Wednesday, December 4, 2024

ಎರಡೂ ಕೈ ಇಲ್ಲ, ಆದರೆ ಕಾಲಿನಲ್ಲೇ ಗುರಿ ಇಡುವ ಬಿಲ್ಗಾರ್ತಿ ಶೀತಲ್‌ ದೇವಿ

2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕಿಸ್ತ್ವಾರ್‌ ಜಿಲ್ಲೆಯ ಕುಗ್ರಾಮ ಲೋಯಿ ಧಾರ್.‌ ಭಾರತ ಸೇವಾ ವಿಭಾಗದ ರಾಷ್ಟ್ರೀಯ ರೈಫಲ್‌ ಪಡೆಯ ಶಿಬಿರ ನಡೆಯುತ್ತಿತ್ತು. ಅಲ್ಲಿಗೆ ಎರಡೂ ಕೈಗಳಿಲ್ಲದ ಬಾಲಕಿ ಭಾರತದ ಸೈನಿಕರ ಕಣ್ಣಿಗೆ ಬೀಳುತ್ತಾಳೆ. ಕೈಗಳಲಿದ್ದಿದ್ದರೂ ಆಕೆಯಲ್ಲಿರುವ ಉತ್ಸಾಹ ಕಂಡು ಸೇನಾ ಪ್ರಮುಖರು ಆಕೆಯ ಬದುಕಿಗೆ ಅಗತ್ಯವಿರುವ ಶಿಕ್ಷಣವನ್ನು ಸೇನಾ ವತಿಯಿಂದ ನೀಡಲು ತೀರ್ಮಾನಿಸುತ್ತಾರೆ. ಮುಂದೆ ಆಕೆ ಕಾಲಿನಲ್ಲಿಯೇ ಬಿಲ್ಗಾರಿಕೆಯನ್ನು ಕಲಿಯುತ್ತಾಳೆ. ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಕಾಲಿನಲ್ಲೇ ಗುರಿ ಇಟ್ಟು ಪದಕ ಗೆದ್ದ ಜಗತ್ತಿನ ಮೊದಲ ಬಿಲ್ಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗುತ್ತಾಳೆ. ಚೀನಾದ ಹಾಂಗ್ಜೌ ನಗರದಲ್ಲಿ ಭಾನುವಾರದಿಂದ ಆರಂಭಗೊಳ್ಳಿರುವ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಬಿಲ್ಗಾರ್ತಿ ಶೀತಲ್‌ ದೇವಿ Sheetal Devi world’s first women armless archer to win the medal.

ಗದ್ದೆಯಲ್ಲಿ ಕೆಲಸ ಮಾಡುವ ತಂದೆ, ಕುರಿ ಕಾಯುವ ತಾಯಿ, ಸುತ್ತಲೂ ಬೆಟ್ಟ, ಬದುಕೂ ಕೂಡ. ಅವರ ಬದುಕೆಂದರೆ ಹುಟ್ಟಿನಿಂದ ಕೈಗಳಿಲ್ಲದ ಶೀತಲ್‌ ದೇವಿ. 2019ರಲ್ಲಿ ಸಮೀಪದ ಮೋಘಲ್‌ ಮೈದಾನದಲ್ಲಿ ಸೇನಾ ಕಾರ್ಯಕ್ರಮ ನಡೆಯುತ್ತಿತ್ತು. ಕೈಗಳಿಲ್ಲದಿದ್ದರೂ ಸದಾ ಚುರುಕಿನಿಂದ ಕೂಡಿದ ಶೀತಲ್‌ ದೇವಿ ಸೇನಾ ಅಧಿಕಾರಿಗಳ ಹೃದಯ ಗೆದ್ದಳು. ಈ ಬಾಲಕಿಗೆ ಬದುಕು ನೀಡಬೇಕೆಂದು ಇಡೀ ರಾಷ್ಟ್ರೀಯ ರೈಫಲ್‌ ವಿಭಾಗ ತೀರ್ಮಾನ ಕೈಗೊಂಡಿತು. ಶಿಕ್ಷಣ ನೀಡುವುದು ಮಾತ್ರವಲ್ಲ ಆಕೆಗೆ ಅಗತ್ಯವಿರುಗ ವೈದ್ಯಕೀಯ ಸೇವೆಯನ್ನೂ ಸೇನೆಯೇ ನೀಡಿತು. ಶೀತಲ್‌ ಅವರು ಕಾಲಿನಲ್ಲಿ ಆರ್ಚರಿ ಅಭ್ಯಾಸ ಮಾಡುವುದಾಗಿ ಕೇಳಿಕೊಂಡಾಗ ಸೇನಾ ಅಧಿಕಾರಿಗಳಿಗೆ ಅಚ್ಚರಿ. ಆಕೆಯ ಬಯಕೆ ಯಾವುದೇ ಇರಲಿ ಅದನ್ನು ಪೂರೈಸುವ ಜವಾಬ್ದಾರಿಯನ್ನು ಸೇನಾ ಅಧಿಕಾರಿಗಳು ಹೊತ್ತರು.

ಭಾರತದ ಪ್ಯಾರಾಲಿಂಪಿಕ್‌ ತಂಡದ ಆರ್ಚರಿ ಕೋಚ್‌ ಕುಲದೀಪ್‌ ಬೈದ್ವಾನ್‌ ಅವರಲ್ಲಿ ತರಬೇತಿ ಪಡೆಯಲು ಕಳುಹಿಸಿದರು. ಕುಲದೀಪ್‌ ಅವರು ದೇಶದ ಹಲವಾರು ವಿಶೇಷ ಚೇತನರಿಗೆ ಬಿಲ್ಗಾರಿಕೆ ತರಬೇತಿ ನೀಡಿದ ದ್ರೋಣಾಚಾರ್ಯ.

ಎರಡೂ ಕೈ ಇಲ್ಲದೆ ಪದಕ ಗೆದ್ದ ಜಗತ್ತಿನ ಮೊದಲ ಬಿಲ್ಗಾರ್ತಿ!

ಭಾರತದ ಪ್ಯಾರಾ ಆರ್ಚರಿ ತಂಡ ಜಾಗತಿಕ ಮಟ್ಟದಲ್ಲಿ ಮಿಂಚುವಲ್ಲಿ ಕುಲದೀಪ್‌ ಅವರ ಪಾತ್ರ ಪ್ರಮುಖವಾಗಿತ್ತು. ಕೈ ಇಲ್ಲದ ಬಾಲಕಿ ಕಾಲಲ್ಲಿ ಹೇಗೆ ಗುರಿ ಇಡಬಲ್ಲಳು ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಆದರೆ ಶೀತಲ್‌ ದೇವಿ ಹೆಸರಿಗೆ ತಕ್ಕಂತೆ ದೇವಿಯಾಗಿದ್ದಳು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಅದ್ಭುತ ಪ್ರದರ್ಶನ ತೋರಿ ಎಲ್ಲರನ್ನೂ ನಿಬ್ಬೆರಗುಗೊಳಿಸಿದಳು. ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದಳು, ಚೆಕ್‌ಗಣರಾಜ್ಯದಲ್ಲಿ ನಡೆದ ಜಾಗತಿಕ ಪ್ಯಾರಾ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಕಾಲಿನಲ್ಲಿ ಗುರಿ ಇಟ್ಟ ಶೀತಲ್‌ ದೇವಿ ಒಂದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದಾಗ ಇಡೀ ಜಗತ್ತೇ ಆಶ್ಚರ್ಯಪಟ್ಟಿತು. ಭಾರತೀಯ ಸೇನೆಯ ಲೆಫ್ಟಿನೆಂಟ್‌ ಕರ್ನಲ್‌ ಸುನಿಲ್‌ ಬರ್ತ್ವಾಲ್‌ ತಂಡಕ್ಕೂ ಎಲ್ಲಿಲ್ಲದ ಖುಷಿ.

2024ರ ಪ್ಯಾರೀಸ್‌ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಶೀತಲ್‌ ದೇವಿ ಪದಕ ಗೆಲ್ಲುವ ಫೇವರಿಟ್‌ ಎನಿಸಿದ್ದಾರೆ. ಸದ್ಯ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಎರಡೂ ಕೈ ಇಲ್ಲದ ಈ ಪ್ರತಿಭೆಗೆ ಎಲ್ಲರ ಹರಕೆ, ಹಾರೈಕೆ ಇರಲಿ.

Related Articles