Monday, December 4, 2023

ಮಹಿಳಾ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಭಾರತ ಫೈನಲ್‌ಗೆ

ರಾಂಚಿ: ಭಾರತ ಮಹಿಳಾ ಹಾಕಿ ತಂಡ ಇಲ್ಲಿನ ಮಾರಂಗ್‌ ಗೋಮ್ಕೆ ಜೈಪಾಲ್‌ ಸಿಂಗ್‌ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಾರ್ಖಂಡ್‌ ಮಹಿಳಾ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ಕೊರಿಯಾ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ. India reached final of the Women’s Hockey Asian Champions Trophy

ಭಾನುವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಭಾರತ ವನಿತೆಯರು ಜಪಾನ್‌ ವಿರುದ್ಧ ಸೆಣಸಲಿದ್ದಾರೆ. ಭಾರತ ಪ್ರತಿಯೊಂದು ಪಂದ್ಯದಲ್ಲೂ ಅಜೇಯವಾಗಿ ಫೈನಲ್‌ ತಲುಪಿದೆ. ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಪರ ಸಲಿಮಾ ಟೆಟೆ (11ನೇ ನಿಮಿಷ) ಹಾಗೂ ವೈಷ್ಣವಿ (19ನೇ ನಿಮಿಷ) ಗೋಲು ಗಳಿಸಿ ಜಯದ ರೂವಾರಿ ಎನಿಸಿದರು.

ಪಂದ್ಯದ ಆರಂಭದಲ್ಲಿಯೇ ಆಕ್ರಮಣಕಾರಿ ಆಟ ಪ್ರದರ್ಶಿಸಿ ಎದುರಾಳಿ ತಂಡದ ಫಾರ್ವರ್ಡ್‌ ವಿಭಾಗದ ಮೇಲೆ ಒತ್ತಡ ಹೇರಲಾರಂಭಿಸಿತು. ಪರಿಣಾಮ ಆರಂಭದಲ್ಲೇ ಪೆನಾಲ್ಟಿ ಕಾರ್ನರ್‌‌ ಅವಕಾಶ. ಆದರೆ ಭಾರತದ ವನಿತೆಯರು ಇದರ ಸದುಪಯೋಗ ಪಡೆಯುವಲ್ಲಿ ವಿಫಲರಾದರು. ಎರಡನೇ ಪೆನಾಲ್ಟಿ ಕಾರ್ನರ್‌ನಲ್ಲೂ ದೀಪಿಕಾ ಗೋಲು ಗಳಿಸುವಲ್ಲಿ ವಿಫಲರಾದರು. ಭಾರತ ತಂಡ ಆಕ್ರಮಣಕಾರಿ ಆಟ ಮುಂದುವರಿಸಿದ ಪರಿಣಾಮ 11ನೇ ನಿಮಿಷದಲ್ಲಿ ಸಲಿಮಾ ಟೆಟೆ ಅದ್ಭುತ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಎರಡನೇ ಕ್ವಾರ್ಟರ್‌ನಲ್ಲೂ ಭಾರತದ ಆಟದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಎಂದಿನಂತೆ ಆಕ್ರಮಣಕಾರಿ ಆಟ ಮುಂದುವರಿದಿತ್ತು. ಪರಿಣಾಮ ತಂಡಕ್ಕೆ ಮೂರನೇ ಪೆನಾಲ್ಟಿ ಕಾರ್ನರ್‌. ದೀಪ್‌ ಗ್ರೇಸ್‌ ಎಕ್ಕಾ ಹೊಡೆದ ಹೊಡೆತವನ್ನು ಕೊರಿಯಾದ ಗೋಲ್‌ಕೀಪರ್‌ ತಡೆದರೂ ಚೆಂಡು ವಾಸಾಸು ತಿರುಗಿ ವೈಷ್ಣವಿ ಅವರ ನಿಯಂತ್ರಣಕ್ಕೆ ಸಿಕ್ಕಿತು. ಗೋಲ್‌ಪೋಸ್ಟ್‌ನ ಹತ್ತಿರದಲ್ಲೇ ಇದ್ದ ವೈಷ್ಣವಿ ತಂಡದ ಪರ ಎರಡನೇ ಗೋಲು ದಾಖಲಿಸಿದರು. ಕೊರಿಯಾಕ್ಕೆ ಆ ಬಳಿಕ ಹಲವು ಅವಕಾಶಗಳು ಸಿಕ್ಕರೂ ಭಾರತ ನಾಯಕಿ ಸವಿತಾ ಎದುರಾಳಿಗೆ ಅವಕಾಶ ನೀಡಲಿಲ್ಲ. ದಿನದ ಮೊದಲ ಸೆಮಿಫೈನಲ್‌ ಪಂದ್ಯಲ್ಲಿ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಚೀನಾವನ್ನು 2-1 ಗೋಲಿನಿಂದ ಮಣಿಸಿದ ಜಪಾನ್‌ ಫೈನಲ್‌ಗೆ ಪ್ರವೇಶಿಸಿತು. ಭಾರತ ತಂಡ ಫೈನಲ್‌ ಪಂದ್ಯದಲ್ಲಿ ಜಪಾನ್‌ ವಿರುದ್ಧ ಸೆಣಸಲಿದೆ.

Related Articles