Saturday, October 12, 2024

ವಿಶ್ವಗೇಮ್ಸ್‌ಗೆ ಭಾರತದ ಮೊದಲ ಪುರುಷ ಸ್ಕೇಟರ್‌ ಕನ್ನಡಿಗ ಧನುಷ್‌!

ಸೋಮಶೇಖರ್‌ ಪಡುಕರೆ, ಬೆಂಗಳೂರು

ಬರ್ಮಿಂಗ್‌ಹ್ಯಾಮ್‌ನಲ್ಲಿ ಗುರುವಾರದಿಂದ ಆರಂಭಗೊಳ್ಳಲಿರುವ ವಿಶ್ವ ಗೇಮ್ಸ್‌-2022ರಲ್ಲಿ ರೋಲರ್‌ ಸ್ಕೇಟಿಂಗ್‌ನಲ್ಲಿ ಕರ್ನಾಟಕದ ಧನುಷ್‌ ಬಾಬು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಸ್ಕೇಟಿಂಗ್‌ನಲ್ಲಿ ಭಾರತವನ್ನು ವಿಶ್ವ ಗೇಮ್ಸ್‌ನಲ್ಲಿ ಪ್ರತಿನಿಧಿಸುತ್ತಿರುವ ಮೊದಲ ಪುರುಷ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಕನ್ನಡಿಗ ಪಾತ್ರರಾಗಿದ್ದಾರೆ.

ವನಿತೆಯ ವಿಭಾಗದಲ್ಲಿ ಕರ್ನಾಟಕದವರೇ ಆದ ಡಾ. ವರ್ಷಾ ಪುರಾಣಿಕ್‌ ಎರಡನೇ ಬಾರಿಗೆ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಸ್ಕೇಟಿಂಗ್‌ನ ಕಿಂಗ್‌ ಆಫ್‌ 100ಮೀ: ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ಧನುಷ್‌ ಬಾಬು ಭಾರತಕ್ಕೆ ರೋಲರ್‌ ಸ್ಕೇಟಿಂಗ್‌ನಲ್ಲಿ ಮೊದಲ ಪದಕ ತಂದ ಸಾಧಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2016ರ ಏಷ್ಯನ್‌ ಸ್ಪೀಡ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದರು. 2018ರಲ್ಲೂ ಕಂಚಿನ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದರು. 100ಮೀ. ಡ್ಯಾಶ್‌ ಸ್ಕೇಟಿಂಗ್‌ 2015ರಲ್ಲಿ ಜಾರಿಗೆ ತರಲಾಯಿತು. ಈ ವಿಭಾಗ ಜಾರಿಗೆ ಬಂದಾಗಿನಿಂದ ಧನುಷ್‌ ಭಾರತದ ವೇಗದ ಸ್ಕೇರ್‌ ಎನಿಸಿಕೊಂಡು. ವೇಗದ ಸ್ಕೇಟಿಂಗ್‌ನಲ್ಲಿ ಪ್ರಭುತ್ವ ಸಾಧಿಸಿದ ಧನುಷ್‌ಗೆ “ಟ್ರಿಪಲ್‌ ಕ್ರೌನ್‌ ಕಿಂಗ್‌ ಆಫ್‌ ದಿ 100ಮೀ” ಬಿರುದು ಕೊಟ್ಟಿರುವುದು ಅವರ ವೇಗಕ್ಕೆ ನೀಡಿದ ಗೌರವ. ಆರು ಬಾರಿ ನ್ಯಾಷನಲ್‌ ಚಾಂಪಿಯನ್‌ ಮತ್ತು ಬೆಸ್ಟ್‌ ಸ್ಕೇಟರ್‌ ಗೌರವಕ್ಕೆ ಪಾತ್ರರಾದ ಧನುಷ್‌ 14 ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. 10 ಬೆಳ್ಳಿಯ ಪದಕಗಳು ಧನುಷ್‌ ಅವರ ಕೊರಳನ್ನು ಅಲಂಕರಿಸಿದೆ. ಐದು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಬರ್ಮಿಂಗ್‌ಹ್ಯಾಮ್‌ಗೆ ಪ್ರಯಾಣಿಸುವ ಮುನ್ನ sportsmail ಜೊತೆ ಮಾತನಾಡಿದ ಧನುಷ್‌, “ವಿಶ್ವ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮೊದಲ ಪುರುಷ ಸ್ಕೇಟರ್‌ ಎಂದೆನಿಸಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಈ ಸಾಧನೆಗೆ ನನ್ನ ಹೆತ್ತವರ ಶ್ರಮ ಹಾಗೂ ತ್ಯಾಗ ಸಾಕಷ್ಟಿದೆ. ಅವರ ಕಠಿಣ ಶ್ರಮ ನನ್ನನ್ನು ಇಲ್ಲಿಯವರೆಗೆ ಕರೆ ತಂದಿದೆ. ದೇಶಕ್ಕಾಗಿ ಉತ್ತಮ ಪ್ರದರ್ಶನ ನೀಡುತ್ತೇನೆ ಎಂಬ ಆತ್ಮವಿಶ್ವಾಸವಿದೆ,” ಎಂದರು.

ಸ್ಕೇಟಿಂಗ್‌ ಕುಟುಂಬ: ಧನುಷ್‌ ಅವರಿಗೆ ತರಬೇತಿ ನೀಡುತ್ತಿರುವುದು ತಂದೆ ಬಾಲಾಜಿ ಬಾಬು. ಆರಂಭದಲ್ಲಿ ಕ್ರಿಕೆಟ್‌ ಆಟಗಾರರಾಗಿದ್ದ ಬಾಲಾಜಿ ಬಾಬು ಅವರು ನಂತರ ಸ್ಕೇಟಿಂಗ್‌ನಲ್ಲಿ ತೊಡಗಿಕೊಂಡರು. ಮಲ್ಲೇಶ್ವರಂ ಜಿಮ್ಖಾನ ತಂಡದ ಪರ ಆಡುತ್ತಿದ್ದ ಬಾಲಾಜಿ ಬಾಬು ಅವರಿಗೆ ಸಿಟಿ ಕ್ರಿಕೆಟರ್ಸ್‌ ತಂಡವನ್ನು ಸೇರಿಕೊಳ್ಳುವ ಅವಕಾಶ ಬಂದಿತ್ತು. ಆದರೆ ಮಗನ ಸ್ಕೇಟಿಂಗ್‌ ಯಶಸ್ಸಿಗಾಗಿ ಕ್ರಿಕೆಟ್‌ ತೊರೆದು ಸ್ಕೇಟಿಂಗ್‌ ಗುರುವಾಗಿ ತಮ್ಮನ್ನು ತೊಡಗಿಸಿಕೊಂಡರು. ಸಿಟಿ ಕ್ರಿಕೆಟರ್ಸ್‌ ತಂಡದಲ್ಲಿ ಆಡುವ ಅವಕಾಶವನ್ನು ತೊರೆದರೂ ಆ ಹೆಸರು ಹಸಿರಾಗಿರಲಿ ಎಂದು ತಮ್ಮ ಸ್ಕೇಟಿಂಗ್‌ ತರಬೇತಿ ಕೇಂದ್ರಕ್ಕೆ ಸಿಟಿ ಸ್ಕೇಟಿಂಗ್‌ ಎಂದು ಹೆಸರಿಟ್ಟರು. ಈಗ ಧನುಷ್‌ ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಾಲಾಜಿ ಬಾಬು,”ಧನುಷ್‌ನನ್ನುಈ ಹಂತಕ್ಕೆ ತರಲು ಸಾಕಷ್ಟು ಶ್ರಮಪಟ್ಟಿರುವೆ. ಇಲ್ಲಿ ನನ್ನ ಪತ್ನಿ ಸುಧಾ ಕೂಡ ಶ್ರಮ ಪಟ್ಟಿರುತ್ತಾಳೆ. ಎಲ್ಲಕ್ಕಿಂತ ಮುಖ್ಯವಾದುದು ಧನುಷ್‌ನ ಬದ್ಧತೆ ಮತ್ತು ಶಿಸ್ತು. ಬರ್ಮಿಂಗ್‌ಹ್ಯಾಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿ ಎಂಬುದೇ ನನ್ನ ಹಾರೈಕೆ,” ಎಂದರು.

 

“ಇತರ ಕ್ರೀಡೆಗಳಂತೆ ಸ್ಕೇಟಿಂಗ್‌ ಕ್ರೀಡೆಗೆ ಪ್ರೇಕ್ಷಕರು ಇರುವುದಿಲ್ಲ. ಹೆಚ್ಚಿನವರು ಈ ಕ್ರೀಡೆಯಲ್ಲಿ ಮುಂದುವರಿಯಲು ಆಸಕ್ತಿ ತೋರುವುದಿಲ್ಲ. ಬಿದ್ದು ಗಾಯವಾಗುತ್ತದೆ ಎಂಬ ಭಯದಲ್ಲಿ ಕೆಲವರು ಅರ್ಧದಲ್ಲಿಯೇ ವಿರಮಿಸುತ್ತಾರೆ. ನಮ್ಮ ಕುಟುಂಬದ ನಾಲ್ವರು ಕೂಡ ಸ್ಕೇಟಿಂಗ್‌ ಚಾಂಪಿಯನ್ನರು,” ಎಂದು ಬಾಲಾಜಿ ಬಾಬು ಹೇಳಿದರು.

ಧನುಷ್‌ ಅವರ ತಾಯಿ ಸುಧಾ ರಾಜ್ಯದ ಉತ್ತಮ ಸ್ಕೇಟರ್‌, ತಂಗಿ ಮೌನ ಕೂಡ ರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದ ಸ್ಕೇಟರ್‌. ವಿಶ್ವ ಗೇಮ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಧನುಷ್‌ ಬಗ್ಗೆ ಮಾತನಾಡಿದ ಅವರ ತಾಯಿ ಸುಧಾ, “ಜಾಗತಿಕ ಸ್ಪರ್ಧೆಯಲ್ಲಿ ನಮ್ಮ ಮಗ ಪಾಲ್ಗೊಳ್ಳುತ್ತಿರುವುದೇ ಹೆಮ್ಮೆಯ ಸಂಗತಿ. ಇದೊಂದು ಐತಿಹಾದಿಕ ಕ್ಷಣ, ಏಕೆಂದರೆ ಭಾರತವನ್ನು ಸ್ಕೇಟಿಂಗ್‌ನಲ್ಲಿ ಪ್ರತಿನಿಧಿಸುತ್ತಿರುವ ಮೊದಲ ಪುರುಷ ಸ್ಪರ್ಧಿ ನನ್ನ ಮಗ. ಇಷ್ಟು ವರುಷ ಸ್ಕೇಟಿಂಗ್‌ ರಿಂಕ್‌ನಲ್ಲಿ ಶ್ರಮಿಸಿದ್ದಕ್ಕೆ ಕೊನೆಗೂ ಖುಷಿ ಪಡುವ ಅವಕಾಶ ಸಿಕ್ಕಿದೆ. ಆತ ದೇಶಕ್ಕೆ ಕೀರ್ತಿ ತರಲಿ ಎಂಬುದೇ ಮನದಾಳದ ಹಾರೈಕೆ,” ಎಂದರು.

Related Articles