ಬಾರ್ಸಿಲೋನಾದ ಡಿʼಆರನ್ ಕ್ಲಬ್ನಲ್ಲಿ ಉಡುಪಿಯ ಕ್ಲೈವ್ ಆಸ್ಟಿನ್
ಉಡುಪಿ: ಬಾರ್ಸಿಲೋನಾ ಎಂದಾಕ್ಷಣ ನಮಗೆ ಜಗತ್ತಿನ ಶ್ರೇಷ್ಠ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾ ಎಫ್ಸಿ ನೆನಪಾಗುತ್ತದೆ. ಸ್ಪೇನ್ ಬಾರ್ಸಿಲೋನಾ ಜೊತೆಯಲ್ಲಿ ರಿಯಲ್ ಮ್ಯಾಡ್ರಿಡ್, ಅಟ್ಲೆಟಿಕೊ ಮ್ಯಾಡ್ರಿಡ್ ಮೊದಲಾದ ಜಗತ್ತಿನ ಶ್ರೇಷ್ಠ ಕ್ಲಬ್ಗಳ ಮನೆಯಂಗಣ. ಇಲ್ಲಿ ಇತರ ಜನಪ್ರಿಯ ಕ್ಲಬ್ಗಳೂ ಇವೆ. ಅವುಗಳಲ್ಲಿ ಒಂದು ಡಿʼಆರನ್. ಈ ಕ್ಲಬ್ನಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಒಬ್ಬ ಆಟಗಾರ ಆಡುತ್ತಿದ್ದಾನೆಂದರೆ ಕನ್ನಡಿಗರಾದ ನಮಗೆ ಹಾಗೂ ಭಾರತೀಯರೂ ಹೆಮ್ಮೆ ಪಡುವಂಥ ಸಂಗತಿ. Indian Goalkeeper Clive Austin Danthi, from Karkala in Udupi district, is shining in the clubs of Barcelona.
ದೂರದ ಮಸ್ಕತ್ನಲ್ಲಿ ನೆಲೆಸಿರುವ ಕಾರ್ಕಳ ಮೂಲದವರಾದ ಸಿರಿಲ್ ದಾಂಥಿ ಹಾಗೂ ಅನಿತಾ ಶಾಲಿನಿ ಡಿʼಅಲ್ಮೆಡಾ ಅವರ ಪುತ್ರ ಕ್ಲೈವ್ ಆಸ್ಟಿನ್ ದಾಂತಿ [ ಬಾರ್ಸಿಲೋನಾದ ಕ್ವಾರ್ಟಾ ಕಾಟಲಾನಾ ಲೀಗ್ನ ಉತ್ತಮ ತಂಡ ಡಿʼಆರನ್ ನ ಗೋಲ್ಕೀಪರ್ ಆಗಿ ಆಡುತ್ತಿದ್ದಾರೆ. ಕ್ಲೈವ್ ಆಸ್ಟಿನ್ ದಾಂತಿ ಸಹೋದರಿ ಕ್ರಿಸ್ಟೈನ್ ಏಂಜಲಿನ್ [Christine Angelin Danthi] ದಾಂತಿ ಒಮನ್ ಉತ್ತಮ ಬ್ಯಾಡ್ಮಿಂಟ್ ಆಟಗಾರ್ತಿಯಾಗಿದ್ದಾರೆ.

ಬೆಂಗಳೂರು ಜೈನ್ ಕಾಲೇಜಿನ ಹಳೆ ವಿದ್ಯಾರ್ಥಿ ಕ್ಲೈವ್ ಆಸ್ಟಿನ್ ದಾಂತಿ ಸ್ಪೇನ್ನ ವಾಲ್ಡೊರೆಕ್ಸ್ ಎಫ್ಸಿ ಹಾಗೂ ಮಲಕಸಾ ಎಫ್ಸಿಯಲ್ಲಿಯೂ ಪ್ರಮುಖ ಗೋಲ್ಕೀಪರ್ ಆಗಿ ಕಾರ್ಯನಿರ್ವಹಿಸಿದ್ದು ಸದ್ಯ ಬಾರ್ಸಿಲೋನಾದ ಇಎಇ ಬುಸಿನೆಸ್ ಸ್ಕೂಲ್ನಲ್ಲಿ ಮಾರ್ಕೆಟಿಂಗ್ ಹಾಗೂ ಸೇಲ್ಸ್ನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಆಟದ ನಡುವೆಯೂ ಅಧ್ಯಯ ಮುಂದುವರಿಸುತ್ತಿರುವ ಕ್ಲೈವ್ ಆಸ್ಟಿನ್ ಬಾರ್ಸಿಲೋನಾದ ಎನ್ಎಲ್ ಕಾಲೇಜಿನಲ್ಲಿ ಇನ್ಸ್ಟೆನ್ಸಿವ್ ಸ್ಪ್ಯಾನಿಷ್ ಪ್ರೋಗ್ರಾಮ್ ಅಧ್ಯಯನ ಪೂರ್ಣಗೊಳಿಸಿದ್ದಾರೆ.
ಮಸ್ಕತ್ನ ಇಂಡಿಯನ್ ಸ್ಕೂಲ್ನಲ್ಲಿ ಓದುತ್ತಿರುವಾಗಲೇ ಹಲವಾರು ಬಾರಿ ಉತ್ತಮ ಗೋಲ್ಕೀಪರ್ ಗೌರವಕ್ಕೆ ಪಾತ್ರರಾಗಿದ್ದ ಕ್ಲೈವ್ ಆಸ್ಟಿನ್, ನಂತರ ಮಸ್ಕತ್ನ ಪ್ರಸಿದ್ಧ ಅಲ್ಫಾ ಫುಟ್ಬಾಲ್ ಅಕಾಡೆಮಿಗೆ ಸೇರಿ ಅಲ್ಲಿಯ ತಂಡದ ನಾಯಕರಾಗಿ. ಬಳಿಕ ಹೆಲ್ಲಾಸ್ ವರೋನ ಹಾಗೂ ಬೆಂಗಳೂರು ಎಫ್ಸಿ ಅಕಾಡೆಮಿ ತಂಡಗಳಲ್ಲಿ ಆಡಿ ಅನುಭವ ಗಳಿಸುತ್ತಾರೆ. ಅಲ್ಫಾ ಅಕಾಡೆಮಿಯ ಉತ್ತಮ ಗೋಲ್ಕೀಪರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗುತ್ತಾರೆ.

ಕ್ಲೈವ್ ಆಸ್ಟಿನ್ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಓದುತ್ತಿರುವಾಗ ಹಲವಾರು ಟೂರ್ನಿಗಳಲ್ಲಿ ಜೈನ್ ವಿಶ್ವವಿದ್ಯಾನಿಯವನ್ನು ಪ್ರತಿನಿಧಿಸಿರುತ್ತಾರೆ. ಬೆಂಗಳೂರು ಯುನೈಟೆಡ್, ಜವಾಹರ್ ಯೂನಿಯನ್ ಪರವೂ ಆಡಿರುತ್ತಾರೆ. ಡಿಯಾಬ್ಲಾಸ್ ಎಫ್ ಸಿ ಮತ್ತು ಯತಗಾನ್ ಎಫ್ಸಿ ಮೂಲಕ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ವಿವಿಧ ಲೀಗ್ಗಳಲ್ಲಿ ಆಡಿರುತ್ತಾರೆ.
ಬೆಂಗಳೂರಿನಲ್ಲಿ ಓದನ್ನು ಪೂರ್ಣಗೊಳಿಸಿದ ನಂತರ ಕ್ಲೈವ್ ಆಸ್ಟಿನ್, ಬಾರ್ಸಿಲೋನಾದ ವಲ್ಲೆಡೊರೆಕ್ಸ್ ಎಫ್ ಸಿಯಲ್ಲಿ ತರಬೇತಿ ಪಡೆಯುತ್ತಾರೆ. ಬಳಿಕ ಲೆಸ್ ಪಾಂಟ್ಸ್ ಕ್ಲಬ್ ಪರ ಆಡುತ್ತಾರೆ. ಮತ್ತೆ ವಲ್ಲೆಡೊರೆಕ್ಸ್ ಎಫ್ ಸಿ ಹಾಗೂ ಮಲಾಕಾಸ್ ಎಫ್ಸಿ ಪರ ಆಡಿದರು. ಪ್ರಸಕ್ತ ಸಾಲಿನಿಂದ ಬಾರ್ಸಿಲೋನಾದ ಡಿʼಆರನ್ ತಂಡದ ಪರ ಆಗುತ್ತಿರುವ ಕ್ಲೈವ್ ಆಸ್ಟಿನ್ ಬಾರ್ಸಿಲೋನಾದ ಯುವ ಫುಟ್ಬಾಲ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

“ಜತ್ತಿನ ಅನೇಕ ಆಟಗಾರರು ಬಾರ್ಸಿಲೋನಾದಲ್ಲಿ ವರ್ಗಾವಣೆ ಆಗಿ ಬಂದು ಆಡುತ್ತಾರೆ. ಇನ್ನು ಅನೇಕರು ತರಬೇತಿಗಾಗಿ ಆಗಮಿಸುತ್ತಾರೆ. ಅನುಭವಿ ಆಟಗಾರರಿಗೆ ಉತ್ತಮ ಸಭಾವನೆ ಸಿಗುತ್ತದೆ, ಇಲ್ಲವಾದಲ್ಲಿ ನಾವೇ ಹಣ ಕೊಟ್ಟು ಅಕಾಡೆಮಿಗಳ ಪರ ಆಡಬೇಕಾಗುತ್ತದೆ. ಸ್ಪೇನ್ನಲ್ಲಿ ಮಕ್ಕಳು ಚಿಕ್ಕಂದಿನಿಂದಲೇ ಆಡುತ್ತಾರೆ. ಹಾಗಾಗಿ ಹೊರಗಿನವರಿಗಿಂತ ಅಲ್ಲಿಯವರಿಗೇ ಮೊದಲ ಆಧ್ಯತೆ ನೀಡುತ್ತಾರೆ. ಅವರಲ್ಲಿ ಅಪಾರ ಪ್ರತಿಭೆ ಇದೆ. ಭಾರತದಲ್ಲಿ ಈ ವಾತಾವರಣ ಇಲ್ಲ. ಒಮನ್ನಲ್ಲೂ ಅಲ್ಲಿಯ ಆಟಗಾರರಿಗೆ ಅವಕಾಶ ನೀಡುತ್ತಾರೆ, ಭಾರತದಲ್ಲಿ ಕ್ರಿಕೆಟ್ ಇರುವಂತೆ ಸ್ಪೇನ್ನಲ್ಲಿ ಫುಟ್ಬಾಲ್ ಕ್ರೀಡೆಗೆ ಬಾಲ್ಯದಿಂದಲೇ ಪ್ರೋತ್ಸಾಹ ನೀಡುತ್ತಾರೆ, ಇದರಿಂದಾಗಿ ಅಲ್ಲಿ ಫುಟ್ಬಾಲ್ ಬೆಳೆದಿದೆ,” ಎನ್ನುತ್ತಾರೆ ಕ್ಲೈವ್ ಆಸ್ಟಿನ್.
ಮ್ಯಾನ್ವೆಲ್ ನ್ಯೂಯೆರ್ ಫೇವರಿಟ್ ಗೋಲ್ಕೀಪರ್: ಸ್ಪೇನ್ನಲ್ಲಿ ತರಬೇತಿ ಪಡೆದು ಅಲ್ಲಿಯ ಕ್ಲಬ್ಗಳ ಪರ ಆಡುತ್ತಿದ್ದರೂ ಕ್ಲೈವ್ ಆಸ್ಟಿನ್ ಅವರಿಗೆ ಜರ್ಮನಿಯ ಸ್ವೀಪರ್-ಕೀಪರ್ ಎಂದೇ ಖ್ಯಾತಿ ಪಡೆದಿರುವ ಮ್ಯಾನ್ವೆಲ್ ನ್ಯೂಯೆರ್ ನೆಚ್ಚಿನ ಗೋಲ್ಕೀಪರ್. “ಗೋಲ್ಕೀಪಿಂಗ್ ಎನ್ನುವುದು ಸಾಕಷ್ಟು ಕಠಿಣ ಜವಾಬ್ದಾರಿ. ಪಂದ್ಯ ಗೆದ್ದಾಗ ಗೋಲ್ ಹೊಡೆದವರನ್ನು ಹೊಗಳುತ್ತಾರೆ. ಪಂದ್ಯ ಸೋತಾಗ ಗೋಲ್ಕೀಪರ್ನನ್ನು ಟೀಕಿಸುತ್ತಾರೆ. ಇದರಿಂದಾಗಿ ಈ ಜಾವಾಬ್ದಾರಿಯನ್ನು ನೀಭಾಯಿಸಲು ಹೆಚ್ಚಿನ ಆಟಗಾರರು ಹಿಂಜರಿಯುತ್ತಾರೆ. ಇದರಿಂದಾಗಿ ಗೋಲ್ಕೀಪಿಂಗ್ ಸ್ಥಾನಕ್ಕೆ ಉತ್ತಮ ಬೇಡಿಕೆ ಇದೆ.” ಎನ್ನುತ್ತಾರೆ ಕ್ಲೈವ್.

ಫುಟ್ಬಾಲ್ ಗೋಲ್ಕೀಪಿಂಗ್ನಲ್ಲಿಯೇ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಹಂಬಲ. ಅದಕ್ಕಾಗಿ ಕಠಿಣ ಅಭ್ಯಾಸ ಮಾಡುತ್ತಿರುವೆ. ಇಲ್ಲಿಯ ಕ್ಲಬ್ಗಳು ನನ್ನ ಗೋಲ್ಕೀಪಿಂಗ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿವೆ. ಒಂದು ಹಂತದ ವರೆಗೆ ಈ ಕ್ಷೇತ್ರದಲ್ಲಿ ಮುಂದುವರಿಯುವುದು. ಉತ್ತಮ ಅವಕಾಶ ಸಿಗುತ್ತದೆ ಎಂಬ ನಂಬಿಕೆ ಇದೆ, ಇಲ್ಲವಾದಲ್ಲಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ನಲ್ಲಿ ಮುಂದುವರಿಯುವುದು,” ಎಂದರು.

ಕೊಲ್ಲಿ ರಾಷ್ಟ್ರಗಳಲ್ಲಿ ಫುಟ್ಬಾಲ್ ಬೆಳೆಯುತ್ತಿದೆ: ಕ್ಲೈವ್ ಆಸ್ಟಿನ್ ಉಡುಪಿ ಜಿಲ್ಲೆಯ ಕಾರ್ಕಳ ಮೂಲದವರಾಗಿದ್ದರೂ, ಓದಿದ್ದು ಹಾಗೂ ಫುಟ್ಬಾಲ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದು, ಒಮನ್ ದೇಶದ ಮಸ್ಕತ್ನಲ್ಲಿ. ಕೊಲ್ಲಿ ರಾಷ್ಟ್ರಗಳು ಯಾವ ಕಾರಣಕ್ಕಾಗಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿವೆ ಎಂಬುದರ ಬಗ್ಗೆ ತಿಳಿಸಿದ್ದಾರೆ. “ನಮ್ಮಲ್ಲಿ ಹಣ ಇದೆ ಅದನ್ನು ಜಗತ್ತಿಗೆ ತೋರಿಸಬೇಕೆಂದು ಕತಾರ್ ಅಥವಾ ಸೌಧಿ ಅರೇಬಿಯಾ ಫುಟ್ಬಾಲ್ ಸೇರಿದಂತೆ ಇತರ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿಲ್ಲ. ಬದಲಾಗಿ ದೇಶದ ಯುವಕರ ಭವಿಷ್ಯವನ್ನು ಗಮನದಲ್ಲಿರಿಕೊಂಡು ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕ್ರೀಡೆಯಿಂದ ಸಿಗುವ ಗೌರವ ಬೇರೆ ಯಾವುದರಿಂದಲೂ ಸಿಗುತ್ತಿಲ್ಲ. ಕ್ರೀಡಾ ಕ್ಷೇತ್ರವು ಹಲವಾರು ಇತರ ಉದ್ದಿಮೆಗಳಿಗೆ ಅನುವು ಮಾಡಿಕೊಡುತ್ತದೆ,” ಎಂಬುದು ಕ್ಲೈವ್ ಆಸ್ಟಿನ್ ಅವರ ಅಭಿಪ್ರಾಯ.

