ಗಾಂಧೀ ಜಯಂತಿಯಂದು ದೋಹಾದ ಐಸಿಸಿಯಿಂದ ರಸಪ್ರಶ್ನೆ ಕಾರ್ಯಕ್ರಮ

0
15

ದೋಹಾ:

ಕೊಲ್ಲಿ ರಾಷ್ಟ್ರಗಳಲ್ಲಿ ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿರಿಸಿಕೊಂಡು ಬಂದಿರುವ ಇಂಡಿಯನ್‌ ಕಲ್ಚರ್‌ ಸೆಂಟರ್‌ (ಐಸಿಸಿ) ಸಾತಂತ್ರ್ಯ ಸಂಭ್ರಮದ ಅಮೃತಮಹೋತ್ಸವದ ಅಂಗವಾಗಿ 12 ವರ್ಷ ಮೇಲ್ಪಟ್ಟವರಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

ನೂರಕ್ಕೂ ಹೆಚ್ಚು ಸ್ಪರ್ಧಿಗಳು ಹೆಸರು ನೋಂದಾವಣೆ ಮಾಡಿಕೊಂಡ ಕಾರಣ ಇಬ್ಬರು ಸ್ಪರ್ಧಿಗಳ ಗುಂಪುಗಳನ್ನಾಗಿ ಮಾಡಿ ಸ್ಪರ್ಧೆಯನ್ನು ನಡೆಸಲಾಯಿತು.

ಅಕ್ಟೋಬರ್‌ 1 ರಂದು ನಡೆದ ಈ ಕಾರ್ಯಕ್ರಮದಲ್ಲಿ ಐಸಿಸಿ ಅಶೋಕ ಸಭಾಂಗಣ ಮತ್ತು ಅದಕ್ಕೆ ಹೊಂದಿಕೊಂಡಿರುವ ಸಭಾಂಗಣದಲ್ಲಿ ಭಾರತೀಯರು ಕಿಕ್ಕಿರಿದು ಸೇರಿದ್ದು ಕಾರ್ಯಕ್ರಮಕ್ಕೆ ಕಲಶವಿಟ್ಟಂತಿತ್ತು. ಒಳಗಡೆ ಕೇವಲ ಸ್ಪರ್ಧಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು ಉಳಿದವರು ಪ್ರತ್ಯೇಕ ಸ್ಥಳದಲ್ಲಿರಬೇಕಾಯಿತು. ಎಲ್ಲ ಸ್ಪರ್ಧಿಗಳಿಗೂ ಲಿಖಿತ ಪ್ರಶ್ನಾವಳಿಯನ್ನು ನೀಡಲಾಗಿದ್ದು, 20 ನಿಮಿಷಗಳ ಕಾಲಾವಕಾಶವನ್ನು ನೀಡಲಾಯಿತು. ಅತಿ ಹೆಚ್ಚು ಅಂಕ ಗಳಿಸಿದ ನಾಲ್ಕು ತಂಡಗಳನ್ನು ಸೆಮಿಫೈನಲ್‌ಗೆ ಆಯ್ಕೆ ಮಾಡಲಾಯಿತು. ಎರಡು ಸುತ್ತಿನ ಸೆಮಿಫೈನಲ್‌ ಆಯೋಜಿಸಿ ನಾಲ್ಕು ತಂಡಗಳನ್ನು ಅಕ್ಟೋಬರ್‌ 2 ರಂದು ನಡೆದ ಫೈನಲ್‌ಗೆ ಆಯ್ಕೆ ಮಾಡಲಾಯಿತು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬವಾದ ಅಕ್ಟೋಬರ್‌ 2 ರಂದು “ಬಾಪು ಸಂಭ್ರಮಾಚರಣೆ” ವಿಷಯವನ್ನು ಆಧರಿಸಿ ನೇರ ಕ್ವಿಝ್‌ ಕಾರ್ಯಕ್ರಮ ನಡೆಸಲಾಯಿತು. ಕ್ವಿಝ್‌ ಮಾಸ್ಟರ್‌ ಶಫ್ಕತ್‌ ನಬಿ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜೇತರರು:

ಫೈನಲ್‌ ತಲುಪಿದ ನಾಲ್ಕ ತಂಡಗಳಲ್ಲಿ ಹುಸೇನ್‌ ಅಬ್ದುಲ್‌ ಖಾದರ್‌ ಮತ್ತು ಮೊಹಮ್ಮದ್‌ ಆತಿಫ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡರು. ಶಿಂಜಿ ಲೀಲಾ ಮತ್ತು ಸ್ವಪ್ನಾ ಉನ್ನಿ ರನ್ನರ್ಸ್‌ ಅಪ್‌ ಗೌರವಕ್ಕೆ ಪಾತ್ರರಾದರು. ಕತಾರ್‌ನಲ್ಲಿ ಭಾರತೀಯ ರಾಯಭಾರಿಯಾಗಿರುವ ದೀಪಕ್‌ ಮಿತ್ತಲ್‌ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.

ದೋಹಾ ಕತಾರ್‌ ನೆಲದಲ್ಲಿ ಭಾರತೀಯ ಸಂಸ್ಕೃತಿ, ಕನ್ನಡದ ಸಾಂಸ್ಕೃತಿಕ ರಾಯಭಾರಿಯಂತೆ ಕಾರ್ಯನಿರ್ವಹಿಸುತ್ತಿರುವ ಐಸಿಸಿಯ ಉಪಾಧ್ಯಕ್ಷ ಎಲ್ಲರ ಪ್ರೀತಿಯ “ಸುಬ್ಬು” ಸುಬ್ರಹ್ಮಣ್ಯ ಹೆಬ್ಬಾಗಿಲು ಐಸಿಸಿ ಕುರಿತಾಗಿ ಪ್ರಾಸ್ತಾವಿಕ ಮಾತನಾಡಿದರು. ಐಸಿಸಿ ಆಡಳಿತ ಮಂಡಳಿ ಸದಸ್ಯೆಯಾದ ಕಮಲಾ ಠಾಕೂರ್‌ ಧನ್ಯವಾದ ಸಲ್ಲಿಸಿದರು. ಸಾಹಿತ್ಯ ಜ್ಯೋತ್ಸ್ನಾ ಅವರು ಕಾರ್ಯಕ್ರಮ ನಿರೂಪಿಸಿದರು.