Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಾಲಿಬಾಲ್‌ಗೆ ಹೊಸ ಜೀವ ತುಂಬಲು ಕರ್ನಾಟಕದಲ್ಲಿ ಹೊಸ ಸಂಸ್ಥೆ

ಬೆಂಗಳೂರು: ಕರ್ನಾಟಕದಲ್ಲಿ ವಾಲಿಬಾಲ್‌ ಚಟುವಟಿಕೆಗಳು ನಿಂತು ಹಲವು ವರ್ಷಗಳೇ ಸಂದವು. ವಾಲಿಬಾಲ್‌ ಕ್ರೀಡೆಯನ್ನು ನಂಬಿಕೊಂಡಿದ್ದವರ ಬದುಕು ಬೀದಿ ಪಾಲಾಯಿತು. ವಾಲಿಬಾಲ್‌ ಸಂಸ್ಥೆಗಳ ಒಳಜಗಳ, ರಾಜಕೀಯ ಹಾಗೂ ಪ್ರತಿಷ್ಠೆಗಳಿಗೆ ಸಿಲುಕಿದ ವಾಲಿಬಾಲ್‌ ಕ್ರೀಡೆ ರಾಜ್ಯಗಳಲ್ಲಿ ಮಾತ್ರವಲ್ಲ ದೇಶದಲ್ಲಿಯೇ ಅವನತಿಯ ಹೆಜ್ಜೆ ಹಿಡಿಯಿತು. ಈಗ ಕರ್ನಾಟಕ ರಾಜ್ಯದ ಹಿರಿಯ ವಾಲಿಬಾಲ್‌ ಆಟಗಾರರು, ವಾಲಿಬಾಲ್‌ ಕ್ರೀಡೆಯ ಬಗ್ಗೆ ಕಾಳಜಿ ಇರುವವರು ಒಂದಾಗಿ ವಾಲಿಬಾಲ್‌ ಸಂಸ್ಥೆ ಕರ್ನಾಟಕ (Volleyball Association of Karnataka) ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ರಾಜ್ಯದ ವಾಲಿಬಾಲ್‌ಗೆ ಹೊಸ ಜೀವ ತುಂಬಲು ಮುಂದಾಗಿದ್ದಾರೆ. Senior volleyball players and those who care about the sport of volleyball in the state of Karnataka have come together to form an organization called Volleyball Association Karnataka and breathe new life into volleyball in the state.

ಕರ್ನಾಟಕ ಸೊಸೈಟಿ ನೋಂದಣಿ ಕಾಯಿದೆಯಡಿ ನೋಂದಣಿಯಾಗಿರುವ ಈ ಸಂಸ್ಥೆಯ ಮೊದಲ ವಾರ್ಷಿಕ ಸಭೆ ಬೆಂಗಳೂರಿನ ಸೆಂಚುರಿ ಕ್ಲಬ್‌ನಲ್ಲಿ ನಡೆಯಿತು. ಮಾಜಿ ಆಟಗಾರ ಕೆ. ಆರ್‌, ಲಕ್ಷ್ಮೀನಾರಾಯಣ ಅವರು ಮುತುವರ್ಜಿ ವಹಿಸಿ ನಾಡಿನ ಕ್ರೀಡಾಸಕ್ತರು, ಪೋಷಕರನ್ನು ಸಂಪರ್ಕಿಸಿ ಈ ಸಂಸ್ಥೆಯನ್ನು ಕಟ್ಟಿದ್ದಾರೆ. ಮಾತ್ರವಲ್ಲ, ಕಾರ್ಯದರ್ಶಿಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ನೂತನ ಸಂಸ್ಥೆ ಹಾಗೂ ಅದರ ಕಾರ್ಯವೈಖರಿಯ ಬಗ್ಗೆ ಮಾತನಾಡಿದ ಲಕ್ಷ್ಮೀನಾರಾಯಣ ಅವರು, “ಒಬ್ಬ ವಾಲಿಬಾಲ್‌ ಆಟಗಾರನಾಗಿ, ವಾಲಿಬಾಲ್‌ ಮೂಲಕ ಬದುಕು ಕಟ್ಟಿಕೊಂಡವನಾಗಿ, ನನ್ನ ರಾಜ್ಯದಲ್ಲಿಯೇ ವಾಲಿಬಾಲ್‌ ಕ್ರೀಡೆಗೆ ದುಃಸ್ಥಿತಿ ಬಂದಿರುವುದನ್ನು ನೋಡಿ ಸುಮ್ಮನಿರಲಾಗಲಿಲ್ಲ. ಅದಕ್ಕಾಗಿ ಹೊಸ ಸಂಸ್ಥೆಯನ್ನು ಕಟ್ಟಲು ಸಮಾನ ಮನಸ್ಕೊಂದಿಗೆ ಮಾತುಕತೆ ನಡೆಸಿದೆ. ಈಗ ಉತ್ತಮ ಸಂಸ್ಥೆಯೊಂದನ್ನು ಸ್ಥಾಪಿಸಿದ್ದೇವೆ. ಕೆಲವು ಟೂರ್ನಿಗಳನ್ನು ನಡೆಸಿದ್ದೇವೆ. ರಾಜ್ಯದ ಲೀಗ್‌ ವಾಲಿಬಾಲ್‌ ಪಂದ್ಯಗಳನ್ನು ನಡೆಸುವುದು ನಮ್ಮ ಮುಂದಿಗ ಗುರಿ. ರೆಫರಿಗಳಿಗೆ ತರಬೇತಿ ನೀಡುವುದು, ರೆಫರಿ ಕೋರ್ಸ್‌ಗಳನ್ನು ನಡೆಸುವುದು, ಜಿಲ್ಲಾ ಮಟ್ಟದಲ್ಲಿ ಟೂರ್ನಿಗಳನ್ನು ಆಯೋಜಿಸಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು. ನೆನೆಗುದಿಗೆ ಬಿದ್ದಿರುವ ವಾಲಿಬಾಲ್‌ ಕ್ರೀಡೆಗೆ ಮತ್ತೆ ಜೀವ ತುಂಬುವುದು ನಮ್ಮ ಆದ್ಯ ಕರ್ತವ್ಯವಾಗಿದೆ,” ಎಂದರು,

ಸಂಸ್ಥೆಯ ವತಿಯಿಂದ ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಹಿರಿಯರ ಹಾಗೂ ಕಿರಿಯರ ವಾಲಿಬಾಲ್‌ ಚಾಂಪಿಯನ್‌ಷಿಪ್‌, ರಾಜ್ಯ ಮಟ್ಟದ ರೆಫರಿ ಪರೀಕ್ಷೆ,  ಕರ್ನಾಟಕ ಮಿನಿ ಒಲಿಂಪಿಕ್ಸ್‌ ಹಾಗೂ ಹಿರಿಯರ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ವಾಲಿಬಾಲ್‌ ಟೂರ್ನಿಗಳನ್ನು ಯಶಸ್ವಿಯಾಗಿ ನಡೆಸಿರುವುದು, ಸಿಂಧಗಿಯಲ್ಲಿ ರಾಜ್ಯ ಮಟ್ಟದ ವಾಲಿಬಾಲ್‌ ಚಾಂಪಿಯನ್‌ಷಿಪ್‌ ಸಂಸ್ಥೆ ಅಲ್ಪ ಅವಧಿಯಲ್ಲಿ ಮಾಡಿರುವ ಪ್ರಮುಖ ಕಾರ್ಯಗಳಾಗಿವೆ.

ಕರ್ನಾಟಕದ ಹೆಮ್ಮೆ:

ಕರ್ನಾಟಕದ ಘನವ್‌ ಜಗದೀಶ್‌ ಕತಾರ್‌ನಲ್ಲಿ ನಡೆಯಲಿರುವ 17ವರ್ಷ ವಯೋಮಿತಿಯ ವಿಶ್ವಕಪ್‌ ವಾಲಿಬಾಲ್‌ ಚಾಂಪಿಯನ್‌ಷಿಪ್‌ ಭಾರತ ತಂಡದ ಸಿದ್ಧತಾ ಶಿಬಿರಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.

ವಾಲಿಬಾಲ್‌ ಸಂಸ್ಥೆ ಕರ್ನಾಕಟ ಇದರ ಪ್ರಧಾನ ಕಾರ್ಯದರ್ಶಿ ಕೆ. ಆರ್‌. ಲಕ್ಷ್ಮೀನಾರಾಯಣ ಅವರು ನೇಪಾಳದ ಕಾಟ್ಮಂಡುವಿನಲ್ಲಿ ನಡೆದ ಸೆಂಟ್ರಲ್‌ ಏಷ್ಯಾ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ವನಿತೆಯರ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಿಸಿರುವುದು ಕನ್ನಡಿಗರ ಹೆಮ್ಮೆ.

ಬೆಳಗಾವಿಯ ಕ್ರೀಡಾ ವಸತಿ ನಿಲಯದ ತರಬೇತುದಾರ ನಾಮ್‌ದೇವ್‌ ಮೀರಜ್ಕರ್‌ ಅವರು 18 ವರ್ಷ ವಯೋಮಿತಿಯ ಏಷ್ಯಾ ಬಾಲಕರ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತೀಯ ತಂಡದ ಸಹಾಯಕ ತರಬೇತುದಾರರಾಗಿ ಕಾರ್ಯನಿರ್ವಹಿಸಿರುವುದು ಕರ್ನಾಟಕದ ಹೆಮ್ಮೆ.

ವಾಲಿಬಾಲ್‌ ಅಸೋಸಿಯೇಷನ್‌ ಆಫ್‌ ಕರ್ನಾಟಕದ ಪದಾಧಿಕಾರಿಗಳು.

ಅಧ್ಯಕ್ಷರು: ಜೆ. ಅರುಣ್‌ ಚಕ್ರವರ್ತಿ, ಐಪಿಎಸ್‌, ಡಿಜಿಜಿ.

ಕಾರ್ಯನಿರ್ವಾಹಕ ಅಧ್ಯಕ್ಷರು: ಬಸವರಾಜ್‌ ಒಶಿಮಠ್‌

ಉಪಾಧ್ಯಕ್ಷರು: ಕಾರ್ತಿಕ್‌ ರೆಡ್ಡಿ ಐಪಿಎಸ್‌, ಪೊಲೀಸ್‌ ಉಪ ಆಯುಕ್ತರು. ಸರ್ವೋತ್ತಮ್‌ ಜಾರಕಿಹೊಳಿ, ಭೀಮ್‌ಸೇನ್‌ ಕೋರ್ಕೆ, ರಾಜೀವ್‌ ಗೌಡ (ಈಸ್ಟ್‌ ಪಾಯಿಂಟ್‌ ಇನ್‌ಸ್ಟಿಟ್ಯೂಷನ್ಸ್‌ ಚೇರ್ಮನ್‌), ನವೀನ್‌ ಕಿರಣ್‌, ಇಬ್ರಾಹಿಂ ಗೋಳಿಕಟ್ಟೆ, ಡಾ. ಸುಬ್ರಮಣಿ.

ಪ್ರಧಾನ ಕಾರ್ಯದರ್ಶಿ: ಕೆ.ಆರ್‌. ಲಕ್ಷ್ಮೀನಾರಾಯಣ. ಜಂಟಿ ಕಾರ್ಯದರ್ಶಿ: ದಾಮೊಧರ ರೆಡ್ಡಿ.

ಖಜಾಂಚಿ: ಸಂಜೀವ್‌ ಕುಮಾರ್‌ ರಾಯ್‌ಬಾಗಿ. ಸಂಘಟನಾ ಕಾರ್ಯದರ್ಶಿ: ನಾಗೇಶ್ವರ ರಾವ್‌.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.