್ರೀಡಾಪಟು ತನ್ನ ಶಿಕ್ಷಣವನ್ನು ಮುಂದುವರಿಸಲು ಅಲ್ಲಿಯೇ ತರಬೇತಿ ಪಡೆಯುವುದು ಸೂಕ್ತ. 11 ತಿಂಗಳ ಕಾಲ ತರಬೇತಿಯಲ್ಲಿದ್ದರೆ ಓದಿನ ಕಡೆಗೆ ಗಮನಹರಿಸಲಾಗದು ಎಂದು ಜಾರ್ಜ್‌ ಹೇಳಿದ್ದಾರೆ.

ಈ ತೀರ್ಮಾನಕ್ಕೆ ಬರಲು ಕಾರಣ?: ಖಾಸಗಿಯವರಿಗೆ ಅವಕಾಶ ನೀಡಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ನೇರವಾಗಿ ಹೇಳಬಹುದು. ಇದುವರೆಗೂ ಕ್ರೀಡಾಪಟುಗಳ ಶಿಕ್ಷಣದ ಬಗ್ಗೆ ಯಾರೂ ಯೋಚಿಸಿರಲಿಲ್ಲವೇ? ರಿಲಾಯನ್ಸ್‌ ಹಾಗೂ ಜೆಎಸ್‌ಡಬ್ಲ್ಯೂ ಉತ್ತಮ ರೀತಿಯಲ್ಲಿ ವೇತನ ನೀಡುತ್ತಿದೆ. ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಮೂಲಭೂತ ಸೌಕರ್ಯಗಳ ನಿರ್ವಹಣೆ ಮಾಡಲಾಗುತ್ತಿಲ್ಲ. ಧ್ಯಾನ್‌ಚಂದ್‌ ಕ್ರೀಡಾಂಗಣದ ಭಾಗವನ್ನು ಈಗಾಗಲೇ ಖಾಸಗಿಯವರಿಗೆ ವ್ಯಾಪಾರ ಮಾಡಲು ನೀಡಲಾಗಿದೆ. ಹೀಗೆ ಒಂದೊಂದೆ ಖಾಸಗಿಯವರ ಪಾಲಾದರೆ ನಾವು ನೆಮ್ಮದಿಯಾಗಿ ಇರಬಹುದು. ಜವಾಬ್ದಾರಿ ಇಲ್ಲದಾಗ ಸೋಲು ಗೆಲುವುಗಳ ಬಗ್ಗೆ ನೇರವಾಗಿ ಪ್ರತಿಕ್ರಿಯೆ ನೀಡಬಹುದು. ಪದಕ ಕಡಿಮೆಯಾದಾಗ ಯಾರನ್ನು ಕೇಳುವುದು. ಈಗ ಕಡಿಮೆಯಾದರೆ ಖಾಸಗಿಯವರೇ ಜವಾಬ್ದಾರರು ಎಂದು ಹೇಳಿ ನುಣುಚಿಕೊಳ್ಳಬಹುದು. ಕೆಲವು ತರಬೇತುದಾರರ ಹಿತಾಸಕ್ತಿಯೂ ಇಲ್ಲಿ ಕೆಲಸ ಮಾಡಿದೆ ಎಂದರೆ ತಪ್ಪಾಗಲಾರದು.

ಖಾಸಗಿಯವರನ್ನು ಸೇರಿಸಿಕೊಂಡು ಕೆಲಸ ಹೇಗೆ ಮಾಡಬಹುದು ಎಂಬುದನ್ನು ಒಡಿಶಾದಿಂದ ನೋಡಿ ಕಲಿಯಬೇಕು. ಗುಜರಾತ್‌ ಮತ್ತು ಮಧ್ಯಪ್ರದೇಶ ವಿದೇಶಿ ತರಬೇತುದಾರರನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಆದರೆ ಅವರ ಪದಕಗಳ ಸಾಧನೆ ಹೇಗಿದೆ ಎಂಬುದು ಮುಖ್ಯ. ಗುಜರಾತ್‌ 17ನೇ ಸ್ಥಾನದಲ್ಲಿದೆ. ಮಧ್ಯಪ್ರದೇಶ 4 ನೇ ಸ್ಥಾನದಲ್ಲಿದೆ. ಏನೇ ಮಾಡಿದರೂ ಪದಕಗಳ ಗಳಿಕೆಯಲ್ಲಿ ಏರಿಳಿತ ಇದ್ದೇ ಇರುತ್ತದೆ. ರಿಲಯನ್ಸ್‌ ಹಾಗೂ ಜೆಎಸ್‌ಡಬ್ಲ್ಯು ರಾಜ್ಯಗಳಲ್ಲಿ ಅಗ್ರ ಸ್ಥಾನ ಪಡೆದ ಕ್ರೀಡಾಪಟುಗಳನ್ನು ಆಯ್ಕೆ ಮಾಡುತ್ತಾರೆಯೇ ಹೊರತು ಪ್ರಾಥಮಿಕ ಹಂತದಲ್ಲಿ ತರಬೇತಿ ನೀಡುವುದಿಲ್ಲ.

ಒಟ್ಟಾರೆ ಅಥ್ಲೆಟಿಕ್ಸ್‌ ಸಂಸ್ಥೆಯ ಈ ಯೋಚನೆಯಿಂದ ಸಂಸ್ಥೆಗೆ ಜವಾಬ್ದಾರಿ ಕಡಿಮೆಯಾಗಬಹುದು, ಕೋಚ್‌ಗಳಿಗೆ ಲಾಭವಾಹಬಹದು, ಆದರೆ ಅಥ್ಲೀಟ್‌ಗಳ ಭದ್ರತೆ, ಡೋಪಿಂಗ್‌ ಇವುಗಳ ವಿಷಯದಲ್ಲಿ ಯೋಚಿಸಬೇಕಾದ ಅಗತ್ಯವಿದೆ. ಇದರಿಂದ ಕ್ರೀಡಾಪಟುಗಳ ಪದಕ ಗಳಿಕೆಯಲ್ಲಿ ಕುಸಿತ ಕಾಣಬಹುದೇ ವಿನಃ ಹೆಚ್ಚಾಗುತ್ತದೆ ಎಂದು ಹೇಳಲಾಗದು. ಪಟಿಯಾಲದಲ್ಲಿ ಅಥವಾ ಬೆಂಗಳೂರು ಸಾಯ್‌ ಕೇಂದ್ರದಲ್ಲಿ ಸಿಗುವ ಭದ್ರತೆಯನ್ನು ಖಾಸಗಿಯವರು ನೀಡಲು ಸಾಧ್ಯವೇ?

AFI to stop national camps after Paris Olympics, will leave door open for public and private.

Related Articles