“ಉಳಗಾ” ಅವರನ್ನೇ ಮರೆತ ನಾವು ಫುಟ್ಬಾಲ್ ಬೆಳೆಸುವುದಾದರೂ ಹೇಗೆ?
ಬೆಂಗಳೂರು: ಎರಡು ದಿನಗಳ ಹಿಂದೆ ಕೋಲ್ಕೊತಾದಲ್ಲಿ ಜಗತ್ತಿನ ಅತ್ಯಂತ ಪುರಾತನ ಫುಟ್ಬಾಲ್ ಟೂರ್ನಿಗಳಲ್ಲಿ ಒಂದಾಗಿರುವ ಡುರಾಂಡ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನ 135ನೇ ಆವೃತ್ತಿ ಆರಂಭಗೊಂಡಿತು. ಈ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಆಟಗಾರ ಒಬ್ಬ ಕನ್ನಡಿಗ ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಕರ್ನಾಕಟ ತಂಡ ಸಂತೋಷ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಂತಾರಾಷ್ಟ್ರೀಯ ಆಟಗಾರ “ಉಳಗಾ” ಎಂದೇ ಖ್ಯಾತಿ ಪಡೆದಿರುವ ನಾರಾಯಣಸ್ವಾಮಿ ಉಳಗನಾಥನ್ ಅವರನ್ನು ನಮ್ಮ ರಾಜ್ಯ ಅಥವಾ ಕೇಂದ್ರ ಸರಕಾರ ಎಲ್ಲಿ ಸ್ಮರಿಸಿದೆ? ಅವರಿಗೆ ಯಾವುದಾದರೂ ಪ್ರಶಸ್ತಿ ನೀಡಿದೆಯೇ? ಆಟಗಾರರನ್ನು ಗೌರವಿಸದೆ ಬರೇ ಫುಟ್ಬಾಲ್ ಕ್ರೀಡೆ ಅಭಿವೃದ್ಧಿ ಹೊಂದುವುದಾದರೂ ಹೇಗೆ? Why has the Karnataka government forgotten Bengaluru’s Narayanswami Ulaganathan, who scored a hat-trick in the final of the historic Durand Cup football tournament?
ಭಾನುವಾರ ಅಂತಾರಾಷ್ಟ್ರೀಯ ಮಾಜಿ ಫುಟ್ಬಾಲ್ ಆಟಗಾರ ನಾರಾಯಣಸ್ವಾಮಿ ಉಳಗನಾಥನ್ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. ಕರ್ನಾಟಕದಲ್ಲಿ ಮಾತ್ರದವಲ್ಲ ಭಾರತದಲ್ಲೇ ಫುಟ್ಬಾಲ್ ಸ್ಥಿತಿಯ ಬಗ್ಗೆ ಅವರು ನೋವನ್ನು ವ್ಯಕ್ತಪಡಿಸಿದರು. “ಎಲ್ಲಿದ್ದಾರೆ ಫುಟ್ಬಾಲ್ ಆಟಗಾರರು, ಎಲ್ಲಿದೆ ಅವರಿಗೆ ಉದ್ಯೋಗ? ಇಲ್ಲಿ ಇರುವುದು ಬರೇ ಕ್ರಿಕೆಟ್ ಮತ್ತು ಹಣ,” ಎಂದು ಬೇಸರ ವ್ಯಕ್ತಪಡಿಸಿದರು. “ನಿಮಗೊಂದು ಕತೆಯಾಗುತ್ತದೆ, ನನಗೊಂದು ನೆನಪುಗಳನ್ನು ಹಂಚಿಕೊಳ್ಳಲು ಅವಕಾಶ ಅಷ್ಟೆ, ಬೇರೇನೂ ಆಗೊಲ್ಲ,” ಎಂದರು.

1974ರ ಫೈನಲ್‌ನಲ್ಲಿ ಹ್ಯಾಟ್ರಿಕ್ ಗೋಲ್: ದೆಹಲಿಯಲ್ಲಿ ನಡೆದ ಡುರಾಂಡ್ ಕಪ್ ಫೈನಲ್ ಪಂದ್ಯದಲ್ಲಿ ಮೋಹನ್ ಬಾಗನ್ ಹಾಗೂ ಜೆಸಿಟಿ ತಂಡಗಳ ನಡುವೆ ನಡೆಯಿತು. ಮೋಹನ್ ಬಾನ್ ಪರ ಆಡುತ್ತಿದ್ದ ಕನ್ನಡಿಗ ನಾರಾಯಣಸ್ವಾಮಿ ಉಳಗನಾಥನ್ ಹ್ಯಾಟ್ರಿಕ್ ಗೊಲು ಗಳಿಸಿದ ಪರಿಣಾಮ ಮೋಹನ್ ಬಾನಗ್ ತಂಡ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಚಾಂಪಿಯನ್ ಪಟ್ಟ ಗೆದ್ದಕೊಂಡಿತು. 52 ವರ್ಷ ಕಳೆಯಿತು. ಇದು 135ನೇ ಆವೃತ್ತಿಯ ಚಾಂಪಿಯನ್‌ಷಿಪ್ ಆದರೆ ಕನ್ನಡಿಗನ ಈ ದಾಖಲೆಯನ್ನು ಇದುವರೆಗೂ ಯಾರೂ ಮುರಿದಿಲ್ಲ. ನಾರಾಯಣಸ್ವಾಮಿ ಉಳಗನಾಥನ್ ಮೂರು ಬಾರಿ ಡುರಾಂಡ್ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್ ಗೆದ್ದ ಆಟಗಾರ.
ಉಳಗನಾಥನ್ ವೃತ್ತಿಪರ ಫುಟ್ಬಾಲ್‌ನಲ್ಲಿ ಐದು ವರ್ಷಗಳ ಕಾಲ ಭಾರತದ ಪರ ಆಡಿರುವುದಲ್ಲದೆ, ಕರ್ನಾಟಕ, ಪಶ್ಚಿಮ ಬಂಗಾಳ, ಮೋಹನ್ ಬಾಗನ್, ಈಸ್ಟ್ ಬೆಂಗಾಲ್, ಮೊಹಮ್ಮದನ್ ಸ್ಪೋರ್ಟಿಂಗ್ ಕ್ಲಬ್‌ಗಳಲ್ಲೂ ಮಿಂಚಿ, ಸಂತೋಷ್ ಟ್ರೋಫಿ, ಡುರಾಂಡ್ ಕಪ್ ಸೇರಿದಂತೆ ದೇಶದ ಪ್ರತಿಷ್ಠಿತ ಟ್ರೋಫಿಗಳಿಗೆ ಮುತ್ತಿಟ್ಟಿದ್ದಾರೆ.

ಭಾರತದ ಪಿಲೆ, ಕಪ್ಪು ಮುತ್ತು: ನಾರಾಯಣ ಸ್ವಾಮಿ ಉಳಗನಾಥನ್ ಅವರನ್ನು ಪ್ರೀತಿಯಿಂದ ಉಳಗಾ ಎಂದೇ ಕರೆಯುತ್ತಿದ್ದರು. ಕೃಷ್ಣ ವರ್ಣದ ಉಳಗನಾಥನ್ ಅವರನ್ನು, ಭಾರತದ ಫುಟ್ಬಾಲ್‌ನಲ್ಲಿ “ಕಪ್ಪು ಮುತ್ತು” ಎಂದೇ ಕರೆಯುತ್ತಿದ್ದರು, ಕೋಲ್ಕೊತಾದಲ್ಲಿ ಆಡುವಾಗ “ಭಾರತದ ಪಿಲೆ” ಎಂದು ಗೌರವಿಸುತ್ತಿದ್ದರು.
16 ವರ್ಷಗಳ ಆಟದಲ್ಲಿ ಒಮ್ಮೆಯೂ ಸಿಕ್ಕಿಲ್ಲ YELLOW ಕಾರ್ಡ್: ಭಾರತದ ಫುಟ್ಬಾಲ್‌ನಲ್ಲಿ ಉಳಗಾ ಅವರು ವಿಶೇಷ ದಾಖಲೆಯನ್ನು ಹೊಂದಿದ್ದಾರೆ. 16 ವರ್ಷಗಳ ವೃತ್ತಿ ಬದುಕಿನಲ್ಲಿ ಒಮ್ಮೆಯೂ ತಪ್ಪಿನ ಆಟವನ್ನಾಡಿರಲಿಲ್ಲ. ರೆಡ್ ಕಾರ್ಡ್ ಬಿಡಿ ಒಮ್ಮೆಯೂ ಎಚ್ಚರಿಕೆಯ YELLOW ಕಾರ್ಡ್‌ನ್ನೂ ಪಡೆದಿಲ್ಲ ಎಂಬುದು ವಿಶೇಷ.
ಪ್ರಿ ಒಲಿಂಪಿಕ್ ರಂಗೂನ್ ಬರ್ಮಾ, ಮಲೇಷ್ಯಾದಲ್ಲಿ ಮೆಡೆಕಾ ಟೂರ್ನಮೆಂಟ್, ಇರಾನಿನ ಠೆಹ್ರಾನ್‌ನಲ್ಲಿ ನಟೆದ ಏಷ್ಯನ್ ಗೇಮ್ಸ್, ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ನೆಡದ ಕಿಂಗ್ಸ್ ಕಪ್, ದಕ್ಷಿಣ ಆಫ್ರಿಕಾದ ಝಾಂಬಿಯಾದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಸೇರಿದಂತೆ ಉಳಗಾ ಅವರು ಭಾರತದ ಪರ ಹಲವು ಅಂತಾರಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ದೇಶದ ಪ್ರತಿಷ್ಠಿತ ಟೂರ್ನಿಯಾಗಿರುವ ಫೆಡರೇಷನ್‌ಕಪ್‌ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಉಳಗಾ ನಾಲ್ಕು ಬಾರಿ ವಿವಿಧ ತಂಡಗಳು ಕಪ್ ಗೆಲ್ಲುವಲ್ಲಿ ನೆರವಾಗಿದ್ದಾರೆ.


ಎಲ್ಲಿದೆ ಉದ್ಯೋಗ ಅವಕಾಶ?: ಹಿಂದೆಲ್ಲ ಪ್ರತಿಯೊಂದು ಸರಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಫುಟ್ಬಾಲ್ ತಂಡಗಳಿದ್ದವು. ಇದರಿಂದದ ಫುಟ್ಬಾಲ್ ಆಡುವವರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಸಿಗುತ್ತಿತ್ತು. ಈಗ ಎಲ್ಲಿದೇ? ಎಂದು ಉಳಗನಾಥನ್ ಅವರು ಪ್ರಶ್ನಿಸಿದ್ದಾರೆ. ಹಿಂದೆ ಆಡಲು ಹೋದರೆ ಬದುಕು ಕಟ್ಟಿಕೊಳ್ಳಬಹುದು ಎಂಬ ನಂಬಿಕೆ ಇತ್ತು. ಇಂದು ಎಲ್ಲಿದೆ? ಕ್ರಿಕೆಟನ್ನೇ ಹೊದ್ದು ಮಲಗಿರುವ ದೇಶದಲ್ಲಿ ಫುಟ್ಬಾಲ್ ಕ್ರೀಡೆಯನ್ನು ಕೇಳುವವರು ಯಾರಿದ್ದಾರೆ? ಗ್ರಾಮೀಣ ಪ್ರದೇಶಲ್ಲಿ ಫುಟ್ಬಾಲ್ ಅಭಿವೃದ್ಧಿಗೆ ನಾವೇನು ಮಾಡಿದ್ದೇವೆ? ನಮ್ಮ ತರಬೇತಿಯ ಗುಣ ಮಟ್ಟ ಹೇಗಿದೆ? ಫುಟ್ಬಾಲ್‌ಗಾಗಿ ಬಜೆಟ್‌ನಲ್ಲಿ ಎಷ್ಟು ಹಣವನ್ನು ಮೀಸಲಿಟ್ಟಿದ್ದಾರೆ. ಭಾರತ ತಂಡದ ಜಾಗತಿಕ ಮಟ್ಟದಲ್ಲಿ ಎಷ್ಟು ಪಂದ್ಯಗಳನ್‌ನಾಡುತ್ತಿದೆ. ನಮ್ಮ ಆಟಗಾರರಿಗೆ ವಿದೇಶದಲ್ಲಿ ತರಬೇತಿ ನೀಡುವ ಅವಕಾಶ ಇದೆಯೇ? ಎಂದು ಅವರು ಕೇಳಿದ ಪ್ರಶ್ನೆಗಳಿಗೆ ಸದ್ಯ, ಸಮರ್ಪಕ ಉತ್ತರ ಸಿಗುವುವುದ ಕಷ್ಟ.
ಫಿಫಾ ವಿಶ್ವಕಪ್ ವೇಳೆ ಯಾರೂ ನೆನಪಾಗಲಿಲ್ಲ: ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಫಿಫಾ ವಿಶ್ವಕಪ್ ನಡೆಯುತ್ತದೆ. ಜಗತ್ತಿನ ಬಲಿಷ್ಠ ತಂಡಗಳು ಸ್ಪರ್ಧಿಸುತ್ತವೆ. ಆದರೆ ಭಾರತ ಅರ್ಹತೆಯನ್ನೇ ಪಡೆಯುವುದಿಲ್ಲ. 150 ಕೋಟಿ ಜನಸಂಖ್ಯೆ ಇರುವ ಭಾರತಕ್ಕೆ ಜಗತ್ತಿನ ಶ್ರೇಷ್ಠ ಫುಟ್ಬಾಲ್ ಟೂರ್ನಿಗೆ ಅರ್ಹುತೆ ಪಡೆಯುವ ಯೋಗ್ಯತೆ ಇಲ್ಲ ಎಂದು ಗೇಲಿ ಮಾಡಲಾಗುತ್ತದೆ. ಆದರೆ ಜನಸಂಖ್ಯೆಗೂ ಫುಟ್ಬಾಲ್‌ಗೂ ಸಂಬಂಧವಿಲ್ಲ. ಉತ್ತಮ ಆಟಗಾರರನ್ನು ಭಾರತ ರೂಪಿಸಬೇಕು. ಫುಟ್ಬಾಲ್ ನೋಡಿ ಮಜಾ ಮಾಡಿ ಅಂತರ ದೇಶಾದ್ಯಂತ ಬಾರ್‌ಗಳನ್ನು ಅವಧಿ ಮೀರಿ ನಡೆಸಿ ಎಂದು ಆದೇಶ ಹೊರಡಿಸುವುದಲ್ಲ. ಬದಲಾಗಿ ಉತ್ತಮ ಗುಣ ಮಟ್ಟದ ಅಕಾಡೆಮಿಗಳನ್ನು ಸ್ಥಾಪಿಸಿ ಯುವಕರಿಗೆ ತರಬೇತಿ ನೀಡಬೇಕು, ಇವರು ಆಟಗಾರರಿಗೆ ಉದ್ಯೋಗ ನೀಡಬೇಕು ಹಾಗಿದ್ದಲ್ಲಿ ಮಾತ್ರ ಫುಟ್ಬಾಲ್ ಭಾರತದಲ್ಲಿ ಬೆಳೆಯಲು ಸಾಧ್ಯವಿದೆ ಎಂದು ನಾರಾಯಣಸ್ವಾಮಿ ಉಳಗನಾಥನ್ ಹೇಳುವ ಮಾತಿನಲ್ಲಿ ಸತ್ಯವಿದೆ.



ಇಂಥ ಆಟಗಾರನಿಗೆ ಕರ್ನಾಟಕ ನೀಡಿದ ಗೌರವವೇನು?
ನಾರಾಯಣಸ್ವಾಮಿ ಉಳಗನಾಥನ್ ಯಾನೆ “ಉಳಗಾ” ಅವರನ್ನು ಕರ್ನಾಟಕ ಸರಕಾರ ಅಥವಾ ಕೇಂದ್ರ ಸರಕಾರ ಇದುವರೆಗೂ ಗೌರವಿಸಿಲ್ಲ. ಆದರೆ ಪಶ್ಚಿಮ ಬಂಗಾಳ ಸರಕಾರ 2020ರಲ್ಲಿ ಪ್ರತಿಷ್ಠಿತ “ಬಂಗಾಲ್ ಗೌರವ್” ಪ್ರಶಸ್ತಿ ನೀಡಿ ಗೌರವಿಸಿದೆ, ಈಸ್ಟ್ ಬೆಂಗಾಲ್ ಜೀವನ ಶ್ರೇಷ್ಠ ಸಾಧನೆ ಗೌರವ ದಕ್ಕಿದೆ. ಬಂಗಾ ರತ್ನ ಗೌರವವೂ ಸಿಕ್ಕಿದೆ. ಕೋಲ್ಕೊತಾದ ಕ್ಲಬ್‌ಗಳ ಪರ ಆಡಿ ನಾಲ್ಕು ಬಾರಿ ಫೆಡರೇಷನ್ ಕಪ್ ಗೆದ್ದಿರುವ, ಜಗತ್ತಿನ ಪ್ರಸಿದ್ಧ ಡುರಾಂಡ್ ಕಪ್ ವಿವಿಧ ಕ್ಲಬ್‌ಗಳಿಗಾಗಿ ಮೂರು ಬಾರಿ ಗೆದ್ದಿರುವ ಈ ಫುಟ್ಬಾಲ್ ಸಾಧಕನಿಗೆ ಇದುವರೆಗೂ ಕರ್ನಾಟಕ ಸರಕಾರ ಏಕೆ ಗೌರವಿಸಿಲ್ಲ ಎಂಬುದು ಅಚ್ಚರಿಯ ಸಂಗತಿ. “ಉಳಗಾ” ಆಡಿರುವ ಮೂರೂ ಕ್ಲಬ್‌ಗಳಿಗೂ ಪಶ್ಚಿಮ ಬಂಗಾಳ ಸರಕಾರ “ಬಂಗಾ ವಿಭೂಷಣ” ಪ್ರಶಸ್ತಿ ನೀಡಿ ಗೌರವಿಸಿದೆ. ಚಿಕ್ಕಂದಿನಿಂದಲೂ ಬೆಂಗಳೂರು ಕ್ಲಬ್‌ಗಳ ಪರ ಆಡಿ, ನಂತರ ಕರ್ನಾಟಕ ತಂಡವನ್ನು ಸಂತೋಷ್ ಟ್ರೋಫಿಯಲ್ಲಿ ಪ್ರತಿನಿಧಿಸಿರುವ ಭಾರತ ಕಂಡ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ, ಬದುಕು ನೀಡಿದ ಫುಟ್ಬಾಲ್‌ಗಾಗಿ ತನ್ನ ಮನೆಗೆ “ಸಾಕರ್ ವಿಲ್ಲಾ” ಎಂದು ಹೆಸರಿಸಿರುವ ನಾರಾಯಣಸ್ವಾಮಿ ಉಳಗನಾಥನ್ ಪ್ರೀತಿಯ “ಉಳಗಾ” ಅವರಿಗೆ ಸರಕಾರ ಇನ್ನಾದರೂ ಗೌರವಿಸಿ ಫುಟ್ಬಾಲ್ ಕ್ರೀಡೆಗೆ ಪ್ರೋತ್ಸಾಹಿಸಬೇಕು.

