ಚೀನಾದಲ್ಲಿ ದೇಶಕ್ಕೆ ಕೀರ್ತಿ ತಂದ ಕರುನಾಡ ಶಿವಾಜಿ
ಬೆಂಗಳೂರು: ಚೀನಾದ ಒರ್ಡೋಸ್‌ನಲ್ಲಿ ನಡೆಯುತ್ತಿರುವ 23 ವರ್ಷ ವಯೋಮಿತಿಯ ಮೊದಲ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಸರಕಾರ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕ್ರೀಡಾ ಹಾಸ್ಟೆಲ್‌ನ ಮಾಜಿ ವಿದ್ಯಾರ್ಥಿ ಈಗ ರೇಲ್ವೆಯ ಉದ್ಯೋಗಿ ಶಿವಾಜಿ ಪರಶುರಾಮ ಗೌಡ್ರ ಅವರು 5000 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. Shivaji Parashurama Gowdra, a former student of the Sports Hostel of the Karnataka DYES, has brought glory to the country by winning a silver medal in the 5000 m race.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬೆಳವಟಗಿಯ ಅಡಕಿನಕಲ್ಲು ಗ್ರಾಮದ ಶಿವಾಜಿ ಐದು ವರ್ಷಗಳ ಕಾಲ ಕಾರವಾರ ಹಾಗೂ ಬೆಂಗಳೂರು ವಿಜಯನಗರದ ಕ್ರೀಡಾ ಹಾಸ್ಟೆಲ್‌ನಲ್ಲಿ ಓದಿರುತ್ತಾರೆ. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಅವರು ಈಗ ರಿಲೆಯನ್ಸ್ ಫೌಂಡೇಷನ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಕೃಷಿಕರಾದ ಪರಶುರಾಮ ಹಾಗೂ ಶೀಲಾ ದಂಪತಿಯ ಪುತ್ರ ಶಿವಾಜಿ ಅವರಿಗೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಮಾಜಿ ಕೋಚ್, ಪ್ರಕಾಶ್ ರೇವಣ್ಕರ್ ಅವರು ದೀರ್ಘ ಅಂತರದ ಓಟದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದ ಕಾರವಾರದಲ್ಲಿ ಉತ್ತಮ ತರಬೇತಿ ನೀಡಿದರು. ನಂತರ ಬೆಂಗಳೂರಿನ ವಿಜಯಗನರದಲ್ಲಿರುವ ಕ್ರೀಡಾ ಹಾಸ್ಟೆಲ್‌ನಲ್ಲಿ ಅಥ್ಲೆಟಿಕ್ಸ್ ಕೋಚ್ ವಿಶ್ವನಾಥ್ ಅವರು ಉತ್ತಮ ತರಬೇತಿ ನೀಡಿದರು. ಇದರಿಂದಾಗಿ ಶಿವಾಜಿ ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪರಿಣಾಮ ರೇಲ್ವೆಯಲ್ಲಿ ಉದ್ಯೋಗ ದೊರಕಿತು. ಇದರಿಂದ ಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಯಿತು.
ರಾಷ್ಟ್ರ ಮಟ್ಟದಲ್ಲಿ 7 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದಿರುವ ಶಿವಾಜಿ, ಈಗ ಮೂರನೇ ಅಂತಾರಾಷ್ಟ್ರೀ ಮಟ್ಟದಲ್ಲಿ ಪದಕ ಗೆದ್ದಿದ್ದಾರೆ. ಏಷ್ಯನ್ ಕ್ರಾಸ್ ಕಂಟ್ರಿಯಲ್ಲಿ ಬೆಳ್ಳಿ ಹಾಗೂ U20 ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದಾರೆ.
5000 ಹಾಗೂ 10,000 ಮೀಟರ್ ಓಟದಲ್ಲಿ ತಜ್ಞರಾಗಿರುವ ಶಿವಾಜಿ, ಚೀನಾದಲ್ಲಿ ಈಗಾಗಲೇ 5000 ಮೀ ಓಟದಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದು, ಶನಿವಾರ 10,000 ಮೀ. ಓಟದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಬದುಕು ನೀಡಿದ ಕ್ರೀಡಾ ಹಾಸ್ಟೆಲ್: ಚೀನಾದ ಒರ್ಡೋಸ್‌ನಿಂದ sportsmail ಜೊತೆ ಮಾತನಾಡಿದ ಶಿವಾಜಿ, “ನನ್ನ ಇಂದಿನ ಯಶಸ್ಸಿಗೆ ಹಿಂದೆ ಕ್ರೀಡಾ ಇಲಾಖೆಯಲ್ಲಿ ದೊರೆತ ಉತ್ತಮ ತರಬೇತಿಯೇ ಕಾರಣ. ಕಾರವಾರ ಮತ್ತು ಬೆಂಗಳೂರು ಕ್ರೀಡಾ ಹಾಸ್ಟೆಲ್‌ನಲ್ಲಿ ಕ್ರೀಡಾ ಬದುಕಿಗೆ ಉತ್ತಮ ತಳಪಾಯ ಸಿಕ್ಕಿತು. ಉತ್ತಮ ತರಬೇತಿಯೂ ಸಿಕ್ಕಿತು. ಇದರಿಂದ ಪದಕ ಗೆದ್ದು ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಯಿತು. ರಾಜ್ಯ ಸರಕಾರದ ಕ್ರೀಡಾ ಇಲಾಖೆ ಮುಂದಿನ ದಿನಗಳಲ್ಲಿ ನನ್ನನ್ನು ಟಾರ್ಗೆಟ್ ಒಲಿಂಪಿಕ್ಸ್ ಯೋಜನೆಗೆ ಸೇರಿಸಿಕೊಳ್ಳಲಿದೆ ಎಂಬ ನಂಬಿಕೆ ಇದೆ,” ಎಂದರು.

