Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಹ್ಯಾಂಡ್‌ಬಾಲ್‌ ವಿಶ್ವ ಚಾಂಪಿಯನ್‌ಷಿಪ್‌ಗೆ ದಿವ್ಯಾಂಗ ಕೃಷಿಕರು!!

ಬೆಂಗಳೂರು: ಇದೇ ತಿಂಗಳ 13 ರಿಂದ 21ರ ವರೆಗೆ ಸ್ಪೇನ್‌ನ ಬಾರ್ಸಿಲೋನಾದಿಂದ 30 ಕಿಮೀ ದೂರದಲ್ಲಿರುವ ಗ್ರೆನೋಲ್ಲರ್ಸ್‌ ಎಂಬಲ್ಲಿ 4ನೇ ವಿಶ್ವ ವೀಲ್‌ಚೇರ್‌ ಹ್ಯಾಂಡ್‌ಬಾಲ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಜಾಗತಿಕ ಮಟ್ಟದ ಈ ಸ್ಪರ್ಧೆಯಲ್ಲಿ ಬೆಳಗಾವಿಯ ಇಬ್ಬರು ವಿಶೇಷ ಚೇತನ ಕೃಷಿಕರು ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಬೆಳಗಾವಿಯ ಸಿದ್ದಪ್ಪ ಹಾಗೂ ಫಕೀರಪ್ಪ ವಿಶ್ವ ವೀಲ್‌ಚೇರ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಕೃಷಿಕರು. It is a matter of great pride for Kannadigas that two poor farmers from Belagavi, Siddappa Patagundi and Fakirappa, are participating in the 4th World Wheelchair Handball Championship being held in Granollers, Spain.

ಸಿದ್ದಪ್ಪ ಬೆಳಗಾವಿಯ ಗೋಕಾಕ್‌ ತಾಲೂಕಿನ ಕೊನ್ನೂರು ಗ್ರಾಮದವರು. ಫಕೀರಪ್ಪ ಕಿತ್ತೂರು ತಾಲೂಕಿನ ಸವತಗಿ ಗ್ರಾಮದವರು. ಇವರಿಬ್ಬರೂ ವಿವಿಧ ಕಾರಣಗಳಿಂದ ದಿವ್ಯಾಂಗರಾಗಿದ್ದು, ಜೊತೆಯಲಿ ಬಡತನ ಅವರನ್ನು ಕೃಷಿಕರನ್ನಾಗಿ ಮಾಡಿದೆ. ಇಬ್ಬರೂ ವೀಲ್‌ಚೇರ್‌ ಬಾಸ್ಕೆಟ್‌ಬಾಲ್‌ನಲ್ಲಿ ಮೊದಲ ರಾಷ್ಟ್ರೀಯ  ಚಾಂಪಿಯನ್‌  ಪಟ್ಟ ಗೆದ್ದ ಕರ್ನಾಟಕ ತಂಡದ ಆಟಗಾರರು. ಫಕೀರಕ್ಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದರೆ, ಸಿದ್ದಪ್ಪ ಈಗಾಗಲೇ ಈಜಿಪ್ಟ್‌ನಲ್ಲಿ ನಡೆದ ವಿಶ್ವ ಹ್ಯಾಂಡ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಸೇನೆಗೆ ಸೇರಬೇಕಾಗಿದ್ದ ಸಿದ್ದಪ್ಪನ ವೀಲ್‌ಚೇರ್‌ಗೆ ತಳ್ಳಲ್ಪಟ್ಟಿತು!!!

ಈರಪ್ಪ ಹಾಗೂ ಕನ್ಯಾಕುಮಾರಿ ದಂಪತಿಯ ಪುತ್ರ ಸಿದ್ದಪ್ಪ ಪಟಗುಂಡಿ ಸೇನೆ ಸೇರಿ ದೇಶಸೇವೆಗೆ ಮುಡುಪಾಗಿರಬೇಕು ಎಂಬ ಕನಸು ಕಂಡವ. ಅಕ್ಕಾಗಿಯೇ ನಿರಂತರ ಪ್ರಯತ್ನ ಮಾಡುತ್ತಿದ್ದ. ದ್ವಿತಿಯ ಪಿಯುಸಿಗೆ ಓದು ನಿಲ್ಲಿಸಿ ಕೃಷಿಯಲ್ಲಿ ತೊಡಗಿಕೊಂಡಿದ್ದ, ಜೊತೆಯಲ್ಲಿ ಕ್ರೀಡೆಯಲ್ಲೂ ಪಾಲ್ಗೊಳ್ಳುತ್ತಿದ್ದ. 2019ರಲ್ಲಿ ಕೊಪ್ಪಳ್ಳದಲ್ಲಿ ನಡೆದ ಸೇನೆಯ ಆಯ್ಕೆಯಲ್ಲಿ ಸಿದ್ದಪ್ಪ ಆಯ್ಕೆಯಾದ. ಮನೆಯಲ್ಲಿ ಮಾತ್ರವಲ್ಲ ಊರಿನಲ್ಲೂ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತ್ತು. ಆದರೆ ಈ ಸಂಭ್ರಮ ಕೆಲವು ದಿನಗಳಿಗೆ ಮಾತ್ರ ಸೀಮಿತವಾಗಿತ್ತು. ಮನೆ ಸಮೀಪ ಟ್ರ್ಯಾಕ್ಟರ್‌ ಬಡಿದು ಒಂದು ಕಾಲು ತಂಡಾಯಿತು. “ಸೇನೆ ಸೇರುವ ನನ್ನ ಕನಸು ನುಚ್ಚು ನೂರಾಯಿತು. ಬದುಕು ವೀಲ್‌ ಚೇರ್‌ಗೆ ತಳ್ಳಲ್ಪಟ್ಟಿತು.

ಅಳುತ್ತ ಮಾತು ನಿಲ್ಲಿಸಿದ ಸಿದ್ದಪ್ಪ

“ನಾನು ಅಂಗವಿಕಲನಾದೆ. ಯುದ್ಧ ಮಾಡಿ ಹೀಗೇನಾದರೂ ಆಗಿರುತ್ತಿದ್ದರೆ ನಾನು ಖುಷಿಪಡುತ್ತಿದ್ದೆ. ಆದರೆ ಯಾರೋ ಮಾಡಿದ ಪ್ರಮಾದಕ್ಕೆ ನಾನು ಬಲಿಯಾದೆ,” ಎಂದು ಸಿದ್ದಪ್ಪ ಅಳು ತಡೆಯಲಾರದೆ ಮಾತು ನಿಲ್ಲಿಸಿದರು. “ಈಗ ಕ್ರೀಡೆಯಲ್ಲದೆ ನನಗೆ ಬೇರೆ ದಾರಿ ಇಲ್ಲ. ಸರಕಾರ ನಮ್ಮ ಸಾಧನೆಯನ್ನು ಗುರುತಿಸಬೇಕು. ಹಳ್ಳಿಯಲ್ಲಿದ್ದ ನಮಗೆ ಸರಕಾರದ ಸೌಲಭ್ಯಗಳ ಬಗ್ಗೆ ಅಷ್ಟು ಅರಿವಿಲ್ಲ. ಇತ್ತೀಚಿಗೆ ರಾಜ್ಯ ಸರಕಾರ ದಿವ್ಯಾಂಗರ ಕ್ರೀಡೆಗೆ ಉತ್ತಮ ಪ್ರೋತ್ಸಾಹವನ್ನು ನೀಡುತ್ತಿದೆ ಎಂಬ ವಿಷಯ ತಿಳಿಯಿತು. ಸರಕಾರದ ಯೋಜನೆಗಳು ನಮಗೂ ಸಿಗಲಿ. ಮೊದಲ ಬಾರಿಗೆ ಕರ್ನಾಟಕ ರಾಷ್ಟ್ರೀಯ ಮಟ್ಟದ ವೀಲ್‌ಚೇರ್‌ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ ಪಟ್ಟ ಗೆದ್ದಿರುವುದಕ್ಕೆ ಹಾಗೂ ವೀಲ್‌ಚೇರ್‌ ಹ್ಯಾಂಡ್‌ಬಾಲ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿರುವುದಕ್ಕೆ ನನಗೆ ಸರಕಾರದಿಂದ ಯಾವುದೇ ನೆರವು ಸಿಕ್ಕಿರಲಿಲ್ಲ. ರಾಜ್ಯ ಕ್ರೀಡಾ ಸಚಿವರು ನಮ್ಮ ನೋವಿಗೆ ಸ್ಪಂದಿಸುವರೆಂಬ ನಂಬಿಕೆ ಇದೆ,” ಎಂದು ಹೇಳಿದರು.

ಈ ಬಾರಿ ಮಳೆ ಇಲ್ಲ, ಕೃಷಿಯಲ್ಲೂ ನಷ್ಟ: ಫಕೀರಪ್ಪ

ಪೊಲಿಯೋಗೆ ತುತ್ತಾಗಿ ದಿವ್ಯಾಂಗರಾಗಿರುವ ಫಕೀರಪ್ಪ ಕೂಡ ಮೊದಲ ವೀಲ್‌ಚೇರ್‌ ಬಾಸ್ಕೆಟ್‌ಬಾಲ್‌ ರಾಷ್ಟ್ರೀಯ ಚಾಂಪಿಯನ್‌ ಪಟ್ಟ ಗೆದ್ದಿರುವ ಭಾರತ ಕರ್ನಾಟಕ ತಂಡದ ಆಟಗಾರ. ಮೊದಲ ಬಾರಿಗೆ ಹ್ಯಾಂಡ್‌ಬಾಲ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಹೊರಟಿದ್ದಾರೆ. ಸದ್ಯ ಮುಂಬಯಿಯಲ್ಲಿ ಭಾರತ ತಂಡ ಅಭ್ಯಾಸ ನಡಸುತ್ತಿದೆ. ಮುಂಬಯಿಂದ ಮಾತನಾಡಿದ ಫಕೀರಪ್ಪ, “ನಮ್ಮದು ಬಡ ಕೃಷಿ ಕುಟುಂಬ. ಈ ಬಾರಿ ಮಳೆ ಇಲ್ಲದೆ ಬೆಳೆಯೂ ಇಲ್ಲವಾಗಿದೆ. ಸಾಲ ಮಾಡಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವೆ. ಏಕೆಂದರೆ ಕ್ರೀಡೆಯ ಮೂಲಕ ಯಶಸ್ಸು ಕಂಡು. ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕೆಂಬ ಹಂಬಲ. ಈ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ಅಗ್ರ 6 ಸ್ಥಾನ ಪಡೆಯುವ ತಂಡಗಳು ಲಾಸ್‌ಏಂಜಲೀಸ್‌ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿವೆ. ಭಾರತ ಉತ್ತಮ ಪ್ರದರ್ಶನ ತೋರಲಿದೆ ಎಂಬ ನಂಬಿಕೆ ಇದೆ. ಸರಕಾರ ನಮ್ಮ ಶ್ರಮಕ್ಕೆ ಪ್ರೋತ್ಸಾಹ ನೀಡಲಿದೆ ಎಂಬ ನಂಬಿಕೆ ಇದೆ,” ಎಂದರು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.