ಬೆಂಗಳೂರು: “ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ 25 ಪದಕಗಳನ್ನು ಗೆಲ್ಲದೆ ಭಾರತಕ್ಕೆ ಹಿಂದಿರುಗುವುದಿಲ್ಲ,” ಎಂದು ಮಾಧ್ಯಮಗಳ ಮುಂದೆ ಅತ್ಯಂತ ಆತ್ಮವಿಶ್ವಾದಿಂದ ಹೇಳಿಕೊಂಡಿದ್ದ ಭಾರತೀಯ ಪ್ಯಾರಾಲಿಂಪಿಕ್ಸ್ ತಂಡದ ಪ್ರಧಾನ ಕೋಚ್ ಕೆ. ಸತ್ಯನಾರಾಯಣ 2017 ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿಯಿಂದ ವಂಚಿತರಾದವರು. ಪ್ರಶಸ್ತಿಯನ್ನು ಪ್ರಕಟಿಸಿದ ಕೇಂದ್ರ ಸರಕಾರ ಆ ನಂತರ ತಡೆಹಿಡಿದಿತ್ತು. ಈ ಬಾರಿ ಕೆ. ಸತ್ಯನಾರಾಯಣ ಅವರಿಗೆ ಕೇಂದ್ರ ಸರಕಾರ ನೀಡುವ ದ್ರೋಣಾಚಾರ್ಯ ಪ್ರಶಸ್ತಿಯನ್ನು ಯಾರಿಂದಲೂ ತಡೆಯಲಾಗದು, ಏಕೆಂದರೆ ಭಾರತ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ 27 ಪದಕಗಳನ್ನು ಗೆದ್ದು ಇತಿಹಾದ ನಿರ್ಮಿಸಿದೆ. 6 ಚಿನ್ನ, 9 ಬೆಳ್ಳಿ ಹಾಗೂ 12 ಕಂಚಿನ ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿದೆ. ಈ ಸಾಧನೆಯ ಹಿಂದೆ ಭಾರತದ ಪ್ಯಾರಾಲಿಂಪಿಕ್ ಕೋಚ್ ಕನ್ನಡಿಗ ಸತ್ಯನಾರಾಯಣ ಅವರ ಕೊಡುಗೆ ಅಪಾರವಾದುದು. Indian Paralympic coach K Sathyanarayana is deserve for Dronacharya Award.
2011ರಿಂದ ಪ್ಯಾರಾಲಿಂಪಿಯನ್ನರಿಗೆ ತರಬೇತಿ ನೀಡುತ್ತಿರುವ ಸತ್ಯ ಅವರ ಯಶಸ್ಸಿನ್ನು ಕಂಡು ಸಹಿಸದ ಅನೇಕರು ಹಿಮ್ಮೆಟ್ಟುವ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಈ ಹಿಂದೆ ಅದರಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ಈ ಬಾರಿಯೂ ಪ್ಯಾರಿಸ್ ಒಲಿಂಪಿಕ್ಸ್‌ಗೆ ಹೊರಾಟಗಲೂ ಸತ್ಯನಾರಾಯಣ ವಿರುದ್ಧವಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.
ಅಂದು ಹೂ ಮಾರುತ್ತಿದ್ದ ಚಾಂಪಿಯನ್: ಕೆ. ಸತ್ಯನಾರಾಯಣ ಅವರ ಬದುಕಿನ ಹಾದಿಯನ್ನೊಮ್ಮೆ ಹಿಂದಿರುಗಿ ನೋಡಿದಾಗ ಅವರು ಸಾಗಿ ಬಂದ ಹಾದಿ ಕಷ್ಟಕರವಾಗಿತ್ತು. ಅದು ಕಠಿಣವಾದ ಟ್ರ್ಯಾಕ್. ಶಿವಮೊಗ್ಗದಲ್ಲಿರುವಾಗ ಸತ್ಯನಾರಾಯಣ ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡರು. ತಾಯಿ ಬೇರೆಯವರ ಮನೆಯಲ್ಲಿ ಕೂಲಿ ಮಾಡುತ್ತಿದ್ದರು. ಅಕ್ಕ ಕಟ್ಟಿದ ಹೂವನ್ನು ಅಂಗಡಿಗಳಿಗೆ ತಲುಪಿಸಿ ಶಾಲೆಗೆ ಹೋಗಬೇಕಾಗಿತ್ತು. ಹೀಗೆ ನಿತ್ಯವೂ ಕಟ್ಟಿದ ಹೂವನ್ನು ಅಂಗಡಿಗಳಿಗೆ ತಲುಪಿಸುತ್ತಲೇ ಓಡಿದ ಸತ್ಯ ಓಟದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುವಾದರು. ತಾಯಿ ಪದ್ಮಾವತಿ ಹಾಗೂ ಅಕ್ಕ ನಾಗರತ್ನ ಅವರ ದುಡಿಮೆಯಲ್ಲಿ ಹೆಗಲುಕೊಟ್ಟ ಸತ್ಯನಾರಾಯಣ ಈಗಲೂ ಸಂಕಷ್ಟದಲ್ಲಿರುವ ಅಥ್ಲೀಟ್‌ಗಳಿಗೆ ನೆರವಾಗುತ್ತಿದ್ದಾರೆ. ಶಿವಮೊಗ್ಗ ಪೇಟೆಯ ಗಲ್ಲಿ ಗಲ್ಲಿಗಳಲ್ಲಿ ಹೂವಿನ ಹಾರ ಹಿಡಿದು ಅಂಗಡಿಯಿಂದ ಅಂಗಡಿಗೆ ಓಡಿರುವುದನ್ನು ಸತ್ಯನಾರಾಯಣ ಈಗಲೂ ಸ್ಮರಿಸುತ್ತಾರೆ. ಇದು ಅವರಿಗೆ ಮುಂದೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬರಿಗಾಲಲ್ಲಿ ಸ್ಪರ್ಧಿಸಲು ನೆರವಾಯಿತು. ಮುಂದೆ ಸತ್ಯನಾರಾಯಣ ರಾಷ್ಟ್ರೀಯ ಮಟ್ಟದ 1500 ಮೀಟರ್ ಓಟದಲ್ಲಿ ಚಾಂಪಿಯನ್ ಪಟ್ಟ ಗೆಲ್ಲುತ್ತಾರೆ. ಹಸಿವಿಗಾಗಿ ಹುಟ್ಟಿದ ಓಟ ಒಬ್ಬ ಚಾಂಪಿಯನ್ನರನ್ನು ಹುಟ್ಟುಹಾಕಿತು.
ಸತ್ಯನಾರಾಯಣ ಅವರ ಬದುಕಿನ ಹಾದಿ ಈಗಿನಷ್ಟು ಸುಲಭವಾಗಿರಲಿಲ್ಲ, ಲಾಟರಿ ಟಿಕೆಟ್ ಮಾರಿ ಬಂದ ಹಣದಲ್ಲಿ ಶೂ ಖರೀದಿಸಿದ್ದು, ಗೆಳೆಯರು ಸಂಗ್ರಹಿಸಿದ ಹಣದಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದು ಎಲ್ಲವೂ ಕಠಿಣದ ಹಾದಿಯೇ. ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಸತ್ಯ 3 ನಿಮಿಷ 55 ಸೆÜಕೆಂಡುಗಳಲ್ಲಿ 1500 ಮೀ. ಓಟ ಪೂರ್ಣಗೊಳಿಸಿದ ಸತ್ಯನಾರಾಯಣ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು. 300 ಮತ್ತು 800 ಮೀ.ನಲ್ಲಿ ರಾಜ್ಯದಲ್ಲೇ ನೂತನ ದಾಖಲೆ ಬರೆದರು. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದರು. ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯದಲ್ಲಿ ನೂತನ ದಾಖಲೆ ಬರೆದರು. ಹಾಂಕಾಂಗ್‌ನಲ್ಲಿ ನಡೆದ ಗೋಲ್ಡನ್ ಮೈಲ್ ರೇಸ್‌ನಲ್ಲಿ ಬೆಳ್ಳಿ ಗೆದ್ದ ಸತ್ಯ, ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ 3 ಚಿನ್ನ ಗೆದ್ದಿದ್ದರು.
ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಸತ್ಯನಾರಾಯಣ ಅವರಿಗೆ ರೇಲ್ವೆಯಲ್ಲಿ ಉದ್ಯೋಗ ಸಿಕ್ಕಿತು. ನಂತರ ವಿವಿಧ ಕ್ರೀಡಾ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಉತ್ತಮ ರೀತಿಯಲ್ಲಿ ಕ್ರೀಡಾಕೂಟಗಳನ್ನು ಸಂಘಟಿಸಿದ್ದರು. 2012ರ ಪ್ಯಾರಾಲಿಂಪಿಕ್ಸ್‌ನಲ್ಲಿ ಎಚ್.ಎನ್. ಗಿರೀಶ್ ಅವರಿಗೆ ತರಬೇತಿ ನೀಡಿದ್ದ ಸತ್ಯನಾರಾಯಣ ಅವರು ಗಿರೀಶ್ ಬೆಳ್ಳಿಯ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನಂತರ ಮಾರಿಯಪ್ಪನ್ ಚಿನ್ನ, ಬೆಳ್ಳಿ ಹಾಗೂ ಈ ಬಾರಿಯ ಕಂಚಿನ ಯಶಸ್ಸಿನಲ್ಲಿಯೂ ಸತ್ಯನಾರಾಯಣ ಅವರ ಪಾತ್ರ ಪ್ರಮುಖವಾಗಿತ್ತು. ಲಂಡನ್, ರಿಯೋ, ಟೀಕಿಯೋ ಹಾಗೂ ಪ್ಯಾರಿಸ್ ಪ್ಯಾರಾಲಿಂಪಿಕ್‌ಗಳಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಸತ್ಯನಾರಾಯಣ ನಿಜವಾಗಿಯೂ ದ್ರೋಣಾಚಾರ್ಯ.
ಪ್ಯಾರಾಲಿಂಪಿಕ್ಸ್‌ನಲ್ಲಿ ಇರುವುದೇ ಅಡೆ ತಡೆಗಳನ್ನು ದಾಟಿ ಮುಂದೆ ಸಾಗುವುದು. ಸತ್ಯ ಅವರ ಯಶಸ್ಸು ಅನೇಕರಿಗೆ ಸಹಿಸಲಾಗುತ್ತಿಲ್ಲ. ಒಬ್ಬ ಕ್ರೀಡಾಪಟುವನ್ನೂ ಬೆಳೆಸದೆ ಕೇವಲ ಕ್ರೀಡೆಯ ಹೆಸರಿನಲ್ಲಿ ಪ್ರಸಿದ್ಧಿ ಪಡೆದು, ಸರಕಾರಕ್ಕೆ ತಲೆನೋವಾಗಿರುವವರು, ಸಾಮರ್ಥ್ಯ ಇದ್ದರೂ ಅಧಿಕಾರ ಇಲ್ಲದೆ ಪರಿತಪಿಸುವವರು ಸತ್ಯ ಅವರ ಯಶಸ್ಸು ನೋಡಿ ಸಹಿಸಿಕೊಳ್ಳಲಾಗದೆ ದೂರುತ್ತಿದ್ದಾರೆ. ಸತ್ಯನಾರಾಯಣ ಯಶಸ್ಸಿನ ಹಾದಿಯಲ್ಲೇ ಸಾಗುತ್ತಿದ್ದಾರೆ.