Tuesday, November 12, 2024

ಕುಂದಾಪುರದ ವಿಶ್ವನಾಥ್ ಗಾಣಿಗ 18ನೇ ಬಾರಿ ರಾಷ್ಟ್ರೀಯ ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ

ಲಖನೌನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕುಂದಾಪುರದ ಭಾಸ್ಕರ ಗಾಣಿಗ ಒಟ್ಟು 645 ಕೆಜಿ ಭಾರವೆತ್ತುವ ಮೂಲಕ 18ನೇ ಬಾರಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದುಕೊಂಡರು.

2008ರಿಂದ  ಪವರ್‌ಲಿಫ್ಟಿಂಗ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಭಾಸ್ಕರ್ ಪ್ರತಿ ವರ್ಷವೂ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡಿರುವುದು ವಿಶೇಷ. ಕಳೆದ ವರ್ಷ ಅಪಘಾತಕ್ಕೀಡಾದರೂ ತಮ್ಮ ಪ್ರಯತ್ನವನ್ನು ನಿಲ್ಲಿಸದ  ಭಾಸ್ಕರ್ ತಮ್ಮದೇ ದಾಖಲೆಯನ್ನು ಮುರಿಯಲು ನಿರ್ಧರಿಸಿದ್ದರು. ಆದರೆ ಬಲಗಾಲು ನೋವಿನ ಕಾರಣ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ.  ಬೆಂಚ್‌ಪ್ರೆಸ್ 130 ಕೆಜಿ, ಡೆಡ್‌  ಲಿಫ್ಟ್ 292 ಕೆಜಿ ಹಾಗೂ ಸ್ಕ್ವಾಟ್‌ನಲ್ಲಿ  225 ಕೆಜಿ ಭಾರವೆತ್ತುವ ಮೂಲಕ ಭಾಸ್ಕರ್ 645 ಕೆಜಿಯ ಸಾಧನೆ ಮಾಡಿದರು.
ಮಂಗಳೂರಿನ ಸದ್ಗುರು ಜಿಮ್‌ನ ಪ್ರದೀಪ್ ಕುಮಾರ್ ಆಚಾರ್ಯ ಒಟ್ಟು 575 ಕೆಜಿ ಭಾರವೆತ್ತಿ 74 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು, ಅದೇ ರೀತಿ ದಾವಣಗೆರೆಯ ಮಂಜುನಾಥ್ ಹಿರಿಯರ 66 ಕೆಜಿ ವಿಭಾಗದಲ್ಲೂ ಚಿನ್ನ ಗೆದ್ದು ಸಾಧನೆ ಮಾಡಿದ್ದಾರೆ.

ನಡೆಯದ ಉತ್ತರದ ಮೋಸ!

ಪ್ರತಿ ಬಾರಿಯೂ ಉತ್ತರ ಭಾರತದ ವೇಟ್‌ಲ್ಟಿರ್‌ಗಳು  ನಿಷೇಧಿತ ಔಷಧಗಳನ್ನು  ಸೇವಿಸಿ ವಿವಿಧ  ವಿಭಾಗಗಳಲ್ಲಿ  ಚಿನ್ನದ ಸಾಧನೆ ಮಾಡುತ್ತಿದ್ದರು. ಆದರೆ ಈ ಬಾರಿ ಮೊದಲ ಸ್ಥಾನ ಪಡೆದ ಲ್ಟಿರ್‌ಗಳ ಸ್ಪರ್ಧೆ  ಮುಗಿಯುತ್ತಿದ್ದಂತೆ ರಾಷ್ಟ್ರೀಯ ಮಾಧಕ ಔಷಧ  ನಿಯಂತ್ರಣ ಘಟಕ (ನಾಡಾ) ಪರೀಕ್ಷೆ ನಡೆಸಿದುದರ ಪರಿಣಾಮ ಅನೇಕ ಲ್ಟಿರ್‌ಗಳು ಅರ್ಧದಲ್ಲೇ ಕಾಲ್ಕಿತ್ತರು. ಇದರಿಂದ ನೈಜ ಸ್ಪರ್ಧಿಗಳಿಗೆ ಪದಕ ಸಿಗುವಂತಾಯಿತು ಎಂದು ಭಾಸ್ಕರ್ ಗಾಣಿಗ ಅವರು ಲಖನೌದಿಂದ ಸ್ಪೋರ್ಟ್ಸ್ ಮೇಲ್‌ಗೆ ತಿಳಿಸಿದರು.

Related Articles