Saturday, July 27, 2024

ನೆರವು ಬೇಡಿದ ಕೈ ಎರಡು ಚಿನ್ನದ ಪದಕ ಗೆದ್ದಿತು!

ಮಲೇಷ್ಯಾದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ವಿಶ್ವ ಆರ್ಮ್‌ ರೆಸ್ಲಿಂಗ್‌ನಲ್ಲಿ World Arm Wrestling Championship (ಪಂಜ ಕುಸ್ತಿ)ಬಲ ಮತ್ತು ಎಡಗೈ ಎರಡೂ ವಿಭಾಗಗಳಲ್ಲೂ ಚಿನ್ನ ಗೆದ್ದು ವಿಶ್ವ ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿರುವ ಸಾಸ್ತಾನದ ಸುರೇಶ್‌ ಪಾಂಡೇಶ್ವರ ಅವರ ಬದುಕಿನ ಕತೆ ಕೇಳಿದಾಗ ಬೇಸರ ಮನೆಮಾಡುವುದು.

ಕೂಲಿ ಮಾಡುವ ತಾಯಿ, ಹೃದಯಾಘಾತವಾಗಿ ಮನೆಯನ್ನೇ ಆಶ್ರಯಿಸಿರುವ ತಂದೆ, ಕಾಡುವ ಅಂಗವೈಕಲ್ಯತೆ ಇವುಗಳ ನಡುವೆ ಕ್ರೀಡಾ ಪ್ರೀತಿ ಉಳಿಸಿಕೊಂಡ ಸುರೇಶ್‌ ಇಂದು ಜಾಗತಿಕ ಮಟ್ಟದಲ್ಲಿ ವಿಶೇಷ ವಿಭಾಗದಲ್ಲಿ ಎರಡು ಚಿನ್ನ ಗೆದ್ದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರಾಗಿದ್ದಾರೆ.

ಹೆಸರಿನ ಕೊನೆಯಲ್ಲಿ ಜಾತಿಯನ್ನು ಇಟ್ಟುಕೊಂಡವರೆಲ್ಲ ಆ ಜಾತಿಯವರಿಗೆ ನೆರವಾಗುತ್ತಾರೆಂಬುದು ಸುಳ್ಳು. ಮಲೇಷ್ಯಕ್ಕೆ ಹೊರಟು ನಿಂತ ಸುರೇಶ್‌ ಅವರಲ್ಲಿ ಹಣ ಇರಲಿಲ್ಲ. ಕೊನೆಯಲ್ಲಿ ಗೆಳೆಯರು ಮಾಡಿದ ನೆರವು ಹಾಗೂ ಸೊಸೈಟಿಯಲ್ಲಿ ಮಾಡಿದ ಸಾಲ ಮಾತ್ರ ಅವರ ನೆನಪಿನಂಗಳದಲ್ಲಿ ಉಳಿದೆ. ಮಲೇಷ್ಯದಿಂದ sportsmail ಜೊತೆ ಮಾತನಾಡಿದ ಸುರೇಶ್‌, “ನಮ್ಮವರೇ ನಮಗಾಗಲಿಲ್ಲ. ಕೆಲವು ಪ್ರಭಾವಿ ವ್ಯಕ್ತಿಗಳಲ್ಲಿ ಹಲವು ಬಾರಿ ವಿನಂತಿಸಿಕೊಂಡರೂ ಪ್ರಯೋಜನವಾಗಲಿಲ್ಲ. ನನಗೆ ನೆರವಾದದ್ದು, ನನ್ನ ಗೆಳೆಯರು ಮತ್ತು ಸೊಸೈಟಿ. ಕೆಲವು ಜನಪ್ರತಿನಿಧಿಗಳು ತಮ್ಮಿಂದಾದ ಸಹಾಯ ಮಾಡಿದ್ದಾರೆ, ಅವರಿಗೆ ಚಿರ ಋಣಿ. ನನಗೆ ಉತ್ತಮ ಉದ್ಯೋಗವೂ ಇಲ್ಲ. ಕಳೆದ ಬಾರಿ ಫ್ರಾನ್ಸ್‌ನಲ್ಲಿ ಸಿಕ್ಕ ಅವಕಾಶವನ್ನು ಹಣದ ಸಮಸ್ಯೆಯಿಂದಾಗಿ ಕೈ ಚೆಲ್ಲಿದೆ. ನನ್ನ ತೂಕ 82ಕೆಜಿ, ಆದರೂ 95 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಅನಿವಾರ್ಯತೆ ನಿರ್ಮಾಣವಾಯಿತು. ದೇವರ ದಯೆಯಿಂದ ನಾನು ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದು ವಿಶ್ವ ಚಾಂಪಿಯನ್‌ ಪಟ್ಟ ಸಿಕ್ಕಿತು,” ಎಂದು ಹೇಳಿದರು.

ಪಾಂಡೇಶ್ವರದ ಬಾಬು ಪೂಜಾರಿ ಮತ್ತು ಶಾರದ ಪೂಜಾರ್ತಿಯ ಮಗ ಸುರೇಶ್‌, ಪೊಲಿಯೋ ಪೀಡಿತರಾಗಿದ್ದರೂ ಸಾಹಸ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಮಾನ್ಯರೊಂದಿಗೂ ಸ್ಪರ್ಧಿಸಿ ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸುರೇಶ್‌ ಅವರಿಗೆ ಸೊಸೈಟಿಯಲ್ಲಿ ಸಾಲ ಪಡೆಯಲು ಜಾಮಿನಿಗೆ ಸಹಿ ಮಾಡಲು ಕೂಡ ಅವರ ಊರಿನಲ್ಲಿ ನೆರವಿಗೆ ಬರಲಿಲ್ಲ. ಕೊನೆಗೆ ಸಿಕ್ಕಿದ್ದು ದೂರದ ಮಲ್ಪೆಯ ಆತ್ಮೀಯ ಗೆಳೆಯರು. 70 ಸಾವರಿ ಸಾಲ ಮಾಡಿ ಮಲೇಷ್ಯಕ್ಕೆ ತೆರಳಿದರು. ನಮ್ಮ ಸಮಾಜ ಸಭೆ, ಸಮಾರಂಭ ಮತ್ತು ಅನಗತ್ಯ ಸನ್ಮಾನಗಳಿಗೆ ಹಣ ವ್ಯಯ ಮಾಡುತ್ತದೆ. ಅಲ್ಲಿ ಇಂಥ ಸಾಧಕರು ಪ್ರೇಕ್ಷಕರಾಗಿರುತ್ತಾರೆ.

82 ಕೆಜಿ ಬದಲು 95 ಕೆಜಿಯಲ್ಲಿ ಸ್ಪರ್ಧೆ: ವಿಶ್ವ ಚಾಂಪಿಯನ್‌ಷಿಪ್‌ ವಿವಿಧ ತೂಕದ ವಿಭಾಗಗಳಲ್ಲಿ ನಡೆಯುತ್ತದೆ. ಸುರೇಶ್‌ ಪೂಜಾರಿ ಅವರು ಸ್ಪರ್ಧಿಸಬೇಕಾಗಿರುವುದು 82 ಕೆಜಿ ವಿಭಾಗದಲ್ಲಿ. ಆದರೆ ಆ ತೂಕದ ವಿಭಾಗದಲ್ಲಿ ಯಾವುದೇ ಸ್ಪರ್ಧೆಗಳು ಇಲ್ಲದ ಕಾರಣ ಸಂಘಟಕರು ಸಾಧ್ಯವಾದರೆ 95 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಎಂದು ಸೂಚಿಸಿದರು. ಆತ್ಮಸ್ಥೈರ್ಯ ಕಳೆದುಕೊಳ್ಳದ ಸುರೇಶ್‌ 95 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ವಿವಿಧ ಹಂತಗಳಲ್ಲಿ ಯಶಸ್ಸು ಕಂಡು ಅಂತಿಮವಾಗಿ ಕಜಕಿಸ್ತಾನದ ಸ್ಪರ್ಧಿಯ ವಿರುದ್ಧ ಬಲ ಮತ್ತು ಎಡಗೈ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದು ವಿಶ್ವ ಚಾಂಪಿಯನ್‌ ಗೌರವಕ್ಕೆ ಪಾತ್ರರಾದರು.

Related Articles