ಕಾಮನ್ವೆಲ್ತ್ ಗೇಮ್ಸ್: ರಾಜ್ಯಕ್ಕೆ ಭಾಗ್ಯತಂದ ಬೆಳಗಾವಿಯ ಲಕ್ಷ್ಮೀ
ಬೆಂಗಳೂರು: ಇದೇ ತಿಂಗಳ 23 ರಿಂದ ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ಆರಂಭಗೊಳ್ಳಲಿರುವ ಕಾಮನ್ವೆಲ್ತ್ ಪ್ಯಾರಾ ಗೇಮ್ಸ್ನಲ್ಲಿ ಕರ್ನಾಟದಕ ಬೆಳಗಾವಿ ಜಿಲ್ಲೆಯ ಯರಗಟ್ಟಿ ಗ್ರಾಮದ ಆಲದಕಟ್ಟಿ ಕೆ ಎಂ ನ ಲಕ್ಷ್ಮೀ ರಾಯಪ್ಪ ರಾಯಣ್ಣವರ್ ಅವರು ಐತಿಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾಗಲಿದ್ದಾರೆ. Lakshmi Rayappa Rayannavar of Aladakatti K.M., Yaragatti village in Karnataka’s Belagavi district, is set to be part of a historic moment at the Commonwealth Para Games.
ಇದೇ ಮೊದಲ ಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವೀಲ್ಚೇರ್ ಬಾಸ್ಕೆಟ್ ಬಾಲ್ (3×3) ಕ್ರೀಡೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ಕ್ರೀಡೆಯಲ್ಲಿ ಭಾರತ ಮಹಿಳಾ ತಂಡ ಸ್ಪರ್ಧಿಸಲಿದೆ. ಕರ್ನಾಟಕದ ಲಕ್ಷ್ಮೀ ರಾಯಪ್ಪನವರ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಕಾಮಲ್ವೆಲ್ತ್ ಕ್ರೀಡಾಕೂಟದ ವನಿತೆಯರ ವೀಲ್ಚೇರ್ ಬಾಸ್ಕೆಟ್ಲಬಾಲ್ ಪಾಲ್ಗೊಂಡ ಮೊದಲ ಕರ್ನಾಟಕದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿಎಡ್ ಅಧ್ಯಯನ ಮಾಡಿರುವ ಲಕ್ಷ್ಮೀ ಅವರಿಗೆ ವೀಲ್ಚೇರ್ ಬಾಸ್ಕೆಟ್ಬಾಲ್ನಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದ್ದು ಚೆನ್ನಮ್ಮ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರಾದ ಬಸಪ್ಪ ಸುನದೋಳಿ ಅವರು. ಬೆಳಗಾವಿಯ ನೆಹರು ಮೈದಾನದಲ್ಲಿ ಏಳು ಜನರಿಂದ ಆರಂಭಗೊಂಡ ಈ ಅಭಿಯಾನ ಈಗ ಕಾಮನ್ವೆಲ್ತ್ ಕ್ರೀಡಾಕೂಟ ತಲಪುವವರೆಗೂ ಬೆಳೆದು ನಿಂತಿದೆ.
ಟೀಚಿಂಗ್ ಕೆಲಸ ತೊರೆದ ಲಕ್ಷ್ಮೀ
ಎಂಎ ಹಾಗೂ ಬಿಎಡ್ ಪದವಿ ಗಳಿಸಿರುವ ಲಕ್ಷ್ಮೀ ಜೀವನೋಪಾಯಕ್ಕಾಗಿ ಸರಕಾರ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ವೀಲ್ಚೇರ್ ಬಾಸ್ಕೆಟ್ ಬಾಲ್ ಹಾಗೂ ಕೆಲಸ ಎರಡನ್ನೂ ಏಕ ಕಾಲದಲ್ಲಿ ನಿಭಾಯಿಸಲು ಆಗುತ್ತಿರಲಿಲ್ಲ. ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಶಿಕ್ಷಕ ಕೆಲಸವನ್ನು ತೊರೆದರು. “ಮುಖ್ಯವಾಗಿ ರಜೆ ಸಿಗುತ್ತಿರಲಿಲ್ಲ. ಮಾಡುವ ಕೆಲಸಕ್ಕೆ ನ್ಯಾಯ ಕೊಡಲಾಗುತ್ತಿರಲಿಲ್ಲ. ಕ್ರೀಡೆಯಲ್ಲೇ ಏನಾದರೂ ಸಾಧನೆ ಮಾಡಿ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಹಂಬಲ. ಈ ಕಾರಣಕ್ಕಾಗಿ ಶಿಕ್ಷಕಿ ವೃತ್ತಿಯನ್ನು ತೊರೆದು ಸಂಪೂರ್ಣವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡೆ. ಈಗ ನನ್ನ ನಿರ್ಧಾರ ಸರಿ ಇದೆ ಎಂದೆನಿಸುತ್ತಿದೆ. ಕಾಮನ್ವೆಲ್ತ್ ಕ್ರೀಡಾಕೂಟದ ವೀಲ್ಚೇರ್ ಬಾಸ್ಕೆಟ್ಬಾಲ್ನಲ್ಲಿ ದೇಶವನ್ನು ಪ್ರತಿನಿಧಿಸಿದ ಕರ್ನಾಟಕದ ಮೊದಲ ಆಟಗಾರ್ತಿ ಎಂದೆನಿಸಕೊಳ್ಳಲು ಹೆಮ್ಮೆ ಅನಿಸುತ್ತಿದೆ,” ಎಂದು ಲಕ್ಷ್ಮೀ ಹೇಳಿದರು.

ಹೀಗೆ ಕ್ರೀಡೆಯಲ್ಲಿ ಸಾಧನೆ ಮಾಡಲು ಉದ್ಯೋಗವನ್ನು ತೊರೆದು ಯಶಸ್ಸಿನ ಹಾದಿ ತುಳಿದಿರುವ ಕ್ರೀಡಾಪಟುಗಳ ಬದುಕಿಗೆ ಸರಕಾರ ನೆರವಾದಲ್ಲಿ ಇನ್ನಷ್ಟು ಯವಪ್ರತಿಭೆಗಳು ಅತ್ಯಂತ ಆತ್ಮವಿಶ್ವಾಸದಿಂದ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ.

