Thursday, October 10, 2024

ಕಾಳಸಂತೆಯಲ್ಲಿ ಟಿಕೆಟ್‌ ಮಾರಾಟ: ಸೌರವ್‌ ಗಂಗೂಲಿ ಸಹೋದರಗೆ ನೊಟೀಸ್‌!

ಕೋಲ್ಕೊತಾ: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಈಡನ್‌ ಗಾರ್ಡನ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಪಂದ್ಯದ ಟಿಕೆಟ್‌ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಹಲವು ಜನರನ್ನು ಬಂಧಿಸಿರುವ ಪೊಲೀಸರು ಸೌರವ್‌ ಗಂಗೂಲಿಯ ಸಹೋದರ ಹಾಗೂ ಬಂಗಾಲ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಸ್ನೇಹಶಿಶ್‌ ಗಂಗೂಲಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್‌ ಜಾರಿ ಮಾಡಿದ್ದಾರೆ. Black tickets: Saurav Ganguly brother Snehashish Ganguly was given 24 hours to appear before police.

24 ಗಂಟೆಗಳೊಳಗೆ ವಿಚಾರಣೆಗೆ ಹಾಜರಾಗಬೇಕು, ಒಂದು ವೇಳೆ ಶುಕ್ರವಾರ ರಾತ್ರಿಯೊಳಗೆ ಹಾಜರಾಗದಿದ್ದರೆ ಇನ್ನೊಂದು ನೊಟೀಸ್‌ ಜಾರಿ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಐಸಿಸಿ ವಿಶ್ವಕಪ್‌ಗೆ ಟಿಕೆಟ್‌ ಪಾರ್ಟ್ನರ್‌ ಆಗಿರುವ ಬುಕ್‌ ಮೈ ಶೋ ಕಂಪೆನಿಯ ಇಬ್ಬರು ಅಧಿಕಾರಿಗಳನ್ನು ಕೋಲ್ಕೊತಾ ಪೊಲೀಸರು ವಿಚಾರಣೆ ಮಾಡಿದ್ದಾರೆ.

900 ರೂ. ಮುಖಬೆಲೆಯ ಟಿಕೆಟನ್ನು 8000 ರೂ.ಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಮೈದಾನ್‌ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಈ ಸಂಬಂಧ 16 ಜನರನ್ನು ಬಂಧಿಸಿ 94 ಟಿಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕೋಲ್ಕೊತಾದಲ್ಲಿ ಗುರುವಾರದಿಂದಲೂ ಹಲವು ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್‌ ಅಭಿಮಾನಿಯೊಬ್ಬರು 25,161.97 ರೂ. ನೀಡಿ ಆನ್‌ಲೈನ್‌ನಲ್ಲಿ ಬುಕ್‌ ಮಾಡಿದ್ದರು. ಆದರೆ ಸಂಬಂಧಿಸಿದ ಕಂಪೆನಿಯವರು ಟಿಕೆಟ್‌ ಒದಗಿಸದ ಕಾರಣ ಆ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣ ಕಾಳಸಂತೆಯನ್ನು ಬಯಲಿಗೆಳೆಯುವಂತೆ ಮಾಡಿದೆ.

Related Articles