Saturday, October 5, 2024

ಪಾಕ್‌ ಕ್ರಿಕೆಟ್‌ ತಂಡಕ್ಕೆ ಕ್ರಿಕೆಟ್‌ ಬಾಲ್‌ ಬದಲು ವಾಲಿಬಾಲ್‌!

ಪಾಕಿಸ್ತಾನ ಕ್ರಿಕೆಟ್‌ ತಂಡ ವಿಶ್ವಕಪ್‌ನಲ್ಲಿ ಸೋತ ಕೂಡಲೇ ಅಲ್ಲಿಯ ಮಾಜಿ ಕ್ರಿಕೆಟಿಗರು ನೀಡುವ ಹೇಳಿಕೆಗಳನ್ನು ನೋಡಿದರೆ ನಿಜವಾಗಿಯೂ ನಗು ಬರುತ್ತದೆ. ಒಬ್ಬ ಕ್ರಿಕೆಟಿಗ್‌ ಪಿಚ್‌ ಸರಿ ಇಲ್ಲ ಅಂದರೆ ಇನ್ನೊಬ್ಬ ನಮಗೆ ಕೊಡುವ ಚೆಂಡೇ ಸರಿ ಇಲ್ಲ ಎಂದಿದ್ದಾರೆ. ICC will provide volleyball to Pakistan cricket team to play cricket

ಚೆನ್ನೈನಲ್ಲಿ ಪಂದ್ಯ ಸೋತ ನಂತರ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಹಫೀಜ್‌, “ನಮಗೆ ಬಳಸಿದ ಪಿಚ್‌ ನೀಡಲಾಗಿದೆ,” ಎಂದು ಆರೋಪಿಸಿದರು. ಬೌಲಿಂಗ್‌ ವಿಷಯ ಬಂದಾಗ ಬಿಸಿಸಿಐ ಹಾಗೂ ಐಸಿಸಿ ಸೇರಿಕೊಂಡು ಭಾರತಕ್ಕೆ ಅನುಕೂಲವಾಗು ಚೆಂಡನ್ನು ನೀಡುತ್ತಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಹಸನ್‌ ರಾಜಾ ಆರೋಪಿಸಿದ್ದಾರೆ. ಇದು ಪಾಕಿಸ್ತಾನದ ಮಾಜಿ ಆಟಗಾರರು ತಮ್ಮ ಘನತೆಗೆ ತಕ್ಕಂತೆ ಮಾಡುವ ಆರೋಪವಾಗಿದೆ.

ಇದಕ್ಕೆ ಒಂದು ಪರಿಹಾರವನ್ನು ಕಂಡುಕೊಳ್ಳುವುದೇ ಉತ್ತಮ. ಅವರಿಗೆ ಬೇಕಾದಂತೆ ಪಿಚ್‌ ಸಿದ್ಧ ಮಾಡಲು ಅವರ ಕುರೇಟರ್‌ಗಳನ್ನೇ ತರಿಸುವುದು. ಆ ಪಿಚ್‌ನಲ್ಲಿ ಭಾರತದ ವಿರುದ್ಧವೋ ಅಥವಾ ಇನ್ನಾವುದೇ ತಂಡದ ವಿರುದ್ಧ ಆಡಲು ಅನುವು ಮಾಡಿಕೊಡುವುದು.

ಇನ್ನು ಚೆಂಡಿನ ವಿಷಯ ಬಂದಾಗ ಪಾಕಿಸ್ತಾನ ಆಟಗಾರರಿಗೆ ಕ್ಯಾಚ ಹಿಡಿಯಲು ಬರುವುದಿಲ್ಲ. ಆದ್ದರಿಂದ ಅವರಿಗೆ ವಾಲಿಬಾಲ್‌ ಗಾತ್ರದ ಚೆಂಡುಗಳನ್ನು ವಿಶೇಷವಾಗಿ ತಯಾರಿಸುವುದು. 155.9 ಗ್ರಾಮ ತೂಕ ಇರಲಿ, ಆದರೆ ಗಾತ್ರ ದೊಡ್ಡದಾಗಿ ಹಗುರವಾಗಿರಲಿ. ಹೊಡೆದರೆ ಚೆಂಡು ಕ್ರೀಡಾಂಗಣದಿಂದ ಹೊರ ಹೋಗಬೇಕು. ಇದರಿಂದ ಹೆಚ್ಚು ರನ್‌ ಕೂಡ ಗಳಿಸಬಹುದು. ಇನ್ನು ಪಾಕಿಸ್ತಾನಕ್ಕೆ ಅನುಕೂಲವಾಗುವ ಬ್ಯಾಟ್‌ಗಳನ್ನೇ ಅವರೇ ತರಲಿ. ಐಸಿಸಿ ನಿಯದಮ ಬ್ಯಾಟುಗಳು ಬೇಕಾಗಿಲ್ಲ. ಮೂರು ಸ್ಟಂಪ್‌ಗಳ ಒಟ್ಟು ಅಂತ 22.86 cm, ಬ್ಯಾಟಿನ ಅಗಲ, 4.25 ಇಂಚು. ಆದ್ದರಿಂದ ಒಂದು 25 ಸೆಂಟಿ ಮೀಟರ್‌ ಆಗಲದ ಬ್ಯಾಟ್‌ ಅವರಿಗಾಗಿಯೇ ನೀಡಿದರೆ ಯಾವುದೇ ಎಸೆತಕ್ಕೂ ಮೂರು ಸ್ಟಂಪ್‌ಗಳು ಉರುಳದಂತೆ ನೋಡಿಕೊಳ್ಳಬಹುದು. ಎಲ್ಬಿಗೂ ಅವಕಾಶ ಇರುವುದಿಲ್ಲ.

ಇನ್ನು ಎರಡು ದೇಶಗಳ ನಡುವೆ ಪಂದ್ಯ ನಡೆಯುತ್ತಿರುವಾಗ ಇನ್ನೊಂದು ದೇಶದ ಅಂಪೈರ್‌ಗಳು ಕಾರ್ಯನಿರ್ವಹಿಸುವುದು ಸಹಜ. ಅಂದರೆ ಪರವಾಗಿ ತೀರ್ಪು ನೀಡಬಾರದು ಎಂದು. ಪಾಕಿಸ್ತಾನದ ಮಾಜಿ ಆಟಗಾರರು ಟೀವಿ ಅಂಪೈರ್‌ ಬಗ್ಗೆಯೂ ಧ್ವನಿ ಎತ್ತಿದ್ದಾರೆ. ಆದ್ದರಿಂದ ಇಬ್ಬರು ಆನ್‌ಫೀಲ್ಡ್‌ ಅಂಪೈರ್‌ ಹಾಗೂ ಟೀವಿ ಅಂಪೈರ್‌ ಮೂವರೂ ಪಾಕಿಸ್ತಾನದವರೇ ಇರಲಿ. ಇನ್ನು ಹಳ್ಳಿಗಳಲ್ಲಿ ಗದ್ದೆಯಲ್ಲಿ ಪಂದ್ಯ ನಡೆಯುವಾಗ ಬ್ಯಾಟಿಂಗ್‌ ಮಾಡುವ ತಂಡದವರೇ ಸ್ಕೋರ್‌ ಬರೆದುಕೊಳ್ಳುವುದು. ಕೆಲವೊಮ್ಮೆ ಮೋಸ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ಫೀಲ್ಡಿಂಗ್‌ ಮಾಡುವ ತಂಡದವರೂ ಅಂಗಣಲ್ಲಿದ್ದುಕೊಂಡೇ ಸ್ಕೋರ್‌ ನೆನಪಿಟ್ಟುಕೊಳ್ಳುತ್ತಾರೆ. ಪಾಕಿಸ್ತಾನದ ಮಾಜಿ ಆಟಗಾರರಿಗೆ ಸ್ಕೋರರ್‌ ಬಗ್ಗೆ ಏನಾದರೂ ತಕರಾರು ಇದ್ದರೆ ಸ್ಕೋರರ್‌‌ ಕೂಡ ಅವರದ್ದೇ ಇರಲಿ. ಇನ್ನು ವೀಕ್ಷಕವಿವರಣೆ ಮಾಡುವಾಗ ಪಾಕಿಸ್ತಾನದ ಕಳಪೆ ಪ್ರದರ್ಶನಕ್ಕೆ ಬೇರೆ ದೇಶದ ವೀಕ್ಷಕವಿವರಣೆಗಾರರು ಟೀಕೆ ಮಾಡುವುದಿದೆ. ಇದನ್ನು ತಪ್ಪಿಸುವ ಸಲುವಾಗಿ ಮೂವರು ವೀಕ್ಷಕ ವಿವರಣೆಗಾರರು, ಸಂದರ್ಶಕರು ಎಲ್ಲರನ್ನೂ ಪಾಕಿಸ್ತಾನವೇ ನೇಮಿಸಲಿ.

ಪಾಕಿಸ್ತಾನ ತಂಡದ ಒಬ್ಬೊಬ್ಬ ಆಟಗಾರರು ದಿನಕ್ಕೆ 8 ಕೆಜಿ ಮಟನ್‌ ತಿನ್ನುತ್ತಾರೆಂದು ಅಲ್ಲಿಯ ಮಾಜಿ ಆಟಗಾರರೇ ಹೇಳಿದ್ದಾರೆ. ಹಾಗಾಗಿ ತಂಡದ ಜೊತೆ ಅಡುಗೆಯವರು ಅಲ್ಲಿಂದಲೇ ಬರಲಿ. ಇನ್ನು ಅಂಗಣದಲ್ಲಿ ನಮಾಜ್‌ ಮಾಡುವ ಪರಿಸ್ಥಿತಿ ಬಂದಾಗ ಕೂಡಲೇ ಡ್ರೆಸ್ಸಿಂಗ್‌ ರೂಮಿಗೆ ಅಥವಾ ಅಲ್ಲಿಯೇ ಇದ್ದು ಜುಬ್ಬ ಮತ್ತು ಪೈಜಾಮ ಧರಿಸಿ ನಮಾಜ್‌ ಮಾಡಿ ಪುನಃ ಕ್ರಿಕೆಟ್‌ ಉಡುಪು ಧರಿಸಿ ಆಟ ಮುಂದುವರಿಸಲಿ. ಅದಕ್ಕಾಗಿ ಒಂದು ಅರ್ಧಗಂಟೆ ಹೆಚ್ಚುವರಿ ಸಮಯ ನೀಡುವುದೇ ಕ್ಷೇಮ, ಮತ್ತೆ ನಿಧಾನಗತಿಯ ಬೌಲಿಂಗ್‌ ಎಂದು ದಂಡ ವಿಧಿಸಿದ್ದಕ್ಕಾಗಿ ತಕರಾರು ಎತ್ತುವುದು ಬೇಡ.

ಇಷ್ಟೆಲ್ಲ ಅನುಕೂಲ ಮಾಡಿದರೂ ಪಾಕಿಸ್ತಾನ ತಂಡ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಸೋಲುತ್ತದೆ.

[ಇದು ತಮಾಷೆಗಾಗಿ ಬರೆದ ಬರಹ ಕ್ರಿಕೆಟ್‌ ಅಭಿಮಾನಿಗಳು ನಕ್ಕು ಹಗುರಾಗಿ]

Related Articles