Wednesday, November 6, 2024

ಚಾಂಪಿಯನ್‌ ದೀಪ್ತಿ ಸಾವಿಗೆ ಯಾರು ಹೊಣೇ?

ಬೆಂಗಳೂರಿನ ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ ದೀಪ್ತಿ ಮಂಜುನಾಥ್‌ Sapthagiri engineering college student Deepthi Manjunath death case ನಮ್ಮನ್ನಗಲಿ ಇಂದಿಗೆ 50 ದಿನಗಳೇ ಸಂದಿವೆ. ವೂಷು ಚಾಂಪಿಯನ್‌ ಸಾವಿಗೆ ಕಾರಣವೇನೆಂಬುದು ಗೊತ್ತಿದ್ದರೂ ಇಲ್ಲಿ ತಪ್ಪಿತಸ್ಥರು ಯಾರು ಎಂಬುದು ಇನ್ನೂ ಬೆಳಕಿಗೆ ಬಂದಿಲ್ಲ.

ಆಗಸ್ಟ್‌ 29 ರಂದು ಮೈಸೂರಿನಲ್ಲಿ ಖೇಲೋ ಇಂಡಿಯಾ ಆಶ್ರಯದಲ್ಲಿ ನಡೆದ ವೂಷು ಚಾಂಪಿಯನ್‌ಷಿ ವೇಳೆ ದೀಪ್ತಿ ಅಸ್ವಸ್ಥರಾಗಿ ನಂತರ ಸ್ಥಳೀಯ ಅಲ್‌ ಅನ್ಸಾರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು.

ಘಟನೆಯ ಹಿನ್ನೆಲೆ:

ದೀಪ್ತಿ ಅವರು ನಿವೃತ್ತ ಪೊಲೀಸ್‌ ನಿರೀಕ್ಷಕ ಮಂಜುನಾಥ್‌ ಎನ್.‌ ಅವರ ಏಕೈಕ ಮಗಳು. ಹೇಸರಘಟ್ಟ ಸಮೀಪದ ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎರಡನೇ ವರ್ಷದ ಬಯೋಟೆಕ್ನಾಲಜಿ ವಿದ್ಯಾರ್ಥಿನಿ. ಓದಿನ ಜೊತೆಯಲ್ಲಿ ಕ್ರೀಡೆಯಲ್ಲೂ ನಂಬರ್‌ ಒನ್‌. ಕಳೆದ ಎರಡು ಮೂರು ತಿಂಗಳಿಂದ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತರಬೇತಿ ನಡೆಸುತ್ತಿದ್ದರು. ಆದರೆ ಆಗಸ್ಟ್‌ 26ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ನಾರಾಯಣ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾದರು. ಅಲ್ಲಿ ಢೇಂಘ್ಯೂ ಎಂಬುದು ಸಾಬೀತಾಗಿತ್ತು. ಇದಕ್ಕೂ ಮುನ್ನವೇ ಮೈಸೂರಿಗೆ ಹೋಗಲು ಇನ್ನಿಬ್ಬರು ವಿದ್ಯಾರ್ಥಿನಿಯರನ್ನು ಸೇರಿಸಿ ಕೋಚ್‌ ಅಶೋಕ್‌ ವಾಲೇಕರ್‌  ರೈಲ್ವೆ ಟಿಕೆಟ್‌ ಕಾಯ್ದಿರಿಸಿದ್ದರು. ದೀಪ್ತಿ ಚೇತರಿಸಿಕೊಳ್ಳದಿದ್ದ ಕಾರಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಬೇಡ ಎಂದು ಸಲಹೆ ನೀಡಿದ ಕೋಚ್‌ ಇತರೊಂದಿಗೆ ಮೈಸೂರಿಗೆ ಪ್ರಯಾಣಿಸಿದ್ದರು.

ಆಗಸ್ಟ್‌ 29ರಂದು ಮೈಸೂರಿನ ಚಾಮುಂಡಿ ವಿಹಾರದಲ್ಲಿ ವೂಷು ಸ್ಪರ್ಧೆ. ಈ ನಡುವೆ ದೀಪ್ತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದರೂ ವೈದ್ಯರು ಚಿಕಿತ್ಸೆ ಮುಂದುವರಿಸುವ ಅನಿವಾರ್ಯತೆ ಎದೆ ಎಂದು ಸಲಹೆ ನೀಡಿದ್ದರು. ಚೇತರಿಕೆ ಲಕ್ಷಣ ಕಂಡಿದ್ದರಿಂದ ವೂಷು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಬೇಕು ಎಂದು ದೀಪ್ತಿ ವೈದ್ಯರಲ್ಲಿ ವಿನಂತಿ ಮಾಡಿಕೊಂಡಿದ್ದರು. ಆದರೆ ನಿರಾಕರಿಸಿದ ವೈದ್ಯರು ಆಗಸ್ಟ್‌ 28 ರಂದು ಬಿಡುಗಡೆ ಮಾಡಿದ್ದರು. “ನಾನು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಿಲ್ಲ, ಕೇವಲ ಸ್ಪರ್ಧೆಗಳನ್ನು ವೀಕ್ಷಿಸುವೆ” ಎಂದು ವೈದ್ಯರಿಗೆ ಹೇಳಿದ ಕಾರಣ ಅಲ್ಲಿಯ ವೈದ್ಯರು ಒಪ್ಪಿಗೆ ನೀಡಿದ್ದರು.

ಮೈಸೂರಿನಲ್ಲಿ ಏನಾಯಿತು?

ಆಗಸ್ಟ್‌ 29ರಂದು ದೀಪ್ತಿ ಅವತ ತಂದೆ ಮಂಜುನಾಥ್‌ ಅವರು ಮಗಳನ್ನು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಮೈಸೂರಿಗ ರೈಲು ಹತ್ತಿಸಿ ಕಳುಹಿಸಿದ್ದರು. ಮೈಸೂರು ತಲುಪಿದ ದೀಪ್ತಿ ಅವರಿಗೆ “ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಬೇಡ” ಎಂದು ಸಲಹೆ ನೀಡಿರುವುದಾಗಿ ಸಪ್ತಗಿರಿ ಕಾಲೇಜಿನ ದೈಹಿಕ ಶಿಕ್ಷಕ ಡಾ. ಅಶೋಕ್‌ ಎಲ್‌, ವಾಲೇಕರ್‌ ಹೇಳುತ್ತಾರೆ. ಆದರೆ ಸ್ಪರ್ಧೆಯಲ್ಲಿ ಪಾಲ್ಗೊಂಡ ದೀಪ್ತಿ ರಿಂಗ್‌ನಲ್ಲೇ ಅಸ್ವಸ್ಥರಾದ ಕಾರಣ ಹತ್ತಿರದಲ್ಲಿರುವ ಅಲ್‌ ಅನ್ಸಾರಿ ಆಸ್ಪತ್ರೆಗೆ ದಾಖಲಿಸಲು ಅಲ್ಲಿ ಅಸು ನೀಗಿದರು.

ಮೆಡಿಕಲ್‌ ರಿಪೋರ್ಟ್‌ ನೋಡದೆ ಅವಕಾಶ ಕೊಟ್ಟಿದ್ದು ಏಕೆ?:

ಕಳೆದ 29 ವರ್ಷಗಳಿಂದ ಬೆಂಗಳೂರಿನ ಯಶವಂತಪುರದಲ್ಲಿ ಹೆಣ್ಣು ಮಕ್ಕಳಿಗೆ ಉಚಿತವಾಗಿ ಕಬಡ್ಡಿ ತರಬೇತಿ ನೀಡುತ್ತಿರುವ ದೀಪ್ತಿ ಅವರ ತಂದೆ ಇನ್ನೂ ಮಗಳ ಸಾವಿನ ಶೋಕದಿಂದ ಹೊರಬಂದಿಲ್ಲ.sportsmail ಜೊತೆ ಮಾತನಾಡಿದ ಅವರು, “ಮಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿ ಹೋಗಿದ್ದಳು. ಹಾಗಾದರೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹೇಳಿದ್ದು ಯಾರು? ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದ ಮಗುವಿನ ವೈದ್ಯಕೀಯ ವರದಿ ನೋಡದೆ ಆಕೆಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದು ಏಕೆ? ಅಲ್‌ ಅನ್ಸಾರಿ ಆಸ್ಪತ್ರೆ ಬಿಟ್ಟು ಬೇರೆ ಆಸ್ಪತ್ರೆಗೆ ಯಾಕೆ ಕೊಂಡು ಹೋಗಲಿಲ್ಲ. ನಾನು ಕರೆ ಮಾಡಿದಾಗ ಪ್ರಥಮ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ವೈದ್ಯರು ಹೇಳುತ್ತಿದ್ದರು. ಉತ್ತಮ ಸೌಲಭ್ಯ ಇಲ್ಲದಿದ್ದಾಗ ಅಲ್ಲಿಂದ ಬೇರೆ ಆಸ್ಪತ್ರೆಗೆ ಕೊಂಡೊಯ್ಯಬಹುದಿತ್ತು. ಎಲ್ಲದಕ್ಕೂ ಸಂಘಟಕರು ಅನಾರೋಗ್ಯದಲ್ಲಿದ್ದ ಮಗುವಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದೇಕೆ?” ಎಂದು ಪ್ರಶ್ನಿಸಿದ್ದಾರೆ.

ನಮಗೆ ಗೊತ್ತಿಲ್ಲ, ಅವರಲ್ಲಿ ಕೇಳಿ!!!!:

ಕಳೆದ ನಾಲ್ಕೈದು ದಿನಗಳಿಂದ ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಯತ್ನಿಸಿದಾಗ ಮೊದಲಿಗೆ ಸಿಕ್ಕಿದ್ದು ಅಲ್‌ ಅನ್ಸಾರಿ ಆಸ್ಪತ್ರೆಯ ಮ್ಯಾನೇಜರ್‌, ಈ ಆಸ್ಪತ್ರೆಯ ಮ್ಯಾನೇಜರ್‌ ಎಷ್ಟು ಒಳ್ಳೆಯವರೆಂದರೆ ವಿದ್ಯಾರ್ಥಿನಿಯ ಹೆಸರನ್ನು ಕೂಡ ಹೇಳಲಿಲ್ಲ. ಮೊದಲು ದಾಖಲೆಗಳನ್ನು ನೀಡುವೆ ಎಂದವರು, ನಂತರ ನಮ್ಮ ಆಡಳಿತ ಮಂಡಳಿ ಯಾವುದೇ ದಾಖಲೆ ನೀಡದಿರಲು ತೀರ್ಮಾನ ಕೈಗೊಂಡಿದೆ ಎಂದರು.

ಕರ್ನಾಟಕ ವೂಷು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಶೋಕ್‌ ಡಿ. ಮುಕಾಶಿ ಅವರನ್ನು ಸಂಪರ್ಕಸಿದಾಗ, “ಮನೆಗೆ ಹೋಗಿ ಕಾಲ್‌ ಮಾಡ್ತೀನಿ,” ಎಂದು ಹೇಳಿದವರು ನಾಲ್ಕು ದಿನವಾದರೂ ಕರೆಯನ್ನು ಸ್ವೀಕರಿಸಲೇ ಇಲ್ಲ. ಮಂಗಳವಾರ ಕರೆ ಮಾಡಿ “ನಮ್ಮಿಂದ ಏನೂ ಆಗಿಲ್ಲ,” ಎಂಬ ಹಾರಿಕೆಯ ಉತ್ತರ ನೀಡಿದರು.  ಮೈಸೂರು ವೂಷು ಸಂಸ್ಥೆಯ ಕಾರ್ಯದರ್ಶಿ ಎಂ.ಎ. ಧರ್ಮ ಅವರು “ನಮಗೆ ಹೇಗೆ ಹೊತ್ತಾಗುತ್ತದೆ? ನೀವೇ ಹೇಳಿ, ರಾಜ್ಯ ಕಾರ್ಯದರ್ಶಿಯನ್ನು ಕೇಳಿ,” ಎಂದು ಉತ್ತರಿಸಿದ್ದಾರೆ. ಚಾಂಪಿಯನ್‌ಷಿಪ್‌ ನಡೆಸಲು ಚಾಮುಂಡಿ ವಿಹಾರ ಅಂಗಣವನ್ನು ನೀಡಿದ ಯುವಜನ ಸೇವಾ ಕ್ರೀಡಾ ಇಲಾಖೆಯ ಅಧಿಕಾರಿಗೂ ಈ ಘಟನೆಯ ಬಗ್ಗೆ ಅರಿವಿಲ್ಲ. ಖೇಲೋ ಇಂಡಿಯಾ Khelo India ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡುವ ಭಾರತೀಯ ಕ್ರೀಡಾ ಪ್ರಾಧಿಕಾರದ Sports Authority Of India (SAI) ಬೆಂಗಳೂರು ವಿಭಾಗದ ಪ್ರಾದೇಶಿಕ ನಿರ್ದೇಶಕಿ ರಿತು ಪಾತಿಕ್‌ ಅವರು, “ಹುಡುಗಿಯೊಂದು ಸಾವನ್ನಪ್ಪಿದ ಬಗ್ಗೆ ನಮಗೆ ಮಾಹಿತಿ ಇದೆ, ನೀವು ಭಾರತೀಯ ಕ್ರೀಡಾಪ್ರಾಧಿಕಾರದ ಮೇಲೆ ಆರೋಪ ಮಾಡಬೇಡಿ, ಸ್ವಲ್ಪ ಸಮಯ ಕೊಡಿ, ಉತ್ತರಿಸುವೆ” ಎಂದು ಅಧಿಕಾರಿಯಂತೆಯೇ ಮಾತನಾಡಿದರು. ಖೇಲೋ ಇಂಡಿಯಾದ ಬ್ಯಾನರ್‌ ಅಡಿ ಸ್ಪರ್ಧೆಯೊಂದು ನಡೆಯುವಾಗ ಅದು ಭಾರತೀಯ ಕ್ರೀಡಾಪ್ರಾಧಿಕಾರದ ಜವಾಬ್ದಾರಿ ಆಗಿರುತ್ತದೆ. ಸ್ಪರ್ಧಿಯೊಬ್ಬರು ಅನಾರೋಗ್ಯದಲ್ಲಿದ್ದಾರೆ ಎಂದು ತಿಳಿದಿದ್ದರೂ ಅವರು ಹಟ ಮಾಡುವಾಗ ವೈದ್ಯಕೀಯ ವರದಿಯನ್ನು ಪರಿಗಣಿಸಿ ಅವಕಾಶ ನೀಡುವುದು ಅಲ್ಲಿರುವ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ.

ಮಂಜುನಾಥ್‌ ಅವರು ಮಗಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದರು. ಆದರೆ ಈಗ ಉಳಿದದ್ದು ಸಾಲ ಮಾತ್ರ. “ಸರ್‌ ಸಾಲ ಮಾಡಿ ಫೀಸ್‌ ಕಟ್ಟಿದ್ದೆ, ನನ್ನ ಮಗಳು ನನ್ನ ಬಿಟ್ಟು ಹೋದಳು. ಕಬಡ್ಡಿ ತರಬೇತಿ ನೀಡುತ್ತ ಇತರ ಮಕ್ಕಳ ಸಾಧನೆಯಲ್ಲಿ ನನ್ನ ಮಗಳನ್ನು ಕಾಣುವೆ. ದೀಪ್ತಿಗೆ ಪ್ರಾಥಮಿಕ ಹಾಗೂ ಹೈಸ್ಕೂಲಿನಲ್ಲಿ ಪಾಠ ಮಾಡಿದ ಎಲ್ಲ ಶಿಕ್ಷಕಿಯರು, ಸಪ್ತಗಿರಿಯಲ್ಲಿ ಆಕೆಯ ಸಹಪಾಠಿಗಳು, ಅಧ್ಯಾಪಕ ವೃಂದ ಎಲ್ಲರೂ ಅಂತಿಮ ದರ್ಶನ ಪಡೆದರು.” ಎಂದು ಕಣ್ಣೀರಿಟ್ಟರು.

Related Articles